Ramayan: ಪ್ರಿಯ ಭಂಟ ಹನುಮನ ಮೇಲೆಯೇ ಬ್ರಹ್ಮಾಸ್ತ್ರ ಪ್ರಯೋಗಿಸಿದ ಶ್ರೀರಾಮ! ಕಾರಣ ಏನ್ ಗೊತ್ತಾ?
ಭಗವಾನ್ ರಾಮನು ತನ್ನ ಅತ್ಯಂತ ನಂಬಿಕೆಯ ಭಕ್ತನನ್ನು ಬ್ರಹ್ಮಾಸ್ತ್ರದಿಂದ ಆಕ್ರಮಣ ಮಾಡಿದ ಈ ಕತೆ ನಿಮಗೆ ಗೊತ್ತೇ? ಹೌದು, ಮಹಾನ್ ಭಕ್ತ ಆಂಜನೇಯನ ಮೇಲೆಯೇ ಶ್ರೀರಾಮ ಬ್ರಹ್ಮಾಸ್ತ್ರ ದಾಳಿ ಮಾಡಿದ್ದನೆಂದರೆ ಅಚ್ಚರಿಯಾಗುತ್ತದೆಯಲ್ಲವೇ?
ಶ್ರೀರಾಮ ಶ್ರೀ ಹರಿ ವಿಷ್ಣುವಿನ 7ನೇ ಅವತಾರ. ಆತನ ಪರಮ ಭಕ್ತ ಆಂಜನೇಯನು ಶಿವನ 11ನೇ ರುದ್ರಾವತಾರ. ಆಂಜನೇಯ ಹುಟ್ಟಿದ್ದೇ ಶ್ರೀ ರಾಮನನ್ನು ರಕ್ಷಿಸಲು ಎಂದು ನಂಬಲಾಗಿದೆ. ಈ ಕಾರಣಕ್ಕಾಗಿಯೇ ಹನುಮಂತನನ್ನು ಶ್ರೀರಾಮನ ಅತ್ಯಂತ ಪ್ರಿಯ ಭಕ್ತ ಎನ್ನುವುದು.
ರಾಮನ ಭಂಟ ಹನುಮಂತನ ಮೇಲೆ ಬ್ರಹ್ಮಾಸ್ತ್ರ ಪ್ರಯೋಗ!
ಆಂಜನೇಯನನ್ನು ಸುಮ್ಮನೆ ಈ ಜಗತ್ತು ಕಂಡ ಶ್ರೇಷ್ಠ ಭಕ್ತ ಎನ್ನುವುದಲ್ಲ. ಆತ ತನ್ನ ಭಕ್ತಿಯನ್ನು ಎದೆ ಬಗೆದು ತೋರಿದ್ದ. ಅಲ್ಲಿಯೂ ರಾಮನೇ ನೆಲೆಸಿದ್ದನ್ನು ನೋಡಿದ ಮೇಲೆ ಆಂಜನೇಯನ ಕಣಕಣವೂ ರಾಮ ರಾಮ ಎನ್ನುವುದನ್ನು ಯಾರಾದರೂ ಒಪ್ಪಿಕೊಳ್ಳಲೇಬೇಕು. ಅಷ್ಟಾಗಿಯೂ, ಭಗವಾನ್ ಶ್ರೀರಾಮನು ತನ್ನ ಪ್ರಿಯ ಭಕ್ತ ಹನುಮಂತನ ಪ್ರಾಣವನ್ನು ತೆಗೆಯಲು ಸಿದ್ಧನಾಗಿದ್ದನೆಂದರೆ ಅಚ್ಚರಿಯಲ್ಲವೇ? ಹೌದು, ಶ್ರೀರಾಮ ಹನುಮನಿಗೆ ಮರಣದಂಡನೆಯನ್ನು ನೀಡಿದ್ದಲ್ಲದೆ, ಅವನ ಪ್ರಾಣವನ್ನು ತೆಗೆಯಲು ಬ್ರಹ್ಮಾಸ್ತ್ರವನ್ನು ಪ್ರಯೋಗಿಸಿದನು. ಈ ಕತೆ ಏನು ನೋಡೋಣ ಬನ್ನಿ..
ಶ್ರೀರಾಮ ಮತ್ತು ಭಕ್ತ ಹನುಮಂತನ ಕಥೆ
ಭಗವಾನ್ ಶ್ರೀರಾಮ ಮತ್ತು ಅವರ ಪರಮ ಭಕ್ತ ಹನುಮನಿಗೆ ಸಂಬಂಧಿಸಿದ ಈ ಪೌರಾಣಿಕ ಕಥೆಯ ಪ್ರಕಾರ, ಒಮ್ಮೆ ರಾಮನ ಆಸ್ಥಾನದಲ್ಲಿ ದೇವಋಷಿ ನಾರದ, ವಶಿಷ್ಠ ವಿಶ್ವಾಮಿತ್ರ ಮತ್ತು ಮಹಾನ್ ಋಷಿಗಳ ಸಭೆ ನಡೆಯಿತು. ರಾಮನ ಹೆಸರು ರಾಮನಿಗಿಂತ ಶ್ರೇಷ್ಠವೇ ಎಂಬ ಬಗ್ಗೆ ಸಭೆಯಲ್ಲಿ ಚರ್ಚೆಯಾಗುತ್ತಿತ್ತು. ಸಭೆಯಲ್ಲಿದ್ದ ಎಲ್ಲಾ ವಿದ್ವಾಂಸರು ಈ ಚರ್ಚೆಯಲ್ಲಿ ತಮ್ಮ ತಮ್ಮ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದರು. ನಂತರ ರಾಮನ ಹೆಸರಲ್ಲ, ಭಗವಾನ್ ರಾಮನೇ ಹೆಚ್ಚು ಶಕ್ತಿಶಾಲಿ ಎಂದು ತೀರ್ಮಾನಿಸಲಾಯಿತು. ಆದರೆ ಶ್ರೀರಾಮನಿಗಿಂತ ಅವನ ಹೆಸರು ದೊಡ್ಡದು ಎಂದು ಹೇಳಿದವರು ನಾರದ ಮುನಿ ಮಾತ್ರ. ಅದನ್ನು ಸಾಬೀತುಪಡಿಸುವುದಾಗಿಯೂ ಹೇಳಿಕೊಂಡರು. ಕಿಕ್ಕಿರಿದು ತುಂಬಿದ್ದ ಸಭೆಯಲ್ಲಿ ಋಷಿಗಳ ಜೊತೆಗೆ ಹನುಮಂತ ಕೂಡ ಮಾತುಕತೆಯನ್ನು ಆಲಿಸುತ್ತಿದ್ದನು.
Navpancham Rajyoga 2023: 3 ರಾಶಿಗಳಿಗೆ ಲಾಭ ನೀಡುವ ಶನಿ ಮಂಗಳ
ಸಭೆ ಮುಗಿದ ತಕ್ಷಣ, ನಾರದ ಮುನಿಯು ವಿಶ್ವಾಮಿತ್ರರನ್ನು ಹೊರತುಪಡಿಸಿ ಎಲ್ಲಾ ಋಷಿಗಳನ್ನು ಗೌರವಿಸುವಂತೆ ಹನುಮನನ್ನು ಕೇಳಿದರು. ಹನುಮನು, 'ನಾನು ಋಷಿ ವಿಶ್ವಾಮಿತ್ರನಿಗೆ ಏಕೆ ನಮಸ್ಕರಿಸಬಾರದು ಮತ್ತು ಅಭಿನಂದಿಸಬಾರದು?' ಎಂದು ಕೇಳಿದನು.
ಆಗ ನಾರದರು ಹೇಳಿದರು, 'ಏಕೆಂದರೆ ಅವನು ಮೊದಲು ರಾಜನಾಗಿದ್ದನು, ಆದ್ದರಿಂದ ಅವನು ಋಷಿಯಲ್ಲ.'
ನಾರದರ ಮಾತಿನಂತೆ ಹನುಮನು ವಿಶ್ವಾಮಿತ್ರರನ್ನು ನಿರ್ಲಕ್ಷಿಸಿ, ಉಳಿದ ಋಷಿಗಳನ್ನು ಗೌರವಿಸಿದನು. ಈ ಅವಮಾನವನ್ನು ಕಂಡು ಕೋಪಗೊಂಡ ವಿಶ್ವಾಮಿತ್ರನು ಹನುಮಂತನಿಗೆ ಮರಣದಂಡನೆ ವಿಧಿಸುವುದಾಗಿ ಶಪಥ ಮಾಡಿದನು.
ಹನುಮಂತನ ಅನಂತ ಅನುಗ್ರಹವು ಯಾವಾಗಲೂ ಈ ರಾಶಿಗಳ ಮೇಲಿರುತ್ತೆ!
ಜೊತೆಗೆ, ಈ ಬಗ್ಗೆ ಶ್ರೀರಾಮನಿಂದ ತನಗೆ ನ್ಯಾಯ ಕೊಡಿಸುವಂತೆ ವಿಶ್ವಾಮಿತ್ರರು ಭರವಸೆ ಪಡೆದರು. ಹನುಮಂತನು ಶ್ರೀರಾಮನಿಗೆ ತುಂಬಾ ಪ್ರಿಯನಾಗಿದ್ದನು, ಆದರೆ ವಿಶ್ವಾಮಿತ್ರರು ರಾಮನ ಗುರುವೂ ಆಗಿದ್ದರು ಮತ್ತು ಗುರುಗಳ ಆದೇಶವನ್ನು ಪಾಲಿಸುವುದು ರಾಮನಿಗೆ ಅತ್ಯಂತ ದೊಡ್ಡ ಕರ್ತವ್ಯವಾಗಿತ್ತು. ಗುರುಗಳ ಆದೇಶವನ್ನು ಧಿಕ್ಕರಿಸಬಾರದು ಎಂದು ಯೋಚಿಸಿ, ಶ್ರೀರಾಮನು ತನ್ನ ಪ್ರಿಯ ಭಕ್ತ ಹನುಮಂತನಿಗೆ ಮರಣದಂಡನೆ ವಿಧಿಸಲು ಸಿದ್ಧನಾದನು.
ಹನುಮಂತನಿಗೆ ಶ್ರೀರಾಮನು ತನ್ನನ್ನು ಏಕೆ ಕೊಲ್ಲಲು ಬಯಸಿದನು ಎಂದು ಅರ್ಥವಾಗಲಿಲ್ಲ. ಆಗ ನಾರದರು ಹನುಮಂತನಿಗೆ ರಾಮನ ಹೆಸರನ್ನು ಜಪಿಸುವಂತೆ ಸಲಹೆ ನೀಡಿದರು. ಹನುಮಂತನು ಮರದ ಕೆಳಗೆ ಕುಳಿತು ರಾಮ ನಾಮವನ್ನು ಜಪಿಸಲು ಪ್ರಾರಂಭಿಸಿದರು. ರಾಮನ ನಾಮವನ್ನು ಜಪಿಸುವುದರಲ್ಲಿ ಎಷ್ಟು ಮುಳುಗಿಹೋದ ಎಂದರೆ ಅವನು ಆಳವಾದ ಧ್ಯಾನಕ್ಕೆ ಹೋದನು. ಏತನ್ಮಧ್ಯೆ, ಭಗವಾನ್ ರಾಮನು ವಿಶ್ವಾಮಿತ್ರರ ಆದೇಶ ಪಾಲಿಸಲು ಹನುಮಂತನ ಮೇಲೆ ಬಾಣಗಳನ್ನು ಹೊಡೆದನು, ಆದರೆ ಅವು ಆಂಜನೇಯನ ಮೇಲೆ ಯಾವುದೇ ಪರಿಣಾಮ ಬೀರಲಿಲ್ಲ. ಏಕೆಂದರೆ ಅವನು ರಾಮನ ಭಕ್ತಿಯಲ್ಲಿ ಮಗ್ನನಾಗಿದ್ದನು. ತನ್ನ ಬಾಣಗಳು ವಿಫಲವಾಗುತ್ತಿರುವುದನ್ನು ಕಂಡು ಶ್ರೀರಾಮನು ‘ನನ್ನ ನಾಮವನ್ನು ಜಪಿಸುತ್ತಿರುವ ಭಕ್ತನಿಗೆ ನಾನು ಹೇಗೆ ಹಾನಿ ಮಾಡಲಿ?’ ಎಂದು ಯೋಚಿಸಿದನು.
Mahabharat Katha: ಬೇಕೆಂದೇ ಶ್ರೀಕೃಷ್ಣ ಅಭಿಮನ್ಯುವನ್ನು ರಕ್ಷಿಸಲಿಲ್ಲವೇ?
ನಾರದರ ಗೆಲುವು
ಆದರೆ ಗುರುಗಳ ಆಜ್ಞೆಯನ್ನು ಪಾಲಿಸುವ ಸಲುವಾಗಿ ರಾಮ ಮತ್ತೊಮ್ಮೆ ಹನುಮಂತನ ಪ್ರಾಣ ತೆಗೆಯಲು ಪ್ರಯತ್ನಿಸಿದನು. ಈ ಬಾರಿ ಹನುಮಂತನ ಮೇಲೆ ಬಾಣದ ಬದಲು ಬ್ರಹ್ಮಾಸ್ತ್ರ ಪ್ರಯೋಗಿಸಿದ. ಆದರೆ ಬ್ರಹ್ಮಾಸ್ತ್ರವೂ ಹನುಮಂತನಿಗೆ ಹಾನಿ ಮಾಡಲಿಲ್ಲ. ಇದನ್ನು ನೋಡಿದ ನಾರದರು ವಿಶ್ವಾಮಿತ್ರರಿಗೆ ಎಲ್ಲ ಸತ್ಯವನ್ನು ತಿಳಿಸಿದರು. ತಾವು ರಾಮನ ಹೆಸರೇ ಹೆಚ್ಚು ಎಂದು ಸಾಬೀತುಪಡಿಸಲು ಹನುಮನನ್ನು ನಿಮಗೆ ಗೌರವ ಕೊಡದಂತೆ ಹೇಳಿದ್ದಾಗಿ ಹೇಳಿದರು ಮತ್ತು ರಾಮನನ್ನು ಅವನ ಭರವಸೆಯಿಂದ ಮುಕ್ತಗೊಳಿಸುವಂತೆ ಪ್ರಾರ್ಥಿಸಿದರು.
ವಿಶ್ವಾಮಿತ್ರ ರಾಮನನ್ನು ತನ್ನ ವಾಗ್ದಾನದಿಂದ ಮುಕ್ತಗೊಳಿಸಿದರು. ಹೀಗೆ ಶ್ರೀರಾಮನಿಗಿಂತ ರಾಮನ ಹೆಸರು ಹೆಚ್ಚು ಶಕ್ತಿಶಾಲಿ ಎಂದು ಸಾಬೀತುಪಡಿಸುವಲ್ಲಿ ನಾರದ ಮುನಿ ಯಶಸ್ವಿಯಾಗಿದ್ದರು.