Asianet Suvarna News Asianet Suvarna News

Diwali 2022: ನರಕ ಚತುದರ್ಶಿ ಹಿನ್ನೆಲೆ ಏನು? ಆಚರಣೆ ಹೇಗೆ?

ಮಳೆ ಬೆಳೆ ಚೆನ್ನಾದರೆ ದೀಪಾವಳಿಯೂ ಚೆನ್ನ. ಉತ್ತಮ ಮಳೆಯಿಂದ ಬೆಳೆ ಸಮೃದ್ಧವಾಗಿ ಬಂದರೆ ರೈತ ಮಕ್ಕಳು ದೀಪಾವಳಿಯನ್ನೂ ಸಂಭ್ರಮದಿಂದ ಆಚರಿಸುತ್ತಾರೆ. ದೀಪಾವಳಿಯನ್ನು ಮೂರರಿಂದ ಐದು ದಿನಗಳವರೆಗೆ ಆಚರಿಸುವುದುಂಟು. ಒಂದೊಂದು ದಿನ ಒಂದೊಂದು ಆಚರಣೆಗಳು ನಡೆಯುತ್ತವೆ. ಪ್ರತಿ ಆಚರಣೆಗೂ ಒಂದೊಂದು ಪೌರಾಣಿಕ ಹಿನ್ನೆಲೆಯಿದೆ. 

narak chaturdashi 2022 story of narakasur and celebrations history significance ash
Author
First Published Oct 24, 2022, 11:15 AM IST

(ಮಣಿಕಂಠ ತ್ರಿಶಂಕರ್‌, ಮೈಸೂರು)
ಭರತ ವರ್ಷದಲ್ಲಿ ಹಬ್ಬ ಹಾಗೂ ಉತ್ಸವಾದಿಗಳಿಗೆ ನಮ್ಮ ಸಂಸ್ಕೃತಿಯ ಜೊತೆಗೆ ಆಳವಾದ ನಂಟಿದೆ. ಬದುಕಿನ ಬಣ್ಣಗಳನ್ನೂ ಮೌಲ್ಯಗಳನ್ನೂ ಪ್ರತಿಬಿಂಬಿಸುವ ಹಬ್ಬಗಳಲ್ಲಿ ಈ ನೆಲದ ಉನ್ನತ ಆಚಾರ ವಿಚಾರಗಳು ಹಾಸು ಹೊಕ್ಕಾಗಿವೆ. ಪ್ರತಿ ಹಬ್ಬದ ಆಚರಣೆಯಲ್ಲೂ ಬದುಕಿನ ಬಗೆಗೆ ಭಯ-ಭಕ್ತಿಯಿದೆ. ಕೂಡಿ ಬಾಳುವ ತತ್ವವಿದೆ. ವಿಚಾರದ ವಿವೇಚನೆಯಿದೆ. ಆತ್ಮವಿಮರ್ಶೆ, ಆತ್ಮನಿವೇದನೆಗಳಿಗೆ ಅವಕಾಶವಿದೆ. ಎಲ್ಲಕ್ಕೂ ಮಿಗಿಲಾಗಿ ವ್ಯಕ್ತಿ ಹಾಗೂ ಸಮೂಹದ ಸಮಗ್ರ ಹಿತಸಾಧನೆಯೇ ಹಬ್ಬಗಳ ಉದ್ದೇಶವಾಗಿದೆ. ಸನಾತನ ಧರ್ಮವೂ ಇದಕ್ಕೆ ಪೂರಕವಾಗಿದೆ. ಬದುಕನ್ನು ಧರ್ಮದ ನೆರಳಿನಲ್ಲಿ ನಡೆಸುತ್ತ ಮೋಕ್ಷಮಾರ್ಗದತ್ತ ಮುನ್ನಡೆಯಬೇಕು ಎಂಬುದೇ ಸನಾತನ ಧರ್ಮದ ಉದ್ದೇಶ. ಆ ನಿಟ್ಟಿನಲ್ಲಿ ಪ್ರತಿ ಹಬ್ಬಕ್ಕೂ ಒಂದೊಂದು ಧಾರ್ಮಿಕ ಹಿನ್ನೆಲೆ ಇದೆ. ವೈಯಕ್ತಿಕ ಬದುಕಿನಲ್ಲಿ ಹಾಗೂ ಸಾಮಾಜಿಕ ಜೀವನದಲ್ಲಿ ಧರ್ಮದೆಚ್ಚರ ಮೂಡಿಸುವುದೇ ಈ ಹಬ್ಬಗಳ ಆಚರಣೆಯ ಉದ್ದೇಶ. ನ್ಯಾಯ, ನೀತಿ, ಸತ್ಯ, ಇಂದ್ರಿಯ ನಿಗ್ರಹಗಳೊಂದಿಗೆ ಆಂತರಿಕ ಶಕ್ತಿಯನ್ನು ಧರ್ಮದ ದಾರಿಯಲ್ಲಿ ಪ್ರಜ್ವಲಿಸುತ್ತ, ಭಯಭಕ್ತಿಯಿಂದ ಬಾಳುವುದನ್ನು ಜನಮನಕ್ಕೆ ತಿಳಿಸಿಕೊಡಲೆಂದೇ ನಮ್ಮ ಪೂರ್ವಿಕರು ಪ್ರತಿ ಹಬ್ಬಕ್ಕೂ ಒಂದೊಂದು ಧಾರ್ಮಿಕ ಹಿನ್ನೆಲೆ ಕಲ್ಪಿಸಿದ್ದಾರೆ. ಆ ನಿಟ್ಟಿನಲ್ಲಿ ದೀಪದ ಹಬ್ಬ ದೀಪಾವಳಿ ಜನಮನವನ್ನು ಅಜ್ಞಾನದಿಂದ ಸುಜ್ಞಾನದ ಕಡೆಗೆ ಕರೆದೊಯ್ಯುವ ಸಂದೇಶ ಸಾರುತ್ತದೆ. ಅಂತೆಯೇ ಅತ್ಯಂತ ವೈಶಿಷ್ಟ್ಯಪೂರ್ಣ ಹಿನ್ನೆಲೆಯನ್ನು ಹೊಂದಿದೆ.

ದೀಪವೆಂಬುದು ದಿವ್ಯ ಶಕ್ತಿ
ದೀಪ, ಅಗ್ನಿ ಹಾಗೂ ಬೆಳಕನ್ನು ಪೂಜಿಸುವ ಪರಂಪರೆ ನಮ್ಮದು. ಅಗ್ನಿಂ ಪ್ರಜ್ವಲಿತಂ ವಂದೇ ಎನ್ನುವುದು ಭಾರತೀಯ ಸಂಸ್ಕೃತಿ. ನಮಗೆ ಅಗ್ನಿ ಸರ್ವವಿಧದಲ್ಲೂ ಪವಿತ್ರ. ಇದಕ್ಕೆ ಕಳಂಕ ಎಂಬುದೇ ಇಲ್ಲ. ಕೊಳೆಯನ್ನು ಸುಟ್ಟು ಕಳಂಕವನ್ನು ಕರಕಲಾಗಿಸುವ ದಿವ್ಯ ಶಕ್ತಿ ಇದು. ಇಂಥ ಪವಿತ್ರ ಹಾಗೂ ದಿವ್ಯಶಕ್ತಿಯೇ ದೀಪ! ಇದು ಮಾನವನೊಂದಿಗೆ ಇತರ ಜೀವಿಗಳ ಬದುಕಿನ ಅವಿಭಾಜ್ಯ ಅಂಶ. ದೀಪ ಬೆಳಗಿಸುವುದರ ಮೂಲಕವೇ ನಮ್ಮ ಎಲ್ಲ ಶುಭ ಹಾಗೂ ಸತ್ಕಾರ್ಯಗಳು ಆರಂಭವಾಗುತ್ತವೆ. ದೀಪ ನಮ್ಮ ನಿತ್ಯ ಬದುಕಿಗೆ ನಾಂದಿ. ಸೃಷ್ಟಿಯ ಸರ್ವ ಚಟುವಟಿಕೆಗಳಿಗೂ ಬೆಳಕೇ ಮೂಲಾಧಾರ.

ಇದನ್ನು ಓದಿ: Astrology Tips : ನರಕ ಚತುರ್ದಶಿ ದಿನ ಈ ಉಪಾಯ ಮಾಡಿ ಚಮತ್ಕಾರ ನೋಡಿ

ಜ್ಯೋತಿ ಸ್ವರೂಪಿಣಿಯಾದ ಮಹಾಲಕ್ಷ್ಮಿಯು ಸೂರ್ಯ, ಚಂದ್ರ, ನಕ್ಷತ್ರಗಳು ಮುಂತಾದ ಎಲ್ಲ ಜ್ಯೋತಿರ್ವಸ್ತುಗಳಲ್ಲಿ ವಿರಾಜಮಾನಳಾಗಿದ್ದಾಳೆ ಎಂಬ ದೃಢ ನಂಬಿಕೆ ನಮ್ಮ ಸನಾತನರದು. ಅಂಧಕಾರವನ್ನು ಅಳಿಸಿ ಬೆಳಕು ತೋರುವುದು ಸೃಷ್ಟಿಯ ವಿಕಾಸದ ರಹಸ್ಯವೂ ಹೌದು. ಅಜ್ಞಾನದ ಅಂಧಕಾರವನ್ನು ಹೋಗಲಾಡಿಸಿ, ಸುಜ್ಞಾನದ ದೀವಿಗೆಯನ್ನು ಹೊತ್ತಿಸಿ ಜ್ಞಾನದೀಪ ಬೆಳಗಬೇಕೆಂಬುದೇ ದೀಪದ ಮೂಲ ಧ್ಯೇಯ.

ನಿರಂತರ ಚಲನೆ, ಪ್ರವರ್ಧಮಾನ, ಸೃಜನಶೀಲತೆ ಅಗ್ನಿಯ ಮುಖ್ಯ ಗುಣ. ನಿಸರ್ಗದ ಸರ್ವ ಚಟುವಟಿಕೆಗಳಿಗೂ ಬಿಸಿ-ಶಾಖ-ಅಗ್ನಿಯ ಅವಶ್ಯಕತೆಯಿದೆ. ಬಿಸಿ ಪ್ರವೃತ್ತಿಯಾದರೆ ತಂಪು ನಿವೃತ್ತಿ. ಇದು ಸೃಷ್ಟಿಯ ನಿಯಮವೂ ಹೌದು. ದಣಿದ ದೇಹಕ್ಕೆ ಚೈತನ್ಯ ದೊರೆಯಲು ಬಿಸಿಯಾದ ಚಹ, ಕಾಫಿ ಬೇಕು. ಕೋಳಿಯ ಮರಿಗಳು ತತ್ತಿಯೊಡೆದು ಹೊರಬರಲು ‘ಕಾವು’ ಬೇಕು. ನಿತ್ಯದ ಹಗಲು-ರಾತ್ರಿಗಳು ಬಿಸಿ ತಂಪಿನ ಸೂಚಕಗಳು. ಬಹುತೇಕ ಜೀವಿಗಳು ಸೂರ್ಯನ ಬೆಳಕಿನಲ್ಲಿ ಕಾರ್ಯಪ್ರವೃತ್ತವಾಗುತ್ತವೆ. ರಾತ್ರಿಯಲ್ಲಿ ವಿರಮಿಸುತ್ತವೆ.

ದೀಪಕ್ಕೂ ಕಣ್ಣಿಗೂ ಅವಿನಾಭಾವ ಸಂಬಂಧ. ದೀಪ ಇಲ್ಲದಿದ್ದರೆ ಕಣ್ಣು ಏನನ್ನೂ ಕಾಣದು. ವಸ್ತುಗಳನ್ನು ಕಾಣಲು, ಅರ್ಥ ಮಾಡಿಕೊಳ್ಳಲು ದೀಪವು ಬೇಕು. ಕಣ್ಣಿಲ್ಲದವರಿಗೆ ದೀಪವಿದ್ದರೂ ಪ್ರಯೋಜನವಿಲ್ಲ. ದೀಪ ತೋರಿಸುವ ವಸ್ತುವಿಷಯ ಅರಿಯಲು ಕಣ್ಣು ಬೇಕು. ಒಳಗಣ್ಣಿನ ನಂದಾದೀಪದ ಪ್ರಜ್ವಲನೆಗೆ ಕಣ್ಣುಗಳೆರಡೂ ಇರಬೇಕು. ನಂದದ ದೀಪವೇ ನಂದಾದೀಪ. ನಂದಾದೀಪ ಆರಿದರೆ ಆಪತ್ತು ಎಂಬುದು ಜನರ ನಂಬಿಕೆ. ಅದಕ್ಕೆಂದೇ ಮನೆಯಲ್ಲಿ ಹಚ್ಚಿದ ನಂದಾದೀಪ ಆರದಂತೆ ಜಾಗ್ರತೆ ವಹಿಸುತ್ತಾರೆ. ನಾವು ನಿತ್ಯಪ್ರಾಪಂಚಿಕ ಕೆಲಸಗಳನ್ನು ಮಾಡುತ್ತಿರುವಾಗ ಅನವರತವೂ ನಮ್ಮ ಆಂತರ್ಯದಲ್ಲಿ ಧ್ಯಾನದ ದೀಪ ಉರಿಯುತ್ತಿರಬೇಕು. ಮಾನವತೆಯ ಬಾಳು ಬದುಕಲು ಸದಾ ನಿರ್ದೆಶನ ನೀಡುವಂತಿರಬೇಕು. ಲೌಕಿಕವಾಗಿಯೂ, ಮನೆಯಲ್ಲಿ ಜನರಿದ್ದಾರೆ ಎಂಬುದಕ್ಕೆ ನಂದಾದೀಪ ಸಾಕ್ಷಿ.

ಇದನ್ನೂ ಓದಿ: Deepavali 2022: ದಾರಿದ್ರ್ಯಕ್ಕೆ ದಾರಿ ಮಾಡುತ್ತೆ ಈ ತಪ್ಪು

ಬೆಳಕಿನ ಹಬ್ಬ ದೀಪಾವಳಿ
ಜ್ಞಾನ ಬೆಳಗಿಸುವ ಬೆಳಕಿನ ಹಬ್ಬ ದೀಪಾವಳಿ. ದೀಪಾವಳಿಯಲ್ಲಿ ದೀಪಗಳಿಗೆ ಅತ್ಯಂತ ಮಹತ್ವದ ಸ್ಥಾನ. ಇದು ನಮ್ಮ ಪರಂಪರೆಯಲ್ಲಿ ದೀಪಕ್ಕೆ ಪ್ರಾಧಾನ್ಯ ಕೊಡುತ್ತ ಬರುತ್ತಿರುವುದರ ಪ್ರತೀಕ. ಹಲವಾರು ಗ್ರಂಥಗಳು ದೀಪಾವಳಿಯ ದೀಪಗಳ ಬಗೆಗೆ ಸಾಕಷ್ಟುಹೇಳಿವೆ. ದೀಪಾವಳಿಯ ಅಮಾವಾಸ್ಯೆಯನ್ನು ಪಂಚದಶಿ ಅಮಾವಾಸ್ಯೆಯೆಂದು ಗುರುತಿಸಿದ್ದು, ಅಂದಿನ ಪ್ರದೋಷ ಸಮಯದಲ್ಲಿ ಲಕ್ಷ್ಮಿಯನ್ನು ಪೂಜಿಸಿ ದೀಪಮಾಲೆ ಬೆಳಗಿಸಬೇಕೆಂದು ಹೇಳಲಾಗಿದೆ. ಬ್ರಹ್ಮಾಂಡ ಪುರಾಣದ ಪ್ರಕಾರ ಗುಡಿಗುಡಿಗಳಲ್ಲೂ ಮನೆಮನೆಗಳಲ್ಲೂ, ಅಂಗಡಿಗಳಲ್ಲೂ ಬೀದಿಗಳಲ್ಲೂ ನದಿಗಳ ದಂಡೆಯಲ್ಲೂ ಬೆಟ್ಟದ ತಪ್ಪಲಲ್ಲೂ ದೀಪಗಳನ್ನು ಹಚ್ಚಬೇಕು ಎನ್ನಲಾಗಿದೆ.

ದೀಪಗಳ ಹಬ್ಬ ದೀಪಾವಳಿ ಮುಂಗಾರಿನ ಸುಗ್ಗಿಯ ಬೆನ್ನಹಿಂದೆ ಬರುತ್ತದೆ. ಮಳೆ ಬೆಳೆ ಚೆನ್ನಾದರೆ ದೀಪಾವಳಿಯೂ ಚೆನ್ನ ಎಂದು ಗ್ರಾಮೀಣರು ಹೇಳುತ್ತಾರೆ. ಉತ್ತಮ ಮಳೆಯಿಂದ ಬೆಳೆ ಸಮೃದ್ಧಿಯಾಗಿ ಬಂದರೆ ರೈತ ಮಕ್ಕಳು ದೀಪಾವಳಿಯನ್ನೂ ಸಂಭ್ರಮದಿಂದ ಆಚರಿಸುತ್ತಾರೆ. ಆದರೂ ಮಳೆ ಬರಲಿ ಬಿಡಲಿ, ಬೆಳೆ ಸರಿಯಾಗಿ ಬರಲಿ ಬಿಡಲಿ ದೇಶಾದ್ಯಂತ ಯಾರೇ ಆಗಲಿ ದೀಪಾವಳಿಯ ಸಂಭ್ರಮವನ್ನು ಕಳೆದುಕೊಳ್ಳಲಾರರು. ದೀಪಾವಳಿಯನ್ನು 5 ದಿನಗಳವರೆಗೆ ಆಚರಿಸುತ್ತಾರೆ. ಒಂದೊಂದು ದಿನ ಒಂದೊಂದು ಆಚರಣೆಗಳು ನಡೆಯುತ್ತವೆ. ಪ್ರತಿ ಆಚರಣೆಗೂ ಒಂದೊಂದು ಪೌರಾಣಿಕ ಹಿನ್ನೆಲೆಗಳಿವೆ.

ದೀಪಾವಳಿಗೆ ದೀಪಾವಳಿ ಮಾತ್ರ ಸಾಟಿ. ಆದರೆ ನಗರಗಳಲ್ಲಿ ಹಬ್ಬದ ಆಚರಣೆ ಕಳೆಗುಂದುತ್ತಿರುವುದು ಮಾತ್ರ ಸತ್ಯ. ಒಂದು ಕಾಲವಿತ್ತು, ದೀಪಾವಳಿ ಇನ್ನೂ 15 ದಿನಗಳಿರುವಾಗಲೇ ಅಂದರೆ ದಸರಾ ಮುಗಿದ ತಕ್ಷಣವೇ ದೀಪಾವಳಿಯ ಸಿದ್ಧತೆಗಳು ನಡೆಯುತ್ತಿದ್ದವು. ಸಂಭ್ರಮದ ದೀಪಾವಳಿಯನ್ನು 5 ದಿನಗಳ ಕಾಲ ಆಚರಿಸಲಾಗುತ್ತಿತ್ತು.

ನೀರು ತುಂಬುವ ಗಂಗಾಷ್ಟಮಿ
ದೀಪಾವಳಿಯ ಆಚರಣೆ ನೀರು ತುಂಬುವ ಸಂಭ್ರಮದೊಂದಿಗೆ ಆರಂಭವಾಗುತ್ತದೆ. ಇದನ್ನು ನೀರು ತುಂಬುವ ಹಬ್ಬವೆಂದೂ, ಧನ್ವಂತರಿ ತ್ರಯೋದಶೀ ಎಂದೂ ಕರೆಯುತ್ತಾರೆ. ಮಹಿಳೆಯರಿಗೆ ದೀಪಾವಳಿಯ ನೀರು ತುಂಬುವ ಹಬ್ಬವೆಂದರೆ ಬಹಳ ಸಡಗರ, ಸಂಭ್ರಮ. ಇದಕ್ಕೆ ಗಂಗಮ್ಮನ ಪೂಜೆ ಎಂದೂ ಕರೆಯುತ್ತಾರೆ. ಇದನ್ನು ಮನೆಯೊಡತಿಯೇ ಮಾಡಬೇಕು. ಮನೆಯ ಬಳಿ ಇರುವ ಬಾವಿ ಅಥವಾ ಊರಿನ ಕೆರೆಗೆ ಮಕ್ಕಳು, ಸೊಸೆಯರೊಂದಿಗೆ, ಜಾಗಟೆ, ಮಂಗಳ ವಾದ್ಯಗಳೊಂದಿಗೆ ಹಾಡುತ್ತ ಬೆಳಗಿನ ಜಾವವೇ ಹೋಗಿ ಬಾವಿ ಇಲ್ಲವೆ ಕೆರೆಗೆ ಪೂಜೆ ಸಲ್ಲಿಸಿ ಕೊಡದ ತುಂಬ ಗಂಗಮ್ಮನನ್ನು ತಂದು ಮನೆಯ ದೇವರ ಮುಂದೆ ಪ್ರತಿಷ್ಠಾಪಿಸುತ್ತಾರೆ. ಕೆಲವು ಕಡೆ ಇದನ್ನು ಗಂಗಾಷ್ಟಮಿ ಎಂದು ಕರೆಯುತ್ತಾರೆ. ಮನೆಯ ಎಲ್ಲ ಪಾತ್ರೆಗಳನ್ನು ತೊಳೆದು, ಸ್ನಾನಗೃಹವನ್ನು ಸ್ವಚ್ಛಗೊಳಿಸುತ್ತಾರೆ. ನೀರು ತುಂಬುವ, ನೀರು ಕಾಯಿಸುವ ಪಾತ್ರೆಗಳನ್ನು ಪೂಜಿಸಿ ಕುಂಕುಮ, ಅರಿಷಿಣ ಹಚ್ಚಿ ಪೂಜಿಸುತ್ತಾರೆ. ಧೂಪ, ದೀಪ ಉರಿಸಿ ಸಂಭ್ರಮಿಸುತ್ತಾರೆ.

ನರಕಾಸುರನ ಸಂಹಾರದ ಸ್ಮರಣೆ
ನರಕಚತುರ್ದಶಿಯು ದೀಪಾವಳಿಯ ಎರಡನೇ ದಿನ. ನರಕಾಸುರ ಎಂಬುವವನು ಪ್ರಾಗ್‌ಜ್ಯೋತಿಷ್ಯದ ರಾಜನ ಮಗ. ಈತನ ತಾಯಿಯ ಹೆಸರು ಭೂದೇವಿ. ಬೆಳೆದಂತೆ ನರಕಾಸುರ ಮಹಾ ಪ್ರಳಯಾಂತಕನಾಗತೊಡಗಿ ಭೂಲೋಕದಲ್ಲಿ ಹಿಂಸಾಕಾಂಡವನ್ನೇ ಸೃಷ್ಟಿಸಿ ಮೆರೆಯತೊಡಗಿದ. ಭೂಮಂಡಲದ ರಕ್ಷಣೆಗಾಗಿ ವಿಷ್ಣುವು ಕೃಷ್ಣಾವತಾರವನ್ನೆತ್ತಿ ಬಂದಿದ್ದ ಕಾಲವದು. ನರಕಾಸುರ ನರರಿಗೆ ಮಹಾಕಂಟಕನಾಗಿ ಭೂಮಿಯ ಮೇಲಿನ ಎಲ್ಲ ರಾಜರನ್ನು ಸದೆ ಬಡೆದ. 16000 ರಾಜಪುತ್ರಿಯರನ್ನು ಅಪಹರಿಸಿ ಬಂಧನದಲ್ಲಿಟ್ಟ. ಆಗ ನರಕಾಸುರನ ಹಿಂಸೆಯನ್ನು ತಾಳಲಾರದೇ ಸರ್ವರೂ ಕೃಷ್ಣನ ಮೊರೆ ಹೋದರು. ಆಗ ಕೃಷ್ಣನು ಆಶ್ವಯುಜ ಮಾಸದ ಕೃಷ್ಣಪಕ್ಷದ ಚತುರ್ದಶಿ ದಿನದಂದು ನರಕಾಸುರನನ್ನು ಸಂಹರಿಸಿದ. 16000 ರಾಜಪುತ್ರಿಯರನ್ನು ಬಂಧನದಿಂದ ಬಿಡಿಸಿ ಬೆಳಗಿನ ಜಾವ ಮನೆಗೆ ಬಂದು ಅಭ್ಯಂಜನ ಸ್ನಾನ ಮಾಡಿದ. 16000 ರಾಜಪುತ್ರಿಯರು ಕೃಷ್ಣನ ಕಡೆಗೆ ಬಂದು ಕೃತಜ್ಞತೆ ಸಲ್ಲಿಸಿ ಸಂಭ್ರಮದಿಂದ ಕೃಷ್ಣನಿಗೆ ಆರತಿ ಬೆಳಗಿ ಪೂಜಿಸಿದರು. ತಾಯಿ ಭೂದೇವಿ ಮಗ ನರಕಾಸುರನನ್ನು ಕಳೆದುಕೊಂಡು ದುಃಖಿಸಿದಳು. ‘ಈ ದಿನವು ನನ್ನ ಮಗನ ಹೆಸರಿನಿಂದ ಆಚರಿಸಲ್ಪಡಲಿ. ಈ ದಿನ ಎಲ್ಲರೂ ನಿನ್ನಂತೆಯೇ ಅಭ್ಯಂಜನ ಸ್ನಾನ ಮಾಡಲಿ’ ಎಂದು ಕೃಷ್ಣನಲ್ಲಿ ಬೇಡಿದಳು. ದಯಾಳು ಕೃಷ್ಣ ‘ತಥಾಸ್ತು’ ಎಂದ. ಹಾಗಾಗಿ ನರಕಚತುರ್ದಶಿಯಂದು ಜನರು ಅಭ್ಯಂಜನ ಮಾಡುತ್ತಾರೆ. ಬೆಳಗಿನ ಜಾವ ಮಾಡುವ ಅಭ್ಯಂಜನ ಶ್ರೀಕೃಷ್ಣನೊಂದಿಗೆ ಭೂದೇವಿಗೂ ಹಿತಕರ. ಅಂದು ಚಿಕ್ಕಮಕ್ಕಳಾದಿಯಾಗಿ ಎಲ್ಲರೂ ಅಭ್ಯಂಜನ ಸ್ನಾನಮಾಡಿ ಹೊಸವಸ್ತ್ರಗಳನ್ನು ಧರಿಸಿ ಪಟಾಕಿಗಳನ್ನು ಸಿಡಿಸಿ ಸಂಭ್ರಮಿಸುತ್ತಾರೆ. ನರಕ ಎಂದರೆ ಅಜ್ಞಾನ. ಚತುರ್ದಶಿ ಎಂದರೆ ಬೆಳಕು. ಅಜ್ಞಾನ ಕಳೆದು ಸುಜ್ಞಾನದ ಬೆಳಕು ದೊರೆಯಲೆಂದೇ ನರಕಚತುರ್ದಶಿಯ ಆಚರಣೆ.

Follow Us:
Download App:
  • android
  • ios