ದೀಪಾವಳಿ: ದ್ವಾದಶ ರಾಶಿಗಳ ಫಲಗಳು, ಅದೃಷ್ಟ ಸಂಖ್ಯೆ ತಿಳಿದುಕೊಳ್ಳಿ
ಸೂರ್ಯ ಸಂಕ್ರಮಣಗಳು ವೈಜ್ಞಾನಿಕವಾಗಿ ವಾತಾವರಣದಲ್ಲಿ ಬದಲಾವಣೆ ತರುವಹಾಗೆ ನಮ್ಮ ರಾಶಿಗಳ ಮೂಲಕ ನಮ್ಮ ಮೇಲೂ ಭಾವನಾತ್ಮಕ ಪರಿಣಾಮ ಬೀರುವುದು ನಿಶ್ಚಿತ. ಸೂರ್ಯನೇ ಮೊದಲಾಗಿ ಉಳಿದ ಗ್ರಹಗಳ ಪ್ರಭಾವ 12 ರಾಶಿಗಳ ಮೇಲೆ ಹೇಗೆಲ್ಲಾ ಇರಲಿದೆ ಎಂಬುದನ್ನು ಗಮನಿಸೋಣ.
ಭಾರತೀಯ ಸಂಸ್ಕೃತಿಯಲ್ಲಿ ವರ್ಷ ಅಥವಾ ಸಂವತ್ಸರ ಎಂಬುದು ತುಂಬ ಪ್ರಧಾನವಾದ ಅಂಶ. ಈ ಸಂವತ್ಸರ ಆರಂಭ ಕಾಲಕ್ಕೆ ನಾವು ಹೆಚ್ಚಿನ ಪ್ರಾಧಾನ್ಯತೆ ಕೊಡ್ತೀವಿ. ಪ್ರಾಚೀನ ಕಾಲದಲ್ಲಿ ಕಾರ್ತೀಕ ಮಾಸದಿಂದಲೇ ವರ್ಷಾರಂಭವಾಗುತ್ತಿತ್ತು ಎಂಬುದನ್ನು ನಾವು ಇತಿಹಾಸ, ಪುರಾಣಗಳಿಂದ ಗಮನಿಸುತ್ತೇವೆ. ವರಾಹಮಿಹಿರನ ಕಾಲದ ನಂತರ ಚೈತ್ರಮಾಸ ಪ್ರಾಧಾನ್ಯತೆಗೆ ಬಂದಿದೆ.
ಅಂತೂ ಈ ಚೈತ್ರ-ಕಾರ್ತೀಕ ಮಾಸಗಳು ವರ್ಷದ ಎರಡು ಕೇಂದ್ರ ಬಿಂದುವಿನಂಥ ಕಾಲಗಳು. ಈ ಕಾಲ ಸೂಚಿತವಾಗುವುದು ಸೂರ್ಯ-ಚಂದ್ರರಿಂದ. ಸೂರ್ಯ ಮೇಷ ರಾಶಿಗೆ ಪ್ರವೇಶವಾದಾಗ ಚೈತ್ರಮಾಸ. ಸೂರ್ಯ ತುಲಾ ರಾಶಿ ಪ್ರವೇಶವಾದಾಗ ಕಾರ್ತೀಕ ಮಾಸ. ಪುರಾಣ - ಧರ್ಮಶಾಸ್ತ್ರಗಳಲ್ಲಿ ಈ ವಸಂತ ಹಾಗೂ ಕಾರ್ತೀಕ (ಚೈತ್ರ-ತುಲಾ ) ಮಾಸಗಳನ್ನ ಸಂವತ್ಸರದ ಎರಡು ಮುಖ್ಯ ಭಾಗ ಅಂತ ಪರಿಗಣಿಸಿದ್ದರು. ಈ ವಸಂತ ಹಾಗೂ ಶರದೃತುಗಳನ್ನು ಯಮದಂಷ್ಟ್ರ ಅಂತಲೂ ಕರೆಯುತ್ತಿದ್ದರು. ಅಂದರೆ ಈ ಎರಡು ಋತುಗಳನ್ನ ಯಮನ ಎರಡು ಕೋರೆಹಲ್ಲುಗಳಿಗೆ ಹೋಲಿಸಿದ್ದಾರೆ.
ಈ ರಾಶಿಚಕ್ರದವರು ನಿಜವಾದ ಪ್ರೀತಿ ಪಡೆಯೋದು ಕಷ್ಟ: ಸವಾಲು ಸಾವಿರ
ಈ ವಸಂತ-ಶರತ್ ಸಂಪಾತಗಳು ನಮ್ಮ ವಾತಾವರಣ ಭೇದವುಂಟುಮಾಡುವುದರಿಂದ ಮನುಷ್ಯನ ದೇಹ ರೋಗ ರುಜಿನಗಳಿಗೆ ತುತ್ತಾಗುತ್ತವೆ. ಈ ಕಾಲದಲ್ಲಿ ಸಾಮಾನ್ಯವಾಗಿ ಮನುಷ್ಯರ ಆರೋಗ್ಯ ವ್ಯತ್ಯಾಸವಾಗುವುದನ್ನು ನಾವು ಗಮನಿಸುತ್ತೇವೆ. ವಸಂತ ಕಾಲದಲ್ಲಿ ಸೂರ್ಯ ಮೇಷ ರಾಶಿಯನ್ನು ಪ್ರವೇಶ ಮಾಡುವಂತೆ, ಈ ಶರತ್ಕಾಲದಲ್ಲಿ ಸೂರ್ಯ ತುಲಾ ರಾಶಿಯನ್ನು ಪ್ರವೇಶಿಸುತ್ತಾನೆ. ಇಲ್ಲಿ ಸೂರ್ಯನಿಗೆ ಬಲವಿರುವುದಿಲ್ಲ. ಕಾರಣ ತುಲಾ ರಾಶಿ ಸೂರ್ಯನ ನೀಚ ಸ್ಥಾನ. ವೈಜ್ಞಾನಿಕವಾಗಿ ಗಮನಿಸುವುದಾದರೆ ಸೂರ್ಯ ಭೂಮಿಯಿಂದ ಬಹು ದೂರ ಹೋಗುತ್ತಾನೆ. ( ಭೂಮಿಯೇ ತಿರುಗುತ್ತದೆ ) ಹೀಗಾಗಿಯೇ ಈ ಕಾಲದಲ್ಲಿ ದೀರ್ಘ ಕತ್ತಲು, ವಿಪರೀತ ಚಳಿಯನ್ನು ಅನುಭವಿಸುತ್ತೇನೆ. ಹೀಗಾಗಿ ಈ ಕತ್ತಲು ಹಾಗೂ ಚಳಿಯ ನಿವಾರಣೆಗೆ ಬೆಳಕು ಬೇಕು. ಬೆಳಕಿನಲ್ಲಿ ಕತ್ತಲ ನಿವಾರಣೆಯ ಜೊತೆ ಬಿಸಿಯ ಅನುಭವವೂ ಆಗುತ್ತದೆ. ಇದು ಬಾಹ್ಯ ಚಿಂತನೆಯಾದರೆ. ಈ ದೀಪಾವಳಿಗೆ ಅಥವಾ ಕಾರ್ತೀಕ ಮಾಸದ ದೀಪಕ್ಕೆ ಮತ್ತೂ ಒಂದು ಅಂತರಾರ್ಥ ಇದೆ. ದೀಪಾವಳಿ ನಿಮ್ಮೆಲ್ಲರಿಗೆ ತಿಳಿದಿರುವಂತೆ ಬೆಳಕಿನ ಹಬ್ಬ. ಜ್ಞಾನವನ್ನು ಪ್ರತಿನಿಧಿಸುವ ಹಬ್ಬ.
ಶಾಸ್ತ್ರದಲ್ಲಿ ‘‘ ಹೃದಯ ಕಮಲ ಮಧ್ಯೆ ದೀಪವದ್ವೇದಸಾರಂ ’’ ಎಂಬ ಮಾತನ್ನು ಹೇಳುತ್ತಾರೆ. ಹೃದಯ ಕಮಲ ಮಧ್ಯದಲ್ಲಿರುವ ದೀಪ ಸದೃಶವಾದ ವೇದಸಾರ ರೂಪಿ ಪರಬ್ರಹ್ಮನನ್ನು ನೆನೆವುದೇ ಈ ದೀಪಾವಳಿಯ ಪ್ರಧಾನ ಅಂಶ. ಆ ಬೆಳಕು ಅಗಾಧ ಅಸಾಧ್ಯ ಶಕ್ತಿಯಿಂದ ಕೂಡಿದೆ. ‘‘ ಜ್ಯೋತಿಷಾಮಪಿ ತಜ್ಜ್ಯೋತಿ ತಮಸ: ಪರಮೋಚ್ಚತೇ ’’ ಎನ್ನುವ ಹಾಗೇ ಅದು ಜ್ಯೋತಿಗಳಿಗೆ ಜ್ಯೋತಿಯಾಗಿ ಕತ್ತಲನ್ನು ದಾಟಿಸಲಿ ಎಂಬ ಪ್ರಾರ್ಥನೆ ಮಾಡುತ್ತಾ ಆ ದಿವ್ಯ ಜ್ಯೋತಿಯನ್ನು ಸ್ತುತಿಸಬೇಕು, ಆರಾಧಿಸಬೇಕು. ಅದೇ ನಿಜವಾದ ಆಚರಣೆ.
ಅಂದಹಾಗೇ ಸೂರ್ಯ ಸಂಕ್ರಮಣಗಳು ವೈಜ್ಞಾನಿಕವಾಗಿ ವಾತಾವರಣದಲ್ಲಿ ಬದಲಾವಣೆ ತರುವಹಾಗೆ ನಮ್ಮ ರಾಶಿಗಳ ಮೂಲಕ ನಮ್ಮ ಮೇಲೂ ಭಾವನಾತ್ಮಕ ಪರಿಣಾಮ ಬೀರುವುದು ನಿಶ್ಚಿತ. ಸೂರ್ಯನೇ ಮೊದಲಾಗಿ ಉಳಿದ ಗ್ರಹಗಳ ಪ್ರಭಾವ 12 ರಾಶಿಗಳ ಮೇಲೆ ಹೇಗೆಲ್ಲಾ ಇರಲಿದೆ ಎಂಬುದನ್ನು ಗಮನಿಸೋಣ. ರಾಶಿಫಲದಿಂದ ಸಂತೋಷ-ದು:ಖ ಎರಡೂ ಸಹಜ. ಹೀಗಾಗಿ ಆತಂಕಕ್ಕೆ ಒಳಗಾಗದೆ ಸೂಚಿಸಿದ ಪರಿಹಾರ ಮಾಡಿಕೊಳ್ಳಿ. ಭಗವಂತನ ಆರಾಧನೆ ಎಲ್ಲ ಸಮಸ್ಯೆಗಳನ್ನೂ ಕಳೆದು ಹೊಸ ಬೆಳಕನ್ನು ತರುತ್ತದೆ. ಚಿಂತೆ ಬೇಡ.
ದೀಪಾವಳಿಗೆ ಈ ರೀತಿ ಲಕ್ಷ್ಮೀ ಗಣೇಶ ಪ್ರತಿಮೆ ಮನೆಗೆ ತರೋದು ದುರಾದೃಷ್ಟಕರ
ಮೇಷ (Aries)
ರಾಶ್ಯಧಿಪತಿಯಾದ ಕುಜನು ಪ್ರಸ್ತುತ ಸಪ್ತಮ ಸ್ಥಾನದಲ್ಲಿದ್ದಾನೆ. ನೀಚ ಸೂರ್ಯನ ಜೊತೆ ಸೇರಿಕೊಂಡಿದ್ದಾನೆ. ಹೀಗಾಗಿ ಕೊಂಚ ದಾಂಪತ್ಯ ಜೀವನ ಅಸಮಧಾನದಿಂದ ಕೂಡಿರುತ್ತದೆ. ಪ್ರೀತಿ-ಪ್ರೇಮ ವಿಚಾರಗಳಲ್ಲಿ ಅಸಮಧಾನ ಫಲವಿದೆ. ಯಾವುದನ್ನೂ ಅತಿಯಾಗಿ ಮಾಡುವುದು ಒಳಿತಲ್ಲ. ವ್ಯಾಪಾರಿಗಳು ಕೊಂಚ ಎಚ್ಚರವಾಗಿರಬೇಕು. ವಿದೇಶ ಪ್ರಯಾಣಗಳನ್ನು ಕೊಂಚ ಮುಂದೂಡುವುದು ಉತ್ತಮ.
ನವೆಂಬರ್ ನಂತರ ಗುರು ಬದಲಾವಣೆ ಹಾಗೂ ಡಿಸೆಂಬರ್ ನಂತರ ಆಗುವ ಕುಜ-ಸೂರ್ಯರ ಬದಲಾವನೆಯಿಂದ ಶುಭ ಫಲಗಳನ್ನು ಕಾಣುವಿರಿ. ವಿವಾಹ-ಉಪನಯನದಂಥ ಶುಭ ಕಾರ್ಯಗಳಿಗೆ ಚಾಲನೆ ಸಿಗಲಿದೆ. ಉದ್ಯೋಗಿಗಳಿಗೆ ಬಡ್ತಿ, ಉತ್ತಮ ಅವಕಾಶ, ಸ್ಥಾನ-ಮಾನಗಳು ಲಭಿಸಲಿವೆ. ವಿದೇಶದಿಂದ ಸಿಹಿ ಸುದ್ದಿ ಬರಲಿದೆ, ಅಣ್ಣಂದಿರು-ಅಕ್ಕಮದಿರಿಂದ ಅನುಕೂಲ ಫಲ, ಲಾಭ ಸಮೃದ್ಧವಾಗಲಿದೆ. ವಿದ್ಯಾರ್ಥಿಗಳಿಗೆ ಶುಭಫಲವಿರಲಿದೆ. ಪ್ರಾರಂಭದ ಒಂದು ತಿಂಗಳು ಸ್ವಲ್ಪ ಅಸಮಧಾನದಿಂದ ಕೂಡಿರುತ್ತದೆ ಎಂಬುದನ್ನು ಬಿಟ್ಟರೆ ಉಳಿದ ದಿನಗಳಲ್ಲಿ ಶುಭಫಲಗಳೇ ಇದ್ದಾವೆ. ನಿರಾಳರಾಗಿರಬಹುದು.
ಪರಿಹಾರ - ಸುಬ್ರಹ್ಮಣ್ಯ ಪ್ರಾರ್ಥನೆ ಹಾಗೂ ಗೋಧಿ ದಾನದಿಂದ ಹೆಚ್ಚಿನ ಅನುಕೂಲ
ಅದೃಷ್ಟ ಸಂಖ್ಯೆ 1, 5 ಹಾಗೂ 9
ಬಣ್ಣ - ಹವಳದ ಬಣ್ಣ
ರತ್ನ - ಹವಳ, ಮಾಣಿಕ್ಯ
ವೃಷಭ (Taurus)
ದೀಪಾವಳಿ ನಿಮ್ಮ ಪಾಲಿಗೆ ಸ್ವಲ್ಪ ಅಸಮಧಾನವನ್ನು ತರಲಿದೆ. ಡಿಸೆಂಬರ್ ಮಧ್ಯದ ವರೆಗೆ ಆರೋಗ್ಯದ ಕಡೆ ಎಚ್ಚರವಹಿಸಿ. ಶತ್ರುಗಳ ಕಾಟ ಹೆಚ್ಚಾಗಲಿದೆ, ತಂದೆಯ ಬಂಧುಗಳ ಜೊತೆ ಹುಷಾರಾಗಿರಿ, ಅತಿಯಾದ ನಂಬಿಕೆ, ವಿಶ್ವಾಸಗಳಿಂದ ತೊಂದರೆಯಾಗುವ ಸಾಧ್ಯತೆ, ನವೆಂಬರ್ 20 ರ ನಂತರ ಗುರುಬಲ ಕಳೆದುಕೊಳ್ಳುತ್ತೀರಿ. ಆದರೆ ವೃತ್ತಿಯಲ್ಲಿ ಬಲವಿರಲಿದೆ, ಉದ್ಯೋಗಿಗಳಿಗೆ ಹೊಸ ಅವಕಾಶಗಳು - ಆಸ್ಪದಗಳು ಸಿಗುವ ಸಾಧ್ಯತೆ ಹೆಚ್ಚಾಗಿದೆ. ವಿದ್ಯಾರ್ಥಿಗಳಿಗೆ ಉತ್ತಮ ಅನುಕೂಲ, ವಿದ್ಯಾಸಕ್ತಿ, ಹೊಸ ವಿದ್ಯೆ ಕಲಿಕೆಗೆ ಅವಕಾಶ ಇರಲಿದೆ. ಭಾಗ್ಯದ ಶನೈಶ್ಚರ ಅನುಕೂಲವನ್ನು ಉಂಟುಮಾಡುತ್ತಾನೆ.
ನಿಧಾನಗತಿಯಲ್ಲಿ ಕೆಲಸಗಳು ನಡೆಯಲಿವೆ. ಅರ್ಚಕರು, ಉಪನ್ಯಾಸಕರು, ಕಾನೂನು ಅಭ್ಯಾಸಿಗರಿಗೆ ಅನುಕೂಲದ ವಾತಾವರಣ ಇರಲಿದೆ. ಮಕರ ಸಂಕ್ರಾಂತಿ ನಂತರ ಸ್ತ್ರೀ-ಪುರುಷರ ಭಾವನೆಗಳಲ್ಲಿ ಸ್ವಲ್ಪ ವ್ಯತ್ಯಾಸಗಳಾಗಿ ನಂಬಿಕೆ ದ್ರೋಹವಾಗುವ ಸಾಧ್ಯತೆ ಇದೆ. ಎಚ್ಚರವಾಗಿರಿ. ವಿಶ್ವಾಸ ದ್ರೋದಿಂದ ವೈರಾಗ್ಯದ ಕಡೆವಾಲುವ ಸಾಧ್ಯತೆ ಇದೆ. ಕುಟುಂಬದಲ್ಲಿ ವಾತಾವರಣ ಬದಲಾಗಲಿದೆ. ಹೆಚ್ಚಿನ ಸಮಾಧಾನ ಅಗತ್ಯವಿದೆ.
ಪರಿಹಾರ - ಲಲಿತಾ ಸಹಸ್ರನಾಮ ಪಠಿಸಿ
ಅದೃಷ್ಟ ಸಂಖ್ಯೆ 5, ಹಾಗೂ 6
ಬಣ್ಣ - ಬಿಳಿ ಬಣ್ಣ
ರತ್ನ - ವಜ್ರ ಹಾಗೂ ನೀಲ
ವೃತ್ತಿ ಕ್ಷೇತ್ರದಲ್ಲಿ ಯಶಸ್ಸು ಗಳಿಸುವ ಈ ಹುಡುಗಿಯರು ಪತಿಯನ್ನು ಗೊಂಬೆಯನ್ನು ಆಡಿಸ್ತಾರಂತೆ..!!
ಮಿಥುನ (Gemini )
ದೀಪಾವಳಿಯ ಪ್ರಾರಂಭದ ದಿನಗಳು ನಿಮ್ಮ ಪಾಲಿಗೆ ಸ್ವಲ್ಪ ಕಹಿ ಫಲವನ್ನು ತರಲಿದೆ. ಆಪ್ತರಲ್ಲಿ ನಂಬಿಕೆ ಕಳೆದುಕೊಳ್ಳುತ್ತೀರಿ. ಬುದ್ಧಿ ಮಂದವಾಗಲಿದೆ. ವಿದ್ಯಾರ್ಥಿಗಳಿಗೆ ಅಸಮಧಾನ. ಮುಖ್ಯ ಕಡತಗಳು ಹಾಗೂ ಮುಖ್ಯ ಪತ್ರಗಳಿಗೆ ಸಹಿ ಹಾಕುವಾಗ, ಶ್ಯೂರಿಟಿ ಹಾಕುವಾಗ ಬಹಳ ಎಚ್ಚರರಿಕೆ ಬೇಕು. ಮಕ್ಕಳ ವಿಚಾರದಲ್ಲಿ ತುಂಬ ಆತಂಕಕ್ಕೆ ಒಳಗಾಗುತ್ತೀರಿ. ನವೆಂಬರ್ 20 ರ ನಂತರ ಗುರು ಬದಲಾವಣೆಯಾದ ಮೇಲೆ ಜೀವನದಲ್ಲಿ ಒಂದು ಪ್ರಮುಖ ಘಟನೆ ನಡೆಯಲಿದೆ. ಕ್ರಮೇಣ ಅನುಕೂಲದ ವಾತಾವರಣದಿಂದ ಬದುಕಲ್ಲಿ ಬೆಳಕು ಕಾಣುತ್ತೀರಿ. ದೈವಾನುಕೂಲದಿಂದ ವಿಶೇಷ ಸಾಧನೆ ಸಾಧ್ಯವಾಗುತ್ತದೆ. ಮಂಗಳ ಕಾರ್ಯಗಳು ನಡೆಯಲಿವೆ. ಕಾದು ಕಾದು ಬೇಸತ್ತಿದ್ದವರಿಗೂ ಜೀವನದಲ್ಲಿ ಒಂದು ಆಶಾದೀಪ ಬೆಳಗಲಿದೆ. ದಾಂಪತ್ಯದಲ್ಲಿ ಸಾಮರಸ್ಯ ಬರಲಿದೆ.
ವಿದೇಶ ವ್ಯವಹಾರಗಳು ಉತ್ತಮ ಸ್ಥಿತಿಗೆ ಬರಲಿವೆ. ಬಂಧುಗಳ ಸಹಕಾರ ಸಿಗಲಿದೆ. ಕೃಷಿಕರಿಗೆ ಅನುಕೂಲ. ವಿದ್ಯಾರ್ಥಿಗಳಿಗೆ ಡಿಸೆಂಬರ್ ನಂತರ ಮನಸ್ಸು ಚಂಚಲವಾಗಲಿದೆ, ಉನ್ನತ ಶಿಕ್ಷಣದವರಿಗೆ ಅನುಕೂಲ-ಪ್ರತಿಕೂಲ ಎರಡೂ ಇವೆ. ಮಕರ ಸಂಕ್ರಾಂತಿ ನಂತರ ಆರೋಗ್ಯದಲ್ಲಿ ಏರುಪೇರು ಆಗಲಿದೆ. ಎಚ್ಚರವಾಗಿರಿ. ದೇವಾಲಯ-ತೀರ್ಥಕ್ಷೇತ್ರ ದರ್ಶನ ಸಾಧ್ಯತೆ ಇದೆ.
ಪರಿಹಾರ - ಆದಿತ್ಯ ಹೃದಯ ಪಠಿಸಿ, ಧನ್ವಂತರಿ ಪ್ರಾರ್ಥನೆ ಮಾಡಿ
ಅದೃಷ್ಟ ಸಂಖ್ಯೆ - 3 ಹಾಗೂ 5
ಬಣ್ಣ - ಹಸಿರು ಬಣ್ಣ
ರತ್ನ - ಪಚ್ಚೆ
ಕರ್ಕಟಕ ( Cancer )
ದೀಪಾವಳಿಯಲ್ಲಿ ಪಟಾಕಿ ಎಚ್ಚರಿಕೆಯ ಜೊತೆಗೆ ಜೀವನದಲ್ಲೂ ಎಚ್ಚರವಾಗಿರಬೇಕೆಂಬುದನ್ನು ಸೂಚಿಸುತ್ತಿದೆ. ಪ್ರಸ್ತುತ ನಿಮ್ಮ ಗೃಹದ ವಾತಾವರಣ ಅಸಮಧಾನದಿಂದ ಕೂಡಿದೆ, ಪ್ರಯಾಣ, ಕೃಷಿ, ಜಲ ಸಂಬಂಧಿ ವ್ಯಾಪಾರಗಳು ನೆಲ ಕಚ್ಚಲಿವೆ ಎಂಬುದನ್ನು ಸೂಚಿಸುತ್ತಿದೆ. ನವೆಂಬರ್ ಕೊನೆಯಲ್ಲಿ ಸ್ವಲ್ಪ ನಷ್ಟ ಫಲಗಳನ್ನು ಕಾಣುತ್ತೀರಿ, ಮಕ್ಕಳಿಂದ ಸ್ವಲ್ಪ ಅಸಮಧಾನ, ಮನಸ್ಸಿಗೆ ಬೇಸರದ ಸಂಗತಿಗಳು ನಡೆಯಲಿವೆ. ವಿದ್ಯಾರ್ಥಿಗಳ ಜೀವನ ಅತಂತ್ರವೆನಿಸುತ್ತದೆ. ಡಿಸೆಂಬರ್ ನಂತರ ಸ್ವಲ್ಪ ಚೇತರಿಕೆ ಕಾಣಲಿದೆ.
ಬುದ್ಧಿ ಬಲವಾಗುತ್ತದೆ. ಆಲೋಚನೆಗಳಿಗೆ ಉತ್ತಮ ಪ್ರತಿಕ್ರಿಯೆ ಸಿಗಲಿದೆ. ವಿದೇಶ ವ್ಯವಹಾರ ಹಾಗೂ ಪ್ರಯಾಣಗಳಿಂದ ಅನುಕೂಲ ಹಾಗೂ ಲಾಭ ಇರಲಿದೆ. ಗುರು ಬಲ ಕಳೆದು ಹೋಗುವ ಕಾರಣ ಎಲ್ಲ ಕೆಲಸಗಳಿಗೂ ವಿಘ್ನಗಳು ಉಂಟಾಗುವ ಸಾಧ್ಯತೆ ಇದೆ. ಶ್ರೇಯಾಂಸಿ ಬಹು ವಿಘ್ನಾನಿ ಎಂಬ ಮಾತಿನಂತೆ ಹೆಚ್ಚು ಯೋಚಿಸದೆ ಮರಳಿ ಮರಳಿ ಪ್ರಯತ್ನ ಮಾಡಿ. ಚೈತ್ರ ಮಾಸದ ವರೆಗೆ ಸ್ವಲ್ಪ ಮನಸ್ಸು ಮಂಕಾಗಿರುತ್ತದೆ.
ಪರಿಹಾರ - ಗುರು ಚರಿತ್ರೆ ಪಾರಾಯಣ ಮಾಡಿ - ದುರ್ಗಾ ಸಪ್ತಶತಿ ಪಾರಾಯಣ ಮಾಡಿ
ಅದೃಷ್ಟ ಸಂಖ್ಯೆ - 2 ಹಾಗೂ 9
ಬಣ್ಣ - ಬಿಳಿ ಹಾಗೂ ಹಳದಿ ಬಣ್ಣ
ರತ್ನ - ಮುತ್ತು
#Deepavali ಮನೆ ಸ್ವಚ್ಛಗೊಳಿಸುವಾಗ ಈ ವಸ್ತು ಸಿಕ್ಕರೆ ಲಕ್
ಸಿಂಹ (Leo)
ಬೆಳಕಿನ ಹಬ್ಬ ತತ್ಕಾಲಕ್ಕೆ ಸ್ವಲ್ಪ ಮಬ್ಬಾಗಿರಲಿದೆ. ಸೂರ್ಯ ಕಾಂತಿಹೀನನಾಗಿರುವುದರಿಂದ ದೇಹ-ಮನಸ್ಸುಗಳು ಮಂಕಾಗಿರುತ್ತದೆ. ಧೈರ್ಯ-ಉತ್ಸಾಹಗಳು ಕುಂದುಹೋಗಿತ್ತವೆ. ದಾಂಪತ್ಯ-ಪ್ರೀತಿಗಳಲ್ಲಿ ಸಣ್ಣ ಕಿಡಿ ಹೊತ್ತಿಕೊಳ್ಳಲಿದೆ. ಸಹನೆ ಬೇಕು. ಸಹೋದರರ ಬಾಂಧವ್ಯ ಹಾಳಾಗಲಿದೆ. ಸೇವಕರಿಂದ ಅಸಮಧಾನ, ಅಚಾನಕ್ಕಾಗಿ ಬರುವ ತೊಂದರೆಗಳು ನಿಮ್ಮನ್ನು ಬೆದರಿಸುತ್ತವೆ. ಆದರೆ ನವೆಂಬರ್ ಮಧ್ಯದ ನಂತರ ಗುರುಬಲ ಬರಲಿದೆ. ನಿಮ್ಮ ಜೀವನದಲ್ಲಿ ಮಕ್ಕಳು ಹಾಗೂ ಸಂಗಾತಿಯ ಸಹಕಾರದ ಬಲ ಜೀವನಕ್ಕೆ ಹೊಸ ಬೆಳಕನ್ನು ತರಲಿದೆ.
ನಿಮಗೆ ಡಿಸೆಂಬರ್ ನಂತರ ನಿಜವಾದ ದಿಪವಾಳಿ ಶುರುವಾಗಲಿದೆ. ನಿಮ್ಮ ಎಲ್ಲ ಸಮಸ್ಯೆಗಳೂ ನಿವಾರಣೆಯಾಗುವ ಕಾಲ ಬರಲಿದೆ. ವಿದ್ಯಾರ್ಥಿಗಳಿಗೂ ಹೊಸ ಜೀವನ ಪ್ರಾರಂಭವಾಗಲಿದೆ. ಹೊಸ ಮನೆ, ನಿವೇಶನಗಳ ಖರೀದಿಯಂಥ ಶುಭ ಕಾರ್ಯಗಳಿಗೆ ಚಾಲನೆ ಸಿಗಲಿದೆ. ವಿವಾಹ ಯೋಗ, ಸಂಗಾತಿಯ ಜೊತೆ ವಿಹಾರ ಸಾಧ್ಯತೆ. ಮನೆಯಲ್ಲಿ ಮಂಗಳ ಕಾರ್ಯಗಳು ನಡೆಯಲಿವೆ.
ಪರಿಹಾರ - ಸೂರ್ಯಗ್ರಹ ಶಾಂತಿ - ಈಶ್ವರನಿಗೆ ಬಿಲ್ವಾರ್ಚನೆ ಮಾಡಿಸಿ
ಅದೃಷ್ಟ ಸಂಖ್ಯೆ - 1, 5 ಹಾಗೂ 9
ಬಣ್ಣ - ಕೆಂಪು ಬಣ್ಣ
ರತ್ನ - ಮಾಣಿಕ್ಯ, ಹವಳ
ಕನ್ಯಾ ( Virgo)
ಪ್ರಸ್ತುತ ಕುಟುಂಬ ಕಲಹ ನಿಮ್ಮನ್ನು ಹೈರಾಣು ಮಾಡಲಿದೆ. ಹಬ್ಬದ ಸಂಭ್ರಮದ ಮಧ್ಯೆ ಬಾಂಧವ್ಯಗಳಲ್ಲಿ ಕಿಡಿ ಏಳಬಹುದು ಎಚ್ಚರವಾಗಿರಿ. ಆರ್ಥಿಕ ವಹಿವಾಟು ಅಸಮಧಾನವನ್ನು ತರಲಿದೆ. ಹಣಕಾಸಿಗೆ ಪರದಾಟ ಇರಲಿದೆ, ವಿದ್ಯಾರ್ಥಿಗಳು ಕಠಿಣವಾಗಿ ಮಾತನಾಡುತ್ತಾರೆ, ಒರಟಾಗುತ್ತಾರೆ. ಆಲಸ್ಯ ನಿಮ್ಮ ಬಲವನ್ನು ಕಸಿಯಲಿದೆ. ಸದ್ಯದ ಮಟ್ಟಿಗೆ ಸ್ವಲ್ಪ ಎಚ್ಚರವಾಗಿರಬೇಕು. ನವೆಂಬರ್ ನಂತರ ಗುರುಬಲ ಇರುವುದಿಲ್ಲ. ಹೀಗಾಗಿ ಎಚ್ಚರವಾಗಿರಿ. ವಾಹನ, ಮನೆ, ನಿವೇಶನ ವಿಚಾರಗಳಲ್ಲಿ ಜಾಗ್ರತೆ ವಹಿಸಿ.
ಡಿಸೆಂಬರ್ ನಂತರ ಸ್ವಲ್ಪ ಚೇತರಿಕೆ ಕಾಣಲಿದೆ. ಮಕರ ಸಂಕ್ರಾಂತಿ ನಂತರ ಬುದ್ಧಿ ಚುರುಕಾಗಲಿದೆ, ಮಕ್ಕಳ ಸಹಾಯ ಸಿಗಲಿದೆ. ಆದರೂ ನೀವು ಯುಗಾದಿ ವರೆಗೆ ಸ್ವಲ್ಪ ಜಾಗ್ರತೆಯಿಂದ ಇರಬೇಕು. ಯಾವುದೇ ವಿಚಾರಗಳಲ್ಲೂ ವಿಚಾರ ಮಾಡಿ ನಿರ್ಣಯ ತೆಗೆದುಕೊಳ್ಳಿ. ಮುಖ್ಯ ವಸ್ತುಗಳು ಕಳುವಾಗುವ ಸಾಧ್ಯತೆ ಇದೆ. ಮುಖ್ಯ ಕಡತ-ಪತ್ರಗಳ ಬಗ್ಗೆ ಎಚ್ಚರವಹಿಸಿ.
ಪರಿಹಾರ - ವಿಷ್ಣು ಸನ್ನಿಧಾನದಲ್ಲಿ ಪುಷ್ಪಾರ್ಚನೆ ಮಾಡಿಸಿ, ಸಾಲಿಗ್ರಾಮ ದಾನ ಮಾಡಿ
ಅದೃಷ್ಟ ಸಂಖ್ಯೆ - 5 ಹಾಗೂ 9
ಬಣ್ಣ - ಹಸಿರು
ರತ್ನ - ಕೆಂಪು ಹಾಗೂ ಪಚ್ಚೆ
ತುಲಾ ( Libra )
ಪ್ರಸ್ತುತ ಗ್ರಹ ಸ್ಥಿತಿಯನ್ನು ಗಮನಿಸಿದಾಗ ಸೂರ್ಯ ನಿಮ್ಮದೇ ರಾಶಿಯಲ್ಲಿ ಕುಜ -ಬುಧರ ಯುಕ್ತನಾಗಿದ್ದಾನೆ. ವ್ಯಯಾಧಿಪತಿ ಧನಾಧಿಪತಿ ಒಟ್ಟಿಗೆ ಇದ್ದಾಗ ಕೈಸೇರಿದ ಹಣ ಜೇಬು ಸೇರುವುದರೊಳಗೆ ಖರ್ಚಾಗಲಿದೆ. ಕೈಗೆ ಬಂದ ತುತ್ತು ಬಾಯಿಗೆ ಬರಲಿಲ್ಲ ಅನ್ನೋ ಗಾದೆಯ ಹಾಗೆ. ನವೆಂಬರ್ ಮಧ್ಯದ ವರೆಗೆ ಸ್ವಲ್ಪ ಕಷ್ಟ ಜೀವನ. ಆನಂತರ ಗುರು ಬಲದ ಪ್ರಭಾವದಿಂದ ಜೀವನದಲ್ಲಿ ಒಂದು ಶುಭ ಪರಿವರ್ತೆ ಕಾಣಲಿದ್ದೀರಿ. ಮಕ್ಕಳು ಹೆಗಲಾಗುತ್ತಾರೆ. ಉನ್ನತ ಶಿಕ್ಷಣದಲ್ಲಿ ಹೊಸ ಅವಕಾಶ, ಹೊಸ ಸಾಧನೆ ಸಾಧ್ಯವಾಗುತ್ತದೆ.
ನಿಮ್ಮ ಆಲೋಚನೆಗಳಿಗೆ ಬಲ-ಫಲ ಎರಡೂ ಸಿಗಲಿದೆ. ಮಕರ ಸಂಕ್ರಾಂತಿ ನಂತರ ಇನ್ನೂ ಹೆಚ್ಚಿನ ಶುಭ ಫಲಗಳು ಉಂಟಾಗಲಿವೆ. ವಾಹನ-ವಸ್ತ್ರ-ನಿವೇಶನದಂಥ ಶುಭಫಲಗಳ ನಿರೀಕ್ಷೆ ಇಟ್ಟುಕೊಳ್ಳಬಹುದು. ಉದ್ಯೋಗದಲ್ಲಿ ಸಮಾಧಾನ ಇರಲಿದೆ. ಲಾಭವೂ ಇರಲಿದೆ. ತೀರ್ಥಕ್ಷೇತ್ರ ದರ್ಶನ ಮಾಡುತ್ತೀರಿ.
ಪರಿಹಾರ - ಶಿವ-ಶಕ್ತಿಯರ ಪ್ರಾರ್ಥನೆ ಮಾಡಿ, ಸೌಂದರ್ಯ ಲಹರಿ ಪಠಿಸಿ
ಅದೃಷ್ಟ ಸಂಖ್ಯೆ - 5 ಹಾಗೂ 9
ಬಣ್ಣ - ಬಿಳಿ ಹಾಗೂ ಗಾಢ ನೀಲಿ
ರತ್ನ - ವಜ್ರ-ನೀಲ
ವೃಶ್ಚಿಕ (Scorpio)
ಈ ದೀಪಾವಳಿ ನಿಮ್ಮ ಪಾಲಿಗೆ ಸ್ವಲ್ಪ ಕಹಿಯಾಗಿರಲಿದೆ. ಕೆಲಸದ ಒತ್ತಡ, ಅಧಿಕ ಶ್ರಮದಿಂದ ನೀವು ಬಳಲುತ್ತೀರಿ. ಕರ್ಮಾಧಿಪತಿ ಸೂರ್ಯ ವ್ಯಯ ಸ್ಥಾನದಲ್ಲಿ ಬಲಹೀನನಾಗಿರುವುದರಿಂದ ಉದ್ಯೋಗಿಗಳಿಗೆ ಅಸಮಧಾನದ ಫಲ, ಆರೋಗ್ಯದಲ್ಲಿ ಸ್ವಲ್ಪ ಏರುಪೇರು, ಉಷ್ಣ - ಪಿತ್ಥ ಸಂಬಂಧಿ ರೋಗಗಳು ಬಾಧಿಸಲಿವೆ. ಡಿಸೆಂಬರ್ ನಂತರ ವೃತ್ತಿಯಲ್ಲಿ ಅನುಕೂಲ, ಗೃಹ ನಿರ್ಮಾಣದಂಥ ಶುಭಕಾರ್ಯಗಳು ಕೈಗೂಡಲಿವೆ.
ದೇಹಬಲ ಹೆಚ್ಚಲಿದೆ, ಪೊಲೀಸ್-ಮಿಲಿಟರಿ-ಅಗ್ನಿ ಸಂಬಂಧಿ ಕಾರ್ಯಕರ್ತರಿಗೆ ಬಲ ಬರಲಿದೆ, ಕೆಲಸದಲ್ಲಿ ಲಾಭ, ಪ್ರಶಂಸೆಗಳು ದೊರೆಯಲಿವೆ. ಉದ್ಯೋಗಿಗಳಿಗೆ ಭದ್ರತೆ ಬರಲಿದೆ. ವಿದೇಶ ವಹಿವಟು, ವಿದೇಶ ವ್ಯಾಪಾರಗಳಲ್ಲಿ ಯಶಸ್ಸು-ಲಾಭ ಇರಲಿದೆ. ಮಕರ ಸಂಕ್ರಾಂತಿ ನಂತರ ಸ್ವಲ್ಪ ಆರೋಗ್ಯದಲ್ಲಿ ವ್ಯತ್ಯಾಸವಾದರೂ, ಕ್ರಮೇಣ ಅತ್ಯಂತ ಶುಭ ಫಲಗಳನ್ನು ಹೊಂದುತ್ತೀರಿ, ಗೃಹ-ನಿವೇಶನ ಖರೀದಿ ಸಾಧ್ಯತೆಗಳು ಅಧಿಕವಾಗಿವೆ. ಶುಭಫಲಗಳಿದ್ದಾವೆ. ಆತಂಕ ಬೇಡ.
ಪರಿಹಾರ - ಆದಿತ್ಯ ಹೃದಯ ಪಠಿಸಿ-ಸುಬ್ರಹ್ಮಣ್ಯ ಕವಚ ಪಠಿಸಿ
ಅದೃಷ್ಟ ಸಂಖ್ಯೆ - 2 ಹಾಗೂ 10
ಬಣ್ಣ - ಕೆಂಪು ಹಾಗೂ ಕೇಸರಿ
ರತ್ನ - ಹವಳ ಹಾಗೂ ಪುಷ್ಯರಾಗ
ಧನಸ್ಸು (Sagittarius )
ದೀಪಾವಳಿ ಹಬ್ಬ ನಿಮ್ಮ ಪಾಲಿಗೆ ಸಿಹಿ-ಕಹಿ ಎರಡನ್ನೂ ಉಂಟುಮಾಡಲಿದೆ. ಪ್ರಾರಂಭದ ದಿನಗಳು ನಿಮಗೆ ಲಾಭದಾಯಕವಾಗಿರಲಿವೆ. ಕರ್ಮಾಧಿಪತಿ ಲಾಬದಲ್ಲಿದ್ದು ಉದ್ಯೋಗಿಗಳಿಗೆ ಲಾಭ, ಹೊಸ ಅವಕಾಶಗಳನ್ನು ತಂದುಕೊಡಲಿದೆ. ಮಂಗಳಕಾರ್ಯಗಳಿಗೆ ಚಾಲನೆ ಸಿಗಲಿದೆ. ನವೆಂಬರ್ 20 ರ ನಂತರ ಗುರುಬಲ ಕಳೆದುಹೋಗಲಿದ್ದು, ಸ್ವಲ್ಪ ಧೃತಿಗೆಡುತ್ತೀರಿ.
ಡಿಸೆಂಬರ್ ನಂತರ ಸ್ವಲ್ಪ ಹೆಚ್ಚಿನ ಖರ್ಚು, ವೃಥಾ ತಿರುಗಾಟ, ವ್ಯಸನವನ್ನು ತರಲಿದೆ. ಕ್ರಮೇಣ ಸುಸ್ಥಿತಿ ಬರಲಿದೆ. ಮಕರ ಸಂಕ್ರಾಂತಿ ನಂತರ ಜೀವನದಲ್ಲಿ ಬದಲಾವಣೆಯಾಗಲಿದೆ. ಯುಗಾದಿಯವರೆಗೆ ಸ್ವಲ್ಪ ಅನುಕೂಲದ ವಾತಾವರಣ ಇರಲಿದೆ. ಉದ್ಯೋಗಿಗಳಿಗೆ ಲಾಭ, ಕುಟುಂಬ ಸೌಖ್ಯ ಇರಲಿದೆ. ವಿದ್ಯಾರ್ಥಿಗಳಿಗೆ ಆಲಸ್ಯ, ಉನ್ನತ ಶಿಕ್ಷಣದವರಿಗೆ ಹೆಚ್ಚಿನ ಅನುಕೂಲ, ಲಾಭಫಲವಿದೆ. ಶತ್ರುಗಳ ಬಗ್ಗೆ ಎಚ್ಚರವಾಗಿರಿ. ಸ್ತ್ರೀಯರ ಜೊತೆ ವ್ಯಯಹರಿಸುವಾಗ ತಾಳ್ಮೆ ಇರಲಿ.
ಪರಿಹಾರ - ಗುರು ಚರಿತ್ರೆ ಪಾರಾಯಣ ಮಾಡಿ - ಕಡಲೆ-ಬೆಲ್ಲ ದಾನ ಮಾಡಿ
ಅದೃಷ್ಟ ಸಂಖ್ಯೆ - 3 ಹಾಗೂ 9
ಬಣ್ಣ - ಹಳದಿ
ರತ್ನ - ಪುಷ್ಯರಾಗ ಹಾಗೂ ನೀಲ
ಮಕರ (Capricorn )
ಹಬ್ಬದ ಪ್ರಾರಂಭದಲ್ಲಿ ಉದ್ಯೋಗಿಗಳಿಗೆ ಕೊಂಚ ಬಲಹೀನತೆ, ಕಾರ್ಯದಲ್ಲಿ ಅಸಮಧಾನ, ಅಧಿಕ ಶ್ರಮದಂಥ ಫಲಗಳಿವೆ. ಮನೆಯಲ್ಲಿ ಹಬ್ಬವಿದ್ದರೂ ಮನಸ್ಸಲ್ಲಿ ಅಸಮಧಾನ. ನವೆಂಬರ್ 20 ರ ನಂತರ ಗುರುಬಲ ಬರಲಿದ್ದು, ಕುಟುಂಬದಲ್ಲಿ ಮಂಗಳಕಾರ್ಯಗಳು ಜರುಗಲಿವೆ. ಹಣಕಾಸಿನ ಸಮೃದ್ಧಿ ಉಂಟಾಗಲಿದೆ, ಸಹೋದರರ ಸಹಕಾರ ಸಿಗಲಿದೆ. ಧೈರ್ಯ-ಸಾಹಸಗಳಿಂದ ಅನುಕೂಲ.
ಡಿಸೆಂಬರ್ ನಂತರ ಲಾಭ ಸಮೃದ್ಧಿ, ವಿಶೇಷ ಅವಕಾಶಗಳು ಸಿಗುವ ಸಾಧ್ಯತೆ, ಆರೋಗ್ಯದಲ್ಲಿ ಚೇತರಿಕೆ, ದೈವಾನುಕೂಲದಿಂದ ಅಸಾಧಾರಣ ಕಾರ್ಯ ಸಾಧನೆ. ಗೃಹ ನಿರ್ಮಾಣ, ವಾಹನ ಖರೀದಿ, ನಿವೇಶನ ಖರೀದಿ ಸಾಧ್ಯತೆ ಅಧಿಕವಾಗಿದೆ. ಮಕರ ಸಂಕ್ರಾಂತಿ ನಂತರ ಶುಭ ಫಲಗಳಿದ್ದಾವೆ. ವಿದ್ಯಾರ್ಥಿಗಳಿಗೆ ವಿಶೇಷ ಅವಕಾಶ, ವಿದೇಶ ಅವಕಾಶಗಳ ಸಾಧ್ಯತೆ ಇದೆ. ಉದ್ಯೋಗಿಗಳಿಗೂ ಅನುಕೂಲದ ವಾತಾವರಣ. ಸಮೃದ್ಧಿಯ ಫಲಗಳಿಂದ ಜೀವನ ಸುಖವಾಗಿರಲಿದೆ.
ಪರಿಹಾರ - ವಿಷ್ಣುಸಹಸ್ರನಾಮ ಪಠಿಸಿ - ವೇಂಕಟೇಶ್ವರ ದರ್ಶನ ಮಾಡಿ
ಅದೃಷ್ಟ ಸಂಖ್ಯೆ - 5 ಹಾಗೂ 6
ಬಣ್ಣ - ನೀಲ ಹಾಗೂ ಹಸಿರು
ರತ್ನ - ಪಚ್ಚೆ ಹಾಗೂ ನೀಲ
ಕುಂಭ (Aquarius )
ದೀಪಾವಳಿಯ ಪ್ರಾರಂಭದಲ್ಲಿ ಅಧಿಕ ಖರ್ಚು, ಕುಟುಂಬದ ಹೊರೆ, ಮಕ್ಕಳ ಸಲುವಾಗಿ ಅಸಮಧಾನಪಡಬೇಕಾಗುತ್ತದೆ. ಸಂಗಾತಿಯ ಆರೋಗ್ಯ-ಬಾಂಧವ್ಯಗಳು ಸ್ವಲ್ಪ ಮನಸ್ಸನ್ನು ಕದಡಲಿವೆ. ನವೆಂಬರ್ 20 ರ ನಂತರ ಸ್ವಲ್ಪ ದೇಹಾರೋಗ್ಯದಲ್ಲಿ ವ್ಯತ್ಯಾಸ, ಆದಷ್ಟು ನೀರು-ಆಹಾರಗಳ ಕಡೆ ಗಮನಹರಿಸಿ. ಉದ್ಯೋಗಿಗಳಿಗೆ ಬಲವಿದೆ. ಕೆಲಸದ ಒತ್ತಡದ ಜೊತೆಜೊತೆಗೆ ಅಂದುಕೊಂಡದ್ದನ್ನು ಸಾಧಿಸುವ ಫಲವಿದೆ. ಬಡ್ತಿ, ವಿಶೇಷ ಸ್ಥಾನ ಮಾನ, ಹಿರಿಯರಿಂದ ಸಹಾಯ ಸಿಗುವ ಸಾಧ್ಯತೆಗಳಿದ್ದಾವೆ.
ಕೆಲವೊಮ್ಮೆ ನಿಮ್ಮ ಮಾತು ನಿಮ್ಮನ್ನು ಬಂಧಿಸಲಿದೆ. ಬೇರೆಯವರಿಗೆ ಸಹಾಯ ಮಾಡಲು ಹೋಗಿ ನೀವೇ ಆಪತ್ತಿಗೆ ಗುರಿಯಾಗುವ ಸಾಧ್ಯತೆ ಇದೆ. ಮಕರ ಸಂಕ್ರಾಂತಿ ನಂತರ ವಿಶೇಷ ಅವಕಾಶ ವಿಶೇಷ ಲಾಭ ಸಿಗಲಿದೆ. ಸಹೋದರರ ಸಹಕಾರ ಸಿಗಲಿದೆ, ದೈವ ಸಹಾಯದಿಂದ ವಾಹನ-ಗೃಹ ನಿರ್ಮಾಣದಂಥ ಕೆಲಸಗಳು ಪೂರ್ಣವಾಗಲಿವೆ. ಸಮಾಧಾನ ಇರಲಿದೆ.
ಪರಿಹಾರ - ಗುರು ಮಂದಿರದಲ್ಲಿ ಕಡಲೆ ಎಣ್ಣೆಯಿಂದ ದೀಪ ಹಚ್ಚಿ, ಗಾಣಗಾಪುರಕ್ಕೆ ಹೋಗಿಬನ್ನಿ
ಅದೃಷ್ಟ ಸಂಖ್ಯೆ - 1
ಬಣ್ಣ - ನೀಲ ಹಾಗೂ ಕಪ್ಪು
ರತ್ನ - ನೀಲ ಹಾಗೂ ವಜ್ರ
ಮೀನ (Pisces )
ಈ ದೀಪಾವಳಿ ನಿಮಗೆ ಪ್ರಾರಂಭದಲ್ಲಿ ಹೆಚ್ಚಿನ ನಷ್ಟವನ್ನು ತರಲಿದೆ. ಅಧಿಕ ಖರ್ಚು, ಮುಖ್ಯ ವಸ್ತುಗಳ ಕಳವು ಇಂಥ ಫಲವನ್ನೇ ತೆರೆದಿಟ್ಟಿದೆ. ಪ್ರಸ್ತುತ ಗುರುಬಲವಿದ್ದರೂ ಅಸಮಧಾನವೂ ಇದೆ. ಅಂದುಕೊಂಡದ್ದು ಸುಲಭದಲ್ಲಿ ಈಡೇರುವುದಿಲ್ಲ. ವೃತ್ತಿಯಲ್ಲಿ ಸ್ತ್ರೀಯರ ಸಲುವಾಗಿ ಮಾನಸಿಕ ಅಸಮಧಾನ, ದಾಂಪತ್ಯ-ಸ್ನೇಹ-ಪ್ರೀತಿ ಭಾವನೆಗಳಲ್ಲಿ ಅಸಮಧಾನ ಇರಲಿದೆ. ಡಿಸೆಂಬರ್ ನಂತರ ಜೀನವ ಸ್ವಲ್ಪ ಸುಧಾರಿಸಲಿದೆ. ಅಂದುಕೊಂಡದ್ದು ಈಡೇರುವ ಸಾಧ್ಯತೆ ಉಂಟಾಗಲಿದೆ. ಮಕರ ಸಂಕ್ರಾಂತಿ ನಂತರ ಆರ್ಥಿಕ ಚೇತರಿಕೆ ಬರಲಿದೆ.
ಕುಟುಂಬದಲ್ಲಿ ಸೌಖ್ಯ, ಮಾತು-ವಿದ್ಯೆಯಲ್ಲಿ ಹಿಡಿತ ಬರಲಿದೆ. ನಿಮ್ಮ ಸುತ್ತಲೇ ಸುತ್ತುವ ಶತ್ರುಗಳ ಬಗ್ಗೆ ಎಚ್ಚರವಾಗಿರಿ. ಉದ್ಯೋಗಿಗಳು ಕೆಲಸಕ್ಕಿಂತ ಹೆಚ್ಚಾಗಿ ಬೇರೆ ಆಕರ್ಷಣೆಗೆ ತುತ್ತಾಗಿ ವ್ಯಥೆ ಅನುಭವಿಸುವ ಸಾಧ್ಯತೆ ಇದೆ. ಎಚ್ಚರವಾಗಿರಿ. ತೀರ್ಥ ಕ್ಷೇತ್ರಗಳ ದರ್ಶನ ಸಾಧ್ಯತೆ ಇದೆ.
ಪರಿಹಾರ - ಧರ್ಮಸ್ಥಳ ಮಂಜುನಾಥ ದರ್ಶನ ಮಾಡಿ
ಅದೃಷ್ಟ ಸಂಖ್ಯೆ - 1 ಹಾಗೂ 9
ಬಣ್ಣ - ಕೆಂಪು ಕೇಸರಿ
ರತ್ನ - ಪುಷ್ಯರಾಗ ಹಾಗೂ ಮಾಣಿಕ್ಯ
- ಶ್ರೀಕಂಠ ಶಾಸ್ತ್ರೀ, ಜ್ಯೋತಿಷಿಗಳು.