ಕೃಷ್ಣ ಕಾಳಿಂಗಮರ್ದನ ಮಾಡಿದ ದಿನ ಇಂದು ನಾಗರ ಪಂಚಮಿ

ನಾಗನೆಂದರೆ ದೈವೀಗುಣವನ್ನು ಹೊಂದಿರುವ ಶಕ್ತಿ. ಪುರಾಣಗಳ ಪ್ರಕಾರ ದಕ್ಷ ಪ್ರಜಾಪತಿಯ ಮಗಳಾದ ಕದ್ರು ಹಾಗೂ ಕಶ್ಯಪ ಮಹರ್ಷಿಯಿಂದ ಹುಟ್ಟಿದವುಗಳೇ ‘ಸರ್ಪ’ಗಳು. 

Significance and Celebration of Nagara Panchami in Hindus hls

ನಾಗನೆಂದರೆ ದೈವೀಗುಣವನ್ನು ಹೊಂದಿರುವ ಶಕ್ತಿ. ಭಾರತಿಯರಾದ ನಾವು, ನಮಗೆ ಆಶ್ರಯ ನೀಡಿದ ಭೂಮಿಯನ್ನು ಪೂಜಿಸುವರಲ್ಲದೇ, ಈ ಭೂಮಿಯಲ್ಲಿರುವ ಪ್ರಾಣಿ-ಪಕ್ಷಿ-ವೃಕ್ಷ, ಅಷ್ಟೇಕೆ ಅಣು-ರೇಣು-ತೃಣ-ಕಾಷ್ಠಗಳಲ್ಲೂ ದೇವರನ್ನು ಕಾಣುತ್ತೇವೆ. ಅಂತೆಯೇ ‘ಸರ್ಪ’ದ ಮಹಿಮೆಯನ್ನು ಅರಿತು ಪ್ರಾಚೀನ ಕಾಲದಿಂದ ಪೂಜಿಸಿಕೊಂಡು ಬಂದಿದ್ದೇವೆ.

ಪುರಾಣಗಳ ಪ್ರಕಾರ ದಕ್ಷ ಪ್ರಜಾಪತಿಯ ಮಗಳಾದ ಕದ್ರು ಹಾಗೂ ಕಶ್ಯಪ ಮಹರ್ಷಿಯಿಂದ ಹುಟ್ಟಿದವುಗಳೇ ‘ಸರ್ಪ’ಗಳು. ಅನಂತ, ವಾಸುಕಿ, ಶೇಷ, ತಕ್ಷಕ ಮುಂತಾದ ಹೆಸರಿನಿಂದ ಇವು ಖ್ಯಾತವಾಗಿವೆ. ಅಮೃತಕ್ಕಾಗಿ ದೇವ-ದಾನವರು ಮಂದರ ಪರ್ವತವನ್ನೇ ಕಡೆಗೋಲನ್ನಾಗಿ ಮಾಡಿಕೂಂಡು ಕ್ಷೀರಸಾಗರವನ್ನು ಕಡೆಯುವಾಗ ವಾಸುಕಿ ಸರ್ಪವು ಕಡೆಗೋಲಿಗೆ ಹಗ್ಗವಾಗಿದ್ದುಕೊಂಡು ಅಮೃತದ ಉದ್ಭವಕ್ಕೆ ಕಾರಣವಾಯಿತು.

ಶೇಷ ಸರ್ಪವು ಮಲತಾಯಿಯಾದ ವಿನತೆಯ ವಿಷಯದಲ್ಲಿ ತನ್ನ ತಾಯಿ ಕದ್ರು ಮಾಡಿದ ಅಪರಾಧಕ್ಕೆ ಬಹಳ ನೊಂದು ಬ್ರಹ್ಮನಿಂದ ಭೂಭಾರ ಹೂರುವ ಸಾಮರ್ಥ್ಯ ಪಡೆದು, ಭೂಮಿಯನ್ನು ಹೊತ್ತು ನಿಂತಿತು. ಒಂದಂಶದಿಂದ ಪಾತಾಳದಲ್ಲಿಯೂ, ಇನ್ನೊಂದು ಅಂಶದಿಂದ ಮಹಾವಿಷ್ಣುವಿನ ಹಾಸಿಗೆಯಾಗಿಯೂ ಈ ಸರ್ಪವಿದೆ.

ಶಿವನ ಕೊರಳ ಆಭರಣವಾಗಿ, ತ್ರಿಪುರ ಸಂಹಾರ ಕಾಲದಲ್ಲಿ ಶಿವನ ಧನಸ್ಸಿನ ಹಗ್ಗವಾಗಿ, ಗಣಪತಿಯ ಹೊಟ್ಟೆಯ ಪಟ್ಟಿಯಾಗಿ, ದುರ್ಯೋಧನನ ರಥದ ಧ್ವಜದ ಚಿಹ್ನೆಯಾಗಿ, ಪ್ರತಿಯೊಬ್ಬರಲ್ಲಿಯೂ ಇರುವ ಷಟ್ಚಕ್ರದ ಕುಂಡಲಿನೀ ಶಕ್ತಿಯ ಪ್ರತೀಕವಾಗಿ, ತ್ರೇತಾಯುಗದ ಲಕ್ಷ್ಮಣ-ದ್ವಾಪರಯುಗದ ಬಲರಾಮ, ಕೃತಯುಗದ ಸುಬ್ರಹ್ಮಣ್ಯನ ಅವತಾರ ಸ್ವರೂಪಿಯಾದ ‘ಸರ್ಪ’ವು ಭಾರತೀಯರಾದ ನಮಗಷ್ಟೇ ಅಲ್ಲ, ನೇಪಾಳ, ಇಂಡೋನೇಷ್ಯಾ ಮುಂತಾದ ರಾಷ್ಟ್ರದವರಿಗೂ ಪೂಜಾರ್ಹವಾಗಿದೆ.

ನಿರ್ಣಯ ಸಿಂಧುವಿನ ಪ್ರಕಾರ,

ಶ್ರಾವಣೇ ಪಂಚಮೀ ಶುಕ್ಲಾ ಸಂಪ್ರೋಕ್ತಾ ನಾಗಪಂಚಮೀ

ತಾಂಪರಿತ್ಯಜ್ಯ ಪಂಚಮ್ಯಶ್ಚತುರ್ಥೀ ಸಹಿತಾಹಿತಾಃ

ಸರ್ಪಗಳ ಆರಾಧನೆಗೆ ಶ್ರಾವಣ ಮಾಸದ ಶುಕ್ಲಪಕ್ಷದ ‘ಪಂಚಮೀ’ ಪ್ರಶಸ್ತ ದಿನವಾಗಿದ್ದು, ಆಸ್ತಿಕರೆಲ್ಲರೂ ಇದನ್ನು ‘ನಾಗಪಂಚಮೀ’ಯಾಗಿ ಆಚರಿಸುವರು.

ನಾಗಪಂಚಮಿಯ ಪೌರಾಣಿಕ ಹಿನ್ನೆಲೆ

ಸರ್ಪಗಳ ಆರಾಧನೆ ವೇದ ಕಾಲದಿಂದಲೇ ಇದೆ. ಋುಗ್ವೇದದಲ್ಲಿ ಸರ್ಪವನ್ನು ಸ್ತುತಿಸುವ ಸರ್ಪಸೂಕ್ತವಿದೆ. ಕೃಷ್ಣ ಯಜುರ್ವೇದದಲ್ಲಿ ನಮೋಸ್ತು ಸಪೇಭ್ಯೋರ್‍ ಯೇ ಕೇಚ ಪೃಥಿವೀಮನು, ಯೇ ಅಂತರಕ್ಷೇ ಯೇ ದಿವಿ ತೇಭ್ಯಃ ಸರ್ಪಭ್ಯೋ ನಮಃ ಎಂಬ ಸೂಕ್ತವಿದೆ. ಅಂದರೆ, ‘ಭುವಿ ದಿವಿ ಅಂತರಿಕ್ಷಗಳಲ್ಲಿರುವ ಅಶ್ವತ್ಥ, ವಟವೃಕ್ಷಗಳಲ್ಲಿರುವ, ನೀರಿನಲ್ಲಿರುವ ಎಲ್ಲಾ ಸರ್ಪಗಳಿಗೆ ನಮಸ್ಕಾರ. ಅವು ನಮ್ಮ ಇಷ್ಟಾರ್ಥ ನೆರವೇರಿಸಲಿ’ ಎಂದು ಪಾರ್ಥಿಸಲಾಗಿದೆ.

ಕಾಳಿಂಗ ಎನ್ನುವ ಸರ್ಪವು ನಂದಗೋಕುಲ ಸಮೀಪ ಹರಿಯುವ ಯಮುನಾ ನದಿಯ ಒಂದು ಭಾಗದಲ್ಲಿ ವಾಸವಾಗಿತ್ತು. ಕಾಳಿಂಗನಿಂದಾಗಿ ಆ ಭಾಗದ ನದಿ ನೀರು ವಿಷದಿಂದ ಕುಲಷಿತವಾಗಿತ್ತು. ಗೋಕುಲ ನಿವಾಸಿಗಳಿಗೆ ಇದರಿಂದ ತೊಂದರೆ ಉಂಟಾದಾಗ, ಕೃಷ್ಣ ಸಮಸ್ಯೆ ನಿವಾರಣೆಗೆ ನದಿಗಿಳಿದು ಅಲ್ಲಿ ವಾಸವಾಗಿದ್ದ ಕಾಳಿಂಗನನ್ನು ಮರ್ದಿಸಿದ. ಆ ದಿನ ಶ್ರಾವಣ ಶುಕ್ಲ ಪಂಚಮಿಯಾಗಿತ್ತು. ಕೃಷ್ಣ, ಕಾಳಿಂಗನಿಗೆ ಅಭಯವಿತ್ತು ಅಲ್ಲಿಂದ ಕಳುಹಿಸಿದ. ಯಾರು ಈ ದಿನ ನಾಗನನ್ನು ಆರಾ​ಧಿಸುವರೋ ಅವರ ಕಷ್ಟಗಳು ನಿವಾರಣೆಯಾಗುವವು ಎಂದು ಸಾರಿದ. ಅಲ್ಲಿಂದ ಮೊದಲುಗೊಂಡು ನಾಗಪಂಚಮಿ ಹಬ್ಬವನ್ನು ಆಚರಿಸಲಾಗುತ್ತಿದೆ.

ಪರೀಕ್ಷೀತರಾಜನು ಸರ್ಪದ ಕಡಿತದಿಂದ ಮರಣಹೊಂದಿದ. ಆತನ ಮಗ ಜನಮೇಜಯ ರಾಜನು ಇದರಿಂದ ಕೋಪಗೊಂಡು ಸರ್ಪ ಕುಲವನ್ನೇ ನಾಶಪಡಿಸುತ್ತೇನೆಂದು ‘ಸರ್ಪಸತ್ರ’ವನ್ನು ಕೈಗೊಂಡ. ಆಸ್ತಿಕ ಮಹರ್ಷಿಯು ಜನಮೇಜಯ ರಾಜನನ್ನು ಪ್ರಸನ್ನಗೊಳಿಸಿ ಸರ್ಪಯಜ್ಞವನ್ನು ನಿಲ್ಲಿಸಿದ. ಜನಮೇಜಯನು ಆಸ್ತಿಕಮುನಿಯ ಮಾತಿನಂತೆ ಸರ್ಪಯಜ್ಞ ನಿಲ್ಲಿಸಿದ ದಿನವೇ ಪಂಚಮಿಯಾಗಿತ್ತು.

ನಾಗಪಂಚಮಿ ಆಚರಣೆಯ ವಿಧಾನ

ನಾಗ ಪಂಚಮಿಯಂದು ಪ್ರಾತಃಕಾಲದಲ್ಲಿ ಸ್ನಾನ, ನಿತ್ಯಕರ್ಮ ಪೂರೈಸಿ, ಶುಭ್ರವಸ್ತ್ರಗಳನ್ನುಟ್ಟು, ತಮ್ಮ ತಮ್ಮ ಕುಟುಂಬದವರು ನಂಬಿಕೊಂಡು ಬಂದ ನಾಗಬನದ ನಾಗಸನ್ನಿಧಿಗೆ ತೆರಳಿ, ಅಲ್ಲಿ ನಾಗವಿಗ್ರಹಕ್ಕೆ ಕ್ಷೀರಾಭಿಷೇಕ ಮಾಡಬೇಕು. ಜೀವಂತ ಹಾವಿಗೆ ಹಾಲೆರೆಯಲು ಹೋಗಬೇಡಿ. ಹಾಗೆಯೇ ಹುತ್ತಕ್ಕೂ ಹಾಲೆರೆಯಬೇಡಿ. ಕಲ್ಲಿನ ನಾಗವಿಗ್ರಹಕ್ಕೆ ಅಭಿಷೇಕ ಮಾಡಿ, ಅರಿಸಿನ-ರಕ್ತಚಂದನ ಲೇಪಿಸಿ, ಹೂವಿನಿಂದ ಅಲಂಕರಿಸಿ. ಅಕ್ಕಿಹಿಟ್ಟಿನಿಂದ ಮಾಡಿದ ರೊಟ್ಟಿ, ಸಿಹಿಕಜ್ಜಾಯ, ಅರಳು, ಹಾಲು, ಹಣ್ಣು-ಕಾಯಿಯನ್ನು ನೈವೇದ್ಯ ಮಾಡುವುದಲ್ಲದೇ, ತೆಂಗಿನ ಗರಿಯಿಂದ ಮಾಡಿದ ಸರ್ಪಾಕೃತಿಯನ್ನು ಸಮರ್ಪಿಸಿ, ಭಕ್ತಿ-ಶ್ರದ್ಧೆಯಿಂದ ಪ್ರಾರ್ಥಿಸಿ. ಹೀಗೆ ನಾಗನನ್ನು ಪೂಜಿಸಿದರೆ, ಯೇ ತಸ್ಯಾಂ ಪೂಜಯಂತೀಹ ನಾಗಾನ್‌ ಭಕ್ತಿಪುರಃಸರಾಃ ನ ತೇಷಾಂ ಸರ್ಪತೋವೀರ ಭಯಂಭವತಿ ಕುತ್ರಚಿತ್‌

(ನಿರ್ಣಯ ಸಿಂಧು) ಎಂದು ಹೇಳಲಾಗಿದೆ. ಅಂದರೆ, ನಾಗದೇವರು ನಮ್ಮೆಲ್ಲಾ ಇಷ್ಟಾರ್ಥ ಗಳನ್ನು ಈಡೇರಿಸುವುದಲ್ಲದೆ, ವಿಷಬಾಧೆ, ಚರ್ಮರೋಗವನ್ನು ಹೋಗಲಾಡಿಸುತ್ತಾನೆ. ಸಂತಾನಪ್ರಾಪ್ತಿ, ಧನಪ್ರಾಪ್ತಿ ಉಂಟಾಗಿ, ನಾಗನ ಅನುಗ್ರಹದಿಂದ ವರ್ಷಪೂರ್ತಿ ಸುಖ ಸಂತೋಷ ನೆಲೆಸುವುದೆಂಬ ನಂಬಿಕೆ ಇದೆ.

ಇನ್ನು ನಾಗಪಂಚಮೀವ್ರತ ಆಚರಿಸುವವರು, ಚತುರ್ಥಿ ದಿನ ವ್ರತ ಸಂಕಲ್ಪಿಸಿ, ಒಂದು ಹೊತ್ತು ಮಾತ್ರ ಆಹಾರ ಸ್ವೀಕರಿಸಿ, ನಾಗಪಂಚಮಿ ದಿನ ಪೂರ್ಣ ಉಪವಾಸವಿದ್ದು ನಾಗನನ್ನು ಪೂಜಿಸಿ, ರಾತ್ರಿ ಆಹಾರ ಸ್ವೀಕರಿಸುವರು. ಭಾರತದ ವಿವಿಧ ಭಾಗದಲ್ಲಿ ಅಲ್ಲಿಯ ಸ್ಥಳೀಯ ಸಂಪ್ರದಾಯಕ್ಕನುಗುಣವಾಗಿ ಆಚರಣೆ ಭಿನ್ನ ಭಿನ್ನವಾಗಿದೆ. ಕೆಲ ಭಾಗದಲ್ಲಿ ಮನೆಯ ಮುಖ್ಯದ್ವಾರದ ಎರಡೂ ಪಾಶ್ರ್ವದಲ್ಲಿ ಗೋಮಯದಿಂದ ನಾಗನ ಚಿತ್ರ ಬರೆದು ಹಾಲು, ದೂರ್ವೆ, ದರ್ಭೆ, ಚಂದನದ ಹೂವುಗಳಿಂದ ಪೂಜಿಸುವರು. ಇನ್ನು ಕೆಲ ಕಡೆ ಬೆಳ್ಳಿ, ಬಂಗಾರದ ಪ್ರತಿಮೆಯನ್ನು ಪೂಜಿಸಿ ಕೃತಾರ್ಥರಾಗುವರು. ಉತ್ತರ ಕರ್ನಾಟಕದ ಭಾಗದಲ್ಲಿ ಈ ದಿನ ಸಹೋದರರು ತಮ್ಮ ವಿವಾಹಿತ ಸಹೋದರಿಯನ್ನು ಮನೆಗೆ ಕರೆದು ಸತ್ಕರಿಸುವ ಸಂಪ್ರದಾಯವಿದೆ. ‘ಪಂಚಮಿಹಬ್ಬ’ವೆಂದೇ ಅದು ಉತ್ತರ ಕರ್ನಾಟಕದವರಿಗೆ ದೊಡ್ಡ ಹಬ್ಬವಾಗಿದೆ.

ಸರ್ಪ ಮತ್ತು ವೈಜ್ಞಾನಿಕತೆ

ಶಾಸ್ತ್ರದಲ್ಲಿ ನಾಗಪಂಚಮಿಯಂದು ನಾಗವಿಗ್ರಹಕ್ಕೆ ಹಾಲಿನಿಂದ ಅಭಿಷೇಕ ಮಾಡಲು ಮಾತ್ರ ಹೇಳಿದ್ದಾರೆಯೇ ಹೊರತು, ಜೀವಂತ ಸರ್ಪಕ್ಕೆ ಹಾಲನ್ನು ಕುಡಿಸಲು ಎಲ್ಲಿಯೂ ಹೇಳಿಲ್ಲ. ಸರ್ಪ ಹಾಲನ್ನು ಕುಡಿದರೆ ಅದಕ್ಕೆ ಅಜೀರ್ಣವಾಗಿ ಸಾಯಲೂಬಹುದು. ಇದರಿಂದ ಸರ್ಪಕ್ಕೆ ಹಾಲನ್ನು ಕುಡಿಸಿದ ಪುಣ್ಯಕ್ಕೆ ಬದಲಾಗಿ, ಸರ್ಪ ವಧೆ ಮಾಡಿದ ದೋಷ ಬಂದು ಮತ್ತೊಂದು ಅನರ್ಥಕ್ಕೆ ಕಾರಣವಾಗುವುದು. ಇನ್ನು ಸರ್ಪವನ್ನು ಹಿಂಸಿಸಬಾರದು, ಕೊಲ್ಲಬಾರದು, ಸರ್ಪವನ್ನು ವಧಿಸಿದರೆ ವಧಿ​ಸಿದವರ ಕುಟುಂಬದಲ್ಲಿ ಮುಂದೆ ಕ್ಷೀಣ ಸಂತಾನ ಅಥವಾ ಸಂತಾನವೇ ಆಗದು ಎಂಬುದು ಕೇವಲ ನಂಬಿಕೆ ಅಷ್ಟೇ ಅಲ್ಲ, ಸತ್ಯವೂ ಕೂಡ ಆಗಿದೆ.

ಸರ್ಪವನ್ನು ಕೊಲ್ಲುವಾಗ, ಆ ಸರ್ಪವು ಕೊಂದವನನ್ನು ಉದ್ದೇಶಿಸಿ ನೋವಿನಿಂದ ಶಪಿಸುವುದು ಒಂದು ಕಡೆಯಾದರೆ, ಅದು ಸಾಯುವಾಗ ಸೂಸುವ ಅಥವಾ ಹೂರಹಾಕುವ ಪ್ರಭಾವವು ಕೊಂದವನ ವಂಶವಾಹಿನಿಯ ಮೇಲೆ ನೇರ ಪರಿಣಾಮ ಬೀರುವುದಲ್ಲದೇ, ಆತನ ಮುಂದಿನ ತಲೆಮಾರಿಗೂ ಮುಂದುವರಿಯುತ್ತದೆ ಎಂದು ಹೇಳಲಾಗಿದೆ. ಅದಕ್ಕಾಗಿ ಯಾವುದೇ ಕಾರಣದಿಂದ ಸರ್ಪ ಮರಣ ಹೊಂದಿದರೂ, ಅದರ ಕೆಟ್ಟಪರಿಣಾಮ ಸಮೀಪ ಹೋದ ಎಲ್ಲರ ಮೇಲೆ ಆಗುವುದು ಎಂಬ ಕಾರಣಕ್ಕೆ ಮೃತ ಹೂಂದಿದ ಸರ್ಪವನ್ನು ದಹನ ಮಾಡಿದರೆ (ಸರ್ಪ ಸಂಸ್ಕಾರ) ಪುಣ್ಯ ಎಂದು ಧಾರ್ಮಿಕತೆಯ ಒಟ್ಟಿಗೆ ಜೋಡಿಸಿದರು. ಈ ರೀತಿಯದಾದ ಸರ್ಪ ಸಂಬಂ​ಧ ದೋಷ ಪರಿಹಾರಕ್ಕಾಗಿ ನಾಗಪ್ರತಿಷ್ಠೆ, ಸರ್ಪಸಂಸ್ಕಾರ, ಆಶ್ಲೇಷ ಬಲಿ ಇತ್ಯಾದಿ ವಿಧಾನಗಳನ್ನು ಶಾಸ್ತ್ರ ಸೂಚಿಸಿದ್ದು. ಇದರಿಂದ ಅನೇಕರು ಪರಿಹಾರ ಪಡೆದುಕೊಂಡಿದ್ದು ಕೂಡ ಅಷ್ಟೇ ಸತ್ಯವಾಗಿದೆ.

ಭಾರತಿಯ ಪರಂಪರೆಯ ಆಸ್ತಿಕರಾದ ನಮಗೆ ನಾಗನೆಂದರೆ ಕೇವಲ ಸ್ನೇಕ್‌ ಅಲ್ಲ ಅಥವಾ ಸಾಮಾನ್ಯ ಸರೀಸೃಪವೂ ಅಲ್ಲ. ಅದು ದೈವೀಗುಣವನ್ನು ಹೊಂದಿರುವ ಶಕ್ತಿಯಾಗಿದೆ.ಪ್ರಸ್ತುತ ಈ ವಿಕಟ ಸಮಯದಲ್ಲಿ ಸಂಭ್ರಮದಿಂದ ‘ನಾಗಪಂಚಮಿ ಹಬ್ಬ’ವನ್ನು ಹಬ್ಬವಾಗಿ ಆಚರಿಸುವ ಸ್ಥಿತಿಯಲ್ಲಿ ನಾವಿಲ್ಲ. ಆದರೂ ನಮ್ಮ ನಮ್ಮ ವ್ಯಾಪ್ತಿಯಲ್ಲಿ ಸರಳವಾಗಿ ಆಚರಿಸಿ, ನಮ್ಮ ನಮ್ಮ ಕುಟುಂಬವನ್ನು ಸುಖ-ಸಮೃದ್ಧಿಯಿಂದ ಸುರಕ್ಷಿತವಾಗಿಡು ಎಂದು ನಾಗಶಕ್ತಿಯಲ್ಲಿ ಪ್ರಾರ್ಥಿಸುವುದೇ ನಮಗಿರುವ ಶ್ರೇಷ್ಠ ಮಾರ್ಗವಾಗಿದೆ.

- ಗಣೇಶ ಭಟ್ಟ, ಕುಮಟಾ

Latest Videos
Follow Us:
Download App:
  • android
  • ios