ಚಂದ್ರನ ಕೇಳಿದ ರಾಮಚಂದ್ರ

ಶ್ರೀರಾಮಚಂದ್ರ ಆಗಿನ್ನೂ ಬಾಲಕ. ಮೂವರು ತಾಯಂದಿರ ಮಡಿಲಲ್ಲಿ, ಮೂವರು ತಮ್ಮಂದಿರ ಜೊತೆಗೆ ಆಟವಾಡುತ್ತಿದ್ದ. ಅದು ಹುಣ್ಣಿಮೆ. ಬಾನಿನಲ್ಲಿ ಚಂದ್ರಮ ಪೂರ್ಣ ಪ್ರಭೆಯಿಂದ ಜಗಮಗಿಸುತ್ತಿದ್ದ. ಅದನ್ನು ನೋಡಿ ರಾಮ, ನನಗೆ ಚಂದಿರ ಬೇಕೂ ಎಂದು ಹಠ ಹಿಡಿದ. ಯಾರು ಬಂದು ಏನೇ ಸಮಜಾಯಿಷಿ ನೀಡಿದರೂ ರಾಮನಿಗೆ ಸಮಾಧಾನವಾಗಲಿಲ್ಲ. ಏನು ಮಾಡುವುದು ಎಂದೇ ಯಾರಿಗೂ ಗೊತ್ತಾಗಲಿಲ್ಲ. ಆಗ ಅಲ್ಲಿಗೆ ದಾಸಿ ಮಂಥರೆ ಬಂದಳು. ರಾಮನ ಹಠ ನೋಡಿ, ಒಂದು ಕನ್ನಡಿ ತರಿಸಿ, ರಾಮನ ಮುಖಕ್ಕೆ ಹಿಡಿದಳು. ಅಲ್ಲಿ ಹೊಳೆಯುತ್ತಿದ್ದ ತನ್ನದೇ ಮುಖವನ್ನು ನೋಡಿದ ರಾಮ, ಚಂದ್ರನನ್ನೇ ಪಡೆದೆ ಎಂಬ ಖುಷಿಯಲ್ಲಿ ಸುಮ್ಮನೆ ಆಟವಾಡತೊಡಗಿದ. ಶ್ರೀರಾಮ ಹೀಗೆ ತನ್ನ ಬಾಲಲೀಲೆಗೆ ಆರಿಸಿಕೊಂಡಿದ್ದು ಮಂಥರೆಯನ್ನು.

 

ಗಂಗಾ ನದಿ ದಾಟಿ ಶ್ರೀರಾಮ

ಶ್ರೀರಾಮನು ಲಕ್ಷ್ಮಣ ಹಾಗೂ ಸೀತೆಯರ ಜೊತೆಗೆ ಅಯೋಧ್ಯೆ ತೊರೆದು ವನವಾಸಕ್ಕೆ ತೆರಳಿದಾಗಿ ಆತನನ್ನು ಬಿಡಲು ಇಷ್ಟವಿಲ್ಲದ ಪುರಜನರೂ ಹಿಂಬಾಲಿಸಿದರು. ಅವರು ಎಷ್ಟು ಹೇಳಿದರೂ ಹಿಂದಕ್ಕೆ ಹೋಗಲಿಲ್ಲ. ನಿನ್ನನ್ನು ಬಿಟ್ಟು ಹೋಗೆವೆಂದೇ ಹೇಳಿದರು. ನಡೆಯುತ್ತಾ ಬಂದ ಅವರು ಗಂಗಾ ನದಿಯ ದಡದಲ್ಲಿ ಬೀಡು ಬಿಟ್ಟರು. ರಾತ್ರಿ ನಿದ್ರಿಸಿದರು. ಮುಂಜಾನೆ ಎಲ್ಲರೂ ಏಳುವುದಕ್ಕೆ ಕೆಲವು ಗಳಿಗೆ ಮೊದಲೇ ಲಕ್ಷ್ಮಣ, ಸೀತೆ, ಮಂತ್ರಿ ಸುಮಂತ್ರ ಹಾಗೂ ಗಂಗಾ ನದಿಯನ್ನು ದಾಟಿಸುವ ಅಂಬಿಗ ಗುಹನನ್ನು ಶ್ರೀರಾಮ ಎಬ್ಬಿಸಿದ. "ಪೂರ್ತಿ ಬೆಳಗಾಗುವ ಮುನ್ನವೇ ನಮ್ಮನ್ನು ಗಂಗಾ ನದಿ ದಾಟಿಸು. ಯಾಕೆಂದರೆ ಬೆಳಗಾದರೆ ನಮ್ಮನ್ನು ಹಿಂಬಾಲಿಸಿ ಜನರು ಬಂದುಬಿಡುತ್ತಾರೆ. ನನ್ನ ಜೊತೆ ಅವರೂ ವನವಾಸದ ಕಷ್ಟ ಅನುಭವಿಸುವುದು ನನಗಿಷ್ಟವಿಲ್ಲ.'' ಎಂದ. ಹಾಗೇ ಗುಹನು ಅವರನ್ನು ನದಿ ದಾಟಿಸಿದ. ಬಳಿಕ ಮಂತ್ರಿ ಸುಮಂತ್ರನಿಗೆ ಸಾಕಷ್ಟು ಮಾತುಗಳನ್ನು ಹೇಳಿ ಅಲ್ಲಿಂದ ಮರಳಿ ಕಳುಹಿಸಿದ.

 

ಈ ಶ್ರೀರಾಮ ನವಮಿಯಿಂದ ನಿಮ್ಮ ಅದೃಷ್ಟ ಚೇಂಜ್‌ ಆಗುತ್ತಾ?

 

ಬಂಧು ಪ್ರೀತಿಯ ಮಹತ್ವ

ಲಂಕಾಯುದ್ಧವೆಲ್ಲ ಮುಗಿದಿತ್ತು. ರಾವಣ ಸತ್ತುಬಿದ್ದಿದ್ದ. ಅವನ ದೇಹಕ್ಕೆ ಸಂಸ್ಕಾರ ಮಾಡಬೇಕಾಗಿತ್ತು. ರಾವಣನ ಪುತ್ರರೆಲ್ಲ ಅಳಿದಿದ್ದರು. ಸಂಸ್ಕಾರ ಕಾರ್ಯವನ್ನು ಮಾಡಲು ವಿಭೀಷಣ ಹಿಂಜರಿದ. ಆಗ ಶ್ರೀರಾಮನು ಅವನಿಗೆ ಹೀಗೆಂದ: 'ವಿಭೀಷಣ, ನನಗೆ ಈಗ ರಾವಣನ ಮೇಲೆ ಯಾವ ದ್ವೇಷವೂ ಉಳಿದಿಲ್ಲ. ಅವನ ಸಾವಿನೊಂದಿಗೆ ದ್ವೇಷವೂ ಅಳಿದುಹೋಯಿತು. ನಾನು ನೀಡಿದ ಶಿಕ್ಷೆ ಅವನಿಗಲ್ಲ, ಅವನ ಅಪರಾಧಕ್ಕೆ. ನೀನೂ ಕೂಡಾ ಹಾಗೇ ಭಾವಿಸುವುದು ಯುಕ್ತ. ಈಗ ಶ್ವಾಸವಿಲ್ಲದ ಅವನ ಶರೀರಕ್ಕೆ ಔರ್ಧ್ವದೈಹಿಕ ಕಾರ್ಯಗಳನ್ನು ಮಾಡುವುದು ತಮ್ಮನಾಗಿ ನಿನ್ನ ಕರ್ತವ್ಯ. ಈಗ ಅವನು ಯಾರ ಶತ್ರುವೂ ಅಲ್ಲ' ರಾಮನ ಮಾತುಗಳನ್ನು ಒಪ್ಪಿ ವಿಭೀಷಣನು ರಾವಣನ ಅಂತ್ಯಕಾರ್ಯಗಳನ್ನು ಮಾಡಿದ.

 

ಕೊರೋನಾ ಮಹಾಮಾರಿ ಓಡಿಸಲು ಶೃಂಗೇರಿ ಶ್ರೀಗಳಿಂದ ದೇವಿ ಸ್ತೋತ್ರ

 

ಭರತನ ಅಂತರಂಗ

ರಾವಣನನ್ನು ಕೊಂದು ಸೀತೆಯನ್ನು ಪಡೆದ ನಂತರ ರಾಮ ಅಯೋಧ್ಯೆಗೆ ಮರಳಬೇಕಿತ್ತು. ಇತ್ತ ಭರತ, ರಾಮನನ್ನು ಬೀಳ್ಕೊಡುವಾಗ, ಹದಿನಾಲ್ಕು ವರ್ಷಗಳ ವನವಾಸ ಮುಗಿದು ಮರುದಿವಸವೇ ನೀನು ಅಯೋಧ್ಯೆಯಲ್ಲಿರಬೇಕು ಅಣ್ಣ. ಇಲ್ಲವಾದರೆ ನಾನು ಅಗ್ನಿಪ್ರವೇಶ ಮಾಡುತ್ತೇನೆ ಎಂದು ಹಠ ಹಿಡಿದಿದ್ದ. ರಾಮ ಹಾಗೇ ಆಗಲಿ ಎಂದು ಮಾತು ಕೊಟ್ಟಿದ್ದ. ಈಗ ವನವಾಸದ ಅವಧಿ ಮುಗಿದಿತ್ತು. ಅಂದೇ ಅವರು ಅಯೋಧ್ಯೆಯನ್ನು ಸೇರಬೇಕಿತ್ತು. ನಡೆದು ತೆರಳಲು ಸಾಧ್ಯವಿರಲಿಲ್ಲ. ಹಾಗಾಗಿ, ಕುಬೇರನಿಗೆ ಸೇರಿದ್ದ, ರಾವಣನು ಅನುಭೋಗಿಸುತ್ತಿದ್ದ ಪುಷ್ಪಕ ವಿಮಾನವನ್ನು ಏರಿದರು. ಅದು ನೇರವಾಗಿ ಅಯೋಧ್ಯೆಗೆ ಸಮೀಪ ಬಂತು. ರಾಮ ಅದನ್ನು ನಿಲ್ಲಿಸಿ, ಜೊತೆಗಿದ್ದ ಹನುಮಂತನನ್ನು ಕರೆದು ಹೇಳಿದ- ''ವಾಯುವೇಗದಲ್ಲಿ ಹೋಗಿ, ನಾವು ಬರುತ್ತಿದ್ದೇವೆಂಬ ವಿಚಾರವನ್ನು ಅಯೋಧ್ಯೆಯಲ್ಲಿರುವ ಭರತನಿಗೆ ತಿಳಿಸು. ಇಲ್ಲವಾದರೆ ಅವನು ಅಗ್ನಿಪ್ರವೇಶ ಮಾಡಬಹುದು. ಇನ್ನೂ ಒಂದು ಮಾತಿದೆ. ನಾನು ಮರಳಿ ಬರುತ್ತಿರುವುದು ಅವನಿಗೆ ಗೊತ್ತಾದ ಬಳಿಕ, ಅವನ ಮುಖದಲ್ಲಿ ಒಂದೇ ಒಂದು ಗೆರೆ ಚಿಂತೆ ಕಾಣಿಸಿದರೂ ನನಗೆ ಬಂದು ಹೇಳು, ನಾನು ಅಲ್ಲಿಗೆ ಹೋಗುವುದಿಲ್ಲ. ರಾಜ್ಯವನ್ನು ಅವನೇ ಆಳಲಿ'' ಎಂದ. ಅಂದರೆ, ತಮ್ಮ ಭರತನಿಗೆ ಅಷ್ಟು ವರ್ಷಗಳಲ್ಲಿ ರಾಜ್ಯಾಧಿಕಾರದ ಬಗ್ಗೆ ವ್ಯಾಮೋಹ ಮೂಡಿರಬಹುದು ಎಂಬ ಮನುಷ್ಯ ಸ್ವಭಾವದ ಪರಿಚಯವೂ, ಹಾಗಿದ್ದರೆ ಅವನೇ ಅಳಲಿ- ನಾನು ಮಧ್ಯೆ ಬಂದು ಅವನ ಸುಖ ಕೆಡಿಸುವುದು ಹಿತವಲ್ಲವೆಂಬ ಉದಾತ್ತತೆಯೂ ರಾಮನದಾಗಿತ್ತು.