ಹಾಸನಾಂಬೆ ವಿಐಪಿ ದರ್ಶನ ವೇಳೆ ಗರ್ಭಗುಡಿಗೆ ಕರೆದೊಯ್ಯಲಿಲ್ಲವೆಂದು ರಾಮನಗರ ಕಾಂಗ್ರೆಸ್ ನಾಯಕರು ಅಸಮಾಧಾನ ವ್ಯಕ್ತಪಡಿಸಿದ್ದು, ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸ್ಥಳದಲ್ಲೇ ಕೈ ನಾಯಕರಿಗೆ ಕ್ಷಮೆಯಾಚಿಸಿದ್ದಾರೆ. ಜೊತೆಗೆ, ಲೈಸನಿಂಗ್ ಅಧಿಕಾರಿಗಳಿಗೆ ಹೇಳಿದ್ದೇನು? ಇಲ್ಲಿದೆ ವಿವರ..

ಹಾಸನ (ನ.05): ಐತಿಹಾಸಿಕ ಹಾಗೂ ಪ್ರಸಿದ್ಧ ಹಾಸನಾಂಬ ದೇವಿ ದರ್ಶನೋತ್ಸವದ ಸಂದರ್ಭದಲ್ಲಿ ವಿಐಪಿ (VIP) ದರ್ಶನಕ್ಕೆ ಸಂಬಂಧಿಸಿದಂತೆ ಕೆಲಕಾಲ ಗೊಂದಲ ಹಾಗೂ ಅಸಮಾಧಾನದ ವಾತಾವರಣ ನಿರ್ಮಾಣವಾಯಿತು. ದೇವಿಯ ಗರ್ಭಗುಡಿಗೆ ಸರಿಯಾಗಿ ಕರೆದುಕೊಂಡು ಹೋಗಿಲ್ಲವೆಂದು ಆಕ್ರೋಶ ಹೊರಹಾಕಿದ ಕಾಂಗ್ರೆಸ್ ನಾಯಕರಿಗೆ ಹಾಸನ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಸ್ಥಳದಲ್ಲೇ ಕ್ಷಮೆಯಾಚಿಸುವ ಮೂಲಕ ಪರಿಸ್ಥಿತಿಯನ್ನು ಸಮಾಧಾನಪಡಿಸಿದ್ದಾರೆ.

ನಡೆದಿದ್ದೇನು? ಡಿಸಿಗೆ ದೂರು ನೀಡಿದ ಕಾಂಗ್ರೆಸ್ ನಾಯಕರು

ರಾಮನಗರದಿಂದ ಹಾಸನಾಂಬೆ ದರ್ಶನಕ್ಕಾಗಿ ಆಗಮಿಸಿದ್ದ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಪ್ರೊಟೊಕಾಲ್ ಪ್ರಕಾರ ದೇವಿ ದರ್ಶನ ಪಡೆಯಲು ಬಂದಿದ್ದರು. ಆದರೆ, ಕರ್ತವ್ಯದಲ್ಲಿದ್ದ ಲೈಸನಿಂಗ್ ಆಫೀಸರ್ (Liaison Officer) ಮನು ಅವರು ತಮ್ಮನ್ನು ಗರ್ಭಗುಡಿಯವರೆಗೆ ಕರೆದೊಯ್ಯದೆ, ಸರಿಯಾಗಿ ದರ್ಶನ ಮಾಡಿಸಿಲ್ಲ ಹಾಗೂ 'ಆಚೆಗೆ ನಡೀರಿ' ಎಂದು ಗದರಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಕುರಿತು ಜಿಲ್ಲಾಧಿಕಾರಿ ಲತಾಕುಮಾರಿ ಅವರ ಬಳಿ ನೇರವಾಗಿ ದೂರು ಹೇಳಿಕೊಂಡ ನಾಯಕರು, ಪ್ರೊಟೊಕಾಲ್‌ನಲ್ಲಿ ಬಂದ ನಾಯಕರು ಹಾಗೂ ಅವರ ಕುಟುಂಬಸ್ಥರಿಗೆ ಸೂಕ್ತ ಗೌರವ ನೀಡಲಾಗಿಲ್ಲ ಎಂದು ಅಸಮಾಧಾನ ಹೊರಹಾಕಿದರು.

ಲೈಸನಿಂಗ್ ಆಫೀಸರ್ ಮೇಲೆ ಕ್ರಮದ ಭರವಸೆ 

ಕಾಂಗ್ರೆಸ್ ನಾಯಕರ ಅಳಲನ್ನು ಆಲಿಸಿದ ಜಿಲ್ಲಾಧಿಕಾರಿ ಲತಾಕುಮಾರಿ ಅವರು ತಕ್ಷಣವೇ ಸ್ಪಂದಿಸಿ, 'ನಿಮಗೆ ಉಂಟಾದ ತೊಂದರೆಗೆ ಕ್ಷಮೆ ಇರಲಿ. ಲೈಸನಿಂಗ್ ಆಫೀಸರ್ ಮನು ಅವರ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಪ್ರೊಟೊಕಾಲ್‌ನಲ್ಲಿ ಬರುವ ಗಣ್ಯರು ತಮ್ಮ ಮಕ್ಕಳೊಂದಿಗೆ, ಕುಟುಂಬದೊಂದಿಗೆ ಆಗಮಿಸಿರುತ್ತಾರೆ. ಅವರಿಗೆ ಸರಿಯಾಗಿ, ನಿಧಾನವಾಗಿ ದರ್ಶನ ಮಾಡಿಸುವ ಕೆಲಸವಾಗಬೇಕು. 'ಆಚೆಗೆ ನಡೀರಿ' ಎಂದು ಏಕಾಏಕಿ ಗದರುವುದು ಸರಿಯಲ್ಲ. ನಾವು ಸಾರ್ವಜನಿಕರ ಹಾಗೂ ಗಣ್ಯರ ಸೇವೆಗೆ ಇದ್ದೇವೆ. ಪ್ರತಿಯೊಬ್ಬ ಅಧಿಕಾರಿಯೂ ಶಾಂತವಾಗಿ ಮತ್ತು ಸಮಾಧಾನದಿಂದ ವರ್ತಿಸಬೇಕು' ಎಂದು ತರಬೇತಿ ನೀಡಿದರು.

ಇದೇ ವೇಳೆ, ಅಸಮಾಧಾನಗೊಂಡಿದ್ದ ಕಾಂಗ್ರೆಸ್ ಕಾರ್ಯಕರ್ತರನ್ನು ಸಮಾಧಾನಪಡಿಸಿದ ಜಿಲ್ಲಾಧಿಕಾರಿಗಳು, 'ಪ್ರತಿ ವರ್ಷವೂ ತಪ್ಪದೇ ಹಾಸನಾಂಬೆಯ ದರ್ಶನಕ್ಕೆ ಬನ್ನಿ' ಎಂದು ಆತ್ಮೀಯವಾಗಿ ಆಹ್ವಾನಿಸಿ, ತಮ್ಮ ಕಾರನ್ನೇರಿ ಸ್ಥಳದಿಂದ ತೆರಳಿದರು.

ಹಾಸನಾಂಬೆಯ ದರ್ಶನ ಪಡೆದ ಮಾಜಿ ಶಾಸಕಿ ಅನಿತಾ ಕುಮಾರಸ್ವಾಮಿ

ಇನ್ನೊಂದೆಡೆ, ವರ್ಷಕ್ಕೊಮ್ಮೆ ಮಾತ್ರ ಬಾಗಿಲು ತೆರೆಯುವ ಶಕ್ತಿಪೀಠ ಹಾಸನಾಂಬೆಯ ದರ್ಶನವನ್ನು ಮಾಜಿ ಶಾಸಕಿ ಹಾಗೂ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ಅವರ ಧರ್ಮಪತ್ನಿ ಅನಿತಾ ಕುಮಾರಸ್ವಾಮಿ ಅವರು ಪಡೆದುಕೊಂಡರು. ಪ್ರತಿ ವರ್ಷವೂ ತಪ್ಪದೇ ದೇವಿಯ ದರ್ಶನ ಪಡೆಯುವ ಪದ್ಧತಿಯನ್ನು ಕಾಯ್ದುಕೊಂಡಿರುವ ಅನಿತಾ ಕುಮಾರಸ್ವಾಮಿ ಅವರು, ಈ ಬಾರಿಯೂ ಶಿಷ್ಟಾಚಾರ ವಾಹನದಲ್ಲಿ (Protocol Vehicle) ತಮ್ಮ ಸಂಬಂಧಿಕರೊಂದಿಗೆ ಆಗಮಿಸಿದ್ದರು. ಅರ್ಚಕರ ಸಮ್ಮುಖದಲ್ಲಿ ತಾಯಿಗೆ ವಿಶೇಷ ಪೂಜೆ ಹಾಗೂ ಪ್ರಾರ್ಥನೆ ಸಲ್ಲಿಸಿ, ಆಶೀರ್ವಾದ ಪಡೆದರು.

ಹಾಸನಾಂಬೆ ದರ್ಶನೋತ್ಸವಕ್ಕೆ ಇನ್ನೂ 5 ದಿನಗಳು ಬಾಕಿಯಿದ್ದು, ದಿನನಿತ್ಯ ಲಕ್ಷಾಂತರ ಭಕ್ತರು ಹರಿದು ಬರುತ್ತಿದ್ದಾರೆ. ಜಿಲ್ಲಾಡಳಿತವು ಕಟ್ಟುನಿಟ್ಟಿನ ಭದ್ರತೆ ಹಾಗೂ ದರ್ಶನದ ವ್ಯವಸ್ಥೆಗಳನ್ನು ಕೈಗೊಂಡಿದೆ.