ಪಶ್ಚಿಮ ಬಂಗಾಳದ ದುರ್ಗಾ ಪೂಜಾ ಉತ್ಸವವು ಯುನೆಸ್ಕೋ ವಿಶ್ವ ಸಾಂಸ್ಕೃತಿಕ ಪರಂಪರೆಯ ಪಟ್ಟಿಗೆ ಸೇರಿದೆ. ಇದು ದೇಶವೇ ಸಂಭ್ರಮ ಪಡುವ ವಿಷಯವಾಗಿದೆ. ಕೋಲ್ಕತ್ತಾದ ದುರ್ಗಾ ಪೂಜೆಯ ವಿಶೇಷ ಏನ್ ಗೊತ್ತಾ?

ಪಶ್ಚಿಮ ಬಂಗಾಳದ ಪ್ರಸಿದ್ಧ ದುರ್ಗಾ ಉತ್ಸವಕ್ಕೆ ಯುನೆಸ್ಕೋ ವಿಶ್ವ ಪಾರಂಪರಿಕ ಸ್ಥಾನಮಾನ ನೀಡಿರುವುದಾಗಿ ಘೋಷಿಸಿದೆ. ಇದರೊಂದಿಗೆ ಭಾರತದ 14 ವಿಶೇಷ ಆಚರಣೆಗಳಿಗೆ ಯುನೆಸ್ಕೋದ ಅಮೂರ್ತ ಪರಂಪರೆಗಳ ಪಟ್ಟಿಯಲ್ಲಿ ಸ್ಥಾನ ಸಿಕ್ಕಂತಾಗಿದೆ. 

ಯುನೆಸ್ಕೋ ಟ್ವಿಟರ್‌(Twitter)ನಲ್ಲಿ ಬುಧವಾರ ದುರ್ಗಾದೇವಿಯ ಚಿತ್ರದೊಂದಿಗೆ 'ಕೋಲ್ಕತಾದ ದುರ್ಗಾಪೂಜೆಯನ್ನು ಅಮೂರ್ತ ಪರಂಪರೆಗಳ ಪಟ್ಟಿಯಲ್ಲಿ ಸೇರಿಸಲಾಗಿದೆ. ಭಾರತಕ್ಕೆ ಅಭಿನಂದನೆಗಳು' ಎಂದು ಟ್ವೀಟ್‌ ಮಾಡಿದೆ. ಈ ಮೊದಲು ಭಾರತದ ರಾಮಲೀಲಾ, ನೌರೋಜ್‌, ಯೋಗ, ಕುಂಭಮೇಳ(Kumbh mel)ದಂತಹ ವಿಶಿಷ್ಟ ಆಚರಣೆಗಳು ಈ ಪಟ್ಟಿಗೆ ಸೇರಿವೆ. 

ಈ ನಿರ್ಧಾರವನ್ನು ಸ್ವಾಗತಿಸಿರುವ ಪ್ರಧಾನಿ ನರೇಂದ್ರ ಮೋದಿ(PM Modi), 'ಇದು ಪ್ರತಿಯೊಬ್ಬ ಭಾರತೀಯನಿಗೂ ಹೆಮ್ಮೆ ಹಾಗೂ ಸಂತೋಷದ ವಿಷಯ' ಎಂದಿದ್ದಾರೆ. ಮುಂದುವರಿದು, 'ಕೋಲ್ಕತ್ತಾದ ದುರ್ಗಾಪೂಜೆಯು ನಮ್ಮ ಆಚರಣೆಗಳು ಹಾಗೂ ಆದರ್ಶಗಳನ್ನು ಎತ್ತಿ ಹಿಡಿಯುತ್ತದೆ. ಈ ದುರ್ಗಾ ಪೂಜೆಯ ಅನುಭವವನ್ನು ಪ್ರತಿಯೊಬ್ಬರೂ ಪಡೆಯಲೇಬೇಕು' ಎಂದಿದ್ದಾರೆ. 

Kashi Vishwanath Dham: ಶಿವನೇ ಸ್ಥಾಪಿಸಿದ ಮೋಕ್ಷ ನಗರಿ ಕಾಶಿ, ಇಲ್ಲಿನ ವಿಸ್ಮಯಗಳ ಬಗ್ಗೆ ತಿಳಿಯಿರಿ

ಈ ಅಮೂರ್ತ ಸಾಂಸ್ಕೃತಿಕ ಪರಂಪರೆ ಪಟ್ಟಿಯ ಮೂಲಕ, ವಿಶ್ವದ ಪುರಾತನ ಹಾಗೂ ವಿಶಿಷ್ಠ ಸಾಂಸ್ಕೃತಿಕ ಆಚರಣೆಗಳನ್ನು ಗುರುತಿಸಿ ಅವನ್ನು ರಕ್ಷಿಸುವ, ಪ್ರೋತ್ಸಾಹಿಸುವ ಕೆಲಸವನ್ನು ಯುನೆಸ್ಕೋ(UNESCO) ಮಾಡುತ್ತಿದೆ. ಡಿಸೆಂಬರ್ 13ರಿಂದ ನಡೆಯುತ್ತಿರುವ ಯುನೆಸ್ಕೋದ ಅಂತರ್ ಸರ್ಕಾರಿ ಸಮಿತಿಯ 16ನೇ ವಾರ್ಷಿಕ ಸಮ್ಮೇಳನದಲ್ಲಿ ದುರ್ಗಾ ಪೂಜೆಯನ್ನು ಪಾರಂಪರಿಕ ಪಟ್ಟಿಗೆ ಸೇರುವ ನಿರ್ಧಾರ ಕೈಗೊಳ್ಳಲಾಗಿದೆ. 
ಬಳಿಕ ಈ ಕುರಿತು ಪತ್ರಿಕಾ ಪ್ರಕಟಣೆ ಹೊರಡಿಸಿರು ಯುನೆಸ್ಕೋ, 'ದುರ್ಗಾ ಪೂಜೆಯು ಧರ್ಮ(religion) ಹಾಗೂ ಕಲೆ(art)ಯ ಅತ್ಯುತ್ತಮ ಸಮಾಗಮ. ಬಹಳಷ್ಟು ಕಲಾಕಾರರು, ವಿನ್ಯಾಸಕಾರರಿಗೆ ಇದು ವೇದಿಕೆ ಒದಗಿಸಿಕೊಡುತ್ತದೆ' ಎಂದಿದೆ. 

ದಸರಾ ಸಂದರ್ಭದಲ್ಲಿ ದುರ್ಗಾ ಪೂಜೆಯನ್ನು ದೇಶದ ಹಲವೆಡೆ ಆಚರಿಸುತ್ತೇವೆ. ಎಲ್ಲದಕ್ಕಿಂತ ಅದ್ದೂರಿಯಾದ ಆಚರಣೆ ಕಂಡುಬರುವುದು ಕೋಲ್ಕತ್ತಾದಲ್ಲಿ. 

Shani Dev: ಮಹಿಳೆಯರು ಶನಿ ದೇವರನ್ನು ಪೂಜಿಸಬಹುದೇ?

ಕೋಲ್ಕತ್ತಾ ದುರ್ಗಾ ಪೂಜೆ ವಿಶೇಷತೆ
ಪಶ್ಚಿಮ ಬಂಗಾಳದಲ್ಲಿ ವರ್ಷವನ್ನು ಎರಡಾಗಿ ನೋಡಲಾಗುತ್ತದೆ. ದುರ್ಗಾ ಪೂಜೆಯ ಮೊದಲು ಹಾಗೂ ದುರ್ಗಾ ಪೂಜೆಯ ನಂತರ ಎಂದು. ದುರ್ಗಾ ಪೂಜೆ ಎಂದರೆ ಇಲ್ಲಿನ ಮನೆಮನೆಗಳಲ್ಲೂ ಎಲ್ಲಿಲ್ಲದ ಸಂಭ್ರಮ. ದುರ್ಗೆ 10 ದಿನಗಳ ಕಾಲ ತಮ್ಮೊಂದಿಗಿರಲು ಧರೆಗಿಳಿದು ಬರುತ್ತಾಳೆ ಎಂಬ ನಂಬಿಕೆ ಇವರದು. 
ಗಂಗೆಯಿಂದ ಮಣ್ಣನ್ನು ತೆಗೆದು ಅದರಿಂದ ದುರ್ಗೆ(goddess Durga)ಯ ಮೂರ್ತಿ(idol) ತಯಾರಿಸಲಾಗುತ್ತದೆ. ಮಹಾಲಯದ ದಿನ ಮುಖ್ಯ ಕಲಾವಿದರು ಸುಮೂಹೂರ್ತದಲ್ಲಿ ದುರ್ಗೆಯ ಕಣ್ಣನ್ನು ಬಿಡಿಸುತ್ತಾರೆ. ಇದಕ್ಕೆ 'ಚೊಕ್ಕು ದಾನ್' ಎನ್ನಲಾಗುತ್ತದೆ. ಅಲ್ಲಿಗೆ ದುರ್ಗೆಯನ್ನು ಆಹ್ವಾನಿಸಿದಂತೆ. ಆಮೇಲೆ ಆಕೆಯನ್ನು ಕುಮಾರಿ ರೂಪದಲ್ಲಿ ಮೊದಲು ಪೂಜಿಸಲಾಗುತ್ತದೆ. ಋತುಮತಿಯಾಗದ ಹೆಣ್ಣುಮಕ್ಕಳ ಪಾದ ತೊಳೆದು ಪೂಜಿಸಲಾಗುತ್ತದೆ. ನಂತರ 10ನೇ ದಿನ ಅಂದರೆ ವಿಜಯ ದಶಮಿಯಂದು ವಿವಾಹಿತ ಮಹಿಳೆಯು ದುರ್ಗೆಗೆ ಸಿಂಧೂರವಿಡಿಸಿ, ಸಿಹಿ ತಿನ್ನಿಸಿ ಮುಂದಿನ ವರ್ಷ ಮತ್ತೆ ಬರುವಂತೆ ಕೇಳಿಕೊಳ್ಳುತ್ತಾಳೆ. ಒಟ್ಟು ಈ ಮಣ್ಣಿನ ಮೂರ್ತಿಯನ್ನು ಹತ್ತು ದಿನಗಳ ಕಾಲ ಪೂಜಿಸಲಾಗುತ್ತದೆ. ಬಳಿಕ ದುರ್ಗೆಯನ್ನು ನೀರಿನಲ್ಲಿ ವಿಸರ್ಜಿಸಲಾಗುತ್ತದೆ. 
ಈ ಸಂದರ್ಭದಲ್ಲಿ 10 ದಿನಗಳ ಕಾಲವೂ ಡ್ರಮ್ ಬಾರಿಸಲಾಗುತ್ತದೆ. ಎಲ್ಲೆಲ್ಲೂ ಈ ವಿಶಿಷ್ಠ ಸದ್ದಿಗೆ ಡುಣುಚಿ ನಾಚ್ ಹೆಸರಿನಲ್ಲಿ ನೃತ್ಯ ಮಾಡಲಾಗುತ್ತದೆ. ಮಕ್ಕಳು ದುರ್ಗೆಯ ಹೆಸರನ್ನು 101 ಬಾರಿ ಬರೆಯುತ್ತಾರೆ. 

ರಾಮ(Lord Ram)ನಿಂದ ಶುರುವಾದ ಆಚರಣೆ
ದುಷ್ಟ ಸಂಹಾರಕಿ, ಶಿಷ್ಟ ರಕ್ಷಕಿಯಾದ ದುರ್ಗೆಯನ್ನು ಮೊದಲು ಆರಾಧಿಸಿದವನು ಶ್ರೀ ರಾಮ. ರಾವಣ(Ravan)ನನ್ನು ಸಂಹರಿಸುವುದಕ್ಕೂ ಮೊದಲು ಆತ ದುರ್ಗೆಯ ಆರಾಧನೆ ಮಾಡಿ, ಪೂಜೆಗೆ ಕಮಲದ ಹೂಗಳಿಲ್ಲವೆಂದು ಬದಲಿಗೆ ತನ್ನ ಕಣ್ಣುಗಳನ್ನೇ ಕೊಡಲು ಹೋದನಂತೆ. ರಾಮನ ಭಕ್ತಿಗೆ ಮೆಚ್ಚಿದ ದುರ್ಗೆಯು ರಾವಣನ ಸಂಹಾರಕ್ಕೆ ಸಂಪೂರ್ಣ ಶಕ್ತಿಯನ್ನು ಆತನಿಗೆ ಅನುಗ್ರಹಿಸಿದಳಂತೆ. ಹೀಗಾಗಿ ಇಂದಿಗೂ ದುರ್ಗಾ ಪೂಜೆಯ ಕಡೆಯ ದಿನ ರಾವಣ ಸಂಹಾರ ಕಾರ್ಯಕ್ರಮವನ್ನು ಎಲ್ಲೆಡೆ ನಡೆಸಲಾಗುತ್ತದೆ.