ವಿದೇಶಕ್ಕೆ ಲಗ್ಗೆ ಇರಿಸಿದ ಮೊದಲ ಭಾರತೀಯ ಕ್ಯಾಲೆಂಡರ್..!
* ವಿದೇಶಕ್ಕೆ ಲಗ್ಗೆ ಇರಿಸುವ ಮೊದಲ ಭಾರತೀಯ ದಿನದರ್ಶಿಕೆ
* ಚತುರ್‌ಭಾಷೆಗಳಲ್ಲಿ ಎಲ್ಲ ಅನಿವಾಸಿ ಭಾರತೀಯರ ತಲುಪುವ ಗುರಿ
* ಹಿಂದೂ ಪಂಚಾಂಗದ ಕಾಲಗಣನೆಯನ್ನು ಪರಿಗಣಿಸಲಾಗಿದೆ
ಆತ್ಮಭೂಷಣ್
ಮಂಗಳೂರು(ಮಾ.25): ಕಳೆದ ವರ್ಷ ಕೋವಿಡ್(Covid-19) ವೇಳೆ ಕರಾವಳಿಯಲ್ಲಿ ರೂಪುಗೊಂಡ ಭಾರತೀಯ ದಿನದರ್ಶಿಕೆ ಈಗ ಸೀಮೋಲ್ಲಂಘನೆ ಮಾಡುತ್ತಿದೆ. ಗ್ರೆಗೋರಿಯನ್ ಕಾಲಮಾನ ಬದಲು ಭಾರತೀಯ ಪದ್ಧತಿಯ ಲೆಕ್ಕಾಚಾರವೇ ಬೇಕು ಎಂಬ ಕಾರಣಕ್ಕೆ ಅಮೆರಿಕದ(America) ಅನಿವಾಸಿ ಕನ್ನಡಿಗರು(NRI) ಈ ದಿನದರ್ಶಿಕೆಗೆ ಬೇಡಿಕೆ ಸಲ್ಲಿಸಿದ್ದಾರೆ. ವಿದೇಶಕ್ಕೆ ಕಾಲಿಡುತ್ತಿರುವ ಮೊದಲ ಭಾರತೀಯ ದಿನದರ್ಶಿಕೆ(Indian Calendar) ಎಂಬ ಹೆಗ್ಗಳಿಕೆ ಇದರದ್ದಾಗಿದೆ.
ಈ ಬಾರಿ ಏಪ್ರಿಲ್ 2ರಂದು ಹಿಂದೂ ಹೊಸ ವರ್ಷದ ಯುಗಾದಿಗೆ(Yugadi) ಅಮೆರಿಕದಲ್ಲಿ ಬಿಡುಗಡೆಯಾಗುತ್ತಿದೆ. ಅಲ್ಲಿರುವ ಅನಿವಾಸಿ ಕನ್ನಡಿಗರಾದ(Kannadiga) ಶ್ವೇತಾ ಕಕ್ವೆ ಎಂಬವರು ಈ ಕ್ಯಾಲೆಂಡರ್‌ನ್ನು ಅಮೆರಿಕಗೆ ಪರಿಚಯಿಸಲು ಮುಂದಾಗಿದ್ದಾರೆ. ಈ ದಿನದರ್ಶಿಕೆ ಅಮೆರಿಕದಲ್ಲೇ ಮುದ್ರಣಗೊಂಡು ಆನ್‌ಲೈನ್ ಮೂಲಕ ಬಿಡುಗಡೆಗೊಳ್ಳಲಿದೆ. ಕೇರಳದ ಕಾಸರಗೋಡು ಮೂಲದ ಶ್ವೇತಾ ಕಕ್ವೆ ಅವರು ಅಮೆರಿಕದ ಅರಿಝೋನ ಕನ್ನಡ ಸಂಘದ ಅಧ್ಯಕ್ಷೆ. ಭಾರತೀಯ ಕಾಲಜ್ಞಾನವನ್ನು ತಿಳಿದುಕೊಂಡು ಅದನ್ನು ವ್ಯಾಪಕವಾಗಿ ಬಳಸಬೇಕು ಎಂಬ ದಿಶೆಯಲ್ಲಿ ಅವರು ಭಾರತೀಯ ದಿನದರ್ಶಿಕೆಯನ್ನು ಅಮೆರಿಕದಲ್ಲಿ ಪರಿಚಯಿಸುತ್ತಿದ್ದಾರೆ.
Zodiac Sign And Luck: ಈ 4 ರಾಶಿಯವರು ಕಷ್ಟಪಟ್ಟು ಅದೃಷ್ಟ ಪಡೆಯುತ್ತಾರೆ !
ಈ ದಿನದರ್ಶಿಕೆ ಅಮೆರಿಕದಲ್ಲಿ ಅಲ್ಲಿನ ವಿನ್ಯಾಸಕ್ಕೆ ತಕ್ಕಂತೆ ಕ್ಯಾಲೆಂಡರ್ ಆಗಿ ಮೊದಲ ಹಂತದಲ್ಲಿ ಅನಿವಾಸಿ ಕನ್ನಡಿಗರನ್ನು ತಲುಪಲಿದೆ. ಈ ದಿನದರ್ಶಿಕೆ ಕನ್ನಡ ಮಾತ್ರವಲ್ಲ ಇಂಗ್ಲಿಷ್, ಹಿಂದಿ(Hindi), ಸಂಸ್ಕೃತದಲ್ಲೂ(Sankrit) ಇರುವುದರಿಂದ ಎಲ್ಲ ಅನಿವಾಸಿ ಭಾರತೀಯರನ್ನು ತಲುಪಲು ಸುಲಭವಾಗಲಿದೆ ಎನ್ನುವುದು ದಿನದರ್ಶಿಕೆಯ ರೂವಾರಿ, ಉತ್ತರ ಕನ್ನಡ(Uttara Kannada) ಮೂಲದ ಸಂಸ್ಕೃತ ವಿದ್ವಾಂಸ, ಪುತ್ತೂರಿನ ಅಂಬಿಕಾ ಮಹಾವಿದ್ಯಾಲಯ ಪ್ರಾಂಶುಪಾಲ ಡಾ.ವಿನಾಯಕ ಭಟ್ ಗಾಳಿಮನೆ ಅವರ ಅಭಿಪ್ರಾಯ.
ಅಮೆರಿಕ ಬಳಿಕ ಆಸ್ಪ್ರೇಲಿಯಾದಿಂದಲೂ(Australia) ಭಾರತೀಯ ದಿನದರ್ಶಿಕೆಗೆ ಬೇಡಿಕೆ ಬಂದಿದೆ. ನಾಡಿನ ವಿವಿಧ ಮಠಮಾನ್ಯಗಳು ಈ ದೇಶೀ ಕ್ಯಾಲೆಂಡರ್ ಬಳಕೆಗೆ ಚಿಂತನೆ ನಡೆಸುತ್ತಿವೆ. ಇಂಗ್ಲಿಷ್ ಕ್ಯಾಲೆಂಡರ್ ಮಾದರಿಯಲ್ಲಿ ಅಪ್ಪಟ ಭಾರತೀಯ ಕಾಲಗಣನೆಯಲ್ಲಿ ಹೊರಬಂದ ದೇಶದ ಮೊದಲ ಕ್ಯಾಲೆಂಡರ್ ಇದು ಎಂಬ ಹೆಗ್ಗಳಿಕೆ ಹೊಂದಿದೆ ಎನ್ನುತ್ತಾರೆ ಅವರು.
ಏನಿದು ದಿನದರ್ಶಿಕೆಯ ವಿಶೇಷತೆ?
ಈ ದಿನದರ್ಶಿಕೆ ಮೇಲ್ನೋಟಕ್ಕೆ ಇಂಗ್ಲಿಷ್(English) ಕ್ಯಾಲೆಂಡರ್‌ನಂತೆ ಕಂಡರೂ ಯುಗಾದಿಯಿಂದ ಇನ್ನೊಂದು ಯುಗಾದಿ ವರೆಗೆ ಭಾರತೀಯ ಸಂಪ್ರದಾಯದಂತೆ ಇದೆ. ಇಂಗ್ಲಿಷ್ ಕಾಲಮಾನ ದಿನಾಂಕವನ್ನು ಸಣ್ಣದಾಗಿ ಪಕ್ಕದಲ್ಲೇ ನಮೂದಿಸಿರುವುದು ಬಿಟ್ಟರೆ ಬೇರೆಲ್ಲ ವಿಚಾರಗಳೂ ಅಪ್ಪಟ ಭಾರತೀಯ ಪರಿಗಣನೆಯಲ್ಲಿದೆ. ಗ್ರೆಗೋರಿಯನ್ ಪ್ರಕಾರ ಇಂಗ್ಲಿಷ್ ಕ್ಯಾಲೆಂಡರ್‌ನಲ್ಲಿ ಕ್ರಿಸ್ತಶಕೆ ಹಾಗೂ ದಿನಾಂಕ ಜನವರಿಯಿಂದ ಡಿಸೆಂಬರ್ ವರೆಗೆ ಇರುತ್ತದೆ. ಆದರೆ ಇದರಲ್ಲಿ ಹಿಂದೂ ಪಂಚಾಂಗದ ಕಾಲಗಣನೆಯನ್ನು ಪರಿಗಣಿಸಲಾಗಿದೆ. ವಾರ, ದಿನಾಂಕ, ತಿಥಿ, ನಕ್ಷತ್ರ, ದಿನ ವಿಶೇಷ ಹೀಗೆ ಒಂದು ಪಂಚಾಂಗದಲ್ಲಿ ಏನೇನು ಇರುತ್ತದೋ ಅದೆಲ್ಲವೂ ಈ ಕ್ಯಾಲೆಂಡರ್‌ನಲ್ಲಿ ಅಡಕವಾಗಿದೆ. ಹಾಗಾಗಿ ಇದನ್ನು ಸುಲಭವಾಗಿ ಗ್ರಹಿಸಲು ಸಾಧ್ಯವಿದೆ.
ಮೋದಿ, ಗಾಂಧೀಜಿಯ ಜಾತಕದಲ್ಲಿ Gaja Kesari Yoga!
ಈಗ ಇಂಗ್ಲಿಷ್ ಕಾಲಗಣನೆಯಂತೆ 2022 ಇಸವಿ, ಆದರೆ ಭಾರತೀಯ ದಿನದರ್ಶಿಕೆ ಪ್ರಕಾರ 5,123ನೇ ಇಸವಿ. ಏಪ್ರಿಲ್ 2ರ ಯುಗಾದಿಗೆ 5,124ನೇ ಇಸವಿ ಆರಂಭವಾಗುತ್ತದೆ. ಪ್ರತಿ ದಿನ ಶುರುವಾಗುವುದು ಸೂರ್ಯೋದಯದಿಂದ. ಯುಗಾದಿಯಿಂದ ಯುಗಾದಿಗೆ ಒಂದು ವರ್ಷ ಎಂಬುದು ಇದರ ಸುಲಭ ಲೆಕ್ಕಾಚಾರ. ಡಾ.ವಿನಾಯಕ ಭಟ್ ಗಾಳಿಮನೆ ಅವರು ‘ಅಮ್ನಾಯಃ ಭಾರತೀಯ ದಿನದರ್ಶಿಕಾ ಗಂಧವಹಸದನಮ್’ ಹೆಸರಿನಲ್ಲಿ ಕನ್ನಡ, ಸಂಸ್ಕೃತ ಹಾಗೂ ಇಂಗ್ಲಿಷ್ ಭಾಷೆಗಳಲ್ಲಿ ಈ ದಿನದರ್ಶಿಕೆಯನ್ನು ಹೊರತಂದಿದ್ದಾರೆ.
ಭಾರತೀಯ ದಿನದರ್ಶಿಕೆಯನ್ನು ಆಯಾ ದೇಶಗಳ ಕಾಲಮಾನಕ್ಕೆ ಹೊಂದಿಕೆಯಾಗುವಂತೆ ರೂಪಿಸಲು ಸಾಧ್ಯವಿದೆ. ಈಗಾಗಲೇ ಜಾಲತಾಣಗಳ ಮೂಲಕ ನಿತ್ಯವೂ ದಿನದರ್ಶಿಕೆಯನ್ನು ಕಳುಹಿಸಲಾಗುತ್ತಿದೆ. ಬ್ರಿಟಿಷ್ ಬಳುವಳಿಯ ಕ್ರಿಸ್ತಶಕ ಬದಲು ಭಾರತೀಯ ಕಾಲಮಾನ ಪದ್ಧತಿ ದೇಶದಲ್ಲಿ ಜಾರಿಗೆ ಬರಬೇಕು ಎಂಬುದೇ ಈ ದಿನದರ್ಶಿಕೆ ಅಭಿಯಾನದ ಅಪೇಕ್ಷೆ ಅಂತ ಭಾರತೀಯ ದಿನದರ್ಶಿಕೆ ರೂವಾರಿ ಡಾ.ವಿನಾಯಕ ಭಟ್ ಗಾಳಿಮನೆ ತಿಳಿಸಿದ್ದಾರೆ.