ಮೈಸೂರು ಮಹಾರಾಜರಾಗಿದ್ದ ಕಂಠೀರವ ನರಸರಾಜ ಒಡೆಯರ್ ಅವರು1638 ರಲ್ಲಿ ದೊಡ್ಡ ಅರಸನ ಕೊಳ ನಿರ್ಮಿಸುವ ಸಂದರ್ಭದಲ್ಲಿ ಈ ಗಣಪತಿಯ ಮೂರ್ತಿ ದೊರೆಯಿತು ಎಂಬ ಐತಿಹ್ಯವಿದೆ.

ವರದಿ: ಪುಟ್ಟರಾಜು.ಆರ್.ಸಿ, ಏಷಿಯಾನೆಟ್ ಸುವರ್ಣನ್ಯೂಸ್. ಚಾಮರಾಜನಗರ

ಚಾಮರಾಜನಗರ (ಆ.27): ದೇವಸ್ಥಾನಗಳಲ್ಲಿ ಅರ್ಚಕರಿರೋದು ಸಾಮಾನ್ಯ. ಆದ್ರೆ ಇಲ್ಲೊಂದು ಅರ್ಚಕರಿಲ್ಲದ ಗಣೇಶನ ದೇಗುಲವಿದೆ. ಭಕ್ತರು ನೇರವಾಗಿ ಗರ್ಭಗುಡಿಗೆ ಪ್ರವೇಶ ಮಾಡಿ ಗಣಪತಿಯನ್ನು ಸ್ಪರ್ಶಿಸಿ ಶ್ರದ್ದಾಭಕ್ತಿಯಿಂದ ಪೂಜೆ ಸಲ್ಲಿಸುತ್ತಾರೆ. ಬೇಡಿದ್ದನ್ನೆಲ್ಲ ಕರುಣಿಸುತ್ತಾನೆ, ಸಂಕಷ್ಟಗಳನ್ನೆಲ್ಲಾ ಪರಿಹರಿಸುತ್ತಾನೆ ಎಂದು ನಂಬಿರುವ ಈ ಇಷ್ಟಾರ್ಥ ಸಿದ್ದಿ ಗಣಪನ ದರ್ಶನಕ್ಕೆ ಭಕ್ತರು ಮುಗಿಬೀಳುತ್ತಾರೆ. ಅಷ್ಟಕ್ಕು ದೇಗುಲ ಎಲ್ಲಿದೆ ಅಂತೀರಾ ಈ ಸ್ಟೋರಿ ನೋಡಿ.

ಹೌದು ಇಂತಹ ವೈಶಿಷ್ಟ್ಯ ಪೂರ್ಣ ಗಣಪತಿಯ ದೇಗುಲ ಇರೋದು ಗಡಿ ಜಿಲ್ಲೆ ಚಾಮರಾಜನಗರದಲ್ಲಿ. ಕೊಳದಗಣಪತಿ ಎಂದೇ ಹೆಸರಾಗಿರುವ ಈ ದೇವಸ್ಥಾನ ಬಾಗಿಲು ಮುಚ್ಚಿದ್ದೇ ಇಲ್ಲ. ಮೈಸೂರು ಮಹಾರಾಜರಾಗಿದ್ದ ಕಂಠೀರವ ನರಸರಾಜ ಒಡೆಯರ್ ಅವರು1638 ರಲ್ಲಿ ದೊಡ್ಡ ಅರಸನ ಕೊಳ ನಿರ್ಮಿಸುವ ಸಂದರ್ಭದಲ್ಲಿ ಈ ಗಣಪತಿಯ ಮೂರ್ತಿ ದೊರೆಯಿತು ಎಂಬ ಐತಿಹ್ಯವಿದೆ. ದೊಡ್ಡ ಅರಸನ ಕೊಳದ ಬಳಿಯಲ್ಲೇ ದೇಗುಲ ನಿರ್ಮಿಸಿ ಈ ಗಣೇಶನ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗಿದ್ದು ಕೊಳದ ಗಣಪತಿ ಎಂದೇ ಪ್ರಸಿದ್ಧಿಯಾಗಿದೆ.

ಕೊಳದ ಗಣಪತಿ ದೇವಾಲಯಕ್ಕಿ ಯಾವುದೇ ಅರ್ಚಕರು ಇಲ್ಲ. ಭಕ್ತರು ನೇರವಾಗಿ ಗರ್ಭಗುಡಿಗೆ ಪ್ರವೇಶ ಮಾಡಿ ಗಣಪತಿ ಮೂರ್ತಿಯನ್ನು ಸ್ಪರ್ಶಿಸಿ ಪೂಜೆ ಸಲ್ಲಿಸುತ್ತಾರೆ. ಇದಕ್ಕೆ ಸ್ಪರ್ಶ ಗಣಪತಿ ಎಂಬ ಹೆಸರೂ ಇದೆ. ಗಣಪತಿಯನ್ನು ಸ್ಪರ್ಶಿಸಿ ಹರಕೆ ಹೊತ್ತರೇ ಈಡೇರುತ್ತದೆ ಎಂಬ ನಂಬಿಕೆ ಭಕ್ತರಲ್ಲಿದೆ. ರಾಜಕಾರಣಿಗಳಿರಲಿ, ವ್ಯಾಪರಸ್ಥರಿರಲಿ, ವಿದ್ಯಾರ್ಥಿಗಳಿರಲಿ, ಮಹಿಳೆಯರಿರಲಿ ಎಲ್ಲರಿಗು ಅಚ್ಚುಮೆಚ್ಚು ಈ ಕೊಳದ ಗಣಪ. ನಗರದ ವರ್ತಕರಂತು ತಮ್ಮ ಅಂಗಡಿ ಮುಂಗಟ್ಟುಗಳನ್ನು ತೆರೆಯುವ ಮೊದಲು ಕೊಳದ ಗಣಪತಿ ದರ್ಶನ ಮಾಡಿ ಪಾದದ ಬಳಿ ಅಂಗಡಿ ಬೀಗ ಇಟ್ಟು ಪೂಜೆ ಸಲ್ಲಿಸುವುದು ಸಾಮಾನ್ಯವಾಗಿದೆ.

ಯಾವುದೇ ಕೆಲಸ ಕಾರ್ಯಗಳಿರಲಿ ಮೊದಲು ಕೊಳದ ಗಣಪತಿ ದರ್ಶನ ಮಾಡಿ ಬೇಡಿಕೊಂಡು ಹೋದರೆ ಯಶಸ್ಸು ಕಟ್ಟಿಟ್ಟ ಬುತ್ತಿ ಎಂಬ ನಂಬಿಕೆ ಇದೆ. ದಿನದ 24 ಗಂಟೆಯು ತೆರೆದಿರುವ ಕೊಳದ ಗಣಪತಿ ದೇಗುಲಕ್ಕೆ ಜಾತಿಮತ ಭೇದವಿಲ್ಲದೆ ಭಕ್ತರ ದಂಡೇ ಹರಿದುಬರುತ್ತದೆ. ವಿಶೇಷ ದಿನಗಳಲ್ಲಂತು ಕೊಳದ ಗಣಪನ ದರ್ಶನಕ್ಕೆ ಭಕ್ತರು ಮುಗಿಬೀಳುತ್ತಾರೆ. ಗಣಪತಿ ಮೂರ್ತಿಯನ್ನು ಸ್ಪರ್ಶಿಸಿ ಪುನೀತಭಾವ ಹೊಂದುತ್ತಾರೆ.