ದೇಗುಲ, ಗೋಶಾಲೆ, ಹಾಲು ಸಂಘಗಳಲ್ಲಿಂದು ಗೋ ಪೂಜೆ: ಸಚಿವ ಚವ್ಹಾಣ್
ಮುಜರಾಯಿ ಇಲಾಖೆ ಅಡಿ ಬರುವ ದೇವಸ್ಥಾನದಲ್ಲಿ ಗೋವುಗಳನ್ನು ಕರೆಸಿ ಪೂಜೆ ನಡೆಸಲು ನಿರ್ಧರಿಸಲಾಗಿದೆ. ಸಂಜೆ ಗೋವನ್ನು ಕರೆಸಿ ಸ್ನಾನ ಮಾಡಿಸಿ ಬಳಿಕ ಅರಿಶಿನ, ಕುಂಕುಮ ಹೂವಿನಿಂದ ಸಿಂಗರಿಸಿ ಗೋಗ್ರಾಸ ನೀಡಿ ಪೂಜೆ ನಡೆಸಲಾಗುತ್ತದೆ.
ಬೆಂಗಳೂರು(ಅ.26): ದೀಪಾವಳಿಯ ಬಲಿಪಾಡ್ಯಮಿ ಅಂಗವಾಗಿ ರಾಜ್ಯದ ದೇವಾಲಯ ಹಾಗೂ ಪಶು ಸಂಗೋಪನೆ ಇಲಾಖೆ ಅಡಿ ಬರುವ ಪಶು ವೈದ್ಯ ಸಂಸ್ಥೆ, ಗೋಶಾಲೆ, ಹಾಲು ಉತ್ಪಾದಕ ಸಂಘಗಳಲ್ಲಿ ಗೋಪೂಜೆ ಸೇರಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿವೆ. ಮುಜರಾಯಿ ಇಲಾಖೆ ಅಡಿ ಬರುವ ದೇವಸ್ಥಾನದಲ್ಲಿ ಗೋವುಗಳನ್ನು ಕರೆಸಿ ಪೂಜೆ ನಡೆಸಲು ನಿರ್ಧರಿಸಲಾಗಿದೆ. ಸಂಜೆ ಗೋವನ್ನು ಕರೆಸಿ ಸ್ನಾನ ಮಾಡಿಸಿ ಬಳಿಕ ಅರಿಶಿನ, ಕುಂಕುಮ ಹೂವಿನಿಂದ ಸಿಂಗರಿಸಿ ಗೋಗ್ರಾಸ ನೀಡಿ ಪೂಜೆ ನಡೆಸಲಾಗುತ್ತದೆ.
ಇಸ್ಕಾನ್ ದೇಗುಲದಲ್ಲಿ ಬೆಳಗ್ಗೆ ಗೋ ಸೇವೆ, ಶ್ರೀಕೃಷ್ಣ ಬಲರಾಮರ ಪೂಜೆ, ಗೋವರ್ಧನ ಪೂಜೆ, ದೊಡ್ಡ ಗಣಪತಿ ದೇವಸ್ಥಾನ ಸೇರಿ ಇತರೆಡೆ ಗೋಪೂಜೆ ಸೇರಿ ವಿವಿಧ ಪೂಜೆ ಪುನಸ್ಕಾರಗಳು ನಡೆಯಲಿವೆ. ಮನೆಗಳಲ್ಲಿ ಬಲಿವೇಂದ್ರನ ಪೂಜೆ ಸೇರಿ ಇತರೆ ಕಾರ್ಯಕ್ರಮಗಳು ನಡೆಯಲಿವೆ.
ಸನಾತನ ಧರ್ಮದ ಸಂಪ್ರದಾಯ ಬೆಳೆಸಲು ದೀಪಾವಳಿಯಂದು ದೇವಸ್ಥಾನಗಳಲ್ಲಿ ಗೋಪೂಜೆ: ಸಚಿವೆ ಜೊಲ್ಲೆ
ಪಶು ಇಲಾಖೆಯಡಿ ಗೋ ಪೂಜೆ:
ಪಶು ಸಂಗೋಪನೆ ಇಲಾಖೆ ಅಡಿ ಬರುವ ಎಲ್ಲ ಪಶು ವೈದ್ಯ ಸಂಸ್ಥೆಗಳು, ಸರ್ಕಾರಿ ಮತ್ತು ಖಾಸಗಿ ಗೋಶಾಲೆಗಳು, ಹಾಲು ಉತ್ಪಾದಕ ಸಂಘಗಳಲ್ಲಿ ಗೋ ಪೂಜೆ ನೆರವೇರಿಸುವಂತೆ ಪಶು ಸಂಗೋಪನಾ ಸಚಿವ ಪ್ರಭು ಚವ್ಹಾಣ್ ಸೂಚನೆ ನೀಡಿದ್ದಾರೆ. ರಾಜ್ಯದಲ್ಲಿರುವ ಹಾಲು ಉತ್ಪಾದಕರ ಸಂಘಗಳಲ್ಲಿ ಗೋಪೂಜೆ ನಡೆಸುವಂತೆ ಈಗಾಗಲೇ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರಿಗೆ ಪತ್ರ ಬರೆದು ಮನವಿ ಮಾಡಿಕೊಳ್ಳಲಾಗಿದೆ. ಈ ಕಾರ್ಯಕ್ರಮದಲ್ಲಿ ಸ್ಥಳೀಯ ಶಾಸಕರು, ಸಂಸದರು ಮತ್ತು ಸ್ಥಳೀಯ ಜನಪ್ರತಿನಿಧಿಗಳು ಭಾಗವಹಿಸಲಿದ್ದಾರೆ ಎಂದು ಅವರು ತಿಳಿಸಿದ್ದಾರೆ.