Asianet Suvarna News Asianet Suvarna News

4 ಲಕ್ಷ ಭಕ್ತಸಾಗರದ ಮಧ್ಯೆ ಶ್ರೀ ಹುಲಿಗೆಮ್ಮ ದೇವಿ ಮಹಾ ರಥೋತ್ಸವ!

ಇಲ್ಲಿನ ಪ್ರಸಿದ್ಧ ಶಕ್ತಿದೇವತೆ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ ಶುಕ್ರವಾರ 4ರಿಂದ 5 ಲಕ್ಷ ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ನಡೆಯಿತು.

Huligemma Devi Maha Rathotsava celebration more than 4 lakh devotees at koppal rav
Author
First Published Jun 1, 2024, 7:12 AM IST | Last Updated Jun 1, 2024, 7:12 AM IST

ಮುನಿರಾಬಾದ್‌ (ಜೂ.1): ಇಲ್ಲಿನ ಪ್ರಸಿದ್ಧ ಶಕ್ತಿದೇವತೆ ಶ್ರೀ ಹುಲಿಗೆಮ್ಮ ದೇವಿಯ ಮಹಾರಥೋತ್ಸವ ಶುಕ್ರವಾರ 4ರಿಂದ 5 ಲಕ್ಷ ಭಕ್ತರ ಹರ್ಷೋದ್ಗಾರದ ನಡುವೆ ವಿಜೃಂಭಣೆಯಿಂದ ನಡೆಯಿತು. ದೇವಸ್ಥಾನದ ಅರ್ಚಕರು ಶ್ರೀ ಹುಲಿಗೆಮ್ಮ ದೇವಿಯ ಉತ್ಸವ ಮೂರ್ತಿಯನ್ನು ಪಲ್ಲಕ್ಕಿಯಲ್ಲಿ ಕೂರಿಸಿ, ದೇವಸ್ಥಾನಕ್ಕೆ 3 ಸುತ್ತು ಪ್ರದಕ್ಷಿಣೆ ಹಾಕಿಸಿದರು. ಆನಂತರ ಅಮ್ಮನವರ ಉತ್ಸವ ಮೂರ್ತಿಯನ್ನು ರಥದಲ್ಲಿ ಕೂರಿಸುತ್ತಿದ್ದಂತೆ ಭಕ್ತರ ಹರ್ಷೋದ್ಗಾರ ಮುಗಿಲು ಮುಟ್ಟಿತು.

ಹುಲಿಗೆಮ್ಮ ದೇವಿಯ ಉತ್ಸವ ಮೂರ್ತಿ ಹೊತ್ತ ರಥ ದೇವಸ್ಥಾನದಿಂದ ಮುದ್ದಮ್ಮನ ಕಟ್ಟೆಯ ವರೆಗೆ ಸಾಗಿ ಬಳಿಕ ದೇವಸ್ಥಾನಕ್ಕೆ ಮರಳಿತು. ರಥೋತ್ಸವ ಸಂದರ್ಭದಲ್ಲಿ ನೆರೆದಿದ್ದ ಭಕ್ತರು ಬಾಳೆಹಣ್ಣು ಹಾಗೂ ಉತ್ತತ್ತಿಯನ್ನು ರಥದ ಮೇಲೆ ಎಸೆದು ಭಕ್ತಿ ಸಮರ್ಪಿಸಿದರು.

ಕೊಪ್ಪಳ: 65 ಕೋಟಿ ಇದ್ರೂ ಹುಲಿಗೆಮ್ಮನ ಭಕ್ತರಿಗೆ ಬಯಲೇ ಶೌಚಾಲಯ..!

ಪ್ರಾಣಿ ಬಲಿ ನಿಷೇಧ: \Bಕೊಪ್ಪಳ ಜಿಲ್ಲಾಡಳಿತವು ಹುಲಿಗೆಮ್ಮ ದೇವಿ ಜಾತ್ರೆಯ ಪ್ರಯುಕ್ತ ದೇವಸ್ಥಾನ ಹಾಗೂ ಸುತ್ತಮುತ್ತಲಿನ ಪ್ರದೇಶದಲ್ಲಿ ಪ್ರಾಣಿ ಬಲಿಯನ್ನು ಸಂಪೂರ್ಣವಾಗಿ ನಿಷೇಧಿಸಿತ್ತು. ಅದನ್ನು ಉಲ್ಲಂಘಿಸಿದವರ ವಿರುದ್ಧ ಉಗ್ರ ಕ್ರಮ ಕೈಗೊಳ್ಳುವುದಾಗಿ ಕೊಪ್ಪಳ ಜಿಲ್ಲಾಡಳಿತ ಎಚ್ಚರಿಕೆ ನೀಡಿತ್ತು.

ಪ್ರಾಣಿ ದಯಾ ಸಂಘದವರು ಹುಲಿಗೆಮ್ಮ ಜಾತ್ರೆಯಲ್ಲಿ ಪ್ರಾಣಿ ಬಲಿಯನ್ನು ಮಾಡಬಾರದೆಂದು ದೇವಸ್ಥಾನಕ್ಕೆ ಮನವಿ ಮಾಡಿದ್ದರು. ಅಲ್ಲದೆ ಹುಲಿಗಿ ಗ್ರಾಮ ಪ್ರಮುಖ ಬೀದಿಗಳಲ್ಲಿ ಮೈಕ್‌ ಮೂಲಕ ಘೋಷಣೆ ಮಾಡುತ್ತಿದ್ದರು. ಪ್ರಾಣಿ ಬಲಿಯನ್ನು ತಪ್ಪಿಸುವ ನಿಟ್ಟಿನಲ್ಲಿ ಪೊಲೀಸ್‌ ಇಲಾಖೆಯಿಂದ ಶಿವಪುರ ರಸ್ತೆ, ಹಿಟ್ನಾಳ ರಸ್ತೆ, ಮುನಿರಾಬಾದ್‌ ರಸ್ತೆಯಲ್ಲಿ ಚೆಕ್‌ಪೋಸ್ಟ್‌ಗಳನ್ನು ನಿರ್ಮಿಸಿದ್ದರು

ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮವು ಹುಲಿಗೆಮ್ಮ ದೇವಿ ಜಾತ್ರೆ ನಿಮಿತ್ತ ದೇವಸ್ಥಾನಕ್ಕೆ ಆಗಮಿಸುವ ಭಕ್ತರ ಅನುಕೂಲಕ್ಕಾಗಿ ಕೊಪ್ಪಳ, ಗಂಗಾವತಿ ಹಾಗೂ ಹೊಸಪೇಟೆ ನಗರಗಳಿಂದ ಹುಲಗಿ ಗ್ರಾಮಕ್ಕೆ ವಿಶೇಷ ಬಸ್‌ ವ್ಯವಸ್ಥೆ ಕಲ್ಪಿಸಿತ್ತು.

ಬಂದೋಬಸ್ತ್:  4 ದಿನ ನಡೆಯುವ ಜಾತ್ರೆ ಮಹೋತ್ಸವದಲ್ಲಿ ಶಾಂತಿ ಹಾಗೂ ಸುವ್ಯವಸ್ಥೆ ಕಾಪಾಡುವ ನಿಟ್ಟಿನಲ್ಲಿ ಹಾಗೂ ಪ್ರಾಣಿ ಬಲಿಯನ್ನು ತಡೆಯಲು 250 ಪೊಲೀಸರನ್ನು ನೇಮಿಸಲಾಗಿದೆ. 200ಕ್ಕೂ ಅಧಿಕ ಹೋಮ್ ಗಾರ್ಡ್‌ಗಳನ್ನು ರ್ಡಗಳನ್ನು ಸಹ ನೇಮಿಸಲಾಗಿದೆ.

 

ಆಗಿ ಹುಣ್ಣಿಮೆ: ಕೊಪ್ಪಳದ ಹುಲಿಗಿ ದೇಗುಲಕ್ಕೆ 1 ಲಕ್ಷ ಭಕ್ತರು..!

ಕೊಪ್ಪಳ ಜಿಲ್ಲಾಧಿಕಾರಿ ನಲಿನ್ ಅತುಲ್‌ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ಯಶೋದಾ ವಂಟಿಗೋಡಿ ಅವರು ಮಧ್ಯಾಹ್ನ ಹುಲಿಗೆಮ್ಮ ದೇವಸ್ಥಾನಕ್ಕೆ ಭೇಟಿ ನೀಡಿ, ಶ್ರೀ ಹುಲಿಗೆಮ್ಮ ದೇವಿ ದರ್ಶನ ಪಡೆದರು. ಆನಂತರ ಜಾತ್ರೆಗಾಗಿ ಕೈಗೊಂಡ ವ್ಯವಸ್ಥೆ ಪರಿಶೀಲಿಸಿದರು. ಜಿಲ್ಲಾಧಿಕಾರಿ ಹಾಗೂ ಪೊಲೀಸ್‌ ವರಿಷ್ಠಾಧಿಕಾರಿ ನದಿ ದಂಡೆಗೆ ಹೋಗಿ ನೀರಿನ ಪರಿಸ್ಥಿತಿ ಹಾಗೂ ಸ್ವಚ್ಛತೆ ಬಗ್ಗೆ ಮಾಹಿತಿ ಪಡೆದರು. ದೇವಸ್ಥಾನ ಕಾರ್ಯನಿರ್ವಹಣಾಧಿಕಾರಿ ಅರವಿಂದ ಸುತಗುಂಡಿ ಉಪಸ್ಥಿತರಿದ್ದರು.

Latest Videos
Follow Us:
Download App:
  • android
  • ios