Asianet Suvarna News Asianet Suvarna News

ಮನೆಯಲ್ಲೇ ಫಟಾಫಟ್‌ ಪರಿಸರ ಸ್ನೇಹಿ ಗಣೇಶನ ಮೂರ್ತಿ ತಯಾರಿ ಹೇಗೆ?

ಚತುರ್ಥಿಯ ದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಉಪವಾಸದ ಸಂಕಲ್ಪ ಮಾಡಿ. ಶಾಸ್ತ್ರಗಳ ಪ್ರಕಾರ, ವಿಘ್ನ ವಿನಾಶಕ ಗಣೇಶ ಮಧ್ಯಾಹ್ನ ಜನಿಸಿದ. ಅದಕ್ಕಾಗಿಯೇ ಈ ದಿನ ಮಧ್ಯಾಹ್ನ ಗಣೇಶನನ್ನು ಪೂಜಿಸುವ ಪದ್ಧತಿಯಿದೆ. 

Go Eco friendly With these Edible Ganesha Idols hls
Author
Bengaluru, First Published Sep 10, 2021, 12:01 PM IST
  • Facebook
  • Twitter
  • Whatsapp

ಯಾವುದೇ ಶುಭ ಕಾರ್ಯ ಆಗಲಿ, ಅದು ಗಣೇಶನ ಪೂಜೆಯೊಂದಿಗೆ ಆರಂಭವಾಗುತ್ತದೆ. ಗಣೇಶನ ಪೂಜೆ ಮಾಡಿದರೆ ಆ ಕಾರ್ಯ ನಿರ್ವಿಘ್ನವಾಗಿ ನೆರವೇರುತ್ತದೆ ಎಂಬುದು ನಂಬಿಕೆ. ಹೀಗಾಗಿ ಗಣೇಶ ಧಾರ್ಮಿಕ ಕ್ಷೇತ್ರದಲ್ಲಿ ಅಗ್ರಸ್ಥಾನವನ್ನು ಪಡೆದಿದ್ದಾನೆ.

ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿಯ ದಿನದಂದು ಯಾರು ಗಣಪತಿ ಬಪ್ಪನನ್ನು ಮನೆಗೆ ಕರೆತರುತ್ತಾರೋ ಅವರ ಎಲ್ಲಾ ತೊಂದರೆಗಳನ್ನು ಆತ ದೂರ ಮಾಡುತ್ತಾನೆ ಎಂಬ ನಂಬಿಕೆ ಇದೆ. ಸದ್ಯ ವಿಘ್ನ ನಿವಾರಕನ ಆರಾಧನೆಗೆ ಕೊರೋನಾ ಕರಿನೆರಳಾಗಿದೆ. ಆದಾಗ್ಯೂ ಗಜಮುಖನ ಪೂಜೆಗೆ ಸಿದ್ಧತೆ ಭರ್ಜರಿಯಾಗಿದೆ. ಈ ಹಿನ್ನೆಲೆಯಲ್ಲಿ ಗಣೇಶ ಚತುರ್ಥಿಯ ಮಹತ್ವ, ಪೂಜಾ ವಿಧಾನ ಮತ್ತಿತರ ಮಾಹಿತಿ ಇಲ್ಲಿದೆ.

ಗಣೇಶನನ್ನು ಹೇಗೆ ಪೂಜಿಸಬೇಕು?

ಚತುರ್ಥಿಯ ದಿನ ಬೆಳಿಗ್ಗೆ ಸ್ನಾನ ಮಾಡಿದ ನಂತರ ಉಪವಾಸದ ಸಂಕಲ್ಪ ಮಾಡಿ. ಶಾಸ್ತ್ರಗಳ ಪ್ರಕಾರ, ವಿಘ್ನ ವಿನಾಶಕ ಗಣೇಶ ಮಧ್ಯಾಹ್ನ ಜನಿಸಿದ. ಅದಕ್ಕಾಗಿಯೇ ಈ ದಿನ ಮಧ್ಯಾಹ್ನ ಗಣೇಶನನ್ನು ಪೂಜಿಸುವ ಪದ್ಧತಿಯಿದೆ. ಮೊದಲನೆಯದಾಗಿ, ಗಂಗಾಜಲ ಸಿಂಪಡಿಸುವ ಮೂಲಕ ಪೂಜಾ ಸ್ಥಳವನ್ನು ಶುದ್ಧೀಕರಿಸಿ. ನಂತರ ಗಣೇಶನನ್ನು ಆವಾಹಿಸಿ ಮತ್ತು ಮಂತ್ರಗಳನ್ನು ಪಠಿಸಿ. ಮಧ್ಯಾಹ್ನದ ಶುಭ ಸಮಯದಲ್ಲಿ ಗಣಪತಿಯ ಮೂರ್ತಿಯನ್ನು ಮರದ ಪೀಠದ ಮೇಲೆ ಕೆಂಪು ಬಟ್ಟೆಯನ್ನು ಹಾಸಿ ಅದರ ಮೇಲಿಡಬೇಕು. ಬಳಿಕ ನೀವು ಅನುಸರಿಸುವ ಪೂಜಾ ಪದ್ಧತಿಯ ಪ್ರಕಾರ ಪೂಜಿಸಿ. ಸಿಂಧೂರ ಮತ್ತು ಗಣೇಶನ ನೆಚ್ಚಿನ ಮೋದಕ, ಲಡ್ಡುವನ್ನು ಅರ್ಪಿಸಿ. ಸಂದರ್ಭದಲ್ಲಿ ‘ಓಂ ಗಣಪತಯೇ ನಮಃ’ ಎಂಬ ಮಂತ್ರವನ್ನು ಪಠಿಸಿ. ಪೂಜೆಯ ನಂತರ ಎಲ್ಲಾ ಭಕ್ತರಿಗೆ ಲಡ್ಡು ವಿತರಿಸಿ. ಅಂತೆಯೇ, ಗಣಪತಿ ಬಪ್ಪನನ್ನು 3 ಅಥವಾ 5 ದಿನಗಳ ಕಾಲ ಪೂಜಿಸಿ ನೀರಿನಲ್ಲಿ ಮುಳುಗಿಸಿ.

ಮನೆಯಲ್ಲೇ ಫಟಾಫಟ್‌ ಗಣೇಶನ ಮೂರ್ತಿ ತಯಾರಿ ಹೇಗೆ?

ಮಣ್ಣಿನ ಗಣೇಶ

ಗೌರಿ-ಗಣೇಶನನ್ನು ಒಟ್ಟಿಗೆ ಮನೆಗೆ ತಂದು ಪೂಜಿಸುವುದು ವಾಡಿಕೆ. ಮಾರುಕಟ್ಟೆಯಲ್ಲಿ ವಿಧ ವಿಧ ಅಲಂಕಾರದ ಗಣೇಶ ಮೂರ್ತಿಗಳು ದೊರೆಯುತ್ತವೆ. ಆದರೆ ಮಣ್ಣಿನಿಂದ ಮಾಡಿದ ಗಣೇಶ ಪ್ರಕೃತಿ ಸ್ನೇಹಿ ಮತ್ತು ಶ್ರೇಷ್ಠ ಸಹ. ಕೆರೆಯ ಜೇಡಿಮಣ್ಣನ್ನು ತಂದು ಹದಮಾಡಿ, ಗಣಪನ ಕಲಾಕೃತಿಯನ್ನು ಸುಂದರವಾಗಿ ಮೂಡಿಸುವುದು ಒಂದು ಕಲೆ. ಕೆರೆಯಿಂದ ಮಣ್ಣು ತಂದು ನಿಮಗೆ ಬಂದಂತೆನ ಗಣೇಶ ಮೂರ್ತಿ ಮಾಡಿ ಪೂಜಿಸಿ, ನಂತರ ಮತ್ತೆ ಕೆರೆಯಲ್ಲಿ ಮುಳುಗಿಸಿ. ಇದರಿಂದ ಶ್ರೇಷ್ಠ ಭಾವನೆ ಜೊತೆಗೆ ಪರಿಸರ ಸ್ನೇಹಿ ಆಚರಣೆಯೂ ಆಗಿರುವುದು.

ಅರಿಶಿನ ಗಣಪ

ಮೊದಲು ಅರಿಶಿಣ ಹಾಗೂ ಮೈದಾಹಿಟ್ಟಿಗೆ ನೀರು ಮಿಶ್ರಣ ಮಾಡಿ ಹದವಾಗಿ ಮಾಡಿಕೊಂಡು ಗಣೇಶನ ಆಕಾರ ನೀಡಬೇಕು. ಸೊಂಡಿಲನ್ನು ಮಾಡಿದ ಬಳಿಕ ಮೆಣಸಿನ ಕಾಳನ್ನು ಬಳಸಿ ಮೂರ್ತಿಗೆ ಕಣ್ಣು ಮಾಡಬಹುದು. ಬಳಿಕ ಹೂವಿನ ಅಲಂಕಾರ ಮಾಡಿ ಮೂರ್ತಿ ಪ್ರತಿಷ್ಠಾಪಿಸಬೇಕು. ಇಂತಹ ಪುಟ್ಟಪ್ರತಿಮೆಗಳನ್ನು ತಯಾರಿಸಿ ಮನೆಯ ಆವರಣದಲ್ಲಿ ವಿಸರ್ಜನೆ ಮಾಡುವುದರಿಂದ ಸಾಮಾಜಿಕ ಅಂತರ ಕಾಪಾಡಿಕೊಳ್ಳಬಹುದು.

ಗೋಮಯ ಗಣಪ

ಪೂರ್ವಜರು ಸಗಣಿಯ ಉಂಡೆಯನ್ನು ಇಟ್ಟು ಅದರ ಮೆಲೆ ಗರಿಕೆಯನ್ನು ಇಟ್ಟು ಗಣಪ ಎಂದು ಪೂಜಿಸುತ್ತಿದ್ದರು. ಗೋಮಯ ಗಣಪತಿ ಮೂರ್ತಿಯನ್ನು ಹಸುವಿನಿಂದ ಸಿಗುವಂತಹ ಪಂಚಗವ್ಯಗಳನ್ನು ಬಳಸಿಕೊಂಡು ಮಾಡಬಹುದು. ಇದು ಮನೆಯಲ್ಲಿ ವಿಸರ್ಜನೆ ಮಾಡಿದರೆ ಗೊಬ್ಬರವಾಗುತ್ತದೆ ಅಥವಾ ಕೆರೆಯಲ್ಲಿ ವಿಸರ್ಜನೆ ಮಾಡಿದರೆ ಜೀವಿಗಳಿಗೆ ಆಹಾರವಾಗುತ್ತದೆ. ಆಕಳ ಸಗಣಿಯನ್ನು ಚೆನ್ನಾಗಿ ಒಣಗಿಸಿ ಅದನ್ನು ಪುಡಿಮಾಡಿ ಜರಡಿ ಹಿಡಿದು ಅದರೊಂದಿಗೆ ಗೋಮೂತ್ರ, ಹಾಲು, ಮೊಸರು, ತುಪ್ಪ ಬೆರೆಸಿ ಚೆನ್ನಾಗಿ ಹದಗೊಳಿಸಿ ಬೇಕಾದ ಗಣಪತಿ ಆಕಾರಕ್ಕೆ ಹಾಕಿ ಒಂದು ವಾರದವರೆಗೆ ನೆರಳಿನಲ್ಲಿ ಒಣಗಿಸಿ. ಅಲಂಕಾರಿಕವಾಗಿ ಕಣ್ಣು, ಹಲ್ಲುಗಳಿಗೆ ಬಣ್ಣ ಹಚ್ಚಿದರೆ ಪರಿಸರಸ್ನೇಹಿ ಗೋಮಯ ಗಣಪ ಸಿದ್ಧ.

ಗಣಪತಿಗೆ ಅರ್ಪಿಸುವ ನೈವೇದ್ಯಗಳೇನು?

ಮೋದಕ ಪಶ್ಚಿಮ, ಪೂರ್ವ ಮತ್ತು ದಕ್ಷಿಣ ಭಾರತದಲ್ಲಿ ಜನಪ್ರಿಯವಿರುವ ಒಂದು ಸಿಹಿ ತಿನಿಸು (ಕಣಕದ ಹೊದಿಕೆಯಿರುವ ಹೂರಣ). ಮೋದಕದಲ್ಲಿನ ಸಿಹಿಯಾದ ಹೂರಣವನ್ನು ತಾಜಾ ತುರಿದ ತೆಂಗು ಅಥವಾ ಕೊಬ್ಬರಿ ಹಾಗೂ ಬೆಲ್ಲದಿಂದ ತಯಾರಿಸಲಾಗುತ್ತದೆ. ಮತ್ತು ಮೃದುವಾದ ಹೊರಹೊದಿಕೆಯನ್ನು ಅಕ್ಕಿ ಹಿಟ್ಟು, ಅಥವಾ ಖೋವಾ ಮಿಶ್ರಿತ ಗೋಧಿ ಹಿಟ್ಟು ಅಥವಾ ಮೈದಾದಿಂದ ತಯಾರಿಸಲಾಗುತ್ತದೆ. ಮೋದಕವನ್ನು ಕರಿಯಬಹುದು ಅಥವಾ ಆವಿಯಲ್ಲಿ ಬೇಯಿಸಬಹುದು. ಗಣೇಶನ ಪ್ರಿಯವಾದ ಮೋದಕವನ್ನು ಚತುರ್ಥಿ ಹಾಗೂ ಸಂಕಷ್ಟಿಗೆ ತಯಾರು ಮಾಡುತ್ತಾರೆ. ‘ಮುದ’ ಎಂದರೆ ಆನಂದ ಎಂಬ ಅರ್ಥ ಇದೆ. ಇದರ ಜೊತೆಗೆ ಚಕ್ಕುಲಿ, ಲಾಡು, ಪಂಚಕಜ್ಜಾಯವನ್ನೂ ನೈವೇದ್ಯಕ್ಕೆ ಅರ್ಪಿಸುತ್ತಾರೆ.

ಚೌತಿ ಹಬ್ಬದ ಪೌರಾಣಿಕ ಹಿನ್ನೆಲೆ ಏನು?

ಗಣೇಶ ಪಾರ್ವತಿಯ ಮೈಯಿಂದ ಹುಟ್ಟಿದವನು. ಈತ ಸ್ವರ್ಣಗೌರಿಯ ಮಾನಸ ಪುತ್ರ. ಗೌರಿ ತನ್ನ ಮೈಕೊಳೆಯಿಂದ ಆಕೃತಿಯೊಂದನ್ನು ಸೃಷ್ಟಿಸಿ ಅದಕ್ಕೆ ಜೀವತುಂಬಿ ಸ್ನಾನ ಮಾಡಲು ಹೋಗಿರುತ್ತಾಳೆ. ತಾಯಿಯ ಅಣತಿಯಂತೆ ಗಣಪ ಮನೆಯನ್ನು ಕಾಯುತ್ತಿರುತ್ತಾನೆ. ಶಿವನು ಮನೆಗೆ ಹಿಂತಿರುಗಿದಾಗ, ಗಣಪ ಶಿವನನ್ನು ತಡೆದು ಮನೆಯೊಳಗೆ ಹೋಗಲು ಅಡ್ಡಿಪಡಿಸುತ್ತಾನೆ. ಇದರಿಂದ ಕುಪಿತಗೊಂಡ ಶಿವ ತನ್ನ ತ್ರಿಶೂಲದಿಂದ ಗಣಪನ ಶಿರವನ್ನು ಕತ್ತರಿಸುವನು. ಸ್ನಾನ ಮುಗಿಸಿ ಬಂದ ಗೌರಿ ಮಗನ ಕಳೇಬರ ಕಂಡು ರೋದಿಸುತ್ತಾಳೆ.

ಹೆಂಡತಿಯನ್ನು ಸಮಾಧಾನ ಪಡಿಸುವ ಸಲುವಾಗಿ ಶಿವ ಉತ್ತರ ದಿಕ್ಕಿನಲ್ಲಿ ಮಲಗಿದ್ದ ಮರಿಯಾನೆಯ ತಲೆಯನ್ನು ಕತ್ತರಿಸಿ ಗಣಪನ ಶರೀರಕ್ಕೆ ಅಂಟಿಸುತ್ತಾನೆ. ಹೀಗಾಗಿ ಗಣಪ ಗಜಮುಖನಾಗಿ, ಗಣಗಳ ಅಧಿಪತಿ ಮತ್ತು ಮೊದಲ ಅಗ್ರಪೂಜೆಗೆ ಅರ್ಹನಾಗುತ್ತಾನೆ. ಅಂದಿನಿಂದ ಗಣಪತಿ ಜನಿಸಿದ ಆ ದಿನ ಚೌತಿ ಹಬ್ಬ ಆಚರಿಸಲಾಗುತ್ತಿದೆ. ಗಣೇಶನ ಹಬ್ಬದ ಹಿಂದಿನ ದಿನ ತಾಯಿ ಸ್ವರ್ಣಗೌರಿಯ ಹಬ್ಬ. ತಾಯಿಯನ್ನು ಮರಳಿ ಕರೆದುಕೊಂಡು ಹೋಗುವ ಕೆಲಸ ಗಣಪನದಾಗಿರುವುದರಿಂದ, ತಾಯಿ ಭೂಲೋಕಕ್ಕೆ ಬಂದ ಮಾರನೆ ದಿನವೇ ಗಣೇಶ ಅಜ್ಜಿ ಮನೆಗೆ ಬಂದು, ವಿವಿಧ ಭಕ್ಷ್ಯ ಭೋಜನಗಳನ್ನು ಭಕ್ಷಿಸಿ ತಾಯಿಯೊಂದಿಗೆ ಹಿಂತಿರುಗುತ್ತಾನೆ ಎಂಬ ಪ್ರತೀತಿ ಇದೆ. ಈ ಹಬ್ಬ ಭಾದ್ರಪದ ಶುಕ್ಲ ಚೌತಿಯ ದಿನದಂದು ಬರುತ್ತದೆ.

ಚೌತಿ ದಿನ ಚಂದ್ರನನ್ನು ನೋಡಬಾರದೇಕೆ?

ಗಣೇಶ ಎಲ್ಲರ ಮನೆಯ ಕಡುಬು, ಮೋದಕ, ಲಾಡು, ಚಕ್ಕುಲಿ ಹೀಗೆ ಭಕ್ಷ್ಯಗಳನ್ನು ತಿಂದು ರಾತ್ರಿ ತನ್ನ ಮನೆಗೆ ವಾಹನವಾದ ಇಲಿಯ ಮೇಲೆ ಕುಳಿತು ಹೋಗುತ್ತಿದ್ದನಂತೆ. ದಾರಿಯಲ್ಲಿ ಹಾವು ಕಂಡು ಇಲಿಯು ಹೆದರಿ ಗಣೇಶನನ್ನು ಕೆಳಗೆ ಹಾಕಿ ಓಡಿ ಹೋಯಿತು. ದುಡುಂ ಎಂದು ಕೆಳಗೆ ಬಿದ್ದ ಗಣಪನ ಹೊಟ್ಟೆಒಡೆಯಿತು. ಕೋಪಗೊಂಡ ಗಣಪ ಹಾವನ್ನು ಎಳೆದು ಹೊಟ್ಟೆಗೆ ಸುತ್ತಿಕೊಂಡನು. ಇದನ್ನೆಲ್ಲಾ ನೋಡಿ ಚಂದ್ರ ನಕ್ಕನಂತೆ. ಗಣೇಶ ಕೋಪಗೊಂಡು ಚಂದ್ರನಿಗೆ ಶಾಪವಿತ್ತನು. ಚಂದ್ರನು ತನ್ನ ತಪ್ಪನ್ನು ಅರಿತು ಅವನಲ್ಲಿ ಪ್ರಾರ್ಥನೆ ಮಾಡಿದನು. ಗಣಪನು ಶಾಂತನಾಗಿ ಅದಕ್ಕೆ ಪರಿಹಾರವಾಗಿ ಯಾರು ಚೌತಿಯ ಚಂದ್ರನನ್ನು ನೋಡುವರೋ ಅವರ ಮೇಲೆ ಸುಳ್ಳು ಕಳ್ಳತನದ ಆರೋಪ ಬರಲಿ ಎಂದನಂತೆ. ಅಂದಿನಿಂದ ಚೌತಿ ಚಂದ್ರನ ದರ್ಶನ ಮಾಡಬಾರದು ಎಂದಿದೆ. ಅಕಸ್ಮಾತ್‌ ನೋಡಿದಲ್ಲಿ ಶಮಂತಕ ಮಣಿಯ ಕತೆ ಕೇಳಿದರೆ ಒಳಿತು ಎನ್ನುವ ಪ್ರತೀತಿ ಇದೆ.

ದೇಶ-ವಿದೇಶಗಳಲ್ಲಿ ವಿಭಿನ್ನ ಆಚರಣೆ

ನಮ್ಮ ದೇಶದಲ್ಲಿ ಗಣಪತಿ ಪೂಜೆಯು ಅನಾದಿ ಕಾಲದಿಂದಲೂ ನಡೆದು ಬಂದಿದೆ. ಆನೆಗಳ ಹಿಂಡು ಹೊಲ ಗದ್ದೆಗಳಿಗೆ ನುಗ್ಗಿ ಬೆಳೆ ಹಾಳು ಮಾಡುವುದನ್ನು ತಡೆಯುವ ಸಲುವಾಗಿ ರೈತಾಪಿ ಜನಗಳು ಆನೆಯ ಮುಖವುಳ್ಳ ದೇವನನ್ನು ಪೂಜಿಸಿದರೆ, ಗೋದಾಮುಗಳಲ್ಲಿ ಧಾನ್ಯಗಳನ್ನು ತಿಂದು ಹಾಳು ಮಾಡುವ ಇಲಿಗಳನ್ನು ಪೂಜಿಸಿ ಇಬ್ಬರನ್ನೂ ಸಮಾಧಾನಿಸುವುದು ಹಬ್ಬದ ಒಂದು ಕಾರಣವೆಂದು ಕೆಲವರು ಹೇಳುವರು. ದೇಶದ ವಿವಿಧೆಡೆ ವಿವಿಧ ರೀತಿಯಲ್ಲಿ ಗಣಪತಿಯ ಹಬ್ಬವನ್ನಾಚರಿಸುವರು.

ದಕ್ಷಿಣ ದೇಶದಲ್ಲಿ ಮನೆ ಮನೆಗಳಲ್ಲಿ ಗಣಪತಿಯ ಮೂರ್ತಿಗೆ ಪೂಜಿಸಿದರೆ, ಮಹಾರಾಷ್ಟ್ರದಲ್ಲಿ ಸ್ವಾತಂತ್ರ್ಯ ಸಂಗ್ರಾಮದ ಸಮಯದಲ್ಲಿ ಜನಗಳನ್ನು ಒಗ್ಗೂಡಿಸಲು ಆರಂಭಿಸಿದ ಸಾರ್ವಜನಿಕ ಗಣಪತಿ ಪೂಜೆ ಇಂದಿಗೂ ಹಾಗೆಯೇ ಮುಂದುವರೆಯುತ್ತಿದೆ. ಕರ್ನಾಟಕದ ಗಣೇಶ ಚತುರ್ಥಿ ಕರಾವಳಿಯಲ್ಲಿ ತನ್ನದೇ ಆದ ಪರಂಪರೆ ಹೊಂದಿದೆ. ಇಲ್ಲಿ ಡೊಳ್ಳು ಕುಣಿತ, ಹುಲಿವೇಷ, ಯಕ್ಷಗಾನ ಮುಂತಾದವು ಗಣೇಶೋತ್ಸವಕ್ಕೆ ಮೆರಗು ತರುತ್ತವೆ. ಭಾರತವಲ್ಲದೆ ಬೇರೆ ಬೇರೆ ದೇಶಗಳಲ್ಲೂ ಗಣೇಶನ ಹಬ್ಬದ ಆಚರಣೆ ನಡೆಯುತ್ತದೆ.

ಕರ್ನಾಟಕದ ಪ್ರಸಿದ್ಧ ಗಣಪತಿ ದೇಗುಲಗಳು

ಇಡಗುಂಜಿ ದೇಗುಲ, ಉತ್ತರ ಕನ್ನಡ

ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲೂಕಿನಲ್ಲಿರುವ ಇಡಗುಂಜಿ ಗಣಪತಿ ಕರ್ನಾಟಕದ ಪ್ರಸಿದ್ಧ ಗಣಪತಿ ದೇವಾಲಯಗಳಲ್ಲೊಂದಾಗಿದೆ. ಒಂದು ಕೈಯಲ್ಲಿ ಮೋದಕ ಮತ್ತು ಇನ್ನೊಂದು ಕೈಯಲ್ಲಿ ಕಮಲವನ್ನು ಹಿಡಿದಿರುವ ಇಲ್ಲಿನ ಗಣೇಶನ್ನು ನೋಡಲು ವರ್ಷಕ್ಕೆ 10 ಲಕ್ಷಕ್ಕಿಂತಲೂ ಹೆಚ್ಚು ಜನರು ಬರುತ್ತಾರೆ. ಮುನಿಗಳು ವಾಸಿಸುತ್ತಿದ್ದ ಕುಂಜಾರಣ್ಯ ಎಂಬ ಪ್ರದೇಶವೇ ಆಮೇಲೆ ಇಡಗುಂಜಿ ಆಯಿತೆಂಬುದು ಇಲ್ಲಿನ ಐತಿಹ್ಯ. ಜನರು ಈ ಗಣೇಶ ಸಾಕಷ್ಟುಶಕ್ತಿಶಾಲಿ ಎಂದು ನಂಬುತ್ತಾರೆ.

ಆನೆ ಗುಡ್ಡೆ ಗಣೇಶ, ಕುಂದಾಪುರ

ಉಡುಪಿ ಜಿಲ್ಲೆಯ ಕುಂದಾಪುರ ತಾಲೂಕಿನ ಆನೆಗುಡ್ಡೆ ಗ್ರಾಮದಲ್ಲಿ ಈ ದೇವಾಲಯವಿದೆ. ಕುಂಭಾಶಿ ಎಂದೂ ಈ ಗ್ರಾಮವನ್ನು ಕರೆಯುತ್ತಿದ್ದು, ಇಲ್ಲಿನ ಗಣಪತಿಗೆ ಸಿದ್ಧಿ ವಿನಾಯಕ ಮತ್ತು ಸರ್ವ ಸಿದ್ಧಿ ಪ್ರದಾಯಕ ಎಂಬ ಹೆಸರೂ ಇದೆ. ಕರಾವಳಿ ಕರ್ನಾಟಕ (ಪರಶುರಾಮ ಕ್ಷೇತ್ರ) ದಲ್ಲಿನ ಏಳು ಮುಕ್ತಿ ಸ್ಥಳಗಳಲ್ಲಿ ಒಂದಾಗಿದೆ ಆನೆ ಗುಡ್ಡೆ. ಈ ದೇಗುಲದಲ್ಲಿರುವ ಗಣೇಶ ಸ್ವಯಂಭೂ ಎಂದು ಹೇಳಲಾಗಿದೆ.

ದೊಡ್ಡ ಗಣಪತಿ, ಬೆಂಗಳೂರು

ದೊಡ್ಡ ಗಣೇಶನ ಗುಡಿ ಬೆಂಗಳೂರಿನ ಬಸವನಗುಡಿಯಲ್ಲಿದೆ. ಸಾಂಸ್ಕೃತಿಕವಾಗಿ, ಸಾಹಿತ್ಯಕವಾಗಿ ಶ್ರೀಮಂತವಾದ ಈ ಪ್ರದೇಶ ಧಾರ್ಮಿಕತೆಯ ನೆಲೆ. ಬೆಂಗಳೂರಿನಲ್ಲಿರುವ ಹಲವು ಪುರಾತನ ದೇವಾಲಯಗಳ ಪೈಕಿ ಬಸವನಗುಡಿಯ ದೊಡ್ಡ ಗಣೇಶನ ದೇವಾಲಯ ಪ್ರಮುಖವಾದದ್ದು. ಕಹಳೆ ಬಂಡೆ ಅಥವಾ ಬ್ಯೂಗಲ್‌ ರಾಕ್‌ ಉದ್ಯಾನಕ್ಕೆ ಹೊಂದಿಕೊಂಡಿರುವ ವಿಶಾಲ ಪ್ರದೇಶದಲ್ಲಿ ದೊಡ್ಡ ಗಣೇಶನ ದೇವಾಲಯವಿದೆ. ಗರ್ಭಗುಡಿಯಲ್ಲಿ ಏಕಶಿಲೆಯಲ್ಲಿ ಕಡೆದ 8 ಅಡಿ ಎತ್ತರ ಹಾಗೂ 12 ಅಡಿ ಅಗಲ ಇರುವ ಗಣೇಶನ ವಿಗ್ರಹವಿದೆ. ಈ ಗಣಪ ಸ್ವಯಂ ಉದ್ಭವ ಗಣಪ ಎಂತಲೂ ಹೇಳುತ್ತಾರೆ.

ಹಟ್ಟಿಯಂಗಡಿ ಸಿದ್ಧಿ ವಿನಾಯಕ, ಉಡುಪಿ

ಹಟ್ಟಿಯಂಗಡಿ ದೇವಾಲಯವು ಉಡುಪಿಯಲ್ಲಿದೆ. ಈ ದೇವಾಲಯವು ಅಲೂಪ ರಾಜರ ಕಾಲದಲ್ಲಿ ನಿರ್ಮಿಸಲ್ಪಟ್ಟಿದೆ. ಆ ಕಾಲದಲ್ಲೇ ಗಣೇಶನ ವಿಗ್ರಹವನ್ನು ಸ್ಥಾಪಿಸಿದ್ದರು. ಹಟ್ಟಿಯಂಗಡಿ ದೇವಾಲಯ ವರಾಹಿ ನದಿ ದಡದ ಬಳಿ ಇದೆ.

ಸೌತಡ್ಕ ಶ್ರೀ ಮಹಾಗಣಪತಿ ದೇವಸ್ಥಾನ, ದಕ್ಷಿಣ ಕನ್ನಡ

ಈ ದೇವಾಲಯವು ದಕ್ಷಿಣ ಕನ್ನಡ ಜಿಲ್ಲೆಯ ಪ್ರಮುಖ ಧಾರ್ಮಿಕ ಕೇಂದ್ರವಾಗಿದ್ದು, ಬೆಳ್ತಂಗಡಿ ತಾಲೂಕಿನ ಕೊಕ್ಕಡದಿಂದ ಸುಮಾರು 3 ಕಿ.ಮೀ. ದೂರದಲ್ಲಿದೆ. ಈ ಕ್ಷೇತ್ರದ ವಿಶೇಷತೆಯೆಂದರೆ ಇಲ್ಲಿನ ಆರಾಧ್ಯ ದೇವರಾದ ಗಣಪನಿಗೆ ಗರ್ಭಗುಡಿ ಇಲ್ಲ. ಈ ಕ್ಷೇತ್ರವು ಕುಕ್ಕೆ ಸುಬ್ರಹ್ಮಣ್ಯ ಕ್ಷೇತ್ರದಿಂದ ಸುಮಾರು 35 ಕಿ.ಮೀ., ಧರ್ಮಸ್ಥಳದಿಂದ ಸುಮಾರು 16 ಕಿ.ಮೀ. ದೂರದಲ್ಲಿದೆ. ಭಕ್ತರು ಈ ದೇವಾಲಯಕ್ಕೆ ಹರಕೆ ರೂಪದಲ್ಲಿ ಗಂಟೆಗಳನ್ನು ನೀಡುವುದು ಇಲ್ಲಿಯ ವಿಶೇಷತೆ.

ಗಣೇಶ ಹಬ್ಬದ ವೇಳೆ ಕೋವಿಡ್‌ ಬಗ್ಗೆ ಎಚ್ಚರ

- ಮನೆಯಲ್ಲೇ ಗಣೇಶ ಚತುರ್ಥಿ ಆಚರಿಸಿ

- ಚಿಕ್ಕ ಮೂರ್ತಿ ಪ್ರತಿಷ್ಠಾಪಿಸಿ, ಮನೆಯಲ್ಲೇ ವಿಸರ್ಜಿಸಿ

- ನೆಂಟರಿಷ್ಟರ ಜೊತೆ ವರ್ಚುವಲ್‌ ಹಬ್ಬ ಆಚರಿಸಿ

- ಸಾರ್ವಜನಿಕ ಗಣೇಶೋತ್ಸವದಲ್ಲಿ ಸಾಮಾಜಿಕ ಅಂತರದ ಬಗ್ಗೆ ಎಚ್ಚರ ವಹಿಸಿ

- ಸ್ಯಾನಿಟೈಸರ್‌ನಿಂದ ಆಗಾಗ ಕೈ ಸ್ವಚ್ಛ ಮಾಡಿಕೊಳ್ಳಿ

-ಸರ್ಕಾರದ ಮಾರ್ಗಸೂಚಿಗಳನ್ನು ಕಡ್ಡಾಯವಾಗಿ ಪಾಲಿಸಿ

 

Follow Us:
Download App:
  • android
  • ios