ಕೇವಲ ದೇವರೆಂದು ಪೂಜಿಸಬೇಡಿ, ಪರಿಪೂರ್ಣ ಬದುಕಿಗೆ ಆದರ್ಶ ಶ್ರೀಕೃಷ್ಣ

ಕೃಷ್ಣನ ಜೀವನ ನಮಗೆಲ್ಲರಿಗೂ ಆದರ್ಶವಾಗಿದೆ. ಅವನ ಬದುಕಿನ ಸಂದೇಶಗಳನ್ನು ನಮ್ಮದಾಗಿಸಿಕೊಂಡು ನಮ್ಮ ಜೀವನವನ್ನು ಪೂರ್ಣತೆಯತ್ತ ಒಯ್ಯುವ ಯತ್ನ ಮಾಡಬೇಕು. ಕೃಷ್ಣಾವತಾರದ ಒಂದೊಂದು ಪ್ರಸಂಗವೂ ನಮ್ಮ ಜೀವನದ ಸಮಸ್ಯೆಗಳಿಗೆ ಪರಿಹಾರದಂತಿವೆ.

krishna janmashtami 2024 lord krishna ideal for perfect life rav

ಗಣೇಶ್‌ ಭಟ್ಟ ಕುಮಟಾ

ದುರಾಚಾರಿಗಳಾದ ಕಂಸ-ಕೌರವ ಮುಂತಾದವರನ್ನು ಸಂಹರಿಸಿ, ಲೋಕದಲ್ಲಿ ಪುನಃ ಧರ್ಮವನ್ನು ನೆಲೆಗೊಳಿಸುವ ಸಲುವಾಗಿ, ಶ್ರಾವಣಮಾಸದ ಕೃಷ್ಣ ಪಕ್ಷದ ಅಷ್ಟಮಿ ಬುಧವಾರ ರೋಹಿಣಿ ನಕ್ಷತ್ರದಲ್ಲಿ ವಸುದೇವ–ದೇವಕಿಯ ಮಗನಾಗಿ, ವಿಷ್ಣುವಿನ ದಶಾವತಾರಗಳಲ್ಲಿ ಎಂಟನೇ ಅವತಾರಿ ಕೃಷ್ಣ ಜನಿಸಿದ. ನಂದಗೋಪ-ಯಶೋದೆಯ ಪಾಲನೆಯಲ್ಲಿ ಬೆಳೆದ ಕೃಷ್ಣನು ತನ್ನ ಲೀಲಾವಿನೋದದಿಂದ ಜಗದ ಜನರಿಗೆ ಆನಂದ ಉಂಟುಮಾಡಿದ.

ಅರ್ಧರಾತ್ರೇ ತು ರೋಹಿಣ್ಯಾಂ ಯದಾ ಕೃಷ್ಣಾಷ್ಟಮೀ ಭವೇತ್

ತಸ್ಯಾಮಭ್ಯರ್ಚನಂ ಶೌರೇರ್ಹಂತಿ ಪಾಪಂ ತ್ರಿಜನ್ಮಜಮ್

ಎಂಬ ಭವಿಷ್ಯಪುರಾಣದ ವಚನದಂತೆ ಕೃಷ್ಣಾಷ್ಟಮೀಯಂದು ಕೃಷ್ಣನನ್ನು ಅರ್ಚಿಸಿದರೆ ಮೂರು ಜನ್ಮಗಳಲ್ಲಿ ಮಾಡಿದ ಪಾಪಗಳು ನಾಶಹೊಂದುವವು ಎನ್ನುವ ನಂಬಿಕೆಯಂತೆ ಕೃಷ್ಣ ಜನಿಸಿದ ಈ ದಿನವನ್ನೇ ಕೃಷ್ಣಾಷ್ಟಮಿಯಾಗಿ ಕೃಷ್ಣಭಕ್ತರು ಜಗತ್ತಿನಾದ್ಯಂತ ಸಡಗರ-ಸಂಭ್ರಮದಿಂದ ಆಚರಿಸುತ್ತಾ ಬಂದಿದ್ದಾರೆ.

ಉಡುಪಿ; ಇಂದು ಭಕ್ತಿಪರಕಾಷ್ಟೆಯ ಶ್ರೀಕೃಷ್ಣ ಜನ್ಮಾಷ್ಟಮಿ; ಕೇಂದ್ರ ಸಚಿವ ಪ್ರಲ್ಹಾದ್ ಜೋಶಿ, ಜಗ್ಗೇಶ್ ರಕ್ಷಿತ್ ಆಗಮನ

ಕೃಷ್ಣ ಏಕೆ ನಮಗೆ ಹತ್ತಿರ?

ಭಗವಾನ್ ಶ್ರಿಕೃಷ್ಣನ ವ್ಯಕ್ತಿತ್ವ ಅದ್ಭುತವಾದುದು. ಆತನ ಜೀವನದ ಪ್ರತಿ ಘಟನೆಯೂ ಅನುಸರಣೀಯವಾದುದು. ಅದಕ್ಕಾಗಿಯೇ ಮಾನವನು ಸಾವಿರಾರು ವರ್ಷಗಳಿಂದ ಕೃಷ್ಣನ ನುಡಿಗಳನ್ನು ಅನುಸರಿಸುತ್ತಾ ಬಂದಿದ್ದಾನೆ. ಆತನ ಬಾಲ್ಯಲೀಲೆಗಳಿಂದ ಹಿಡಿದು ನಿರ್ಯಾಣದ ತನಕದ ಘಟನೆಗಳು ಇಂದಿಗೂ ಸಹ ನಮ್ಮ ಜೀವನದ ಅನೇಕ ಸಮಸ್ಯೆಗಳಿಗೆ ಸಮಾಧಾನವನ್ನು ಸೂಚಿಸುತ್ತದೆ. ದೇವರದೇವ ಮಾನವರೂಪದಲ್ಲಿ ಅವತರಿಸಿ, ಸಾಮಾನ್ಯ ಮಾನವರಲ್ಲಿ ಸಾಮಾನ್ಯವಾಗಿ ತನ್ನ ಲೀಲೆಯನ್ನು ತೋರುತ್ತಾ, ಅಲೌಕಿಕ ಸಾಮರ್ಥ್ಯವನ್ನು ಪ್ರಕಟಿಸಿದನು. ಕಂಸವನ್ನು ವಧಿಸಿದ ಮೇಲೆ ಮಥುರೆಯ ರಾಜನಾಗಬಹುದಿತ್ತು, ಆದರೆ ಆ ರಾಜ್ಯ ಮೋಹದಿಂದ ದೂರ ಉಳಿದು ಮಥುರೆಯ ರಾಜಸಿಂಹಾಸನದ ಮೇಲೆ ಕಂಸನ ತಂದೆ ಉಗ್ರಸೇನನನ್ನು ಆದರ ಪೂರ್ವಕವಾಗಿ ಕುಳ್ಳಿರಿಸಿದನು.

ಪ್ರಕೃತಿ ಪೂಜೆಯ ಸಂದೇಶ

ಸರ್ವ ಸಮರ್ಥನಾಗಿದ್ದರೂ ಸರ್ವರ ಸಹಭಾಗಿತ್ವವನ್ನು ಉಪಯೋಗಿಸಿಕೊಂಡು ಕಾರ್ಯನಿರ್ವಹಿಸುತ್ತಿದ್ದ ಶ್ರೀಕೃಷ್ಣ. ಗೋಪಾಲಕ ಕೃಷ್ಣ ತನ್ನ ಗೊಲ್ಲ ಸಹಚರರೊಂದಿಗೆ ಗೋವುಗಳನ್ನು ಮೇಯುಸುತ್ತಾ ಗೋವರ್ಧನ ಪರ್ವತದತ್ತ ಒಮ್ಮೆ ತೆರಳಿದ್ದ. ಅಲ್ಲಿ ಗೋಪಿಕಾಸ್ತ್ರೀಯರು ಹಲವು ಬಗೆಯ ನೈವೇದ್ಯದ ಪದಾರ್ಥಗಳನ್ನು ಸಿದ್ಧಪಡಿಸಿಕೊಂಡು ಹಾಡುತ್ತಾ ಕುಣಿಯುತ್ತಾ ಇಂದ್ರೋತ್ಸವವನ್ನು ಆಚರಿಸುತ್ತಿದ್ದರು. ಶ್ರೀಕೃಷ್ಣ ಈ ಉತ್ಸವದ ಸಂಭ್ರಮಕ್ಕೆ ಕಾರಣ ಕೇಳಲಾಗಿ ಗೋಪಿಕಾಸ್ತ್ರೀಯರು ‘ಇಂದು ದೇವತೆಗಳ ರಾಜ ಇಂದ್ರನ ಪೂಜೆ ನಡೆಯುವುದು. ಇದರಿಂದ ಪ್ರಸನ್ನಗೊಂಡ ದೇವರಾಜ ಇಂದ್ರನು ಮಳೆ ಸುರಿಸುವನು’ ಎಂದರು. ಕೃಷ್ಣ ಹೇಳಿದ- ‘ಇಂದ್ರ ಅಷ್ಟು ಶಕ್ತಿವಂತನೇ? ಅದಕ್ಕಿಂತ ಹೆಚ್ಚಿನ ಶಕ್ತಿವಂತ ನಮ್ಮ ಗೋವರ್ಧನ ಪರ್ವತನಿದ್ದಾನೆ. ಗೋವರ್ಧನ ಪರ್ವತದ ಕಾರಣದಿಂದಾಗಿಯೇ ಮಳೆಯಾಗುವುದು. ಆದ್ದರಿಂದ ನಾವು ಗೋವರ್ಧನ ಪರ್ವತವನ್ನು ಪೂಜಿಸಬೇಕು’ ಎಂದಾಗ ಗೋಪಿಕಾಸ್ತ್ರೀಯರು ಒಪ್ಪಿದರು. ಇಂದ್ರನ ಪೂಜಿಸುವ ಬದಲಾಗಿ ಗೋವರ್ಧನ ಪರ್ವತ ಪೂಜಿಸುವ ತಯಾರಿ ನಡೆಯುವುದು. ಎಲ್ಲಾ ಗೊಲ್ಲರು-ಗೋಪಿಕಾಸ್ತ್ರೀಯರು ತಮ್ಮ ತಮ್ಮ ಮನೆಯಿಂದ ಸಿದ್ದಪಡಿಸಿಕೊಂಡು ಬಂದ ನೈವೇದ್ಯದ ಪದಾರ್ಥಗಳನ್ನು ಗೋವರ್ಧನ ಪರ್ವತನಿಗೆ ಪೂಜಿಸಿ ಅರ್ಪಿಸಲು ಪ್ರಾರಂಭಿಸಿದರು. ಈ ಸಂಗತಿ ದೇವೆಂದ್ರನಿಗೂ ತಲುಪಿತು. ಕೋಪಗೊಂಡ ಇಂದ್ರ ಮೇಘಗಳಿಗೆ ಈ ಕೂಡಲೇ ಆ ಭಾಗಕ್ಕೆ ತೆರಳಿ ಮಳೆಸುರಿಸಿ ಜಲಪ್ರಳಯ ಉಂಟುಮಾಡಿ ಎಂದು ಆಜ್ಞಾಪಿಸಿದ. ಅದೇ ಪ್ರಕಾರವಾಗಿ ಮುಸಲಧಾರೆಯಾಗಿ ಮಳೆ ಸುರಿಯಿತು. ಗೋವರ್ಧನ ಪರ್ವತದ ತಪ್ಪಲಿನಲ್ಲಿ ನೆರೆದ ಸರ್ವರೂ ಭಯಭೀತರಾಗಿ ಕೃಷ್ಣನ ಮೊರೆ ಹೋದರು. ಈಗಾಗಲೇ ಪೂತನಿ, ಅಘಾಸುರ, ಧೇನುಕಾಸುರ ಮುಂತಾದವರನ್ನು ಸಂಹರಿಸಿದ ಕಾರಣ, ಕೃಷ್ಣನ ಅಲೌಕಿಕ ಶಕ್ತಿ ಎಲ್ಲರಿಗೂ ವಿದಿತವಾಗಿತ್ತು. ಕೃಷ್ಣ ಅಲ್ಲಿ ನೆರೆದ ಸರ್ವರಿಗೂ ಗೋವರ್ಧನ ಪರ್ವತಕ್ಕೆ ಶರಣು ಹೋಗುವಂತೆ ಹೇಳಿದನು. ಅವನೇ ಎಲ್ಲರನ್ನೂ ರಕ್ಷಿಸುವನು ಎಂದು ಹೇಳಿ, ಕೃಷ್ಣ ತನ್ನ ಕಿರುಬೆರಳಿನಿಂದ ಗೋವರ್ಧನ ಪರ್ವತವನ್ನು ಎತ್ತಿ, ಎಲ್ಲಾ ಗೋವುಗಳನ್ನು ಗೋಪಾಲಕರನ್ನು ರಕ್ಷಿಸಿದ ಎಂದು ಹೇಳಲಾದರೂ, ಎಲ್ಲಾ ಗೋಪಾಲ ಬಾಲಕರಿಗೆ ತಮ್ಮ ತಮ್ಮ ದಂಡಗಳ ಮೂಲಕ ಪರ್ವತದ ಕೆಳಭಾಗವನ್ನು ಎತ್ತಿ ಹಿಡಿಯಲು ಹೇಳಿದ ಎಂಬ ನಂಬಿಕೆಯೂ ಇದೆ. ಅಮಿತ ಉತ್ಸಾಹದಿಂದ ಅವರೆಲ್ಲರೂ ತಮ್ಮ ತಮ್ಮ ದಂಡದ ಮೂಲಕ ಪರ್ವತದ ಅಡಿಯಲ್ಲಿ ಶಕ್ತಿ ಕೇಂದ್ರೀಕರಿಸಿದರು. ಯೋಗೇಶ್ವರನು ಎಲ್ಲವನ್ನೂ ಮಾಡಲು ಸಾಮರ್ಥ್ಯವನ್ನು ಹೊಂದಿದ್ದರೂ ಸಮಾಜದ ಎಲ್ಲರನ್ನೂ ಒಗ್ಗೂಡಿಸಿಕೊಂಡು ಕಾರ್ಯನಿರ್ವಹಿಸಿದ. ಇದರಿಂದ ಅವರೆಲ್ಲರಿಗೂ ಸಫಲತೆಯ ಭಾವನೆ ಉಂಟಾಗುವಂತೆ ಮಾಡಿದ. ಹಾಗೂ ಮೊದಲ ಬಾರಿಗೆ ಪ್ರಕೃತಿ ಪೂಜೆಗೆ ಕರೆ ನೀಡಿ ಕ್ರಾಂತಿ ಉಂಟುಮಾಡಿದ.

ಮಿತ್ರಧರ್ಮದ ಪಾಲನೆಗೆ ಆದರ್ಶ

ಮಿತ್ರತ್ವದ ಮರ್ಮವನ್ನು ಶ್ರೀಕೃಷ್ಣನ ಹೊರತಾಗಿ ಮತ್ಯಾರು ಅರಿಯಲು ಸಾಧ್ಯ? ಕೃಷ್ಣನ ಬಾಲ್ಯ ಗೆಳೆಯ ಬಡ ಸುದಾಮ ಕೃಷ್ಣನ ಅರಮನೆ ತಲುಪಿದ. ಕೃಷ್ಣ ಸುದಾಮನನ್ನು ತಾನೆ ಸ್ವತಃ ಸ್ವಾಗತಿಸಿ ಆದರದಿಂದ ಸತ್ಕರಿಸಿದ. ಕೆಲದಿನಗಳ ತನಕ ತನ್ನ ಮನೆಯಲ್ಲಿಯೇ ಉಳಿಸಿಕೊಂಡು ಕೊನೆಯಲ್ಲಿ ಸನ್ಮಾನಿಸಿ ಬೀಳ್ಕೋಟ್ಟ. ಜನರು ಯೋಚಿಸಿದರು- ಸುದಾಮ, ಭಗವಂತನಿಗೆ ತಮ್ಮ ಸ್ಥಿತಿಯನ್ನು ನಿವೇದಿಸಿ ದಾರುಣ ಬಡತನ ಹೋಗಲಾಡಿಸಬಹುದಿತ್ತು. ಧನ-ಸಂಪತ್ತುಗಳನ್ನು ಕೇಳಿಕೊಳ್ಳಬಹುದಿತ್ತಲ್ಲ? ಕೃಷ್ಣನ ಲೀಲೆಯನ್ನು ನೋಡಿರಿ. ಸುದಾಮ ತನ್ನ ನಗರಕ್ಕೆ ಬಂದು ತಲುಪಿದ. ತನ್ನ ಗುಡಿಸಿಲಿನ ಸ್ಥಾನದಲ್ಲಿ ದೊಡ್ಡದೊಂದು ವೈಭವೋಪೇತವಾದ ಭವನವನ್ನು ನೋಡಿ ಆಶ್ವರ್ಯಗೊಂಡ. ಕೃಷ್ಣ ಮಿತ್ರಧರ್ಮವನ್ನು ಕೊನೆಯತನಕ ಪಾಲಿಸುತ್ತಾ, ತನ್ನ ಗೆಳೆಯ ಸುದಾಮನ ಸ್ವಾಭಿಮಾನಕ್ಕೆ ಚ್ಯುತಿಯಾಗದಂತೆ ಆತನ ಗಮನಕ್ಕೆ ತರದೆ, ಹೇಳದೆ ಆತನಿಗೆ ತಲುಪಿಸುವ ಕಲೆ ಕೃಷ್ಣನ ಹೊರತಾಗಿ ಇನ್ಯಾರಿಗೆ ಇರಲು ಸಾಧ್ಯ?

ಕೃಷ್ಣನು ಕೌರವ-ಪಾಂಡವರ ನಡುವೆ ಯುದ್ಧ ಸಂಭವಿಸಬಾರದೆಂದು ಅಂತಿಮ ಕ್ಷಣದವರೆಗೂ ಪ್ರಯತ್ನಿಸಿದ. ಕೌರವ-ಪಾಂಡವರ ನಡುವೆ ಸಂಧಾನಕ್ಕೆ ಪ್ರಯತ್ನಿಸಿದ. ಆದರೆ ಯುದ್ಧವೇ ನಡೆಯಬೇಕೆಂದು ಉಭಯತ್ರ ತೀರ್ಮಾನವಾಗಿ ಕುರುಕ್ಷೇತ್ರದಲ್ಲಿ ಸೇರಿದಾಗ, ಆ ಸಂದರ್ಭದಲ್ಲಿ ಅರ್ಜುನ ಶಸ್ತ್ರ ತ್ಯಜಿಸಿ ಈ ಯುದ್ಧ ಮಾಡಲಾರೆ ಎಂದಾಗಲೂ, ತನ್ನ ಜನರ ವಿರುದ್ಧವೇ ಹೋರಾಡುವಂತೆ ಅರ್ಜುನನಿಗೆ ಉಪದೇಶಿಸಿದ. ಸತ್ಯ ಮತ್ತು ಧರ್ಮದ ಪಾಲನೆಗಾಗಿ ಯುದ್ಧ ಸಂಘರ್ಷ ಅನಿವಾರ್ಯ ಎಂದು ಗೀತೋಪದೇಶದ ಮೂಲಕ ಉಪದೇಶಿಸಿದ. ಅದಿಂದು ಎಲ್ಲರಿಗೂ ಮಾರ್ಗದರ್ಶಕವಾಗಿದೆ.

ಕೃಷ್ಣ ಜನ್ಮಾಷ್ಟಮಿ 2024: ಬಾಲ ಗೋಪಾಲನ ಸ್ವಚ್ಛಗೊಳಿಸಲು 5 ಸರಳ ವಿಧಾನಗಳು ಇಲ್ಲಿವೆ

ಕೃಷ್ಣಾಷ್ಟಮೀ ಆಚರಣೆಯ ವಿಧಾನ

ಈ ದಿನ ಪ್ರಾತಃಕಾಲದಲ್ಲಿ ಸ್ನಾನಾದಿ ನಿತ್ಯಕರ್ಮಗಳನ್ನು ಪೂರೈಸಿ, ವ್ರತಸಂಕಲ್ಪಬದ್ಧರಾಗಿ ಉಪವಾಸಗೈದು, ಕೃಷ್ಣನ ಚರಿತ್ರೆಯನ್ನು ಶ್ರವಣ ಮಾಡಿ, ರಾತ್ರಿ ಬಾಲಕೃಷ್ಣನನ್ನು ಧ್ಯಾನಿಸಿ ಪೂಜಿಸಿ, ಇಷ್ಟವಾದ ನೈವೇದ್ಯ ಸಮರ್ಪಿಸಿ,

ತ್ರಾಹಿ ಮಾಂ ಸರ್ವಲೋಕೇಶ ಹರೇ ಸಂಸಾರಸಾಗರಾತ್

ತ್ರಾಹಿ ಮಾಂ ಸರ್ವಪಾಪಘ್ನ ದುಃಖಶೋಕಾರ್ಣವಾತ್ಪ್ರಭೋ

ಎಂದು ಪ್ರಾರ್ಥಿಸಿ, ನಂತರ ಅರ್ಘ್ಯ ನೀಡಿ ಪ್ರಸಾದ ಸೀಕರಿಸುವುದು.

ಕೃಷ್ಣನ ಜೀವನ ಆದರ್ಶ ಜೀವನ ಶೈಲಿಯಾಗಿದೆ. ಅದನ್ನು ನಮ್ಮದಾಗಿಸಿಕೊಂಡು ನಮ್ಮ ಜೀವನವನ್ನು ಪೂರ್ಣತೆಯತ್ತ ತೆರಳುವಂತೆ ಮಾಡಬೇಕು. ಆತನ ಜೀವನದ ಒಂದೊಂದು ಪ್ರಸಂಗವೂ ನಮ್ಮ ಜೀವನದ ಎಲ್ಲಾ ಸಮಸ್ಯೆಗಳಿಗೂ ಸಮಾಧಾನ ತೋರುವುದು. ಕೃಷ್ಣನನ್ನು ಕೇವಲ ಪೂಜಿಸುವುದಲ್ಲ, ಆತನ ಚರಿತ್ರೆಯನ್ನು ಆದರ್ಶಗಳನ್ನು ಪಾಲಿಸಲು ಪ್ರಯತ್ನಿಸಿದಾಗಲೇ ಕೃಷ್ಣಜನ್ಮಾಷ್ಟಮಿ ಹಬ್ಬ ಸಾರ್ಥಕವಾಗುವುದು.

Latest Videos
Follow Us:
Download App:
  • android
  • ios