Navratri 2022 Day 7: ಕಾಳರಾತ್ರಿಯ ಆರಾಧನೆಯಿಂದ ಶತ್ರುಪೀಡೆಯಿಂದ ಮುಕ್ತಿ! ಇಲ್ಲಿದೆ ಪೂಜಾ ವಿಧಾನ..
ಶರನ್ನವರಾತ್ರಿ 2022 ಏಳನೇ ದಿನದಂದು ಮಾತಾ ಕಾಳರಾತ್ರಿಯನ್ನು ಪೂಜಿಸಲಾಗುತ್ತದೆ. ಧರ್ಮಗ್ರಂಥಗಳ ಪ್ರಕಾರ, ಮಾತಾ ಕಾಳರಾತ್ರಿಯು ಎಲ್ಲ ಸಾಧನೆಗಳ ದೇವತೆ, ಅದಕ್ಕಾಗಿಯೇ ಈ ದಿನದಂದು ಅವಳನ್ನು ಪೂಜಿಸುವುದು ವ್ಯಕ್ತಿಗೆ ಬಹಳಷ್ಟು ಪ್ರಯೋಜನಗಳನ್ನು ನೀಡುತ್ತದೆ.
ನವರಾತ್ರಿ ಉತ್ಸವದಲ್ಲಿ ಮಾತೆ ದುರ್ಗೆಯ ಏಳನೆಯ ಪರಿಪೂರ್ಣ ರೂಪವಾದ ಮಾತಾ ಕಾಳರಾತ್ರಿಯ ಆರಾಧನೆಯನ್ನು ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಶರನ್ನವರಾತ್ರಿಯ ಸಪ್ತಮಿ ತಿಥಿಯ ದಿನದಂದು ಮಾ ದುರ್ಗೆಯ ಅತ್ಯಂತ ಶಕ್ತಿಶಾಲಿ ರೂಪವನ್ನು ಪೂಜಿಸಲಾಗುತ್ತದೆ. ಈ ದಿನ ಮಾತಾ ಕಾಳರಾತ್ರಿ ಪೂಜೆ ಮತ್ತು ಮಂತ್ರಗಳನ್ನು ಪಠಿಸುವುದರಿಂದ ಎಲ್ಲಾ ರೀತಿಯ ಕಷ್ಟ, ನೋವುಗಳು ದೂರವಾಗುತ್ತವೆ ಎಂದು ನಂಬಲಾಗಿದೆ. ಮಾತಾ ಕಾಳರಾತ್ರಿಯನ್ನು ಎಲ್ಲಾ ಸಿದ್ಧಿಗಳ ದೇವತೆ ಎಂದೂ ಕರೆಯಲಾಗುತ್ತದೆ. ಆದ್ದರಿಂದ ಈ ದಿನ ತಾಯಿಯನ್ನು ತಂತ್ರ-ಮಂತ್ರದಿಂದ ಪೂಜಿಸಲಾಗುತ್ತದೆ. ಈಕೆಯನ್ನೇ ದಕ್ಷಿಣ ಭಾರತದಲ್ಲಿ ಸರಸ್ವತಿ ದೇವಿ ಎಂದು ಪೂಜಿಸಲಾಗುತ್ತದೆ.
ಮಾತಾ ಕಾಳರಾತ್ರಿ(Kalaratri)ಯ ಮಂತ್ರಗಳನ್ನು ಪಠಿಸುವುದರಿಂದ ಭೂತದೆವ್ವ, ನಕಾರಾತ್ಮಕ ಶಕ್ತಿಗಳು ಸೇರಿದಂತೆ ಎಲ್ಲ ಅಡೆತಡೆಗಳಿಂದ ಮುಕ್ತಿ ಸಿಗುತ್ತದೆ. ದುಷ್ಟ ಶಕ್ತಿಗಳು ಮನೆಯಿಂದ ಓಡಿಹೋಗುತ್ತವೆ ಎಂದು ಶಾಸ್ತ್ರಗಳಲ್ಲಿ ವಿವರಿಸಲಾಗಿದೆ. ಆಕೆ ಒಲಿದರೆ ಭಯ ಹೋಗಿ ಧೈರ್ಯ ಮೈಗೂಡುತ್ತದೆ, ಅಕಾಲ ಮೃತ್ಯುವಿರುವುದಿಲ್ಲ, ಜೊತೆಗೆ ಶತ್ರುಗಳಿಂದ ಮುಕ್ತಿ ದೊರೆಯುತ್ತದೆ. ಮಾತಾ ಕಾಳರಾತ್ರಿಯ ಸ್ವರೂಪ, ಪೂಜಾ ವಿಧಾನ ಮತ್ತು ಮಂತ್ರವನ್ನು ತಿಳಿಯೋಣ.
Weekly Love Horoscope: ವೃಷಭಕ್ಕೆ ಉತ್ಕಟ ಪ್ರೇಮಾನುಭವ, ಕುಂಭದ ಪ್ರೇಮಜೀವನದಲ್ಲಿ ಅನಿಶ್ಚತತೆ
ಮಾತಾ ಕಾಳರಾತ್ರಿಯ ರೂಪ
ಶುಂಭ ನಿಶುಂಭರೆಂಬ ರಾಕ್ಷಸರನ್ನು ಸಂಹಾರ ಮಾಡಲು ತಾಯಿ ಪಾರ್ವತಿಯು ತನ್ನ ಚಿನ್ನದ ಬಣ್ಣದ ಚರ್ಮ ತೆಗೆದು ಕಪ್ಪು ಬಣ್ಣದ ತೊಗಲನ್ನು ಹೊದ್ದು ಬರುತ್ತಾಳೆ. ಅವಳೇ ಕಾಳರಾತ್ರಿ. ಅವಳು ಪಾರ್ವತಿಯ ಅತ್ಯಂತ ಭೀಕರ ರೂಪವಾಗಿದ್ದಾಳೆ.
ಮಾತಾ ಕಾಳರಾತ್ರಿಗೆ ಮೂರು ಕಣ್ಣುಗಳು ಮತ್ತು ನಾಲ್ಕು ತೋಳುಗಳಿವೆ ಎಂದು ಶಾಸ್ತ್ರಗಳಲ್ಲಿ ಹೇಳಲಾಗಿದೆ. ಪ್ರತಿ ಕೈಯ್ಯಲ್ಲಿಯೂ ತಾಯಿಯು ವರದ ಮುದ್ರೆ, ಅಭಯಮುದ್ರೆ, ಕಬ್ಬಿಣದ ಲೋಹದಿಂದ ಮಾಡಿದ ಸಲಾಕೆ, ಖಡ್ಗವನ್ನು ಹಿಡಿದಿದ್ದಾಳೆ. ತಾಯಿ ತನ್ನ ಭಕ್ತರ ಪ್ರಾರ್ಥನೆಯನ್ನು ಕೇಳಲು ಕತ್ತೆಯ ಮೇಲೆ ಬರುತ್ತಾಳೆ. ಗಾಢ ನೀಲಿ ಬಣ್ಣವು ತಾಯಿಗೆ ಅತ್ಯಂತ ಪ್ರಿಯವಾಗಿದೆ.
ಮಾತಾ ಕಾಳರಾತ್ರಿ ಪೂಜಾ ವಿಧಿ(Devi Kalratri puja vidhi)
ನವರಾತ್ರಿ ಮಹಾಪರ್ವದ ಸಪ್ತಮಿ ತಿಥಿಯ ದಿನ ಬ್ರಹ್ಮ ಮುಹೂರ್ತದಲ್ಲಿ ಸ್ನಾನ ಮಾಡಿ ಧ್ಯಾನ ಮಾಡಿ ಪೂಜಾ ಸ್ಥಳವನ್ನು ಚೆನ್ನಾಗಿ ಸ್ವಚ್ಛಗೊಳಿಸಿ. ಇದರ ನಂತರ ಪೂಜಾ ಸ್ಥಳವನ್ನು ಗಂಗಾಜಲದಿಂದ ತೇವಗೊಳಿಸಿ. ನಂತರ ತಾಯಿಗೆ ಹೂವು, ಸಿಂಧೂರ, ಕುಂಕುಮ, ಅಕ್ಷತೆ ಇತ್ಯಾದಿಗಳನ್ನು ಅರ್ಪಿಸಿ. ಮಾತಾ ಕಾಳರಾತ್ರಿಗೆ ನಿಂಬೆಹಣ್ಣಿನಿಂದ ಮಾಡಿದ ಮಾಲೆಯನ್ನು ಅರ್ಪಿಸಿ ಮತ್ತು ಬೆಲ್ಲದಿಂದ ಮಾಡಿದ ಭಕ್ಷ್ಯವನ್ನು ಅರ್ಪಿಸಿ. ಬೆಲ್ಲದ ಭಕ್ಷ್ಯಗಳು ಆಕೆಗೆ ಬಹಳ ಪ್ರಿಯವಾಗಿವೆ. ಇದರ ನಂತರ ತುಪ್ಪದ ದೀಪವನ್ನು ಬೆಳಗಿಸಿ ಮತ್ತು ಮಂತ್ರಗಳನ್ನು ಪಠಿಸಿ. ಕಾಳರಾತ್ರಿಯ ಪೂಜೆಯಲ್ಲಿ ಆಕೆಗೆ ಶೃಂಗಾರ ಸಾಮಗ್ರಿಗಳನ್ನು ಅರ್ಪಿಸುವುದನ್ನು ಮರೆಯಬೇಡಿ. ನಂತರ ಮಾ ಕಾಳರಾತ್ರಿಯ ಭಜನೆ ಮಾಡಿ. ಭಜನೆಗೆ ಮೊದಲು ದುರ್ಗಾ ಚಾಲೀಸಾ ಮತ್ತು ದುರ್ಗಾ ಸಪ್ತಶತಿಯನ್ನು ಪಠಿಸಿ. ಆರತಿಯ ನಂತರ, ಅಜಾಗರೂಕತೆಯಿಂದ ಮಾಡಿದ ತಪ್ಪುಗಳನ್ನು ಕ್ಷಮಿಸುವಂತೆ ತಾಯಿಯನ್ನು ಪ್ರಾರ್ಥಿಸಿ.
ಈ ಮಂತ್ರವನ್ನು ಪಠಿಸಿ(Mantra)
ಯಾ ದೇವಿ ಸರ್ವಭೂತೇಷು ಕಾಳರಾತ್ರಿ ರೂಪೇಣ ಸಂಸ್ಥಿತಾ
ನಮಸ್ತಸ್ಯೇ ನಮಸ್ತಸ್ಯೇ ನಮಸ್ತಸ್ಯೇ ನಮೋನ್ನಮಃ
ವಾರ ಭವಿಷ್ಯ: ಸಿಂಹಕ್ಕೆ ಹೆಚ್ಚುವ ಶತ್ರುಗಳು, ಧನಸ್ಸಿಗೆ ನಷ್ಟ ತುಂಬಿಕೊಡುವ ಸಮಯ
ಶ್ಲೋಕಾರ್ಥ: ಸಕಲ ಜೀವರಾಶಿಗಳಲ್ಲಿ ಕಾಲರಾತ್ರಿಯ ರೂಪದಲ್ಲಿ ನೆಲೆಸಿರುವ ದೇವಿ, ನಾನು ಅವಳಿಗೆ ನನ್ನ ಗೌರವಪೂರ್ವಕ ನಮನಗಳನ್ನು ಸಲ್ಲಿಸುತ್ತೇನೆ.
ದಿನ ಭವಿಷ್ಯ, ವಾರ ಭವಿಷ್ಯ, ನಿಮ್ಮ ರಾಶಿ ವಿಶೇಷ, ದಿನ ವಿಶೇಷ, ಹಬ್ಬ ಹರಿದಿನಗಳು, ಸಂಪ್ರದಾಯ ಆಚರಣೆಗಳು, ಅವುಗಳ ವೈಜ್ಞಾನಿಕ ಹಿನ್ನೆಲೆ, ಪುರಾಣ ಪುಣ್ಯ ಕತೆಗಳು, ವಾಸ್ತು ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಸುವರ್ಣ ನ್ಯೂಸ್ ಜ್ಯೋತಿಷ್ಯ ವಿಭಾಗವನ್ನು ತಪ್ಪದೇ ನೋಡುತ್ತಿರಿ.