ನಿನ್ನೆ ನಾವು ಚಾಂದ್ರಮಾನ ಯುಗಾದಿಯನ್ನು ಆಚರಿಸಿಕೊಂಡೆವು. ಇದು ಹೊಸ ವರ್ಷದ ಮೊದಲ ದಿನ. ಆದರೆ ನಮ್ಮ ದೇಶದಲ್ಲೇ, ನಮ್ಮ ರಾಜ್ಯದಲ್ಲಿ ಕೂಡ ಹಲವು ಪ್ರದೇಶಗಳಲ್ಲಿ ನಿನ್ನೆ ಹೊಸ ವರ್ಷವಲ್ಲ. ಬದಲಾಗಿ ಇಂದು ಹೊಸ ವರ್ಷ ಆಚರಣೆ. ಇದನ್ನೇ ವಿಷು ಎನ್ನುತ್ತಾರೆ.

ವಿಷು ಅಥವಾ ತುಳುನಾಡಿನಲ್ಲಿ ಇದನ್ನು ಬಿಸು ಎನ್ನುತ್ತಾರೆ. ಇದು ಸೌರಮಾನ ಪದ್ಧತಿಯ ಮೂಲಕ ಬರುವ ಯುಗಾದಿ. ಚಾಂದ್ರಮಾನ ಯುಗಾದಿಯಂತೆಯೇ ಸೌರಮಾನ ಯುಗಾದಿಯನ್ನು ಕೂಡ ದೇಶದ ನಾನಾ ಕಡೆ ವರ್ಷದ ಮೊದಲ ದಿನವಾಗಿ ಆಚರಿಸುತ್ತಾರೆ. ಸಾಮಾನ್ಯವಾಗಿ ಇವೆರಡೂ ಒಂದೇ ತಿಂಗಳಲ್ಲಿ, ಬೇರೆ ಬೇರೆ ದಿನ ಬರುತ್ತವೆ. ಈ ವರ್ಷ ಚಾಂದ್ರಮಾನ ಯುಗಾದಿಯ ಮರುದಿನವೇ ವಿಷು ಬಂದಿದೆ. ಇದು ಕರಾವಳಿಯ ಮಂದಿಗೆ ಪವಿತ್ರ, ಶುಭ ದಿನ. ಇಂದು ತುಳುವರು ವಿಷು ಕಣಿ ಇಡುತ್ತಾರೆ. ಕೇರಳದವರಿಗೂ ಇದು ಮಹತ್ವದ ಹಬ್ಬ. ತಮಿಳುನಾಡು, ಪಶ್ಚಿಮ ಬಂಗಾಳದಲ್ಲೂ ಇದು ಪವಿತ್ರ ಹಬ್ಬ.

ಯಾಕೆ ಸೌರಮಾನ ಯುಗಾದಿ?
ಈ ದಿನದಿಂದ ಸೂರ್ಯನು ಮೀನ ರಾಶಿಯಿಂದ ಮೇಷ ರಾಶಿಯತ್ತ ಚಲಿಸುವನು. ಜ್ಯೋತಿಷ್ಯ ಹಾಗೂ ಕುಂಡಲಿಯಲ್ಲಿ ಸೂರ್ಯನು ಅತ್ಯಂತ ಪ್ರಭಾವಶಾಲಿ ದೇವ ಎಂದು ಪರಿಗಣಿಸಲಾಗುವುದು. ಸೂರ್ಯನು ಒಂದು ಮನೆಯಿಂದ ಇನ್ನೊಂದು ಮನೆಗೆ ಚಲಿಸುವುದರಿಂದ ದ್ವಾದಶ ರಾಶಿಯ ಮೇಲೆ ಆಳವಾದ ಪ್ರಭಾವ. ದ್ವಾದಶ ರಾಶಿಯ ಎಲ್ಲಾ ಮನೆಯಲ್ಲಿಯೂ ಸಂಚಾರವನ್ನು ಪೂರ್ಣಗೊಳಿಸಲು ಸೂರ್ಯನಿಗೆ ಒಂದು ವರ್ಷ ಕಾಲ ಬೇಕಾಗುವುದು. ವರ್ಷದ ಆರಂಭದಲ್ಲಿ ಸೂರ್ಯನು ಮೇಷ ರಾಶಿಯಿಂದಲೇ ಸಂಚಾರವನ್ನು ಪ್ರಾರಂಭಿಸುವನು. ಪ್ರತಿಯೊಂದು ರಾಶಿಯಲ್ಲಿಯೂ ಸೂರ್ಯನು ಸುಮಾರು 30 ದಿನಗಳ ಕಾಲ ನಿಲ್ಲುವನು. ನಂತರ ಇನ್ನೊಂದು ಮನೆಗೆ ಸಂಚಾರವನ್ನು ಮುಂದುವರಿಸುವನು. ಈ ಪ್ರಾರಂಭದಿಂದ ಸೌರಮಾನ ಯುಗಾದಿ ಅಥವಾ ಸೌರಮಾನದ ಹೊಸ ವರ್ಷದ ಆರಂಭ ಎಂದು ಪರಿಗಣಿಸಲಾಗುವುದು.

ಸೂರ್ಯನು ಹೆಮ್ಮೆ, ಬೆಳಕು, ಶಾಖ, ಉಷ್ಣತೆ, ಗೌರವವನ್ನು ಸಂಕೇತಿಸುವನು. ಸೂರ್ಯನ ಪ್ರಭಾವ ಉತ್ತಮವಾಗಿದ್ದರೆ ವ್ಯಕ್ತಿ ಈ ಎಲ್ಲಾ ವಿಷಯದಲ್ಲೂ ಧನಾತ್ಮಕ ಫಲವನ್ನು ಪಡೆದುಕೊಳ್ಳುವನು. ಸೌರಮಾನ ಯುಗಾದಿಯಂದು ಸಂಕ್ರಾಂತಿಯ ಸಮಯವು ಅತ್ಯಂತ ಪವಿತ್ರವಾದ ಸಮಯ ಎಂದು ಪರಿಗಣಿಸಲಾಗುವುದು. ಸಂಕ್ರಾಂತಿಯ ಸಮಯಕ್ಕಿಂತ ಮೊದಲು ಹತ್ತು ನಿಮಿಷಗಳು ಹಾಗೂ ಸಂಕ್ರಾಂತಿ ಸಮಯದ ನಂತರದ 10 ನಿಮಿಷಗಳು ಅತ್ಯಂತ ಪವಿತ್ರ ಹಾಗೂ ಶ್ರೇಷ್ಠವಾದ ಸಮಯ. ಈ ವಿಶೇಷ ಸಮಯದಲ್ಲಿ ಜನರು ಕೋರಿಕೊಂಡ ಪ್ರಾರ್ಥನೆ ಹಾಗೂ ಅಭಿಲಾಷೆಗಳು ಸುಲಭವಾಗಿ ನೆರವೇರುವುದು.

ತಮ್ಮ ಹುಟ್ಟಿನ ಮೂಲ ಆದಿಶಕ್ತಿ ಎಂದು ತಿಳಿದಾಗ ಮಧುಕೈಟಭರು ಮಾಡುವುದೇನು..? ...

ಆಚರಣೆ ಹೇಗೆ?
ವಿಷುವಿನಂದು ತುಳುನಾಡಿನ ಜನತೆ ಬಹುಬೇಗ ಎದ್ದು. ಮಿಂದು, ದೇವರಿಗೆ ಪೂಜೆ ಸಲ್ಲಿಸುತ್ತಾರೆ. ತಾವು ಬೆಳೆದ ಎಲ್ಲ ತರಕಾರಿ ಹೂವು ಹಣ್ಣುಗಳನ್ನು ದೇವರ ಮುಂದಿಟ್ಟು, ಒಂದು ಕನ್ನಡಿಯನ್ನಿಟ್ಟು, ದೀಪವನ್ನು ಉರಿಸಿಡುತ್ತಾರೆ. ಇದನ್ನು ಹಿಂದಿನ ದಿನ ಸಂಜೆಯೇ ಮಾಡುತ್ತಾರೆ. ಬೆಳಗ್ಗೆ ಎದ್ದು ಮೊದಲಾಗಿ ಇದನ್ನೇ ನೋಡುತ್ತಾರೆ. ಇದನ್ನೇ ವಿಷು ಕಣಿ ಎನ್ನುವುದು. ವರ್ಷದ ಮೊದಲ ದಿನ ಈ ಕಣಿಯನ್ನು ನೋಡುವುದು ಪ್ರಯೋಜನದಾಯಕ, ಲಾಭದಾಯಕ ಎಂಬ ನಂಬಿಕೆ.

ಕೇರಳದಲ್ಲಿ ಕೂಡ ಹಬ್ಬದ ಹಿಂದಿನ ದಿನ ರಾತ್ರಿ, ಕುಟುಂಬದ ಹಿರಿಯ ಮಹಿಳೆಯೊಬ್ಬರು ಪೂಜಾ ಕೊಠಡಿ ಅಥವಾ ದೇವರ ಕೋಣೆಯಲ್ಲಿ ವಿಷು ಕಣಿಯನ್ನು ದೇವರ ಮೂರ್ತಿಯ ಮುಂದೆ ಇಡುವರು. ವಿಷು ಕಣಿಯು ತುಂಬಾ ಅದೃಷ್ಟ ಹಾಗೂ ಸಮೃದ್ಧಿಯ ಸಂಕೇತ ಆಗಿದೆ. ಕಣಿಯನ್ನು ಮೊದಲು ನೋಡಿದರೆ ಆಗ ಹೊಸ ವರ್ಷದಲ್ಲಿ ಸಂಪೂರ್ಣವಾಗಿ ಸಮೃದ್ಧಿ ಸಿಗುವುದು ಎಂದು ಭಕ್ತರು ನಂಬುವರು. ಕಣಿಯಲ್ಲಿ ತೆಂಗಿನಕಾಯಿ, ವೀಳ್ಯದೆಲೆ, ಅಡಕೆ, ಹಳದಿ ಕಣಿ ಕನ್ನ ಹೂ, ಕಮ್ಮಶಿ, ಕಾಡಿಗೆ, ಅಕ್ಕಿ, ಲಿಂಬೆ, ಬಂಗಾರ ಬಣ್ಣದ ಸೌತೆಕಾಯಿ, ಹಲಸಿನ ಹಣ್ಣು, ಒಂದು ಕನ್ನಡಿ, ಧಾರ್ಮಿಕ ಪುಸ್ತಕ, ಹತ್ತಿಯ ಧೋತಿ ಮತ್ತು ನಾಣ್ಯಗಳು ಹಾಗೂ ನೋಟುಗಳು ಇರುವುದು. ಈ ಎಲ್ಲಾ ವಸ್ತುಗಳನ್ನು ಅಗಲವಾದ ಒಂದು ಪಾತ್ರೆಯಲ್ಲಿ ಹಾಕಲಾಗುತ್ತದೆ. ಇದನ್ನು ಮಲಯಾಳದಲ್ಲಿ "ಉರುಳಿ" ಎಂದು ಕರೆಯಲಾಗುತ್ತದೆ. ಗಂಟೆಯ ಆಕಾರದಲ್ಲಿ ಇರುವಂತಹ ಲೋಹದ ದೀಪವನ್ನು "ನಿಲವಿಲಕ್ಕು" ಎಂದು ಕರೆಯುವರು. ಸಂಪ್ರದಾಯದ ಪ್ರಕಾರ ಮನೆಯ ಪ್ರತಿಯೊಬ್ಬ ಸದಸ್ಯನು ಬೆಳಗ್ಗೆ ಬೇಗ ಎದ್ದು, ಕಣ್ಣು ಮುಚ್ಚಿಕೊಂಡು ಮನೆಯ ದೇವರ ಕೋಣೆ ಬಳಿಗೆ ಹೋಗಿ ಅಲ್ಲಿ ಕಣಿಯನ್ನು ಮೊದಲು ನೋಡಬೇಕು. ಹೀಗೆ ಮಾಡುವ ಪರಿಣಾಮ ವರ್ಷವಿಡಿ ಅವರಿಗೆ ಒಳ್ಳೆಯ ಅದೃಷ್ಟ ಮತ್ತು ಸಮೃದ್ಧಿ ಸಿಗುವುದು. ಇದರಿಂದಾಗಿ ಕಣಿಯನ್ನು ತುಂಬಾ ಎಚ್ಚರಿಕೆಯಿಂದ ಇಡಲಾಗುತ್ತದೆ ಮತ್ತು ಧನಾತ್ಮಕತೆ ಉಂಟಾಗುವಂತೆ ಇದನ್ನು ರಚಿಸಲಾಗುತ್ತದೆ.

ಈ ವರ್ಷ ಮಳೆ, ಬೆಳೆ ಹೇಗೆ? ಕೊರೋನಾಕ್ಕೆ ಅಂತ್ಯವೆ?... ಸೋಮಯಾಜಿ ಪಂಚಾಂಗ ಶ್ರವಣ ...

ಉತ್ತರ ಭಾರತದಲ್ಲಿ
ಉತ್ತರ ಭಾರತದಲ್ಲಿ ಜನರು ಸೌರಮಾನ ಯುಗಾದಿಯನ್ನು ಹೊಸ ವರ್ಷ ಎಂದು ಪರಿಗಣಿಸುವರು. ಇದನ್ನು ಮೇಷ ಸಂಕ್ರಾಂತಿ, ಹೊಸ ವರ್ಷ ಎಂದು ಸಹ ಕರೆಯಲಾಗುವುದು. ಓರಿಸ್ಸಾದಲ್ಲಿ ಈ ವಿಶೇಷ ದಿನವನ್ನು ಸಂಕ್ರಾಂತಿಯ ದಿನವೆಂದು ಆಚರಿಸುವರು. ತಮಿಳುನಾಡಿನವರು ಈ ಹಬ್ಬವನ್ನು ಪುಟ್ಟಂಡು ಹಬ್ಬ ಎಂದು ಕರೆಯಲಾಗುವುದು. ಅಸ್ಸಾಂನಲ್ಲಿ ಈ ಹಬ್ಬವನ್ನು ಬಿಹು ಹಬ್ಬವೆಂದು ಆಚರಿಸುವರು. ಬಂಗಾಳದ ಜನರು ಈ ವಿಶೇಷ ದಿನವನ್ನು ಮಧ್ಯರಾತ್ರಿಯ ನಡುವೆ ಆಚರಣೆಗೆ ಬರುವುದು. ಇದನ್ನು ಜನರು ನಾಬಾ ಬಾರ್ಷಾ ಅಥವಾ ಪೊಹೆಲಾ ಬೋಯಿಶಾಕ್ ಎಂದು ಕರೆಯಲಾಗುವುದು. ಪಂಜಾಬಿನ ಜನರು ಈ ಹಬ್ಬವನ್ನು ವೈಶಾಖಿ ಎನ್ನುವ ಹೆಸರಿನಲ್ಲಿ ಆಚರಿಸುವರು.

ಪ್ಲವ ಸಂವತ್ಸರ ಆರಂಭ: ದ್ವಾದಶ ರಾಶಿಗಳ ಫಲಾಫಲಗಳು ಹೀಗಿವೆ ...

ಉತ್ತರದಲ್ಲಿ ಗಂಗಾ, ಯಮುನಾ ಅಥವಾ ಪವಿತ್ರ ನೀರಿನಲ್ಲಿ ಸ್ನಾನವನ್ನು ಮಾಡುವರು. ನಂತರ ಭಗವಾನ್ ಸೂರ್ಯದೇವನನ್ನು ಪೂಜಿಸಲಾಗುವುದು. ಸೂರ್ಯನು ಈ ದಿನ ವಿಶೇಷ ಆಶೀರ್ವಾದ ನೀಡುವನು. ಹಾಗಾಗಿ ಜನರು ಸೂರ್ಯೋದಯಕ್ಕೆ ಮುಂಚೆಯೇ ಎದ್ದು, ಸ್ನಾನ ಮಾಡಿ, ಸೂರ್ಯ ದೇವನನ್ನು ಪೂಜೆ ಮಾಡಬೇಕು. ಇದರಿಂದ ಸೂರ್ಯ ದೇವನ ಆಶೀರ್ವಾದ ಪಡೆಯಬಹುದು ಎಂದು ಹೇಳಲಾಗುವುದು. ಉತ್ತರ ಭಾರತದಲ್ಲಿ ಆಮ್ ಪಾನೀಯವನ್ನು ಈ ವಿಶೇಷ ದಿನದಂದು ಕುಡಿಯುವರು. ಇದನ್ನು ದೇವರ ನೈವೇದ್ಯಕ್ಕೆ ಇಡುವರು. ನಂತರ ಪೂಜೆಯ ನಂತರ ಪ್ರಸಾದವನ್ನಾಗಿ ವಿತರಿಸಲಾಗುವುದು. ಈ ದಿನದಂದು ಸಾತ್ವಿಕ ಆಹಾರವನ್ನು ಸೇವಿಸುವುದರ ಜೊತೆಗೆ ದಾನವನ್ನು ಮಾಡುವರು.

"