ಗಣಪತಿ ಇಬ್ಬರಿಗೆ ಪತಿ! ಬಪ್ಪ ಎರಡೆರಡು ಮದುವೆಯಾದದ್ದು ಯಾಕಪ್ಪಾ?
ಬಹಳಷ್ಟು ಜನರು ಗಣಪತಿಯನ್ನು ಬ್ರಹ್ಮಚಾರಿ ಎಂದು ಭಾವಿಸಿದ್ದಾರೆ. ಆದರೆ ಆತ ಇಬ್ಬರು ಪತ್ನಿಯರ ಮುದ್ದಿನ ಗಂಡ. ಆತನೇಕೆ ಎರಡು ಮದುವೆಯಾದ?
ಗಣೇಶ ಎಂದರೆ ಬಹುತೇಕರು ತಿಳಿದಿರುವಂತೆ ಬ್ರಹ್ಮಚಾರಿ. ಆತನಿನ್ನೂ ತಮ್ಮದೇ ಮನೆಯ ಪುಟ್ಟ ಕೂಸು ಎಂಬಂತೆ ಬಹುತೇಕರು ನೋಡುತ್ತಾರೆ. ಹಾಗಾಗಿಯೇ, ಮನೆಯಲ್ಲಿ ಸಣ್ಣ ಗಂಡು ಮಕ್ಕಳಿದ್ದರೆ, ನಮ್ಮನೆ ಗಣೇಶ ಎಂದು ಹೇಳುತ್ತಿರುತ್ತಾರೆ. ಆದರೆ, ಗಣೇಶನಿಗೆ ವಿವಾಹವಾಗಿದೆ, ಅದೂ ಒಬ್ಬರಲ್ಲ, ಇಬ್ಬರೊಂದಿಗೆ. ಅಷ್ಟೇ ಏಕೆ, ಆತನಿಗೆ ಮಕ್ಕಳು, ಮೊಮ್ಮಕ್ಕಳು ಕೂಡಾ ಇದ್ದಾರೆ ಎಂದರೆ ನಿಮಗೆ ಅಚ್ಚರಿಯಾಗಬಹುದು.
ಹೌದು, ಗಣೇಶ ಚತುರ್ಥಿ ಹತ್ತಿರ ಬಂದಿದೆ. ಗಣೇಶ ಚತುರ್ಥಿಯನ್ನು ಆತನ ಜನ್ಮದಿನ ಎನ್ನಲಾಗುತ್ತದೆ. ಶಿವ ಆನೆಯ ತಲೆಯನ್ನು ಗಣೇಶನಿಗೆ ಜೋಡಿಸಿದ ದಿನ. ಭಾದ್ರಪದ ಶುಕ್ಲದ ಚೌತಿಯಂದೇ ಹೊಸ ತಲೆ ಪಡೆದ ಗಣೇಶನಿಗೆ ದೇವಾನುದೇವತೆಗಳು ತಮ್ಮ ಶಕ್ತಿ ಧಾರೆ ಎರೆದಿದ್ದು, ಆತನನ್ನು ಪ್ರಥಮ ಪೂಜಿತನನ್ನಾಗಿಸಿದ್ದು.
ಈ ವರ್ಷ 31 ಆಗಸ್ಟ್ 2022ರಂದು ಗಣೇಶ ಚತುರ್ಥಿ. ಎಲ್ಲಡೆ ಹಬ್ಬದ ಸಂಭ್ರಮ ಕಳೆಗಟ್ಟಿದೆ. ಈ ವರ್ಷ ಗಣಪತಿ ಪ್ರತಿಷ್ಠಾಪನೆಗೆ ಮುಹೂರ್ತವು ಬೆಳಿಗ್ಗೆ 11.05 ರಿಂದ ಮಧ್ಯಾಹ್ನ 1:38 ರವರೆಗೆ ಇರುತ್ತದೆ. ಗಣಪತಿ ಬಪ್ಪನ ಆರಾಧನೆಯು ಬುದ್ಧಿವಂತಿಕೆ, ಐಶ್ವರ್ಯವನ್ನು ತರುತ್ತದೆ. ಗಣೇಶ ಹಬ್ಬದಲ್ಲಿ ಪ್ರಾಮಾಣಿಕ ಹೃದಯದಿಂದ ಬಪ್ಪನನ್ನು ಪೂಜಿಸುವವನು ಸಂಕಷ್ಟಗಳಿಂದ ಮುಕ್ತನಾಗುತ್ತಾನೆ. ಗಣಪತಿ ಪೂಜೆಯ ಬಳಿಕ ಅರ್ಚಕರು ಗಣೇಶನ ವ್ರತ ಕತೆ ಹೇಳುತ್ತಾರೆ. ಹೀಗೆ ಗಣೇಶ ಚತುರ್ಥಿಯ ದಿನ ಗಣೇಶನ ಕತೆ ಕೇಳುವುದರಿಂದ ಸಕಲವೂ ಒಳಿತಾಗುತ್ತದೆ ಎಂಬ ನಂಬಿಕೆ ಇದೆ. ಗಣಪತಿಯ ಕತೆಗಳಲ್ಲಿ ಆತನ ಮದುವೆಯ ಕತೆ ಬಹಳ ಆಸಕ್ತಿಕರವಾಗಿದೆ.
ಹಬ್ಬಕ್ಕೆ ಮನೆ ಮುಂದೆ ಸುಂದರ ರಂಗೋಲಿ ಬಿಡಿಸಿ, ಇಲ್ಲಿದೆ ಡಿಸೈನ್
ಗಣಪತಿಗೆ ಎರಡು ಮದುವೆ ಏಕೆ?
ದಂತಕಥೆಯ ಪ್ರಕಾರ, ಒಮ್ಮೆ ಗಣೇಶನು ತಪಸ್ಸಿನಲ್ಲಿ ಮುಳುಗಿರುವುದನ್ನು ನೋಡಿದ ತುಳಸಿಯು ಅವನಿಂದ ಆಕರ್ಷಿತಳಾದಳು. ತುಳಸಿಯು ಗಣಪತಿಯ ಮುಂದೆ ಮದುವೆಯ ಪ್ರಸ್ತಾಪವನ್ನು ಮಾಡಿದಳು. ಆದರೆ ಗಣೇಶನು ಆಕೆಯನ್ನು ಮದುವೆಯಾಗಲು ನಿರಾಕರಿಸಿದನು. ತಾನು ಬ್ರಹ್ಮಚಾರಿ ಎಂದು ಹೇಳಿಕೊಂಡನು. ಗಣಪತಿಯ ಮಾತು ಕೇಳಿ ಅವಮಾನಿತಳಾಗಿ, ಕೋಪಗೊಂಡ ತುಳಸಿಯು ಗಜಾನನನಿಗೆ ಎರಡು ಮದುವೆಯಾಗು ಎಂದು ಶಪಿಸಿದಳು. ಗಣೇಶ ತುಳಸಿಯನ್ನು ವಿವಾಹವಾಗಲು ನಿರಾಕರಿಸಿದ್ದರಿಂದ ಇಂದಿಗೂ ಆತನಿಗೆ ತುಳಸಿ ಏರಿಸುವುದಿಲ್ಲ.
ಗಣೇಶ ಚತುರ್ಥಿ 2022 ದಿನ ಈ ಕತೆಯನ್ನು ಕೇಳಿದರೆ ಪಾಪ ನಾಶವಾಗುವುದು..
ರಿದ್ಧಿ-ಸಿದ್ಧಿ ಗಣಪತಿಯ ಪತ್ನಿಯಾದದ್ದು ಹೇಗೆ?
ಇನ್ನೊಂದು ಕಥೆಯ ಪ್ರಕಾರ, ಗಣೇಶನ ದೇಹ ರಚನೆಯಿಂದಾಗಿ ಯಾರೂ ಆತನನ್ನು ಮದುವೆಯಾಗಲು ಸಿದ್ಧರಿರಲಿಲ್ಲ. ಇದರಿಂದ ಕುಪಿತನಾದ ಗಣಪತಿಯು ದೇವತೆಗಳ ವಿವಾಹದಲ್ಲಿ ಅಡೆತಡೆಗಳನ್ನು ಸೃಷ್ಟಿಸಲು ಪ್ರಾರಂಭಿಸಿದನು. ಗಣಪತಿಯ ಈ ನಡವಳಿಕೆಯಿಂದಾಗಿ ದೇವತೆಗಳು ತಮ್ಮ ಸಮಸ್ಯೆಗಳೊಂದಿಗೆ ಬ್ರಹ್ಮನನ್ನು ತಲುಪಿದರು. ಇದಕ್ಕೆ ಪರಿಹಾರವಾಗಿ ಬ್ರಹ್ಮನು ತನ್ನ ಇಬ್ಬರು ಮಾನಸ ಪುತ್ರಿಯರಾದ ರಿದ್ಧಿ ಮತ್ತು ಸಿದ್ಧಿಯನ್ನು ಗಣೇಶನ ಬಳಿ ಶಿಕ್ಷಣ ಪಡೆಯಲು ಕಳುಹಿಸಿದನು. ಯಾರದೋ ಮದುವೆಯ ಮಾಹಿತಿ ಗಣೇಶನ ಮುಂದೆ ಬಂದಾಗ, ರಿದ್ಧಿ ಮತ್ತು ಸಿದ್ಧಿ ಗಣೇಶನ ಗಮನವನ್ನು ಬೇರೆಡೆಗೆ ಸೆಳೆಯುತ್ತಿದ್ದರು. ಆಗ ಯಾವುದೇ ಅಡೆತಡೆಯಿಲ್ಲದೆ ಎಲ್ಲಾ ಮದುವೆಗಳು ಮುಗಿಯುತ್ತಿದ್ದವು. ಆದರೆ ಕಡೆಗೊಂದು ದಿನ ಈ ವಿಷಯ ತಿಳಿದ ಗಣೇಶನಿಗೆ ರಿದ್ಧಿ ಮತ್ತು ಸಿದ್ಧಿಯ ಮೇಲೆ ಕೋಪ ಬಂದಿತು. ಆತ ಅವರನ್ನು ಶಪಿಸಲು ಪ್ರಾರಂಭಿಸಿದನು. ಆಗ ಅವರಿಬ್ಬರ ಸಹಾಯಕ್ಕೆ ಬಂದ ಬ್ರಹ್ಮನು ಗಣಪತಿಯ ಮುಂದೆ ರಿದ್ಧಿ-ಸಿದ್ಧಿಯ ಮದುವೆಯ ಪ್ರಸ್ತಾಪವನ್ನು ಮಾಡಿದನು. ಇದಕ್ಕೆ ಗಣೇಶ ಒಪ್ಪಿಕೊಂಡನು. ಈ ರೀತಿಯಲ್ಲಿ ಗಣಪತಿಗೆ ಇಬ್ಬರು ಹೆಂಡತಿಯರು. ಗಣಪತಿಗೆ ರಿದ್ಧಿ-ಸಿದ್ಧಿಯಿಂದ ಇಬ್ಬರು ಮಕ್ಕಳಾದರು. ಅವರಿಗೆ ಶುಭ ಮತ್ತು ಲಾಭ ಎಂದು ಹೆಸರಿಸಲಾಯಿತು. ಪೌರಾಣಿಕ ನಂಬಿಕೆಗಳ ಪ್ರಕಾರ, ಗಣೇಶನಿಗೆ ಇಬ್ಬರು ಮೊಮ್ಮಕ್ಕಳು, ಅವರೇ ಅಮೋದ್ ಮತ್ತು ಪ್ರಮೋದ್.