Asianet Suvarna News Asianet Suvarna News

ವಿಶ್ವವಿಖ್ಯಾತ ಮೈಸೂರು ದಸರೆಯಲ್ಲಿ ರೈತರ ದರ್ಬಾರ್‌...!

ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಂಡೂರಿನಿಂದ ಬಂದಿದ್ದ ಒಂದು ಡಜನ್ ಕುರಿಗಳು, ಮೈಸೂರು ತಾಲೂಕಿನ ವರುಣ, ಚಿಕ್ಕಹಳ್ಳಿ ಮತ್ತು ಸಿದ್ದಲಿಂಗಪುರದಿಂದ ಬಂದಿದ್ದ 3 ಎತ್ತಿನ ಗಾಡಿಗಳು, ಹಳ್ಳಿಕಾರ್ ಎತ್ತು ರೈತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬರುವ ಮೂಲಕ ಗಮನ ಸೆಳೆದವು.

Raita Dasara Held During Dasara Festival in Mysuru grg
Author
First Published Oct 21, 2023, 4:00 AM IST

ಬಿ. ಶೇಖರ್‌ಗೋಪಿನಾಥಂ

ಮೈಸೂರು(ಅ.21):  ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾ ಮಹೋತ್ಸವ ಅಂಗವಾಗಿ ಆಯೋಜಿಸಲಾಗಿರುವ ಮೂರು ದಿನಗಳ ರೈತ ದಸರಾ ಕಾರ್ಯಕ್ರಮವು ಶುಕ್ರವಾರ ಮೆರವಣಿಗೆಯ ಮೂಲಕ ಆರಂಭವಾಯಿತು.
ಮೈಸೂರು ಅರಮನೆಯ ಕೋಟೆ ಆಂಜನೇಯಸ್ವಾಮಿ ಮುಂಭಾಗದಲ್ಲಿ ರೈತರ ದಸರಾ ಮೆರವಣಿಗೆಗೆ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರು ನಂದಿ ಪೂಜೆಯೊಂದಿಗೆ ನಗಾರಿ ಬಾರಿಸುವ ಮೂಲಕ ಚಾಲನೆ ನೀಡಿದರು. ಇದೇ ವೇಳೆ ಹಳ್ಳಿಕಾರ್ ಎತ್ತಿಗೆ ಪೂಜೆ ಸಲ್ಲಿಸಿದರು.

ಮೆರವಣಿಗೆಯಲ್ಲಿ ಸಾಗುತ್ತಿದ್ದ ಎತ್ತಿನಗಾಡಿಯಲ್ಲಿ ಸಚಿವ ಎನ್. ಚಲುವರಾಯಸ್ವಾಮಿ, ಶಾಸಕರಾದ ಕೆ. ಹರೀಶ್ ಗೌಡ, ರಮೇಶ್ ಬಂಡಿಸಿದ್ದೇಗೌಡ, ಜಿಲ್ಲಾಧಿಕಾರಿ ಡಾ.ಕೆ.ವಿ. ರಾಜೇಂದ್ರ ಅವರು ಸಾಗುವ ಮೂಲಕ ಗಮನ ಸೆಳೆದರು.
ನಂದಿ ಧ್ವಜ, ಟಿಬೇಟಿಯನ್ ನೃತ್ಯ, ವೀರಗಾಸೆ ಕುಣಿತ, ಪೂಜಾ ಕುಣಿತ, ಡೊಳ್ಳು ಕುಣಿತ, ನಗಾರಿ, ದೊಣ್ಣೆ ವರಸೆ ಸೇರಿದಂತೆ ವಿವಿಧ ಜಾನಪದ ಕಲಾತಂಡಗಳು ರೈತ ದಸರಾ ಮೆರವಣಿಗೆಗೆ ಮೆರುಗು ಹೆಚ್ಚಿಸಿದವು.
ಅಲ್ಲದೇ, ಮಂಡ್ಯ ಜಿಲ್ಲೆ ಮಳವಳ್ಳಿ ತಾಲೂಕಿನ ಬಂಡೂರಿನಿಂದ ಬಂದಿದ್ದ ಒಂದು ಡಜನ್ ಕುರಿಗಳು, ಮೈಸೂರು ತಾಲೂಕಿನ ವರುಣ, ಚಿಕ್ಕಹಳ್ಳಿ ಮತ್ತು ಸಿದ್ದಲಿಂಗಪುರದಿಂದ ಬಂದಿದ್ದ 3 ಎತ್ತಿನ ಗಾಡಿಗಳು, ಹಳ್ಳಿಕಾರ್ ಎತ್ತು ರೈತರೊಂದಿಗೆ ಮೆರವಣಿಗೆಯಲ್ಲಿ ಸಾಗಿ ಬರುವ ಮೂಲಕ ಗಮನ ಸೆಳೆದವು.

ಮೈಸೂರು: ಅರಮನೆಯಲ್ಲಿ ದಸರಾ ಜಂಬೂಸವಾರಿ ತಾಲೀಮು

ಸ್ತಬ್ಧಚಿತ್ರಗಳ ಸವಾರಿ:

ರೈತ ದಸರಾ ಮೆರವಣಿಗೆಯಲ್ಲಿ ವಿವಿಧ ಇಲಾಖೆಗಳ 5 ಸ್ತಬ್ಧಚಿತ್ರಗಳು ಸಾಗಿ ಬಂದವು. ಇದರಲ್ಲಿ ತೋಟಗಾರಿಕೆ ಇಲಾಖೆಯ ಮೈಸೂರಿನ ಹೆಮ್ಮೆಯ ಬೆಳೆಗಳು- ಭೌಗೋಳಿಕ ಹಿನ್ನೆಲೆಯ ಬೆಳೆಗಳು ಸ್ತಬ್ಧಚಿತ್ರವು ಗಮನ ಸೆಳೆಯಿತು.
ಕೃಷಿ, ತೋಟಗಾರಿಕೆ, ರೇಷ್ಮೆ, ಪಶುಸಂಗೋಪನಾ ಮತ್ತು ವೈದ್ಯಕೀಯ ಸೇವಾ ಇಲಾಖೆ ಹಾಗೂ ಅರಣ್ಯ ಇಲಾಖೆಯ ಸಾಮಾಜಿಕ ಅರಣ್ಯ ವಲಯದ ಸ್ತಬ್ಧಚಿತ್ರಗಳು ತಮ್ಮ ವ್ಯಾಪ್ತಿಯಲ್ಲಿ ರೈತರಿಗೆ ಒದಲಾಗಿಸಲಾಗುತ್ತಿರುವ ವಿವಿಧ ಯೋಜನೆಗಳು ಮತ್ತು ಸೌಲಭ್ಯಗಳ ಕುರಿತು ಅರಿವು ಮೂಡಿಸುವ ಮಾಹಿತಿಯನ್ನು ಹೊತ್ತಿ ಸಾಗಿದವು.

ಅರಮನೆ ಕೋಟೆ ಆಂಜನೇಯಸ್ವಾಮಿ ದೇವಸ್ಥಾನ ಬಳಿಯಿಂದ ಆರಂಭವಾದ ರೈತ ದಸರಾ ಮೆರವಣಿಗೆಯೂ ಚಾಮರಾಜ ವೃತ್ತ, ಕೆ.ಆರ್. ವೃತ್ತ, ಡಿ. ದೇವರಾಜ ಅರಸು ರಸ್ತೆ, ದಿವಾನ್ಸ್ ರಸ್ತೆಯ ಮೂಲಕ ಜೆ.ಕೆ. ಮೈದಾನಕ್ಕೆ ತಲುಪಿತು.
ರೈತ ದಸರಾ ಮೆರವಣಿಗೆ ಉದ್ಘಾಟಿಸಿದ ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಮಾತನಾಡಿ, ಮೈಸೂರು ದಸರಾ ಮಹೋತ್ಸವ ಅಂಗವಾಗಿ ಅನೇಕ ಕಾರ್ಯಕ್ರಮಗಳನ್ನು ಆಯೋಜಿಸಿದ್ದು, ಇದರಲ್ಲಿ ರೈತ ದಸರಾ ಕೂಡ ಸೇರಿದೆ. ರಾಜ್ಯದಲ್ಲಿ ರೈತರು ಮತ್ತು ಸಾರ್ವಜನಿಕರಿಗೆ ಬರಗಾಲ ಎದುರಾಗಿರುವ ಕಾರಣ ಸಂಭ್ರಮದಿಂದ ಆಚರಿಸಬೇಕಾದ ದಸರಾವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತಿದೆ ಎಂದರು.

ದಸರಾ ಆಯುಧ ಪೂಜೆಗೆ ಅರಿಶಿಣ, ಕುಂಕುಮ ಹಾಗೂ ರಂಗೋಲಿ ನಿಷೇಧಿಸಿದ ಸರ್ಕಾರ!

ಉಪ ಮೇಯರ್ ಡಾ.ಜಿ.ರೂಪ, ನಗರ ಪಾಲಿಕೆ ಸದಸ್ಯೆ ಪ್ರಮೀಳಾ ಭರತ್, ರೈತ ದಸರಾ ಉಪ ಸಮಿತಿ ಉಪ ವಿಶೇಷಾಧಿಕಾರಿ ಡಾ.ಎಂ. ಕೃಷ್ಣಂರಾಜು, ಕಾರ್ಯಾಧ್ಯಕ್ಷ ಡಾ.ಬಿ.ಎಸ್. ಚಂದ್ರಶೇಖರ್, ಸದಸ್ಯ ಕಾರ್ಯದರ್ಶಿ ಡಾ. ನಾಗರಾಜು, ಅಧ್ಯಕ್ಷ ಕೆ.ಪಿ. ಯೋಗೇಶ್, ಉಪಾಧ್ಯಕ್ಷರಾದ ಕೆ.ಎಸ್. ಮಾಲೇಗೌಡ, ಹೊನ್ನನಾಯಕ ಹಾಗೂ ಸದಸ್ಯರು ಇದ್ದರು.

ರಾಜ್ಯದಲ್ಲಿ ಬರಗಾಲ ಕಾರಣದಿಂದಾಗಿ ಈ ವರ್ಷ ಸಾಂಪ್ರದಾಯಿಕ ದಸರಾ ಆಚರಿಸಲಾಗುತ್ತಿದೆ. ರಾಜ್ಯದ 216 ತಾಲೂಕುಗಳನ್ನು ಬರ ಪೀಡಿತ ಎಂದು ಈಗಾಗಲೇ ಘೋಷಿಸಲಾಗಿದೆ. ಇಂತಹ ಪರಿಸ್ಥಿತಿಯಲ್ಲಿ ಚಾಮುಂಡೇಶ್ವರಿ ದೇವಿ ಕರುಣೆ ತೋರಿ ವಿಜಯದಶಮಿ ವೇಳೆಗೆ ಮಳೆಯಾದರೇ ರೈತರಿಗೆ ಕನಿಷ್ಠ ಪ್ರಮಾಣದಲ್ಲಾದರೂ ಅನುಕೂಲವಾಗಲಿದೆ ಎಂದು ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ತಿಳಿಸಿದ್ದಾರೆ. 

Follow Us:
Download App:
  • android
  • ios