ಗುರುವಾಯೂರು ದೇಗುಲ ಬಳಿ 260 ಕೆಜಿ ಚಿನ್ನ, 6605 ಕೆಜಿ ಬೆಳ್ಳಿ
138 ಕೋಟಿ ರು. ಮೌಲ್ಯದ ಚಿನ್ನ, 49 ಕೋಟಿ ರು. ಮೌಲ್ಯದ ಬೆಳ್ಳಿ
ಆರ್‌ಟಿಐ ಅರ್ಜಿಗೆ ಉತ್ತರಿಸಿರುವ ದೇಗುಲದ ಆಡಳಿತ ಮಂಡಳಿ
ಇತ್ತೀಚೆಗೆ 1737 ಕೋಟಿ ರು. ಬ್ಯಾಂಕ್ ಠೇವಣಿ, 271 ಎಕರೆ ಭೂಮಿ ಘೋಷಿಸಿತ್ತು..
ತ್ರಿಶ್ಶೂರ್: ಕೇರಳದ ಪ್ರಸಿದ್ಧ ದೇವಾಲಯವಾದ ಗುರುವಾಯೂರು ಕೃಷ್ಣನ ದೇವಾಲಯದಲ್ಲಿ 263.637 ಕೆ.ಜಿ. ಚಿನ್ನದ ಹಾಗೂ 6,605 ಕೆ.ಜಿ. ಬೆಳ್ಳಿ ಸಂಗ್ರಹ ಇದೆ ಎಂಬ ಕುತೂಹಲಕರ ವಿಷಯ ಬೆಳಕಿಗೆ ಬಂದಿದೆ. ಇತ್ತೀಚೆಗೆ ದೇವಸ್ಥಾನವು 1,737.04 ಕೋಟಿ ರು. ಬ್ಯಾಂಕ್ ಠೇವಣಿ ಹೊಂದಿದ್ದಾಗಿ ಹೇಳಿತ್ತು. ಅದರ ಬೆನ್ನಲ್ಲೇ ಚಿನ್ನ-ಬೆಳ್ಳಿ ಮಾಹಿತಿಯನ್ನು ಖುದ್ದು ಮಾಹಿತಿ ಹಕ್ಕಿನ ಅಡಿ ದೇವಸ್ಥಾನದ ಆಡಳಿತ ಮಂಡಳಿ ಬಹಿರಂಗಪಡಿಸಿದೆ.
ಇದರಿಂದಾಗಿ ದೇಗುಲದ ಬಳಿ 138 ಕೋಟಿ ರು. ಮೌಲ್ಯದ ಚಿನ್ನ ಹಾಗೂ 49 ಕೋಟಿ ರು. ಮೌಲ್ಯದ ಬೆಳ್ಳಿ ಇದ್ದಂತಾಗಿದೆ.
ಮಾಹಿತಿ ಹಕ್ಕು ಕಾಯ್ದೆಯಡಿ ಕೇಳಲಾದ ಪ್ರಶ್ನೆಗೆ ಉತ್ತರಿಸಿರುವ ಮಂಡಳಿ ‘ಅಮೂಲ್ಯ ರತ್ನಗಳು, ಚಿನ್ನದ ನಾಣ್ಯಗಳು, 20 ಸಾವಿರ ಚಿನ್ನದ ಪದಕಗಳು ಸೇರಿ ಒಟ್ಟು 263.637 ಕೆ.ಜಿ. ಚಿನ್ನದ ಸಂಗ್ರಹವಿದೆ’ ಎಂದು ಹೇಳಿದೆ. ಇದಲ್ಲದೇ ದೇಗುಲದ ಬಳಿ 5,359 ಬೆಳ್ಳಿಯ ನಾಣ್ಯಗಳು ಸೇರಿ 6,605 ಕೆ.ಜಿ. ಬೆಳ್ಳಿಯ ಸಂಗ್ರಹ ಇದೆ ಎಂದು ವಿವರಿಸಿದೆ.
ಸಮಸ್ಯೆಗಳಿಗೆ ಪರಿಹಾರ ಒದಗಿಸುವ ನವಿಲುಗರಿಗಳು; ಗರಿಗೆ ಈ ಶಕ್ತಿ ಬಂದಿದ್ದು ಹೇಗೆ?
ಸ್ಥಳೀಯ ನಿವಾಸಿ, ‘ಪ್ರಾಪರ್ ಚಾನಲ್’ ಸಂಘಟನೆಯ ಅಧ್ಯಕ್ಷ ಎಂ.ಕೆ.ಹರಿದಾಸ್ ಅವರು ದೇಗುಲದ ಆಸ್ತಿ ಕುರಿತು ಆರ್‌ಟಿಐ ಮೂಲಕ ಪ್ರಶ್ನಿಸಿದ್ದರು. ‘ದೇವಾಲಯದ ಅಭಿವೃದ್ಧಿ ಮತ್ತು ಭಕ್ತರಿಗೆ ಸೌಲಭ್ಯ ಒದಗಿಸುವ ಕುರಿತಾಗಿ ಗುರುವಾಯೂರ್ ದೇವಸ್ವಂ ಮಂಡಳಿ ನಿರ್ಲಕ್ಷ್ಯ ತೋರುತ್ತಿದ್ದ ಕಾರಣ ಆರ್‌ಟಿಐ ಮೂಲಕ ಪ್ರಶ್ನಿಸಿದ್ದೆ’ ಎಂದು ಹರಿದಾಸ್ ಹೇಳಿದ್ದಾರೆ. ಆದರೆ ಭದ್ರತೆ ಕಾರಣ ನೀಡಿ ಈ ಹಿಂದೆ ದೇವಾಲಯದ ಚಿನ್ನ-ಬೆಳ್ಳಿ ಆಸ್ತಿ ವಿವರವನ್ನು ಬಹಿರಂಗಗೊಳಿಸಲು ಆಡಳಿತ ಮಂಡಳಿ ನಿರಾಕರಿಸಿತ್ತು.
ಡಿಸೆಂಬರ್ನಲ್ಲಿ ಸಲ್ಲಿಸಲಾಗಿದ್ದ ಆರ್‌ಟಿಐ ಅರ್ಜಿಯಿಂದಾಗಿ ದೇಗುಲದ ಬಳಿ 1,737.04 ಕೋಟಿ ರು. ಬ್ಯಾಂಕ್ ಠೇವಣಿ ಮತ್ತು 271.05 ಎಕರೆ ಭೂಮಿ ಇದೆ ಎಂಬುದು ತಿಳಿದುಬಂದಿತ್ತು. ಆದರೆ ಭೂಮಿಯ ಮೌಲ್ಯವನ್ನು ಅದು ಹೇಳಿರಲಿಲ್ಲ.
ಈ ದಿನಾಂಕದಂದು ಜನಿಸಿದ ಹುಡುಗಿಯರು ಅದೃಷ್ಟವಂತರು..
ಇತ್ತೀಚೆಗೆ ತಿರುಮಲ-ತಿರುಪತಿ ದೇವಸ್ಥಾನ ಸಮಿತಿ (ಟಿಡಿಡಿ), ತಿಮ್ಮಪ್ಪನ ಬಳಿ 10.3 ಟನ್ ಚಿನ್ನ, 5,300 ಕೋಟಿ ರು. ಮೌಲ್ಯದ ನಿಶ್ಚಿತ ಠೇವಣಿ, 15,938 ಕೋಟಿ ರು. ನಗದು ಠೇವಣಿ, ಸ್ಥಿರಾಸ್ತಿ ಸೇರಿ 2.26 ಲಕ್ಷ ಕೋಟಿ ರು. ಆಸ್ತಿ ಇದೆ ಎಂದು ಘೋಷಿಸಿಕೊಂಡಿತ್ತು.