ಮನೋಜ್ ಬಾಜಪೇಯಿ ಹೇಳಿದ ರಾವಣನ ಕಥೆ! ಅಷ್ಟಕ್ಕೂ ಸನಾತನ ಧರ್ಮವೆಂದರೇನು?
ರಾವಣ ಸತ್ತರೂ ಆತನ ಪ್ರೇತ ಅನಾಥವಾಗಿ ರೋದಿಸುತ್ತಾ ನರಕಗಳನ್ನು ಸಂಚರಿಸುತ್ತದೆ. ಎಷ್ಟು ಕಾಲ ಕಳೆದರೂ ಆತನಿಗೆ ಮೋಕ್ಷವೂ ಇಲ್ಲ, ಯಾವ ಗತಿಯೂ ಇಲ್ಲ ಎಂಬಂತಾಗುತ್ತದೆ. ಅದೇಕೆ?

ಇದೊಂದು ಕಥೆ ಬಹುಶಃ ನೀವು ಎಲ್ಲೂ ಕೇಳಿರಲಾರಿರಿ. ಇದು ರಾವಣನ ಕಥೆ. ಆದರೆ ಇದು ರಾಮಾಯಣದಲ್ಲಿ ಇಲ್ಲ. ಏನಾಯಿತೆಂದರೆ, ರಾಮನ ಪತ್ನಿ ಸೀತೆಯನ್ನು ರಾವಣ ಅಪಹರಿಸುತ್ತಾನೆ. ರಾಮ- ರಾವಣ ಯುದ್ಧ ನಡೆಯುತ್ತದೆ. ರಾವಣ ಸಾಯುತ್ತಾನೆ. ಮಹಾವಿಷ್ಣುವಿನ ಅವತಾರವಾದ ರಾಮನಿಂದಲೇ ಸತ್ತದ್ದರಿಂದ ಆತನ ಆತ್ಮ ನೇರವಾಗಿ ಮೋಕ್ಷ ಪಡೆಯಬೇಕಲ್ಲವೆ? ಹಾಗಾಗಲಿಲ್ಲ. ರಾವಣ ಸತ್ತರೂ ಆತನ ಪ್ರೇತ ಅನಾಥವಾಗಿ ರೋದಿಸುತ್ತಾ ನರಕಗಳನ್ನು ಸಂಚರಿಸುತ್ತದೆ. ಎಷ್ಟು ಕಾಲ ಕಳೆದರೂ ಆತನಿಗೆ ಮೋಕ್ಷವೂ ಇಲ್ಲ, ಯಾವ ಗತಿಯೂ ಇಲ್ಲ ಎಂಬಂತಾಗುತ್ತದೆ.
ಇದನ್ನು ನೋಡಿ ಪಾರ್ವತಿಗೆ ಕುತೂಹಲವಾಗುತ್ತದೆ. ಭೂತನಾಥನಾದ ಶಿವನಲ್ಲಿ ಪ್ರಶ್ನಿಸುತ್ತಾಳೆ. 'ರಾವಣ ಪರಮ ಶಿವಭಕ್ತ, ಸೀತೆಯನ್ನು ಕದ್ದ ತಪ್ಪಿಗೆ ರಾಮ ಶಿಕ್ಷೆ ಕೊಟ್ಟಿದ್ದಾನೆ. ನಿನ್ನ ಭಕ್ತನಿಗೆ ಈ ಅನಾಥ ಸ್ಥಿತಿ ಯಾಕೆ ಬಂತು? ಯಾಕೆ ಅವನಿಗೆ ಇನ್ನೂ ಸದ್ಗತಿ ದೊರೆತಿಲ್ಲ?' ಎಂದು ಕೇಳುತ್ತಾಳೆ. ಶಿವ ಉತ್ತರಿಸುತ್ತಾನೆ: 'ನೋಡು ಪಾರ್ವತಿ. ಪಾಪಿಗಳಿಗೆ ಯಾವ ಗತಿ ಎಂಬುದು ನಿನಗೆ ಗೊತ್ತೇ ಇದೆ. ಆದರೆ ಪಾಪದಲ್ಲೂ ಮೂರು ವಿಧಗಳಿವೆ. ಪಾಪ, ಅತಿಪಾಪ ಮತ್ತು ಮಹಾಪಾಪ. ಈ ರಾವಣ ಮಹಾಪಾಪಿ. ಆದ್ದರಿಂದ ಆತನಿಗೆ ಸದ್ಯಕ್ಕೆ ಮೋಕ್ಷವಿಲ್ಲ,' ಇದರಿಂದ ಇನ್ನಷ್ಟು ಕುತೂಹಲಿಯಾದ ಪಾರ್ವತಿ ಪ್ರಶ್ನಿಸುತ್ತಾಳೆ. 'ಈ ಮೂರು ಪಾಪಗಳ ವ್ಯತ್ಯಾಸವೇನು? ರಾವಣ ಹೇಗೆ ಮಹಾಪಾಪಿ?' ಶಿವ ಮುಗುಳ್ನಕ್ಕು ವಿವರವಾಗಿ ಉತ್ತರಿಸುತ್ತಾನೆ. 'ನೋಡು ಪಾರ್ವತಿ, ಪಾಪ ಎಂದರೆ ಸಣ್ಣ ಪುಟ್ಟ ತಪ್ಪುಗಳು, ಕೆಲವೊಮ್ಮೆ ದೊಡ್ಡ ತಪ್ಪುಗಳು ಸಹ. ಕದಿಯುವುದು, ಸುಳ್ಳು ಹೇಳುವುದು, ವಂಚಿಸುವುದು. ಇದನ್ನೆಲ್ಲ ಮಾಡುವ ಪಾಪಿಗಳಿಗೆ ತಾವು ಮಾಡುವುದು ಪಾಪ ಎಂದು ಗೊತ್ತಿರುತ್ತದೆ. ಅದಕ್ಕಾಗಿ ಒಂದಲ್ಲ ಒಂದು ಕ್ಷಣ ಪಶ್ಚಾತ್ತಾಪವನ್ನೂ ಪಡುತ್ತಾರೆ. ಹೀಗೆ ಪಶ್ಚಾತ್ತಾಪ ಪಟ್ಟುಕೊಂಡರೆ ಅದೇ ಅವರಿಗೆ ಪ್ರಾಯಶ್ಚಿತ್ತ. ಅಂಥವರಿಗೆ ಸದ್ಗತಿ ದೊರೆಯಲು ಯಾವುದೇ ಸಮಸ್ಯೆಯಿಲ್ಲ,'
'ಇನ್ನು ಅತಿಪಾಪ ಎಂದರೆ ಕೊಲೆ, ದರೋಡೆ, ಅತ್ಯಾಚಾರದಂಥ ಹೀನಕೃತ್ಯಗಳು. ಇವುಗಳನ್ನು ಮಾಡುವವರಿಗೆ ತಾವು ಮಾಡಿದ್ದೇ ಸರಿ ಎಂಬ ಭಾವವಿರುತ್ತದೆ. ಪಶ್ಚಾತ್ತಾಪವಿರುವುದಿಲ್ಲ. ಇವರು ತಿದ್ದಿಕೊಳ್ಳುವುದಿಲ್ಲ. ಇಂಥವರು ಮಾಡಿದ ತಪ್ಪಿಗೆ ಜನ್ಮಾಂತರಗಳಷ್ಟು ಕಾಲ ರೌರವ ನರಕದಲ್ಲಿ ಕೊಳೆಯಬೇಕು. ಹೀನ ಪಶು ಜನ್ಮಗಳನ್ನು ಎತ್ತಿ ನವೆಯಬೇಕು. ಇಷ್ಟೆಲ್ಲ ಆದ ಬಳಿಕ ಮುಂದಿನ ಜನ್ಮಗಳಲ್ಲಿ ಪುಣ್ಯಕಾರ್ಯ ಮಾಡಿದರೆ ಇವರಿಗೂ ಸದ್ಗತಿ ದೊರೆಯಬಹುದು.'
ರಾಧಾ-ಕೃಷ್ಣನ ವಿಗ್ರಹವನ್ನು ಇಡುತ್ತಿದ್ದರೆ, ಈ ವಾಸ್ತು ನಿಯಮಗಳನ್ನು ಅನುಸರಿಸಿ
'ಇನ್ನು ಮಹಾಪಾಪ. ರಾವಣ ಮಾಡಿದ್ದು ಇದನ್ನೇ. ಆತ ರಾವಣನಾಗಿಯೇ ಹೋಗಿ ಸೀತೆಯನ್ನು ಕದ್ದು ತಂದಿದ್ದರೆ ಅದು ಅತಿಪಾಪ ಎನ್ನಿಸಿಕೊಳ್ಳುತ್ತಿತ್ತು. ಆದರೆ ಅವನು ಸನ್ಯಾಸಿಯ ವೇಷ ಧರಿಸಿ ಹೋದ ನೋಡು? ಅದೇ ಮಹಾಪಾಪ. ಹಾಗೆ ಮಾಡುವ ಮೂಲಕ ಸನ್ಯಾಸಿಗಳ ಬಗ್ಗೆ ಶಾಶ್ವತವಾಗಿ ಒಂದು ಅಪನಂಬಿಕೆ, ಅವಿಶ್ವಾಸ ಮೂಡುವ ಹಾಗೆ ಮಾಡಿಬಿಟ್ಟ. ಅವನಿಂದಾಗಿ ಈ ಜಗದ ಯುಗ ಮುಗಿಯುವವರೆಗೂ ರಾವಣ ಸನ್ಯಾಸಿಗಳ ಕುಲವೇ ಹುಟ್ಟಿಕೊಳ್ಳಲಿದೆ. ಅವನು ಎಷ್ಟೇ ಶಿವಭಕ್ತನಾಗಿದ್ದರೇನಾಯಿತು? ಈ ಒಂದು ಕಾರ್ಯದಿಂದ ಅವನ ಎಲ್ಲ ಭಕ್ತಿಯ ಫಲವೂ ತೊಳೆದುಕೊಂಡು ಹೋಯಿತು. ಅದೇ ಅವನು ಒಂದು ಅನಾಥ ಪ್ರೇತವಾಗಲು ಕಾರಣ,' ಎಂದು ಶಿವ ಮಾತು ಮುಗಿಸಿದ.
ಸನಾತನ ಧರ್ಮದಲ್ಲಿ ಈಗ ಎರಡು ಮುಖ್ಯ ಸಮಸ್ಯೆಗಳು. ಒಂದು, ನೈಜ ಧಾರ್ಮಿಕ ವ್ಯಕ್ತಿತ್ವಗಳನ್ನು ಜನ ನಂಬದಿರುವುದು. ಇನ್ನೊಂದು ನಕಲಿ ಧಾರ್ಮಿಕ ವ್ಯಕ್ತಿಗಳನ್ನು ನಂಬುವುದು. ಇವೆರಡೂ ಸನಾತನ ಧರ್ಮಕ್ಕೆ ಕಳಂಕ ಎಂದು ಈ ಕತೆ ಹೇಳುತ್ತದೆ.
ನಟ ಮನೋಜ್ ಬಾಜಪೇಯಿ ಅವರು ಈ ಕತೆಯನ್ನು ಹೇಳಿರುವುದು 'ಸಿರ್ಫ್ ಏಕ್ ಬಂದಾ ಕಾಫಿ ಹೈ' ಚಿತ್ರದಲ್ಲಿ. ಆ ಚಿತ್ರದಲ್ಲಿ ಅವರು ಒಬ್ಬ ಲಾಯರ್. ಆಸಾರಾಂ ಬಾಪುವಿನಂತಹ ಒಬ್ಬ ಕಟುಕ, ಸನ್ಯಾಸಿ ವೇಷದ ರೇಪಿಸ್ಟ್‌ನನ್ನು ಕಟಕಟೆಯಲ್ಲಿ ನಿಲ್ಲಿಸಿ ಆತನಿಗೆ ಶಿಕ್ಷೆ ನೀಡಲು ಯತ್ನಿಸುತ್ತಿರುತ್ತಾನೆ ಈ ಲಾಯರ್. ಆಗ ಕೋರ್ಟ್‌ನಲ್ಲಿ ಅವರು ಹೇಳುವ ಕತೆಯಿದು.
ಪತ್ನಿಯಲ್ಲಿ ಈ 5 ಗುಣಗಳಿದ್ದರೆ ಮಾತ್ರ ಉತ್ತಮರು ಎನ್ನುತ್ತದೆ ಗರುಡ ಪುರಾಣ..!