ಪ್ರತಿ ವ್ಯಕ್ತಿಗೂ ಒಂದೊಂದರಲ್ಲಿ ಶುಭ ಅಶುಭವೆಂದು ಇದ್ದೇ ಇರುತ್ತದೆ. ಕೆಲವರಿಗೆ ಕೆಲವು ದಿನಾಂಕ ಅದೃಷ್ಟವಾದರೆ ಮತ್ತೆ ಕೆಲವರಿಗೆ ಅದೇ ದಿನಾಂಕಗಳು ಅಶುಭವಾಗಿರುತ್ತವೆ. ಹಾಗೆಯೇ ವಾರದ ವಿಷಯದಲ್ಲಿ ಸಹ ಬೇರೆ ಬೇರೆ ರಾಶಿಯವರಿಗೆ ಬೇರೆ ಬೇರೆ ದಿನಗಳು ಶುಭವನ್ನು ತರುತ್ತವೆ. ಯಾವ ರಾಶಿಗೆ ಯಾವ ದಿನ ಶುಭವೆಂದು ತಿಳಿಯೋಣ..

ಜ್ಯೋತಿಷ್ಯ ಶಾಸ್ತ್ರದಲ್ಲಿ ವ್ಯಕ್ತಿಯ ರಾಶಿಯನ್ನು ಆಧರಿಸಿ ವ್ಯಕ್ತಿತ್ವವನ್ನು ಹೇಳಲಾಗುತ್ತದೆ. ಅದೇ ರೀತಿ ರಾಶಿಗೆ ಅನುಸಾರ ವ್ಯಕ್ತಿಗೆ ಹೊಂದುವ ಆಭರಣ, ರತ್ನ, ಪೂಜಿಸುವ ದೇವರು ಮತ್ತು ಆಗಿಬರುವ ವಾರದ ದಿನವನ್ನು ಹೇಳಲಾಗುತ್ತದೆ. ವ್ಯಕ್ತಿಯ ರಾಶಿಗೆ ಇಂಥದ್ದೇ ವಾರ ಶುಭ ಅಥವಾ ಅಶುಭವೆಂದು ಶಾಸ್ತ್ರದಲ್ಲಿ ಹೇಳಲಾಗುತ್ತದೆ. ಹಾಗಾಗಿ ಆ ದಿನದಂದು ಮಾಡಿದ ಕಾರ್ಯಗಳು ಸಫಲತೆಯನ್ನು ಕಾಣುತ್ತದೆ. ಅಷ್ಟೇ ಅಲ್ಲದೆ ಅಂಥ ದಿನದಂದು ಪುಣ್ಯ ಕಾರ್ಯಗಳನ್ನು ಮಾಡಿದರೆ ನೆಮ್ಮದಿ ಪ್ರಾಪ್ತವಾಗುತ್ತದೆ.
ಪ್ರತಿ ರಾಶಿಯವರಿಗೂ ವಾರದ ಒಂದೊಂದು ದಿನಗಳು ಅತ್ಯಂತ ಶುಭವನ್ನು ತಂದುಕೊಡುವುದಾಗಿರುತ್ತದೆ. ಹಾಗಾಗಿ ಆ ದಿನ ಯಾವುದೆಂದು ತಿಳಿಯೋಣ. ಅಂದೇ ಉತ್ತಮ ಕಾರ್ಯಗಳನ್ನು ಆರಂಭಿಸಿದರೆ, ಸಫಲತೆ ಸಿಗುವುದು ಖಚಿತವಾಗಿರುತ್ತದೆ.

ಮೇಷ ರಾಶಿ (Aries)
ಈ ರಾಶಿಯವರು ಅತ್ಯಂತ ಛಲವಾದಿಗಳು. ಮೇಷ ರಾಶಿಯವರಿಗೆ ಆತ್ಮವಿಶ್ವಾಸ ಹೆಚ್ಚು. ಯಾವುದೇ ಕೆಲಸವಾದರೂ ಅದನ್ನು ಅತ್ಯಂತ ಶ್ರದ್ಧೆಯಿಂದ ಮಾಡಿ ಯಶಸ್ಸು ಗಳಿಸುವುದು ಇವರ ಧ್ಯೇಯವಾಗಿರುತ್ತದೆ. ಈ ರಾಶಿಯವರ ಈ ಎಲ್ಲ ಗುಣಕ್ಕೆ ಅಧಿಪತಿ ಗ್ರಹವಾದ ಮಂಗಳನ ಪ್ರಭಾವ ಹೆಚ್ಚಾಗಿರುತ್ತದೆ. ಮೇಷ ರಾಶಿಯವರಿಗೆ ಮಂಗಳವಾರ ಹೆಚ್ಚು ಶುಭವನ್ನು ತರುತ್ತದೆ. 

ಇದನ್ನು ಓದಿ: Sunday Born Personality: ಭಾನುವಾರ ಹುಟ್ಟಿದೋರು ಅಹಂಕಾರಿಗಳಾ? ಅವ್ರ್ ಲವ್ ಲೈಫ್ ಹೇಗೆ?

ವೃಷಭ ರಾಶಿ (Taurus) 
ವೃಷಭ ರಾಶಿಯವರು ಅತ್ಯಂತ ಹಠವಾದಿಗಳು. ತಾವು ಹೇಳಿದ್ದೇ ನಡೆಯಬೇಕೆಂಬ ಸ್ವಭಾವ ಇವರದ್ದಾಗಿರುತ್ತದೆ. ಈ ವ್ಯಕ್ತಿಗಳು ಮಾಡಬೇಕೆಂದುಕೊಂಡ ಯಾವುದೇ ಕೆಲಸವಾಗಲಿ ಅದನ್ನು ಮಾಡಿ ಮುಗಿಸುವವರೆಗೆ ಇವರಿಗೆ ನೆಮ್ಮದಿ ಇರುವುದಿಲ್ಲ. ಈ ರಾಶಿಗೆ ಅಧಿಪತಿ ಶುಕ್ರನಾಗಿರುವ ಕಾರಣ ಇವರಿಗೆ ಶುಕ್ರವಾರ ಶುಭವನ್ನು ತಂದುಕೊಡಲಿದೆ. ಶುಕ್ರವಾರವನ್ನು ಹೊರತು ಪಡಿಸಿದರೆ ಬುಧವಾರ ಸಹ ಶುಭವಾರವೆಂದು ಹೇಳಲಾಗುತ್ತದೆ.

ಮಿಥುನ ರಾಶಿ (Gemini)
ಈ ರಾಶಿಯವರದ್ದು ತುಂಬಾ ಆಕರ್ಷಕ ವ್ಯಕ್ತಿತ್ವ. ಎಂಥ ವಿಷಯವಾದರೂ ಕ್ಷಣದಲ್ಲಿಯೇ ಗ್ರಹಿಸುವ ಸ್ವಭಾವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಇವರ ಸ್ಮರಣ ಶಕ್ತಿಯು ಸಹ ಅಷ್ಟೇ ಚುರುಕಾಗಿರುತ್ತದೆ. ಇದಕ್ಕೆ ಕಾರಣ ಈ ರಾಶಿಯ ಅಧಿಪತಿ ಬುಧಗ್ರಹ. ಹಾಗಾಗಿ ಮಿಥುನ ರಾಶಿಯವರಿಗೆ ಬುಧವಾರ ಶುಭವನ್ನು ತಂದುಕೊಡುತ್ತದೆ. 

ಕರ್ಕಾಟಕ ರಾಶಿ (Cancer)
ಈ ರಾಶಿಯವರು ಸೂಕ್ಷ್ಮ ಸ್ವಭಾವವನ್ನು ಹೊಂದಿರುತ್ತಾರೆ. ಕಲ್ಪನೆಗಳಲ್ಲೇ ಹೆಚ್ಚು ಜೀವಿಸುತ್ತಾರೆ. ಈ ರಾಶಿಯ ಅಧಿಪತಿ ಗ್ರಹ ಚಂದ್ರ. ಚಂದ್ರನು ಮನಸ್ಸಿನ ಕಾರಕ ಗ್ರಹ. ಹಾಗಾಗಿ ಈ ರಾಶಿಯವರು ಮನಸ್ಸಿನಿಂದಲೇ ಯೋಚಿಸುವವರಾಗಿರುತ್ತಾರೆ. ಈ ರಾಶಿಯವರಿಗೆ ಚಂದ್ರನವಾರವಾದ ಸೋಮವಾರವು ಶುಭವೆಂದು ಹೇಳಲಾಗುತ್ತದೆ.

ಸಿಂಹ ರಾಶಿ (Leo)
ಈ ರಾಶಿಯವರು ಸಾಹಸ ಪ್ರವೃತ್ತಿವುಳ್ಳವರು ಮತ್ತು ಹೆಚ್ಚು ತೇಜಸ್ಸನ್ನು ಹೊಂದಿರುತ್ತಾರೆ. ಈ ರಾಶಿಯ ಅಧಿಪತಿ ಗ್ರಹ ಸೂರ್ಯನಾಗಿರುವ ಕಾರಣ ಸಿಂಹರಾಶಿಯವರಿಗೆ ಆದಿತ್ಯವಾರ ಅಂದರೆ ಭಾನುವಾರ ಅತ್ಯಂತ ಶುಭವೆಂದು ಹೇಳಲಾಗುತ್ತದೆ.

ಕನ್ಯಾ ರಾಶಿ (Virgo)
ಈ ರಾಶಿಯವರನ್ನು ಪರಿಪೂರ್ಣರೆಂದು ಹೇಳಲಾಗುತ್ತದೆ. ಬುಧ ಗ್ರಹದ ಪ್ರಭಾವದಿಂದ ಈ ರಾಶಿಯವರು ಹೆಚ್ಚಿನ ಪ್ರತಿಭೆಯುಳ್ಳವರಾಗಿರುತ್ತಾರೆ. ಕನ್ಯಾ ರಾಶಿಯವರು ತಮ್ಮ ಬುದ್ಧಿವಂತಿಕೆಯನ್ನು ಪ್ರದರ್ಶಿಸಲು ಬುಧವಾರ ಪ್ರಶಸ್ತವಾದ ದಿನವಾಗಿರುತ್ತದೆ.

ತುಲಾ ರಾಶಿ (Libra)
ಈ ರಾಶಿಯವರಿಗೆ ಶುಕ್ರವಾರ ಉತ್ತಮವಾದ ದಿನವೆಂದು ಹೇಳಲಾಗುತ್ತದೆ. ಕಾರಣ ತುಲಾ ರಾಶಿಗೆ ಅಧಿಪತಿ ದೇವರು ಶುಕ್ರಗ್ರಹವಾಗಿದೆ. ಈ ರಾಶಿಯವರು ಎಲ್ಲಾ ಕೆಲಸಗಳನ್ನು ಅತ್ಯಂತ ಜವಾಬ್ದಾರಿಯಿಂದ ನಿಭಾಯಿಸುತ್ತಾರೆ. ಶುಕ್ರನ ಪ್ರಭಾವ ಹೆಚ್ಚಿರುವ ಶುಕ್ರವಾರ ಇವರು ಮಾಡಿದ ಕೆಲಸಗಳು ಸಫಲತೆಯನ್ನು ಕಾಣುತ್ತವೆ.

ವೃಶ್ಚಿಕ ರಾಶಿ (Scorpio)
ಈ ರಾಶಿಯವರಿಗೆ ಎಲ್ಲವನ್ನೂ ಮಾಡಬೇಕೆಂಬ ಉತ್ಸಾಹ ಮತ್ತು ಬುದ್ಧಿವಂತಿಕೆ ಹೆಚ್ಚಿರುತ್ತದೆ. ಈ ರಾಶಿಯ ಅಧಿಪತಿ ಗ್ರಹ ಮಂಗಳ ಗ್ರಹವಾಗಿದೆ. ಹಾಗಾಗಿ ಇವರಿಗೆ ಒಳಿತಾಗುವುದು ಮಂಗಳವಾರದಂದು. ಮಂಗಳವಾರ ಇವರಿಗೆ ಅದೃಷ್ಟ ಒಲಿದು ಬರುತ್ತದೆ. 

ಧನು ರಾಶಿ (Sagittarius)
ಧನು ರಾಶಿಯವರಿಗೆ ಗುರುವಾರ ಅತ್ಯಂತ ಶುಭವನ್ನು ತಂದುಕೊಡುವ ವಾರವಾಗಿದೆ. ಗುರುವಿನ ಅಧಿಪತ್ಯವಿರುವ ಈ ರಾಶಿಯವರು ಉತ್ತಮ ವ್ಯಕ್ತಿತ್ವವನ್ನು ಹೊಂದಿರುತ್ತಾರೆ. ಅಷ್ಟೇ ಅಲ್ಲದೆ ಈ ದಿನ ಯಶಸ್ಸನ್ನು ಪಡೆಯುತ್ತಾರೆ.

ಮಕರ ರಾಶಿ (Capricorn)
ಈ ರಾಶಿಯವರು ಎಲ್ಲರಿಗಿಂತ ಭಿನ್ನರಾಗಿರಲು ಇಷ್ಟಪಡುತ್ತಾರೆ. ಕೆಲಸಕಾರ್ಯಗಳಲ್ಲಿ ಹೆಚ್ಚಿನ ಶ್ರದ್ಧೆಯುಳ್ಳ ಈ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಹೆಚ್ಚಿನ ಮನ್ನಣೆಯನ್ನು ಗಳಿಸುತ್ತಾರೆ. ಮಕರ ರಾಶಿಯ ಅಧಿಪತಿ ಗ್ರಹ ಶನಿ. ಹಾಗಾಗಿ ಇವರಿಗೆ ಶನಿವಾರ ಶುಭವಾರವಾಗಿದೆ.

ಇದನ್ನು ಓದಿ: Festive Tips: ಶಿವರಾತ್ರಿಯಂದು ಈ ರುದ್ರಾಕ್ಷಿ ಧರಿಸಿ, ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ನಿಮ್ಮದೇ!

ಕುಂಭ ರಾಶಿ (Aquarius) 
ಈ ರಾಶಿಯವರು ಹೆಚ್ಚಿನ ಧೈರ್ಯವನ್ನು ಹೊಂದಿರುತ್ತಾರೆ. ಬದಲಾವಣೆಗೆ ಹೆದರದ ಈ ರಾಶಿಯ ಅಧಿಪತಿ ಗ್ರಹ ಕೂಡಾ ಶನಿದೇವನಾಗಿರುತ್ತಾನೆ. ಈ ವ್ಯಕ್ತಿಗಳಿಗೆ ಶನಿವಾರ ಶುಭವನ್ನು ತಂದುಕೊಡುತ್ತದೆ. ಎಲ್ಲಾ ಕ್ಷೇತ್ರಗಳಲ್ಲೂ ಕಾರ್ಯನಿರ್ವಹಿಸುವ ಕ್ಷಮತೆ ಇವರಲ್ಲಿರುತ್ತದೆ.

ಮೀನ ರಾಶಿ (Pisces)
ಗುರುವಿನ ಅನುಗ್ರಹ ಹೊಂದಿರುವ ಈ ರಾಶಿಯವರಿಗೆ ಗುರುವಾರ ಶುಭವಾರವಾಗಿದೆ. ಈ ರಾಶಿಯವರು ಈ ದಿನ ಮಾಡಿದ ಎಲ್ಲಾ ಕೆಲಸಗಳು ಸಫಲತೆಯನ್ನು ಕಾಣುತ್ತವೆ. ಮೀನ ರಾಶಿಯವರು ಕಾರ್ಯಕ್ಷೇತ್ರದಲ್ಲಿ ಉತ್ತಮ ಸಾಧನೆಯನ್ನು ಮಾಡುತ್ತಾರೆ.