ಮಂಗಳೂರಿನ ಕದ್ರಿ ದೇವಸ್ಥಾನದಲ್ಲಿ ನಡೆದ ಯಕ್ಷಗಾನದಲ್ಲಿ ಮುಸ್ಲಿಂ ಯುವತಿ ಆರ್ಷಿಯಾ ಖಾನ್ ಅಷ್ಟಭುಜೆ ದೇವಿಯ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಕಲೆಗೆ ಜಾತಿ, ಧರ್ಮದ ಹಂಗಿಲ್ಲ ಎಂಬುದನ್ನು ಸಾಬೀತುಪಡಿಸಿದ ಇವರ ಸಾಧನೆಯನ್ನು ಕಲಾಪ್ರೇಮಿಗಳು ಕೊಂಡಾಡಿದ್ದಾರೆ.
ಮಂಗಳೂರು: ಮಂಗಳೂರಿನ ಕದ್ರಿ ಶ್ರೀಮಂಜುನಾಥ ದೇವಸ್ಥಾನದ ಆವರಣದಲ್ಲಿ ಮಂಗಳವಾರ ನಡೆದ ‘ಶ್ರೀದೇವಿ ಮಹಾತ್ಮೆ’ ತೆಂಕುತಿಟ್ಟು ಯಕ್ಷಗಾನ ಬಯಲಾಟದಲ್ಲಿ ಹವ್ಯಾಸಿ ಕಲಾವಿದೆ, ಮುಸ್ಲಿಂ ಯುವತಿ ಶ್ರೀದೇವಿ ಮಹಾತ್ಮೆ ಪ್ರಸಂಗದ ಪ್ರಮುಖ ಪಾತ್ರ ಅಷ್ಟಭುಜೆಯ ಜಗನ್ಮಾತೆ ದೇವಿಯ ಪಾತ್ರದಲ್ಲಿ ಅಭಿನಯಿಸುವ ಮೂಲಕ ಕಲಾಪ್ರೇಮಿಗಳ ಮನೆ ಸೆಳೆದಿದ್ದಾರೆ.
ದ.ಕ. ಜಿಲ್ಲೆಯ ಬಂಟ್ವಾಳ ತಾಲೂಕಿನ ವಿಟ್ಲ ಮಾಡ ಮೂಲದ ‘ಯಕ್ಷಪ್ರಿಯೆ’ ತನು ವಿಟ್ಲ ಎಂದೇ ಖ್ಯಾತಿ ಪಡೆದ ಆರ್ಷಿಯಾ ಖಾನ್ ಅಷ್ಟಭುಜೆ ದೇವಿ ಪಾತ್ರದಲ್ಲಿ ರಂಗಸ್ಥಳ ಪ್ರವೇಶಿಸಿದ ಮೊದಲ ಮುಸ್ಲಿಂ ಮಹಿಳೆ ಎಂದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಗುರುಮುಖೇನ ಯಕ್ಷಗಾನ ಅಭ್ಯಸಿಸಿರುವ ಈಕೆ ಈ ಹಿಂದೆ ಮಹಿಷಾಸುರ, ದೇವಿ ಸೇರಿದಂತೆ ಅನೇಕ ಪಾತ್ರ ನಿರ್ವಹಿಸಿ ಸೈ ಎನಿಸಿದ್ದರು.
ಕದಳಿ ಕಲಾ ಕೇಂದ್ರ ದಸರಾ ಅಂಗವಾಗಿ ಕದಳಿ ದಶಾಹ ಹೆಸರಿನಲ್ಲಿ ಈ ಯಕ್ಷಗಾನ ಕಾರ್ಯಕ್ರಮ ಆಯೋಜಿಸಿತ್ತು. ಕಲೆಗೆ ಜಾತಿ, ಧರ್ಮದ ಹಂಗಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿರುವ ಆರ್ಷಿಯಾ ಖಾನ್ ಅವರ ಈ ಸಾಧನೆಯನ್ನು ಯಕ್ಷಗಾನ ಪ್ರೇಮಿಗಳು ಕೊಂಡಾಡಿದ್ದಾರೆ.
9 ತಿಂಗಳ ಗರ್ಭಿಣಿಯಿಂದ ಯಕ್ಷಗಾನ!
9 ತಿಂಗಳ ತುಂಬು ಗರ್ಭಿಣಿಯೊಬ್ಬರು ಯಕ್ಷಗಾನ ರಂಗ ಪ್ರವೇಶ ಮಾಡಿ ಗಮನ ಸೆಳೆದಿರುವ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಸುರತ್ಕಲ್ನಲ್ಲಿ ನಡೆದಿದೆ. ದಿಶಾ ಶೆಟ್ಟಿ ಹವ್ಯಾಸಿ ಕಲಾವಿದೆಯಾಗಿದ್ದು, ಯಕ್ಷಗುರು ರಾಕೇಶ್ ರೈ ನಿರ್ದೇಶನದ ದಶಾವತಾರ ಯಕ್ಷಗಾನ ಪ್ರದರ್ಶನದಲ್ಲಿ ಪ್ರಹ್ಲಾದನ ತಾಯಿ ಕಯಾದು ಪಾತ್ರ ನಿರ್ವಹಿಸಿ ಸೈ ಎನಿಸಿಕೊಂಡಿದ್ದಾರೆ. ಇವರ ಅಭಿನಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈ ಬಗ್ಗೆ ಮಾತನಾಡಿದ ದಿಶಾ, ‘ನಮ್ಮದು ಯಕ್ಷಗಾನದ ಕುಟುಂಬ. ನನ್ನ ಅಮ್ಮ ಹಾಗೂ ಚಿಕ್ಕಮ್ಮ ಕೂಡ ಗರ್ಭಿಣಿಯಾಗಿದ್ದ ಸಂದರ್ಭದಲ್ಲಿ ಯಕ್ಷಗಾನ ಪಾತ್ರ ಮಾಡಿದ್ದು ಪ್ರೇರಣೆಯಾಗಿತ್ತು. ಸುರತ್ಕಲ್ನಲ್ಲಿ ನಡೆದ ಯಕ್ಷಗಾನದಲ್ಲಿ ಪ್ರಹ್ಲಾದನ ತಾಯಿಯ ಪಾತ್ರ ಮಾಡಿದ್ದೇನೆ. ಸುಮಾರು 20 ವರ್ಷದಿಂದ ಪುಂಡು ವೇಷ ಮಾಡುತ್ತಿದ್ದು, ಪ್ರಹ್ಲಾದನ ತಾಯಿಯ ಪಾತ್ರ ತಾಯ್ತನದ ಭಾವನೆಗೆ ಪೂರಕವಾಗಿತ್ತು’ ಎಂದಿದ್ದಾರೆ.
ಇದನ್ನು ಸಾಧನೆ ಎಂದು ಹೇಳುವುದಿಲ್ಲ. ಪ್ರತಿಯೊಬ್ಬ ಮಹಿಳೆಯರಲ್ಲಿ ಗರ್ಭಿಣೆ ಸಮಯ ಬೇರೆ ಬೇರೆ ರೀತಿಯಾಗಿದ್ದು, ತುಂಬಾ ಸೂಕ್ಷ್ಮವಾದ ಸಮಯವಾಗಿರುವುದರಿಂದ, ಇದನ್ನು ಅನುಕರಣೆ ಮಾಡಬೇಡಿ. ನಾನು ಮಾಡಿದ್ದೇನೆಂದು ಬೇರೆಯವರು ಮಾಡಬೇಡಿ. ನಾನು ಸಕ್ರಿಯವಾಗಿ ಇದ್ದ ಕಾರಣ ಸಾಧ್ಯವಾಗಿದೆ. ವಿಡಿಯೋ ವೈರಲ್ ಆದ ಬಳಿಕ ಜನರು ಇದನ್ನು ಯಾವ ರೀತಿ ತೆಗೆದುಕೊಳ್ಳುತ್ತಾರೆಂಬ ಹೆದರಿಕೆಯಿತ್ತು ಎಂದು ದಿಶಾ ಶೆಟ್ಟಿ ಹೇಳಿದ್ದಾರೆ.


