ಮೊಮ್ಮಗನಿಗೆ ಶ್ರೀಕೃಷ್ಣನ ವೇಷ ತೊಡಿಸಿ ಸಂಭ್ರಮಿಸಿದ ಮುಸ್ಲಿಂ ಕುಟುಂಬ: ಇದೇ ನಮ್ಮ ಭಾರತ..!
ಮೊಮ್ಮಗನಿಗೆ ಶ್ರೀಕೃಷ್ಣ ವೇಷ ತೊಡಿಸಿ ಸಂಭ್ರಮಿಸಿದ ಅಜ್ಜ, ರಾಮ್ ರಹೀಮ್ ಎಲ್ಲರೂ ಒಂದೇ ಎಂದ ದಸ್ತಗೀರ್ ಮೊಕಾಶಿ
ಬೆಳಗಾವಿ(ಆ.20): ನಾಡಿನಾದ್ಯಂತ ಸಡಗರ ಸಂಭ್ರಮದಿಂದ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಗಿದೆ. ಬೆಳಗಾವಿಯ ಸದಾಶಿವ ನಗರದಲ್ಲಿ ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಅಪರೂಪದ ಘಟನೆಯೊಂದು ನಡೆದಿದೆ. ಮುಸ್ಲಿಂ ತಾತ ತನ್ನ ಮೊಮ್ಮಗನಿಗೆ ಶ್ರೀಕೃಷ್ಣ ವೇಷ ತೊಡಿಸಿ ಸಂಭ್ರಮಿಸಿದ್ದಾರೆ.
ಬೆಳಗಾವಿಯ ಸದಾಶಿವ ನಗರದಲ್ಲಿ ವಾಸವಿರುವ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ಹೊಸೂರು ಗ್ರಾಮದ ದಸ್ತಗೀರ್ ಮೊಕಾಶಿ ತಮ್ಮ ಮೊಮ್ಮಗ ಅದ್ನಾನ್‌ಗೆ ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ಯ ಶ್ರೀಕೃಷ್ಣ ವೇಷ ತೊಡಿಸಿ ಗಮನ ಸೆಳೆದಿದ್ದಾರೆ. ದಸ್ತಗೀರ್ ಮೊಕಾಶಿ ಮಗ ಆಸೀಫ್ ಮೊಕಾಶಿ ಬೆಳಗಾವಿಯ ಪಶುಸಂಗೋಪನೆ ಇಲಾಖೆಯಲ್ಲಿ ಪಶು ವೈದ್ಯರಾಗಿ ಸೇವೆ ಸಲ್ಲಿಸುತ್ತಾರೆ.
Krishna Janmashtami: ಕಳ್ಳ ಕೃಷ್ಣ ವೇಷದಲ್ಲಿ ಮಿಂದೆದ್ದ ಯಾದಗಿರಿಯ ಪುಟಾಣಿಗಳು
ಆಸೀಫ್ ಮೊಕಾಶಿ ಮಗ ಅದ್ನಾನ್ ಬೆಳಗಾವಿಯ ಖಾಸಗಿ ನರ್ಸರಿಯಲ್ಲಿ ಎಲ್‌ಕೆಜಿಗೆ ಹೋಗುತ್ತಿದ್ದು ಶ್ರೀಕೃಷ್ಣ ಜನ್ಮಾಷ್ಠಮಿ ನಿಮಿತ್ತ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಶ್ರೀಕೃಷ್ಣ ವೇಷಧಾರಿಯಾಗಿ ಭಾಗಿಯಾಗಿದ್ದಾನೆ. ಇನ್ನು ಮೊಮ್ಮಗನಿಗೆ ಶ್ರೀಕೃಷ್ಣನ ವೇಷ ಧರಿಸಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಿದ ಮುಸ್ಲಿಂ ಕುಟುಂಬದ ಸಾಮರಸ್ಯ ಮನಸ್ಥಿತಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗುತ್ತಿದೆ.
ಇದೇ ವೇಳೆ ಮಾತನಾಡಿದ ದಸ್ತಗೀರ್ ಮೊಕಾಶಿ, 'ನಮ್ಮ ದೇಶದ ಹಿಂದೂ ಮುಸ್ಲಿಂ ಎಲ್ಲರೂ ಭಾವೈಕ್ಯತೆಯಿಂದ ಇರುವ ರಾಷ್ಟ್ರ. ಗೋಕುಲಾಷ್ಠಮಿ ನಿಮಿತ್ಯ ಮೊಮ್ಮಗನಿಗೆ ಕೃಷ್ಣನ ವೇಷ ತೊಡಿಸಿದ್ದೇವೆ. ರಾಮನವಮಿ ಸೇರಿದಂತೆ ಎಲ್ಲಾ ಹಿಂದೂ ಹಬ್ಬಗಳಲ್ಲಿ ನಾವು ಭಾಗಿಯಾಗುತ್ತೇವೆ. ನಮ್ಮಲ್ಲಿ ಹಿಂದೂ ಮುಸ್ಲಿಂ ಅಂತಾ ಭೇದಭಾವ ಏನೂ ಇಲ್ಲ. ರಾಮ್ ರಹೀಮ್ ಎಲ್ಲರೂ ಒಂದೇ ಎಂದಿದ್ದಾರೆ. ಇತ್ತೀಚೆಗೆ ನಡೆಯುತ್ತಿರುವ ಘಟನಾವಳಿಗಳ ಬಗ್ಗೆ ಬೇಸರ ವ್ಯಕ್ತಪಡಿಸಿದ ದಸ್ತಗೀರ್ ಮೊಕಾಶಿ ಹಿಂದೂ ಮುಸ್ಲಿಂ ಎಲ್ಲರೂ ಅಣ್ಣ ತಮ್ಮಂದಿರಂತೆ ಇರಬೇಕು ಎಂದಿದ್ದಾರೆ. ಇದು ನಮ್ಮ ಭಾರತ.. ವಿವಿಧತೆಯಲ್ಲಿ ಏಕತೆ ನಮ್ಮ ದೇಶದ ವಿಶೇಷತೆ.. ಎಂಬುದಕ್ಕೆ ಈ ಘಟನೆಯೇ ಸಾಕ್ಷಿ.