ಬೃಹಸ್ಪತಿಯು ಜ್ಞಾನ ಮತ್ತು ಸಂತಾನಕ್ಕೆ ಕಾರಕ ಗ್ರಹವಾಗಿದೆ. ಧನು ಮತ್ತು ಮೀನ ರಾಶಿಗೆ ಅಧಿಪತಿಯಾಗಿರುವ ಗುರು ಗ್ರಹವು ಕರ್ಕಾಟಕ ರಾಶಿಯಲ್ಲಿ ಉಚ್ಛ ಸ್ಥಿತಿಯಲ್ಲಿದ್ದರೆ, ಮಕರ ರಾಶಿಯಲ್ಲಿ ನೀಚ ಸ್ಥಿತಿಯಲ್ಲಿರುತ್ತದೆ ಎಂದು ಹೇಳಲಾಗುತ್ತದೆ.   

ಗುರು ಗ್ರಹವು ಇದೇ ನವೆಂಬರ್ 20ರಂದು ಮಕರ ರಾಶಿಗೆ ಪ್ರವೇಶಿಸಿದೆ. ಮಕರ ರಾಶಿಯ ಅಧಿಪತಿಯಾದ ಶನಿಯು, ತನ್ನದೇ ಮನೆಯಾದ ಮಕರ ರಾಶಿಯಲ್ಲಿ ಸ್ಥಿತನಾಗಿದ್ದಾನೆ, ಅದೇ ರಾಶಿಗೆ ಈಗ ಗುರುಗ್ರಹದ ಪ್ರವೇಶವಾಗಿದೆ. ಈ ಎರಡು ಗ್ರಹಗಳ ಯುತಿಯು ಅನಿರೀಕ್ಷಿತ ಪರಿಣಾಮಗಳನ್ನು ಉಂಟಮಾಡುತ್ತವೆ ಎಂದು ಹೇಳಲಾಗುತ್ತಿದೆ.

ಇದನ್ನು ಓದಿ: ಮಕರ ರಾಶಿಗೆ ಗುರು ಪ್ರವೇಶ; ಯಾವ ಯಾವ ರಾಶಿಯವರಿಗೆ ಲಕ್..? 

ಗುರುಗ್ರಹದ ರಾಶಿ ಪರಿವರ್ತನೆಯು ಎಲ್ಲ ರಾಶಿಗಳ ಮೇಲೆ ಶುಭ-ಅಶುಭ ಪರಿಣಾಮವನ್ನುಂಟು ಮಾಡುತ್ತದೆ. ಗುರುವಿನ ಶುಭ ಪ್ರಭಾವದಿಂದ ಕಾರ್ಯಕ್ಷೇತ್ರದಲ್ಲಿ ಉತ್ತಮ ಯಶಸ್ಸನ್ನು ಕಾಣಬಹುದಾಗಿದೆ. ಅದೇ ಅಶುಭ ಪ್ರಭಾವದಿಂದ ವಿವಿಧ ಕ್ಷೇತ್ರಗಳಲ್ಲಿ  ಅನೇಕ ಸಮಸ್ಯೆಗಳನ್ನು ಎದುರಿಸಬೇಕಾಗಿ ಬರುತ್ತದೆ. ಹಾಗಾಗಿ ಅಶುಭ ಪ್ರಭಾವದಿಂದ ಪಾರಾಗಲು ವಿವಿಧ ನಿವಾರಣೋಪಾಯಗಳನ್ನು ತಿಳಿಸಲಾಗಿದೆ. ಅವು ಯಾವುವು ಎಂದು ತಿಳಿಯೋಣ..

- ಜಾತಕದಲ್ಲಿ ಗುರುಗ್ರಹವನ್ನು ಬಲ ಪಡಿಸಿಕೊಳ್ಳಲು ಮತ್ತು ಗುರು ರಾಶಿ ಪರಿವರ್ತನೆಯ ಅಶುಭ ಪ್ರಭಾವದಿಂದ ಪಾರಾಗಲು ಗುರುವಾರದ ದಿನ ಪೂಜೆಯ ಸಮಯದಲ್ಲಿ “ಓಂ ಬೃಂ ಬೃಹಸ್ಪತಯೇ ನಮಃ” ಎಂಬ ಮಂತ್ರವನ್ನು 108 ಬಾರಿ ಜಪಿಸಬೇಕು.- ಶ್ರೀ ಮಹಾವಿಷ್ಣುವಿನ ಆರಾಧನೆಯಿಂದ ಬೃಹಸ್ಪತಿಯು ಪ್ರಸನ್ನನಾಗುತ್ತಾನೆಂಬ ನಂಬಿಕೆ ಇದೆ. ಹಾಗಾಗಿ ಗುರುವಿನ ಅಶುಭ ಪ್ರಭಾವವನ್ನು ತಗ್ಗಿಸಲು ಪ್ರತಿನಿತ್ಯ ಶ್ರೀ ವಿಷ್ಣು ಸಹಸ್ರನಾಮವನ್ನು ಪಠಿಸಬೇಕು. ಇದರಿಂದ ಜಾತಕದಲ್ಲಿ ಗುರುಗ್ರಹದ ಸ್ಥಿತಿ ಸಹ ಬಲಗೊಳ್ಳುತ್ತದೆ. ಗುರುಗ್ರಹದಿಂದ ಉಂಟಾಗುವ ಸಮಸ್ಯೆಗಳ ನಿವಾರಣೆಯಾಗುತ್ತದೆ.
 
- ವಾಸುದೇವನ ಧ್ಯಾನ-ಆರಾಧನೆಯಿಂದ ಸಹ ಗುರುವಿನ ಅಶುಭ ಪ್ರಭಾವ ಕಡಿಮೆಯಾಗಲಿದೆ. ಹಾಗಾಗಿ “ಓಂ ಭಗವತೇ ವಾಸುದೇವಾಯ ನಮಃ” ಎಂಬ ಮಂತ್ರವನ್ನು ಜಪಮಾಲೆಯನ್ನುಪಯೋಗಿಸಿ ಪಠಣ ಮಾಡುವುದರಿಂದ ಒಳಿತಾಗುತ್ತದೆ. ಅಷ್ಟೇ ಅಲ್ಲದೇ ವಿಷ್ಣುವಿಗೆ ಹಳದಿ ಬಣ್ಣದ ಹಣ್ಣನ್ನು ನೈವೇದ್ಯ ಮಾಡುವುದರಿಂದ ಸಹ ಗುರುಕೃಪೆ ಸಿಗಲಿದೆ.

ಇದನ್ನು ಓದಿ: ಹಸ್ತರೇಖೆಯಿಂದ ತಿಳಿಯಿರಿ ವೈವಾಹಿಕ ಜೀವನದ ರಹಸ್ಯ..! 

- ಗುರುಗ್ರಹದ ದೋಷದಿಂದ ಮುಕ್ತರಾಗಬೇಕೆಂದರೆ ಶ್ರೀ ಮಹಾವಿಷ್ಣುವನ್ನು ಆರಾಧನೆ ಮಾಡುವುದರೊಂದಿಗೆ ಅರಿಶಿಣ ಮತ್ತು ಚಂದನದ ತಿಲಕವನ್ನಿಟ್ಟುಕೊಟ್ಟಬೇಕು. ಅಷ್ಟೇ ಅಲ್ಲದೇ ಯಾವುದೇ ಶುಭ ಕಾರ್ಯಕ್ಕೆ ಹೊರಡುವ ಮುನ್ನ ಸಹ ಈ ರೀತಿ ಮಾಡಿದಲ್ಲಿ ಯಶಸ್ಸು ದೊರೆಯುತ್ತದೆ.

- ದೇವತೆಗಳ ಗುರು ಬೃಹಸ್ಪತಿಯ ಕೃಪೆ ಪಡೆಯಬೇಕೆಂದರೆ ಪ್ರತಿ ಹುಣ್ಣಿಮೆಯಂದು ಸತ್ಯನಾರಾಯಣ ಸ್ವಾಮಿಯ ಕಥೆಯನ್ನು ಕೇಳಬೇಕು, ಇಲ್ಲವೇ ಸ್ವತಃ ಪಠಿಸಬೇಕು. ಪ್ರತಿದಿನ ಶ್ರೀ ಮಹಾವಿಷ್ಣುವಿನ ಆರಾಧನೆ ಮಾಡಬೇಕು ಮತ್ತು ವಿಷ್ಣುವಿಗೆ ಬಾಳೆಹಣ್ಣನ್ನು ನೈವೇದ್ಯ ಮಾಡಬೇಕು.

- ಗುರು ಬೃಹಸ್ಪತಿಯ ಪ್ರಸನ್ನತೆಗೆ ಪಾತ್ರರಾಗಬೇಕೆಂದರೆ ಗುರುವಾರದಂದು ಬೇಳೆ, ಅರಿಶಿಣ, ಹಳದಿ ವಸ್ತ್ರ ಮತ್ತು ಹಿಟ್ಟಿನ ಉಂಡೆಯನ್ನು ಯೋಗ್ಯ ಬ್ರಾಹ್ಮಣರಿಗೆ ದಾನವಾಗಿ ನೀಡ   ಬೇಕು. ಬಾಳೆಗಿಡಕ್ಕೆ ನೀರು ಹಾಕಬೇಕೆಂದು ಸಹ ಹೇಳಲಾಗುತ್ತದೆ. ವಿವಾಹ ಯೋಗ್ಯ ಕನ್ಯೆಯರು ಈ ರೀತಿ ಮಾಡಿದಲ್ಲಿ ಬೇಗ ವಿವಾಹಯೋಗ ಉಂಟಾಗುತ್ತದೆ ಎಂದು ಹೇಳುತ್ತಾರೆ.

- ಗುರುವಿನ ಕೃಪೆಗೆ ಪಾತ್ರರಾಗಬೇಕೆಂದರೆ ಪ್ರತಿದಿನ ರಾಮರಕ್ಷಾ ಸ್ತೋತ್ರವನ್ನು ಪಠಿಸಬೇಕು. ಇದರಿಂದ ಗುರುವಿನ ಕೃಪೆ ದೊರೆಯಲಿದೆ.

ಇದನ್ನು ಓದಿ: ಈ ನಾಲ್ಕು ರಾಶಿಯವರಿಗಿರುತ್ತೆ ಮಹಾಲಕ್ಷ್ಮಿಯ ಕೃಪೆ: ನಿಮ್ಮ ರಾಶಿನೂ ಇದೆಯಾ..? 

- ಗುರುಗ್ರಹದ ಅಶುಭ ಪ್ರಭಾವದಿಂದ ವಿವಾಹ ವಿಳಂಬದ ಸಾಧ್ಯತೆಯು ಇರುತ್ತದೆ. ಹಾಗಾಗಿ ಇದಕ್ಕೆ ಗುರುವಾರದ ವ್ರತವನ್ನು ಮಾಡಬೇಕು ಮತ್ತು ಅರಿಶಿಣ, ಬೇಳೆ ಮತ್ತು ಬೆಲ್ಲ ಇತ್ಯಾದಿಗಳಿಂದ ಪೂಜಿಸಬೇಕು. ಗುರುವಾರದ ವ್ರತ ಕಥೆಯನ್ನು ಪಠಿಸಬೇಕು. ಇದರಿಂದ ಗುರುಗ್ರಹವು ಬಲಗೊಳ್ಳುವುದಲ್ಲದೇ ವಿವಾಹ ಯೋಗವುಂಟಾಗುತ್ತದೆ.