Asianet Suvarna News Asianet Suvarna News

ಕುಲೆತ್ತ ಮದಿಮೆ: ತುಳುನಾಡಿನಲ್ಲಿ ನಡೆಯುತ್ತೆ ಸತ್ತವರಿಗೂ ಮದುವೆ !

ಪ್ರಾಕೃತಿಕವಾಗಿಯೂ, ಸಾಂಸ್ಕೃತಿಕವಾಗಿಯೂ ಶ್ರೀಮಂತಿಕೆಯನ್ನು ಹೊಂದಿರುವ ಪ್ರದೇಶ ತುಳು ನಾಡು. ದೈವ-ದೇವರು, ಭೂತ-ಕೋಲಗಳಿಗೆ ಇಲ್ಲಿ ಹೆಚ್ಚಿನ ಪ್ರಾಧಾನ್ಯತೆಯಿದೆ. ಪ್ರತಿಯೊಂದರಲ್ಲೂ ದೈವವತ್ವವನ್ನು ಕಾಣುವ ತುಳುನಾಡಿನಲ್ಲಿ ಇತ್ತೀಚಿಗೆ ವಿಶಿಷ್ಟವಾದ ಕುಲೆತ್ತ್‌ ಮದುವೆ ಅಥವಾ ಪ್ರೇತಗಳ ಮದುವೆ ನಡೆದಿದೆ. ಆ ಬಗ್ಗೆ ಇಲ್ಲಿದೆ ಮಾಹಿತಿ.

Dead People Get Married Here In Karnataka: Viral Twitter Vin
Author
Bengaluru, First Published Jul 30, 2022, 2:51 PM IST

ಸಾವಿನ ನಂತರದ ಮದುವೆಯ ಬಗ್ಗೆ ಎಂದಾದರೂ ಕೇಳಿದ್ದೀರಾ ? ಕೇಳಲು ವಿಚಿತ್ರವೆನಿಸಬಹುದು. ಆದರೆ ಇದು ಕರ್ನಾಟಕದ ಮಂಗಳೂರಿನಲ್ಲಿ ಹಲವು ವರ್ಷಗಳಿಂದ ಆಚರಣೆಯಲ್ಲಿರುವ ಸಂಪ್ರದಾಯವಾಗಿದೆ. ಸಾಮಾನ್ಯವಾಗಿ 18 ವರ್ಷಕ್ಕಿಂತ ಕಡಿಮೆ ವಯಸ್ಸಿನವರು ಮತ್ತು ಅವಿವಾಹಿತರು, ಅವರ ಮರಣದ ನಂತರ ಕೆಲವು ವರ್ಷಗಳ ನಂತರ ಇದೇ ರೀತಿಯ ಸಾವಿನ ಕಥೆಗಳನ್ನು ಹೊಂದಿರುವವರನ್ನು ಮದುವೆಯಾಗುತ್ತಾರೆ. ಕುಟುಂಬ ಸದಸ್ಯರೇ ನಿಂತು ಈ ಮದುವೆಯನ್ನು ಮಾಡಿಸುತ್ತಾರೆ. ಏಕೆಂದರೆ ಜನರು ತಮ್ಮ ಪ್ರೀತಿಪಾತ್ರರ ಆತ್ಮ ಮದುವೆಯಾಗದ ಕಾರಣ ಅಲೆದಾಡುತ್ತದೆ ಎಂದು ನಂಬುತ್ತಾರೆ. ಮದುವೆ ಇಲ್ಲದೆ ಒಬ್ಬರ ಜೀವನವು ಅಪೂರ್ಣವಾಗಿರುವ ಕಾರಣ ಆತ್ಮ ಎಂದಿಗೂ ಮೋಕ್ಷ ಪಡೆಯುವುದಿಲ್ಲ ಎಂದುಕೊಳ್ಳುತ್ತಾರೆ. ಅಲೆದಾಡುವ ಆತ್ಮದಿಂದ ಕುಟುಂಬವು ಸಮಸ್ಯೆಗಳನ್ನು ಎದುರಿಸಲು ಪ್ರಾರಂಭಿಸಬಹುದು ಎಂಬ ಕಾರಣಕ್ಕಾಗಿಯೇ ಆತ್ಮಗಳ ವಿವಾಹ ಮಾಡಲಾಗುತ್ತದೆ. 

ಕುಲೆತ್ತ ಮದಿಮೆ ಎಂದರೇನು ?
ಅಕಾಲಿಕವಾಗಿ ಅಪಮೃತ್ಯುವಿಗೀಡಾದ ಅವಿವಾಹಿತ ಗಂಡು-ಹೆಣ್ಣುಗಳ ಆತ್ಮಗಳಿಗೆ ವಿವಾಹ (Spirit marriage) ಮಾಡುವ ಪದ್ಧತಿ ತುಳುನಾಡಿನಲ್ಲಿ ಬಹಳ ಹಿಂದಿನಿಂದಲೂ ಇದೆ. ಮದುವೆ ಸ್ವರ್ಗದಲ್ಲಿಯೇ ನಿಶ್ಚಿತವಾಗಿರುತ್ತದೆ ಎನ್ನುತ್ತಾರೆ.. ಇದಕ್ಕೆ ಪೂರಕ ಎಂಬಂತೆ ಮಂಗಳೂರು ತಾಲೂಕು ಪಡುಪೆರಾರ ಗ್ರಾಮದ ಕತ್ತಲ್‌ಸಾರ್‌ ಎಂಬಲ್ಲಿನ ಮನೆಯೊಂದರಲ್ಲಿ ಜು.24ರಂದು ಆತ್ಮಗಳ ವಿವಾಹ ನಡೆದಿದೆ. ಗಂಡು-ಹೆಣ್ಣುಗಳ ಆತ್ಮಗಳಿಗೆ ಮಾಡುವ ವಿವಾಹವನ್ನು ಕುಲೆತ್ತ್ ಮದಿಮೆ ಎನ್ನುತ್ತಾರೆ. ಇಲ್ಲಿ ಬಜಪೆ ಶಾಂತಿಗುಡ್ಡೆ ದಿ. ದಾಸಪ್ಪ ಪೂಜಾರಿ - ದಿ. ಸುಂದರಿ ಪೂಜಾರ್ತಿ ಅವರ ಮಗ ವಿಜಯ್‌ ಹಾಗೂ ಕತ್ತಲ್‌ಸಾರ್‌ನ ಗಂಗು ಪೂಜಾರಿ-ಸೀತು ಪೂಜಾರ್ತಿ ದಂಪತಿಯ ಪುತ್ರಿ ಸುಶೀಲಾ ಅವರ ಆತ್ಮಗಳಿಗೆ ವಿವಾಹ ಸಂಸ್ಕಾರ ನಡೆಸಲಾಯಿತು.

ಆಟಿಯಲ್ಲಿ ನಡೆಯುವ ಆತ್ಮಗಳ ವಿವಾಹ
ಅಕಾಲಿಕವಾಗಿ ಮೃತರಾದ ಅವಿವಾಹಿತರ ಆತ್ಮಗಳಿಗೆ ವಿವಾಹ ಪ್ರಕ್ರಿಯೆ ಆಟಿ ತಿಂಗಳಲ್ಲಿ ನಡೆಸುವುದು ಹಿಂದಿನಿಂದ ನಡೆದು ಬಂದ ಪದ್ಧತಿ. ನೈಜ ಮದುವೆಗೆ ಭಿನ್ನವಾಗಿ ಕ್ರಮಗಳೆಲ್ಲ ಈ ವಿವಾಹ ನಡೆಯುತ್ತದೆ. ಕುಟುಂಬ ಸದಸ್ಯರೆಲ್ಲರೂ ಈ ವಿವಾಹದಲ್ಲಿ ಭಾಗಿಯಾಗುತ್ತಾರೆ. ಕುಟುಂಬದೊಳಗೆ ದೋಷ ಕಂಡು ಬಂದಾಗ ಮನೆಮಂದಿ, ಕುಟುಂಬದಲ್ಲಿ ಮದುವೆ ಶುಭಕಾರ್ಯಗಳಿಗೆ ಕಂಟಕ ಎದುರಾದಾಗ ಪ್ರಶ್ನೆ ಚಿಂತನೆ ನಡೆಸಿದಾಗ ಇಂತಹ ವಿಚಾರ ಮನವರಿಕೆಯಾಗುತ್ತದೆ. ಆತ್ಮಗಳ ವಿವಾಹ ಮಾಡಿದ ಬಳಿಕ ಸಮಸ್ಯೆಗಳು (Problems) ಬಗೆಹರಿದ ಅದೆಷ್ಟೋ ನಿದರ್ಶನಗಳಿವೆ. 

ಕಟ್ಟುಪಾಡುಗಳ ಪ್ರಕಾರ ಪ್ರಶ್ನೆ ಚಿಂತನೆ ನಡೆಸಿ ಪ್ರಾರ್ಥನೆ ಮಾಡಿದಾಗ ಹುಡುಗನ ಆತ್ಮ ಆತನ ಮದುವೆಯ ಹುಡುಗಿಯನ್ನು ಆತನೇ ಹುಡುಕಿಕೊಳ್ಳುತ್ತಾನೆ ಎಂಬ ಮಾತು ಬಂದಿತ್ತು, ಕತ್ತಲ್‌ಸಾರ್‌ನ ಹುಡುಗಿ ಮನೆಯಿಂದ ದೂರವಾಣಿ ಕರೆ ಬಂದು ಆತ್ಮಗಳ ವಿವಾಹದ ಪ್ರಸ್ತಾಪ ಮುಂದಿಟ್ಟಾಗ ವಿಜಯ್‌ನ ಆತ್ಮ ತನ್ನ ಮದುವೆಯಾಗುವ ಹುಡುಗಿಯ ಆತ್ಮವನ್ನು ತಾನೇ ಹುಡುಕಿಕೊಂಡಿದ್ದು ಸಾಬೀತಾಯಿತು. ವಧು-ವರರ ಕಡೆಯಿಂದ ಹಿರಿಯರ ಸಮಕ್ಷಮ ಮದುವೆ ಮಾತುಕತೆ ನಡೆದು ಜು.17ರಂದು ಕತ್ತಲ್‌ಸಾರ್‌ ವಧುವಿನ ಮನೆಯಲ್ಲಿ ನಿಶ್ಚಿತಾರ್ಥದ ಕಾರ್ಯಕ್ರಮ ನಡೆಯಿತು. 

ಮದುವೆಯ ವಧು-ವರರಿಗೆ ಬೇಕಾದ ಎಲ್ಲ ರೀತಿಯ ವಸ್ತ್ರ ಆಭರಣಗಳ ಖರೀದಿಯನ್ನೂ ನಡೆಸಲಾಯಿತು. ಸೀರೆ ತೆಗೆಯುವ ಕ್ರಮ, ಕರಿಮಣಿ ಖರೀದಿ, ಮದುವೆಗೆ ಹೇಳಿಕೆ ಎಲ್ಲವೂ ಸಾಂಪ್ರದಾಯಿಕವಾಗಿಯೇ ನಡೆಸಲಾಯಿತು. ಎಲೆ ಅಡಕೆ ಬದಲಿಸಿ ಉಂಗುರ ಹಾಕುವ ಪದ್ಧತಿ, ಊಟೋಪಚಾರ ಎಲ್ಲವೂ ಅದ್ಧೂರಿಯಾಗಿ ನಡೆದಿದೆ. ಕತ್ತಲ್‌ಸಾರ್‌ನ ಮನೆಯಲ್ಲಿ ಮದುವೆ ನಿಗದಿ ಪಡಿಸಿದ್ದು, ಮದುವೆ ಗಂಡಿನ ಕಡೆಯಿಂದ ಬಜಪೆ - ಶಾಂತಿಗುಡ್ಡೆಯಿಂದ 18 ಮಂದಿ ದಿಬ್ಬಣ ಹೋಗಿದ್ದರು. ಅದ್ಧೂರಿ ಮದುವೆಯಲ್ಲಿ ಎರಡೂ ಕಡೆಯವರು ಸೇರಿ 100 ಮಂದಿ ಭಾಗವಹಿಸಿದ್ದರು.

ಮದುವೆಯ ಕ್ರಮ ಹೇಗಿರುತ್ತದೆ ?
ಒಂದು ಮದುವೆಗೆ ಸಂಬಂಧಿಸಿದ ಎಲ್ಲ ಕ್ರಮ ಸಂಪ್ರದಾಯಗಳನ್ನು ಆತ್ಮಗಳ ವಿವಾಹದಲ್ಲೂ ನಡೆಸಲಾಗುತ್ತದೆ. ಆದರೆ ಅದು ವಿರುದ್ಧ ಕ್ರಮದಲ್ಲಿರುತ್ತದೆ. ಆತ್ಮಗಳ ವಿವಾಹ ಆಗಿರುವುದರಿಂದ ಅವರಿಗೆ ಸಂಬಂಧಪಟ್ಟ ವಸ್ತ್ರ - ಆಭರಣಗಳೇ ಇಲ್ಲಿ ವಧುವರರ ಸಂಕೇತ. ಅಲ್ಲದೆ ಪ್ರತ್ಯೇಕ ತೆಂಗಿನಕಾಯಿಗಳಲ್ಲಿ ವಧುವರರನ್ನು ಆವಾಹಿಸಿ ಇಡಲಾಗುತ್ತದೆ. ಎಲ್ಲರಂತೇ ವಧು-ವರರಿಗೂ ಅವರ ಮದುವೆಯ ಭೋಜನವನ್ನು ತುದಿಬಾಳೆ ಎಲೆಯಲ್ಲಿ ವಧು-ವರರನ್ನು ಸಾಂಕೇತಿಸಿ ಇಡಲಾದ ವಸ್ತ್ರ ಆಭರಣ ತೆಂಗಿನಕಾಯಿಯ ಮುಂಭಾಗದಲ್ಲಿ ಬಡಿಸಿ ಇಡಲಾಯಿತು.

ಸತ್ತವರಿಗೂ ನಡೆಯುತ್ತೆ ಪ್ರಸ್ಥದ ಶಾಸ್ತ್ರ!
ಮದುವೆಯಾಗಿ ಬಂದ ಹೆಣ್ಣನ್ನು ಗಂಡನ ಮನೆಯಲ್ಲಿ ಮನೆ ತುಂಬಿಸಿಕೊಳ್ಳುವಂತೆ ಆತ್ಮಗಳ ವಿವಾಹದಲ್ಲೂ ಕ್ರಮವಿದೆ. ವಧು-ವರರನ್ನು ಸಾಂಕೇತಿಸಿ ಇಡಲಾದ ಪರಿಕರಗಳನ್ನು ಇರಿಸಿ ಆರತಿ ವಾಮ ದಿಕ್ಕಿನಲ್ಲಿ ಬೆಳಗುತ್ತಾರೆ. ಬಳಿಕ ಪ್ರಸ್ಥದ ಶಾಸ್ತ್ರವನ್ನೂ ನಡೆಸಲಾಗುತ್ತದೆ. ಕೋಣೆಯೊಳಗೆ ಹಾಸಿಗೆ ಹಾಕಿ ತಲೆ ದಿಂಬು ಇಟ್ಟು ವಧುವರರ ಸಾಂಕೇತಿಕ ವಸ್ತ್ರ ಹೂವು ಇಟ್ಟು, ಒಂದು ಲೋಟ ಹಾಲು, ತಂಬಿಗೆಯಲ್ಲಿ ನೀರಿಟ್ಟು ಹಿಮ್ಮುಖ ಸರಿದು ಬಾಗಿಲು ಹಾಕುತ್ತಾರೆ. ಮರುದಿನ ಔತಣ ಕೂಟಗಳು ನಡೆದು ಮರುದಿನ ವಧು-ವರರನ್ನು ಆವಾಹಿಸಿದ ತೆಂಗಿನಕಾಯಿಗಳನ್ನು ಒಡೆದು ಹರಿವ ನೀರಿನಲ್ಲಿ ವಿಸರ್ಜಿಸಲಾಗುತ್ತದೆ. ತುಳುವರ ಕಟ್ಟುಪಾಡಿನಂತೆ ಮದುವೆಯಾದ ಹೆಣ್ಣನ್ನು ಆಟಿ ತಿಂಗಳಲ್ಲಿ ಗಂಡನ ಮನೆಯಿಂದ ತವರು ಮನೆಗೆ ಕಳಿಸುವ ಆಟಿ ಕುಲ್ಲುನ ಸಂಪ್ರದಾಯ ಆತ್ಮಗಳ ವಿವಾಹಕ್ಕೂ ಅನ್ವಯಿಸುತ್ತದೆ. ಮಾತ್ರವಲ್ಲದೆ ವಧುವರರನ್ನು ಸಾಂಕೇತಿಸಿದ ಆಭರಣಗಳು ಮುಂದಿನ ವರ್ಷದ ಆಟಿಯವರೆಗೂ ಮನೆಯಲ್ಲಿ ಇರಬೇಕೆಂಬುದು ನಿಯಮ.

Follow Us:
Download App:
  • android
  • ios