ಮನಃಶಾಂತಿಗಾಗಿ ಮಾಡಿಕೊಳ್ಳಿ Sound Bath Therapy
ಸೌಂಡ್ ಬಾತ್ ಥೆರಪಿ ಒಂದು ಆಧ್ಯಾತ್ಮಿಕ ಅನುಭವವಾಗಿದ್ದು, ಸ್ವತಃ ಪ್ರಯತ್ನಿಸಿ ಅದರ ಅಪಾರ ಲಾಭಗಳನ್ನು ಅನುಭವಿಸಿ.
ವಿಂಡ್ ಚೈಮ್ ಸದ್ದು ಕೇಳಿದಾಗ ಮನಸ್ಸಲ್ಲೊಂದು ಶಾಂತತೆ ಹುಟ್ಟುತ್ತದೆ. ಮಗುವಿನ ನಗು ಸಂತಸದ ಬುಗ್ಗೆಯುಕ್ಕಿಸುತ್ತದೆ. ಸಂಗೀತ ಉಪಕರಣಗಳ ಸದ್ದು ಒಂದೊಂದು ರೀತಿಯ ಸದ್ದಿಗೆ ಮನಸ್ಸಲ್ಲಿ ಒಂದೊಂದು ರೀತಿಯ ತರಂಗಗಳೇಳುತ್ತವೆ. ಕೆಲವೊಂದು ಡಲ್ ಇರುವ ಮೂಡನ್ನು ಹುಚ್ಚೆದ್ದು ಕುಣಿವಂತೆ ಮಾಡಿದರೆ ಮತ್ತೆ ಕೆಲವು ಅಳು ತರಿಸುತ್ತವೆ. ನೋವು ಹುಟ್ಟಿಸುತ್ತವೆ. ದೇವಸ್ಥಾನದ ಗಂಟೆ, ಪಕ್ಷಿಗಳ ಕಲರವ, ಪ್ರಾಣಿಗಳ ಕೂಗು, ಮೆಶಿನ್‌ಗಳ ಕರ್ಕಶತೆ- ಹೀಗೆ ಒಂದೊಂದು ಶಬ್ದ ಒಂದೊಂದು ಭಾವತರಂಗವನ್ನು ಬಡಿದೆಬ್ಬಿಸುತ್ತದೆ. ಶಬ್ದ ತರಂಗಗಳು ನಮ್ಮ ಮನಸ್ಸಿನ ಮೇಲೆ ಬೀರುವ ಪರಿಣಾಮ ಅಗಾಧ. ಈ ಶಬ್ದವನ್ನು ಧ್ಯಾನ ಹಾಳು ಮಾಡಲೂ ಬಳಸಬಹುದು. ಶಬ್ದವೇ ಧ್ಯಾನವಾಗುವಂತೆಯೂ ಬಳಸಬಹುದು. ನಾವು ಈಗ ಹೇಳ ಹೊರಟಿರುವ ವಿಷಯವೂ ಹಾಗೆ- ಶಬ್ದದಿಂದಲೇ ಧ್ಯಾನದ ಪರಿಣಾಮ ನೀಡುವಂಥದ್ದು. ಅದೇ ಸೌಂಡ್ ಬಾತ್(sound bath) ಥೆರಪಿ.
ಥೆರಪಿ ಎಂದಾಕ್ಷಣ ಯಾವುದೋ ಪಾರ್ಲರ್‌ಗೆ ಹೋಗಿ ಮಾಡಿಸಿಕೊಳ್ಳಬೇಕಿಲ್ಲ. ಇದನ್ನು ಮನೆಯಲ್ಲಿ ನೀವೇ ಸ್ವತಃ ಮಾಡಿಕೊಳ್ಳಬಹುದು. ಸೌಂಡ್ ಬಾತ್ ಥೆರಪಿ ಎಂದರೆ ಶಬ್ದವನ್ನು ಮನಸ್ಸಿಗೆ ಮುದ ಕೊಡುವಂತೆ ಬಳಸುವುದು. ಧ್ವನಿ ತರಂಗಗಳ ಮೂಲಕ ದೇಹಕ್ಕೆ ಹೊಸ ಚೈತನ್ಯ ನೀಡುವುದು. ಇದೇನು ಇಂದು ನಿನ್ನೆ ಹುಟ್ಟಿಕೊಂಡ ಟ್ರೆಂಡೀ ಥೆರಪಿಯಲ್ಲ. ಇದಕ್ಕೆ ಸಾವಿರಾರು ವರ್ಷಗಳ ಇತಿಹಾಸವಿದೆ. ಹಾಗೆಯೇ ಪ್ರಪಂಚದ ಉದ್ದಗಲದಲ್ಲೂ ಇದನ್ನು ಬಳಸಲಾಗಿದೆ. ದೇಹ ಹಾಗೂ ಮನಸ್ಸನ್ನು ಶುದ್ಧೀಕರಿಸುವ ಆಧ್ಯಾತ್ಮಿಕ ಸಂಗೀತ ಅಥವಾ ಶಬ್ದವೇ ಈ ಸೌಂಡ್ ಬಾತ್ ಥೆರಪಿಯಲ್ಲಿ ಬಳಕೆಯಾಗುವುದು.
ಆಧ್ಯಾತ್ಮಿಕ ಶಬ್ದವು ಸ್ಥಳದಿಂದ ಸ್ಥಳಕ್ಕೆ ಮತ್ತು ಸಂಸ್ಕೃತಿಯಿಂದ ಸಂಸ್ಕೃತಿಗೆ ಬದಲಾಗುತ್ತದೆ. ಇದು ಓಂ ಅನ್ನು ಪಠಿಸುವಷ್ಟು ಸುಲಭವಾಗಿರಬಹುದು, ಇಲ್ಲವೇ ಒಂದು ವಿಷಯದ ಮೇಲೆ ಗಮನವನ್ನು ಸಾಧಿಸಲು ಬೇಕಾದ ದೀರ್ಘ ಗಂಟೆಗಳಷ್ಟು ಸಂಕೀರ್ಣವಾಗಿರಬಹುದು.
ಸೌಂಡ್ ಬಾತ್ ಥೆರಪಿ ಎಂದರೇನು?
ಇದೊಂದು ಆಧ್ಯಾತ್ಮಿಕ ಅನುಭವ(spiritual experience)ವಾಗಿದ್ದು, ಶಬ್ದ ತರಂಗಗಳ ಮೂಲಕ ಮನಸ್ಸನ್ನು ಎಚ್ಚರಿಸುವುದಾಗಿದೆ. ಧ್ಯಾನದ ಸ್ಥಿತಿ ಅನುಭವಿಸುವುದಾಗಿದೆ. ವಿಂಡ್ ಚೈಮ್‌ಗಳು, ಬಟ್ಟಲು, ಮನುಷ್ಯರ ದನಿ ಮುಂತಾದವನ್ನು ಬಳಸಿಕೊಳ್ಳುವುದಾಗಿದೆ. ನೀವು ಕೇಳುವ ಧ್ವನಿ ಮಧುರ ಅಥವಾ ಆಕರ್ಷಕವಾಗಿರಬೇಕಾಗಿಲ್ಲ. ನಿಮ್ಮ ಆಕರ್ಷಣೆಯನ್ನು ಸೆಳೆಯಲು ಹಾಗೂ ನಿಮ್ಮ ಮನಸ್ಸನ್ನು ಮುದಗೊಳಿಸಲು ಸಾಧ್ಯವಾಗುವಂಥದ್ದಾಗಿದ್ದರೆ ಸಾಕು.
ಸಾಮಾನ್ಯವಾಗಿ ಸೌಂಡ್ ಬಾತ್ ಧ್ಯಾನವನ್ನು 20-60 ನಿಮಿಷಗಳ ಕಾಲ ನಡೆಸಲಾಗುತ್ತದೆ. ಈ ಸಂಪೂರ್ಣ ಸೌಂಡ್ ಬಾತ್ ಥೆರಪಿಯ ಹಿಂದಿನ ಮುಖ್ಯ ಉದ್ದೇಶವು ನಿಮ್ಮ ಶಕ್ತಿಯನ್ನು ಸಮತೋಲನಗೊಳಿಸುವುದು ಮತ್ತು ಧನಾತ್ಮಕ ಕಂಪನಗಳಾಗಿ(positive vibrations) ಬದಲಾಯಿಸುವುದು. ಈ ಸಂದರ್ಭದಲ್ಲಿ ನೀವು ಎಲ್ಲ ಅನುಮಾನಗಳು, ನಕಾರಾತ್ಮಕತೆಗಳನ್ನು ಬಿಡುಗಡೆ ಮಾಡಿ, ಶಬ್ದದತ್ತ ಮನಸ್ಸನ್ನು ಕೇಂದ್ರೀಕರಿಸಬೇಕು.
Ugadi 2022 ಯಾವಾಗ? ಶುಭಮುಹೂರ್ತ ಮತ್ತು ಪ್ರಾಮುಖ್ಯತೆ ಏನು?
ಹೀಗೆ ಮಾಡಿ
ನಿಮ್ಮ ಸ್ಥಳವನ್ನು ಸಂಪೂರ್ಣ ಸ್ವಚ್ಛಗೊಳಿಸಿಕೊಳ್ಳಿ. ಬೇಡದ ಎಲ್ಲ ವಸ್ತುಗಳನ್ನು ಎಸೆಯಿರಿ. ನಂತರ ಕೈಲಿ ಚೆನ್ನಾಗಿ ಶಬ್ದ ಬರುವ ಬಟ್ಟಲನ್ನು ಹಿಡಿದು, ಅದರ ಕೋಲಿನಿಂದ ಬಾರಿಸುತ್ತ ಮನೆಯ ಎಲ್ಲೆಡೆ ಶಬ್ದ ತರಂಗಗಳನ್ನು ಸೃಷ್ಟಿಸಿ. ನಂತರ ಆರಾಮದಾಯಕ ಸ್ಥಳವೊಂದರಲ್ಲಿ ಕುಳಿತುಕೊಳ್ಳಿ.
- ವಿವಿಧ ರೀತಿಯ ಬಟ್ಟಲುಗಳನ್ನು ಎದುರಿಗಿಟ್ಟುಕೊಳ್ಳಿ. ಅದನ್ನು ಒಂದು ರೀತಿಯ ರಾಗದಲ್ಲಿ ಬಡಿಯುತ್ತಾ ಹೋಗಿ.
- ಶಾಂತವಾಗಿ ಉಸಿರಾಡಿ ಮತ್ತು ನಿಮ್ಮ ಉದ್ದೇಶಗಳನ್ನು ಹೊರತುಪಡಿಸಿ ಯಾವುದಕ್ಕೂ ಗಮನ ಕೊಡಬೇಡಿ.
- ಮನಸ್ಸಿನಿಂದ ಪ್ರತಿ ಸಂದೇಹ, ಗೊಂದಲ ಮತ್ತು ವ್ಯಾಕುಲತೆಗಳನ್ನು ತೆಗೆದು ಹಾಕಿ.
- ಬಟ್ಟಲುಗಳು ಹೊರಡಿಸುವ ಸದ್ದನ್ನು ಬಿಟ್ಟು ಬೇರೇನರ ಕಡೆಯೂ ಗಮನ ಹೋಗಬಾರದು. ಬಟ್ಟಲ ಧ್ವನಿಯೊಂದಿಗೆ ತೊಡಗಿಸಿಕೊಳ್ಳಲು ಪ್ರಯತ್ನಿಸಿ ಮತ್ತು ಎಲ್ಲ ಸಕಾರಾತ್ಮಕ ಶಕ್ತಿಗಳು ನಿಮ್ಮನ್ನು ಸಶಕ್ತಗೊಳಿಸುತ್ತಿವೆ ಎಂದು ನಂಬಿರಿ.
- ಈ ಧ್ವನಿ ಸ್ನಾನದ ಧ್ಯಾನವು ಅದರ ಅಂತ್ಯವನ್ನು ತಲುಪುತ್ತಿರುವಂತೆ, ಈ ಚೈತನ್ಯವನ್ನು ಅನುಭವಿಸಲು ನಿಮಗೆ ಸಹಾಯ ಮಾಡಿದ ಶಕ್ತಿಗಳಿಗೆ ನಿಮ್ಮ ಕೃತಜ್ಞತೆಯನ್ನು ವ್ಯಕ್ತಪಡಿಸಿ.
- ನಿಮಗಿದು ಕಷ್ಟವೆನಸಿದರೆ ಈ ಧ್ಯಾನದ ಅವಧಿಯಲ್ಲಿ ಡಿಜಿಟಲ್ ಶಬ್ಧಗಳನ್ನು ಬಳಸಬಹುದು. ಹೀಲಿಂಗ್ ಸೌಂಡ್‌ಟ್ರ್ಯಾಕ್ ಹಾಕಿಕೊಂಡು ಅದನ್ನೇ ಕೇಳುತ್ತಾ ಶವಾಸನದಲ್ಲಿ ಮಲಗಬಹುದು.
ವಿದೇಶಕ್ಕೆ ಲಗ್ಗೆ ಇರಿಸಿದ ಮೊದಲ ಭಾರತೀಯ ಕ್ಯಾಲೆಂಡರ್..!
ಲಾಭಗಳು(Benefits)
ಪ್ರತಿ ಧ್ಯಾನಕ್ಕೂ ಅದರದೇ ಆದ ಲಾಭಗಳಿರುತ್ತವೆ. ಅಂತೆಯೇ ಸೌಂಡ್ ಬಾತ್ ಥೆರಪಿಯನ್ನು ಪ್ರತಿ ದಿನ ಮಾಡಿದರೆ ಸಾಕಷ್ಟು ಲಾಭಗಳನ್ನು ಪಡೆಯಬಹುದಾಗಿದೆ.
- ಶಬ್ದವು ಸೃಷ್ಟಿಸುವ ಕಂಪನಗಳು ಮನಸ್ಸಿನಿಂದ ಒತ್ತಡ ಮತ್ತು ಆತಂಕವನ್ನು ಬಿಡುಗಡೆ ಮಾಡುತ್ತವೆ.
- ಈ ಹೀಲಿಂಗ್ ಶಬ್ದವು ನಿಮ್ಮ ಮೆದುಳು ಉತ್ತಮವಾಗಿ ಕಾರ್ಯನಿರ್ವಹಿಸಲು ಸಹಾಯ ಮಾಡುತ್ತದೆ ಮತ್ತು ತೀವ್ರವಾದ ಧ್ಯಾನದ ಸ್ಥಿತಿಯನ್ನು ಪ್ರವೇಶಿಸಲು ನಿಮಗೆ ಸಹಾಯ ಮಾಡುತ್ತದೆ.
- ಇದು ಆನಂದ ಮತ್ತು ಆಹ್ಲಾದಕರ ಮನಸ್ಥಿತಿಯ ಜೊತೆಗೆ, ಮಾನಸಿಕ ಚಿಕಿತ್ಸಾತ್ಮಕ ವಾತಾವರಣ ಸೃಷ್ಟಿಸುತ್ತದೆ.
- ನೀವು ಈ ಸೌಂಡ್ ಬಾತ್‌ನಿಂದ ಸಂವೇದನಾಶೀಲ ಆತ್ಮಾವಲೋಕನದ ಸ್ಥಿತಿಗೆ ಬಂದಾಗ, ನಿಮ್ಮ ಹೃದಯ ಬಡಿತ ಮತ್ತು ರಕ್ತದೊತ್ತಡ ಕಡಿಮೆಯಾಗುತ್ತದೆ.
- ಈ ಧ್ಯಾನವು ನಿಮ್ಮ ಮನಸ್ಸು ಮತ್ತು ಆತ್ಮವನ್ನು ಎಲ್ಲ ನಕಾರಾತ್ಮಕತೆಗಳಿಂದ ದೂರವಿರಿಸುತ್ತದೆ. ಸಕಾರಾತ್ಮಕತೆಯ ಕಡೆ ನಿಮ್ಮ ಗಮನವನ್ನು ಸೆಳೆಯುತ್ತದೆ.
- ಸೌಂಡ್ ಬಾತ್ ಥೆರಪಿಯು ನಿಮ್ಮ ದೇಹದಲ್ಲಿನ ಚಕ್ರಗಳನ್ನು ಜಾಗೃತಗೊಳಿಸುತ್ತದೆ.