ಬಾಗಲಕೋಟೆ: ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುವ ಪೂಜಾರಿ, ದಂಡಿನ ದುರ್ಗಾದೇವಿ ಜಾತ್ರೆಯಲ್ಲಿ ವಿಶಿಷ್ಟ ಸೇವೆ..!
ನಾನಾ ಜಾತಿ, ಜನಾಂಗದವರು, ಧರ್ಮದವರು ಒಂದೊಂದು ರೀತಿಯಾಗಿ, ಭಿನ್ನ-ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿ ಭಕ್ತಿ ಸಮರ್ಪಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಬಾಗಲಕೋಟೆಯಲ್ಲಿ ಮಂಗಳವಾರ ಜರುಗಿದ ಪ್ರಸಿದ್ಧ ದಂಡಿನ ದುರ್ಗಾ ದೇವಿ ಜಾತ್ರೆಯಲ್ಲಿ ಪೂಜಾರಿಯೊಬ್ಬರು ಭಕ್ತರು ತಂದಿಟ್ಟ ತೆಂಗಿನ ಕಾಯಿಗಳನ್ನು ತಮ್ಮ ತಲೆಗೇ ಕುಟ್ಟಿಕೊಂಡು ಒಡೆದು ನೆರೆದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದರು.
ಬಾಗಲಕೋಟೆ(ಜು.05): ದೇವರ ಉತ್ಸವ, ರಥೋತ್ಸವ, ಹಬ್ಬ ಹರಿದಿನಗಳಲ್ಲಿ ಪೂಜೆ-ಪುನಸ್ಕಾರದ ವೇಳೆ ಭಕ್ತರು ತೆಂಗಿನಕಾಯಿ ಒಡೆಸಿ ಪೂಜೆ ಸಲ್ಲಿಸುವುದು ಸಹಜ. ಅರ್ಚಕರು ಕತ್ತಿ, ಕಲ್ಲುಗಳಿಂದ ಕಾಯಿ ಒಡೆದು ದೇವರಿಗೆ ಅರ್ಪಿಸುವುದೂ ಸಾಮಾನ್ಯ. ಆದರೆ, ಇಲ್ಲೊಬ್ಬ ಭಕ್ತ ತೆಂಗಿನಕಾಯಿಯನ್ನೇ ತಲೆಗೆ ಒಡೆದು ವಿಶಿಷ್ಟ ಭಕ್ತಿ ಮೆರೆದಿದ್ದಾನೆ!
ನಾನಾ ಜಾತಿ, ಜನಾಂಗದವರು, ಧರ್ಮದವರು ಒಂದೊಂದು ರೀತಿಯಾಗಿ, ಭಿನ್ನ-ವಿಭಿನ್ನ, ವಿಶಿಷ್ಟ ರೀತಿಯಲ್ಲಿ ಸೇವೆ ಸಲ್ಲಿಸಿ ಭಕ್ತಿ ಸಮರ್ಪಿಸುತ್ತಾರೆ. ಇದಕ್ಕೆ ನಿದರ್ಶನ ಎಂಬಂತೆ ಬಾಗಲಕೋಟೆಯಲ್ಲಿ ಮಂಗಳವಾರ ಜರುಗಿದ ಪ್ರಸಿದ್ಧ ದಂಡಿನ ದುರ್ಗಾ ದೇವಿ ಜಾತ್ರೆಯಲ್ಲಿ ಪೂಜಾರಿಯೊಬ್ಬರು ಭಕ್ತರು ತಂದಿಟ್ಟ ತೆಂಗಿನ ಕಾಯಿಗಳನ್ನು ತಮ್ಮ ತಲೆಗೇ ಕುಟ್ಟಿಕೊಂಡು ಒಡೆದು ನೆರೆದ ಭಕ್ತರನ್ನು ಮಂತ್ರಮುಗ್ಧರನ್ನಾಗಿಸಿದರು.
ಮಳೆಗಾಗಿ ತಾಮ್ರದ ಬಿಂದಿಗೆ ಬಳಿ ಭವಿಷ್ಯ ಕೇಳಿದ ವಿಜಯಪುರ ಜನ! ಬಿಂದಿಗೆ ನುಡಿದ ಭವಿಷ್ಯ ನಿಜವಾಗುತ್ತಾ?
ನಗರದ ಹರಣಶಿಕಾರಿ ಕಾಲೋನಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ಮಂಗಳವಾರ ಶ್ರೀ ದಂಡಿನ ದುರ್ಗಾದೇವಿ ಜಾತ್ರೆ ಜರುಗಿತು. ದೇವಿಗೆ ಪೂಜೆ ಸಲ್ಲಿಕೆ ವೇಳೆ ಪೂಜಾರಿ ಪರಶುರಾಮ್ ಕಾಳೆ ಅವರು ತಲೆಗೆ 20ಕ್ಕೂ ಅಧಿಕ ತೆಂಗಿನಕಾಯಿಗಳನ್ನು ಒಡೆದುಕೊಂಡು ಅಚ್ಚರಿ ಮೂಡಿಸಿದರು. ಒಂದರ ಮೇಲೊಂದರಂತೆ ಪಟಪಟನೆ ತೆಂಗಿನಕಾಯಿಗಳನ್ನು ಹಣೆ, ಹಿಂದೆಲೆ-ಮುಂದೆಲೆ ಹೀಗೆ ವಿವಿಧ ಭಂಗಿಗಳಲ್ಲಿ ಭಕ್ತರೆದುರೇ ಒಡೆದುಕೊಂಡರು. ಆದರೂ ಒಂದೇ ಒಂದು ಹನಿ ರಕ್ತವಾಗಲಿ, ಸಣ್ಣ ಗಾಯವಾಗಲಿ ಆಗದಿರುವುದು ಭಕ್ತರಲ್ಲಿ ವಿಸ್ಮಯ ಮೂಡಿಸಿತು.
ಈ ಪೂಜಾರಿ ತಲೆಗೆ ತೆಂಗಿನಕಾಯಿ ಒಡೆದುಕೊಳ್ಳುತ್ತ ದೇವಿಗೆ ಭಕ್ತಿ ಸಮರ್ಪಿಸಿದರೆ, ಭಕ್ತರು ದೀರ್ಘದಂಡ ನಮಸ್ಕಾರ, ಉರುಳುಸೇವೆ ಸಹಿತ ವಿಶೇಷ ಹರಕೆ ತೀರಿಸಿದರು. ಈ ಮೂಲಕ ದಂಡಿನ ದುರ್ಗಾದೇವಿ ಜಾತ್ರೆಯನ್ನು ವಿಶೇಷವಾಗಿ ಆಚರಿಸಿ ಸಂಪ್ರದಾಯ ಮೆರೆದರು. ಭಕ್ತರು ಸಂತಾನ ಪ್ರಾಪ್ತಿ, ನೌಕರಿ, ಆರೋಗ್ಯ, ಮನೆ ಸಮಸ್ಯೆಗೆ ಪರಿಹಾರ ಹೀಗೆ ವಿವಿಧ ಇಷ್ಟಾರ್ಥ ಸಿದ್ಧಿಗಾಗಿ ಉರುಳು ಸೇವೆ, ತೆಂಗಿನಕಾಯಿ ಒಡೆಯುವುದು ನಾನಾ ರೀತಿಯ ಹರಕೆ ಒಪ್ಪಿಸಿದರು.