Asianet Suvarna News Asianet Suvarna News

ಮನಸೂರೆಗೊಂಡ ಹುತ್ತರಿ ಕೋಲಾಟ: ಡ್ಯಾನ್ಸ್‌ ಮಾಡಿ ಸಂಭ್ರಮಿಸಿದ ಕೊಡಗಿನ ಮಂದಿ..!

ಕೊಡಗು ಜಿಲ್ಲೆಯ ಸುಗ್ಗಿ ಹಬ್ಬವಾಗಿರುವ ಹುತ್ತರಿಯಲ್ಲಿ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಕೊಳ್ಳುವ ಜನರು ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ಆವರಣ ಸೇರಿದಂತೆ ನಾಡುಮಂದ್ ಊರು ಮಂದ್‍ಗಳಲ್ಲಿ ಒಂದೆಡೆ ಸೇರಿ ಜಾನಪದ ಕಲೆಗಳನ್ನು ಸಾದರಪಡಿಸುವ ಮೂಲಕ ಸಂಭ್ರಮ ಆಚರಿಸಿದರು.

Huttari Kolata Festival Celebrated in Kodagu grg
Author
First Published Dec 8, 2022, 11:13 PM IST

ವರದಿ: ರವಿ.ಎಸ್ ಹಳ್ಳಿ, ಏಷ್ಯಾನೆಟ್ ಸುವರ್ಣ ನ್ಯೂಸ್, ಕೊಡಗು

ಕೊಡಗು(ಡಿ.08): ಕೊಡಗು ಜಿಲ್ಲೆ ಪ್ರಾಕೃತಿಕ ಸೌಂದರ್ಯದ ಹೂರಣ ಅಷ್ಟೇ ಅಲ್ಲ, ವಿವಿಧ ಆಚಾರ ವಿಚಾರ ಸಂಸ್ಕೃತಿಗಳ ಸಂಗಮ. ಪ್ರಕೃತಿಯನ್ನೇ ದೈವವೆಂದು ಪೂಜಿಸುವ ಇಲ್ಲಿ ನಡೆಯುವ ಹಬ್ಬ ಹರಿದಿನಗಳು ಕೂಡ ವಿಶೇಷವೇ. ಜಿಲ್ಲೆಯ ಸುಗ್ಗಿ ಹಬ್ಬವಾಗಿರುವ ಹುತ್ತರಿಯಲ್ಲಿ ಧಾನ್ಯಲಕ್ಷ್ಮಿಯನ್ನು ಮನೆ ತುಂಬಿಕೊಳ್ಳುವ ಜನರು ಜಿಲ್ಲಾ ಕೇಂದ್ರ ಮಡಿಕೇರಿಯ ಕೋಟೆ ಆವರಣ ಸೇರಿದಂತೆ ನಾಡುಮಂದ್ ಊರು ಮಂದ್‍ಗಳಲ್ಲಿ ಒಂದೆಡೆ ಸೇರಿ ಜಾನಪದ ಕಲೆಗಳನ್ನು ಸಾದರಪಡಿಸುವ ಮೂಲಕ ಸಂಭ್ರಮ ಆಚರಿಸಿದರು.

ಬುಧವಾರ ರಾತ್ರಿ ಪಾಡಿ ಇಗ್ಗುತ್ತಪ್ಪ ದೇವಾಲಯದಲ್ಲಿ ನೆರೆಕಟ್ಟೆ ಕದಿರು ಕೊಯ್ಯುವ ಮೂಲಕ ಸುಗ್ಗಿ ಹಬ್ಬ ಹುತ್ತರಿಗೆ ಜಿಲ್ಲೆಯಲ್ಲಿ ಚಾಲನೆ ನೀಡಲಾಗಿತ್ತು. ಆ ಬಳಿಕ ಜಿಲ್ಲೆಯ ತಮ್ಮ ಗ್ರಾಮಗಳ ಗದ್ದೆಗಳಲ್ಲಿ ಕದಿರು ಕೊಯ್ದಿದ್ದ ಜನರು ಶ್ರದ್ಧಾಭಕ್ತಿಯಿಂದ ಪೂಜೆ ಸಲ್ಲಿಸಿ ಧಾನ್ಯ ಲಕ್ಷ್ಮಿಯನ್ನು ಮನೆ ತುಂಬಿಸಿಕೊಂಡಿದ್ದರು. ಗುರುವಾರ ಜಿಲ್ಲೆಯಲ್ಲಿ ಹಬ್ಬದ ಸಂಭ್ರಮ ಮನೆ ಮಾಡಿತ್ತು. ತಮ್ಮ ಮನೆಗಳಲ್ಲಿ ಹೊಸ ಅಕ್ಕಿಯಿಂದ ಮಾಡಿದ ಪಾಯಸ ಸೇರಿದಂತೆ ವಿವಿಧ ಅಡುಗೆ ಮಾಡಿ ಹಬ್ಬದ ಊಟವನ್ನು ಸವಿದ ಜನರು ಮಡಿಕೇರಿಯ ಕೋಟೆ ಆವರಣ ಸೇರಿದಂತೆ ತಮ್ಮ ತಮ್ಮ ಊರುಗಳ ಮಂದ್‍ಗಳಲ್ಲಿ ಸೇರಿ ಜಿಲೆಯ ಜಾನಪದ ನೃತ್ಯಗಳನ್ನು ಪ್ರದರ್ಶಿ ಹಾಡಿ ಕುಣಿದು ಸಂಭ್ರಮ ಪಟ್ಟರು. ಕೊಡವ ಓಲಗದೊಂದಿಗೆ, ಆಟ್ ಪಾಟ್ ಕಾರ್ಯಕ್ರಮಗಳು ನಡೆದವು. ಉಮ್ಮತ್ತಾಟ್, ಬೊಳಕ್ ಆಟ್ ಚವರಿಯಾಟ್, ಕತ್ತಿಯಾಟ್ ಕೋಲ್‍ಆಟ್ ಸೇರಿದಂತೆ ವಿವಿಧ ಜಾನಪದ ನೃತ್ಯಗಳು ನೆರೆದಿದ್ದವರ ಮನಸೂರೆಗೊಂಡವು. ಕೊಡವ ಮಹಿಳೆಯರು ಸಾಂಪ್ರಾದಾಯಿಕ ಉಡುಗೆತೊಟ್ಟು ಕಾವೇರಮ್ಮೆ ತಾಯಿ ಎಂಬ ಗೀತೆಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು. ಇನ್ನು ಪುರುಷರು ಕೂಡ ಕೊಡವ ಸಂಪ್ರದಾಯದ ಉಡುಗೆತೊಟ್ಟು ಮಾಡಿದ ಕೋಲಾಟ್ ಎಲ್ಲರ ಮನತಣಿಸಿತು.

ದಶಕಗಳ ಬಳಿಕ ಕೋಟೆನಾಡಿನ ಅಧಿದೇವತೆಗೆ ಬಂಗಾರದ ಮುಖ ಪದ್ಮ, ಸಂಭ್ರಮವನ್ನು ಕಣ್ತುಂಬಿಕೊಂಡ‌ ಸಾವಿರಾರು ಭಕ್ತರು

ಹಬ್ಬ ಮುಗಿದ ಬಳಿಕ ಊರು ಮತ್ತು ನಾಡ ಮಂದ್‍ಗಳಲ್ಲಿ ಕೊಡವ ಜಾನಪದ ನೃತ್ಯಗಳನ್ನು ಮಾಡುವುದು ವಿಶೇಷ. ಜೊತೆಗೆ ಅಂದು ಕೊಡಗನ್ನು ಆಳುತ್ತಿದ್ದ ಹಾಲೇರಿ ರಾಜವಂಸ್ಥರು ಹಬ್ಬದ ಬಳಿಕ ಕೋಟೆ ಆವರಣದಲ್ಲಿ ಸಾಂಪ್ರದಾಯಿಕ ಕಾರ್ಯಕ್ರಮಗಳನ್ನು ಮಾಡಿಸಿ ಎಲ್ಲರೂ ಒಂದೆಡೆ ಕಲೆತು ಸಂಭ್ರಮಿಸುವುದಕ್ಕೆ ಅವಕಾಶ ಮಾಡಿಕೊಡುತ್ತಿದ್ದರು. ಸಾಂಪ್ರದಾಯಿಕ ನೃತ್ಯಗಳನ್ನು ಪ್ರದರ್ಶಿಸುವವರಿಗೆ ರಾಜವಂಶಸ್ಥರು ವಿಶೇಷ ಆತಿಥ್ಯ ನೀಡಿ ಗೌರವಿಸುತ್ತಿದ್ದರು. ಆದರೆ ಬ್ರಿಟೀಷರು ತಮ್ಮ ಆಳ್ವಿಕೆ ಸಂದರ್ಭದಲ್ಲಿ ಕೋಟೆಯಿಂದ ರಾಜರ ಗದ್ದುಗೆ ಬಳಿಗೆ ಅದನ್ನು ಸ್ಥಳಾಂತರಿಸಿದ್ದರು. ಆದರೆ ಇತ್ತೀಚೆಗೆ ಮತ್ತೆ ಕೋಟೆಯ ಆವರಣದಲ್ಲಿಯೇ ತಮ್ಮ ಕಲೆಗಳನ್ನು ಸಾದರಪಡಿಸಲು ಅವಕಾಶ ಮಾಡಿಕೊಡಲಾಗುತ್ತಿದೆ. ಹೀಗಾಗಿ ಹಿಂದಿನಂತೆಯೇ ಈಗಲೂ ಪಾಂಡೆರ ಕುಟುಂಬಸ್ಥರಿಂದ ಕೋಟೆ ಆವರಣದಲ್ಲಿ ವಿಶೇಷ ಸಾಂಸ್ಕøತಿಕ ಕಾರ್ಯಕ್ರಮಗಳು ಜರುಗಿದವು. ಈ ಸಂದರ್ಭ ಕೋಟೆ ವೀಕ್ಷಣೆಗೆ ಆಗಮಿಸಿದ್ದ ಪ್ರವಾಸಿಗರು ಕೂಡ ಕೊಡಗಿನ ವಿಶೇಷ ಹುತ್ತರಿ ಹಬ್ಬದ ಕೋಲಾಟ್ ಸಂಭ್ರಮವನ್ನು ಕಣ್ತುಂಬಿಕೊಂಡು ಸಂತೋಷ ಪಟ್ಟರು. ಸಾಂಸ್ಕøತಿಕ ಕಾರ್ಯಕ್ರಮಗಳ ಬಳಿಕ ಕೊನೆಯಲ್ಲಿ ಕೊಡವ ಓಲಗ ವಾದ್ಯಕ್ಕೆ ಮಹಿಳೆಯರು, ಮಕ್ಕಳು ಮತ್ತು ಪುರುಷರೆನ್ನದೆ ಎಲ್ಲರೂ ಸಾಮೂಹಿಕವಾಗಿ ನೃತ್ಯ ಮಾಡಿ ಸಂಭ್ರಮಿಸಿದರು.

ಒಟ್ಟಿನಲ್ಲಿ ಹುತ್ತರಿ ಹಬ್ಬದ ಅಂಗವಾಗಿ ಮಡಿಕೇರಿಯ ಐತಿಹಾಡಿಕ ಕೋಟೆಯ ಆವರಣದಲ್ಲಿ ನಡೆದ ಕೊಡವ ಸಾಂಪ್ರದಾಯಿಕ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಕೊಡಗು ಅಪರ ಜಿಲ್ಲಾಧಿಕಾರಿ ಡಾ. ನಂಜುಂಡೇಗೌಡ ದೀಪ ಬೆಳಗಿಸುವ ಮೂಲಕ ಚಾಲನೆ ನೀಡಿದರು.
 

Follow Us:
Download App:
  • android
  • ios