Asianet Suvarna News Asianet Suvarna News

ಹಿಂದೂ ಮುಸ್ಲಿಂ ಭಾವೈಕ್ಯತೆ ಸಾರುವ ಅಷ್ಟೂರು ಜಾತ್ರೆ

ಬೀದರ್ ನಗರಕ್ಕೆ ಸಮೀಪದ ಅಷ್ಟೂರು ಗ್ರಾಮದ ಅಹ್ಮದ ಶಾ ಅಲಿ ವಲಿ ಬಹಮನಿ ದರ್ಗಾದ ಗುಂಬಜ್‌ಗಳು ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕಗಳಾಗಿವೆ. 

brotherhood on display at Ashtoor fare
Author
Bangalore, First Published Mar 31, 2022, 3:20 PM IST

ಲಿಂಗೇಶ್ ಮರಕಲೆ                 

ಸಾಮಾಜಿಕ ಸಮಾನತೆಗಾಗಿ ಹೋರಾಟ ಮಾಡಿದ್ದ ವಿಶ್ವಗುರು ಬಸವಣ್ಣ(basavanna)ನ ಕರ್ಮಭೂಮಿಯಲ್ಲಿ ಹಿಂದೂ-ಮುಸ್ಲಿಂ ಭಾವೈಕ್ಯತೆಯ ಧಾರ್ಮಿಕ ಸಾಮರಸ್ಯದ ಸಂಕೇತವಾದ ಅಷ್ಟೂರು ಜಾತ್ರೆ(Ashtooru Fair) ಅದ್ಧೂರಿಯಾಗಿ ನಡೆಯಿತು. ಹಿಂದೂ ಮುಸ್ಲಿಂ ಭೇದಭಾವ ಇಲ್ಲದ, ಶತಮಾನಗಳಿಂದ ವಿಜೃಂಭಣೆಯಿಂದ ಹಿಂದೂಗಳು ಅಲ್ಲಮಪ್ರಭು ಎಂದೂ ಮುಸ್ಲಿಮರು ಅಹೆಮದ್ ಶಾ ವಲಿ ಎಂದೂ ತಿಳಿದು ಅದ್ದೂರಿಯಾಗಿ ಜಾತ್ರೆ ಆಚರಿಸುತ್ತಾರೆ. ಬಹುಮನಿ ಸುಲ್ತಾನ(bahumani Sulthan)ರ ಕಾಲದಿಂದಲೂ ವರ್ಷಕ್ಕೊಮ್ಮೆ ನಡೆಯುವ ಈ ಜಾತ್ರೆಗೆ ಬೀದರ್ ಜಿಲ್ಲೆಯಿಂದಷ್ಟೇ ಅಲ್ಲದೇ ರಾಜ್ಯದ ಮೂಲೇ ಮೂಲೇಯಿಂದ ಸಾವಿರಾರು ಸಂಖ್ಯೆಯಲ್ಲಿ ಹಿಂದೂ-ಮುಸ್ಲಿಮರು ಬಂದು ದೇವರ ಕೃಪೆಗೆ ಪಾತ್ರರಾಗುತ್ತಾರೆ. ಅಷ್ಟೂರು ಜಾತ್ರೆ ವಿಶೇಷತೆಗಳೇನು ಅಂತೀರಾ?

ಒಂದೇ ದೇವರು ಎರಡು ಹೆಸರು. ಹಿಂದೂಗಳಿಗೆ ಅಲ್ಲಮಪ್ರಭು(Allamaprabhu)ವಾದರೆ ಮುಸಲ್ಮಾನರಿಗೆ ಅಹೆಮದ್ ಶಾ ವಲಿ(Ahmad Sha vali). ಹೌದು, ದೇವನೊಬ್ಬ ನಾಮ ಹಲವು ಎಂಬಂತೆ ಬೀದರ್ ನಗರಕ್ಕೆ ಸಮೀಪದ ಅಷ್ಟೂರು ಗ್ರಾಮದ ಅಹ್ಮದ ಶಾ ಅಲಿ ವಲಿ ಬಹಮನಿ ದರ್ಗಾದ ಗುಂಬಜ್‌ಗಳು ಹಿಂದೂ ಹಾಗೂ ಮುಸ್ಲಿಂ ಸಹೋದರತ್ವ ಸಾರುವ ಪ್ರತೀಕಗಳಾಗಿವೆ. ಈ ದರ್ಗಾದಲ್ಲಿ ಮುಸ್ಲಿಮರಿಗೆ ಅಹ್ಮದ ಶಾ ಅಲಿ ವಲಿ ಆರಾಧ್ಯ ದೈವವಾದರೆ, ಹಿಂದುಗಳಿಗೆ ಅಲ್ಲಮಪ್ರಭುವಾಗಿ ಪೂಜೆ ಪಡೆಯುವುದು ವಿಶೇಷ. ಹಿಂದೂ ಮುಸ್ಲಿಂ ಭಾವೈಕ್ಯದಲ್ಲಿ ನಂಬಿಕೆಯಿಟ್ಟಿದ್ದ ಅಹ್ಮದ್ ಶಾ ಅಲಿ ಬಹಮನಿ ಅವರ ಜನ್ಮದಿನ ನಿಮಿತ್ತ ಗೋರಿಯ ಗುಂಬಜ್ಗೆ ತೆರಳುವ ಸಾವಿರಾರು ಜನರು ಭಕ್ತಿ ಸಮರ್ಪಣೆ ಮಾಡುವುದು ಹಲವು ಶತಮಾನಗಳಿಂದ ನಡೆದು ಬಂದಿದೆ. 

ಯುಗಾದಿಯಂದು ಪಂಚಾಂಗ ಶ್ರವಣ ಮಾಡುವುದೇಕೆ?

ಅಷ್ಟೂರಿನ ಅಲ್ಲಮಪ್ರಭು ದೇವರು ಜಗತ್ತಿಗೆ ಸಹೋದರತೆ, ಸಮಾನತೆಯೊಂದಿಗೆ ಸತ್ಯ ಶುದ್ಧ ಕಾಯಕ ಮತ್ತು ದಾಸೋಹದಂತಹ ಮಹಾನ್ ತತ್ವಗಳನ್ನು ಸಾರಿರುವ ಶರಣ. ಅವರ ಸ್ಮರಣೆಯಲ್ಲೇ ಪ್ರತಿ ವರ್ಷ ಜಾತ್ರೆ ನೆರವೇರುತ್ತದೆ. ರಾಜ್ಯ, ಆಂಧ್ರಪ್ರದೇಶ ಮತ್ತು ಮಹಾರಾಷ್ಟ್ರಗಳಿಂದ ಸಾವಿರಾರು ಯಾತ್ರಾರ್ಥಿಗಳು, ಪ್ರವಾಸಿಗರು ನಿತ್ಯ ಇಲ್ಲಿಗೆ ಆಗಮಿಸಿ ದರ್ಗಾಕ್ಕೆ ಹೂವಿನ ಚಾದರ್ ಸಮರ್ಪಿಸುತ್ತಾರೆ. ಅಗರಬತ್ತಿ ಹಚ್ಚಿ ಪೂಜಿಸಿ, ಪ್ರಾರ್ಥಿಸಿ ಅಹ್ಮದ್ ಶಾಹ್‌ಗೆ ನಮಿಸುತ್ತಾರೆ. ಇಲ್ಲಿ ಹಿಂದುಗಳು ಅಲ್ಲಮಪ್ರಭು ಗುಡಿ ಎಂದೂ, ಮುಸ್ಲಿಮರು ವಲಿ ದರ್ಗಾ ಎಂದೂ ಪರಿಗಣಿಸುವ ಅಹ್ಮದ್ ಶಾಹ್ನ ಸಮಾಧಿಯು ಅಪರೂಪದ ಭಾವೈಕ್ಯತೆಯ ತಾಣಗಳಲ್ಲೊಂದು.

ಈ ದರ್ಗಾದ ಜಾತ್ರೆಗೆ ಚಾಲನೆ ನೀಡುವವರು ಪಕ್ಕದ ಗುಲ್ಬರ್ಗ(Gulbarga) ಜಿಲ್ಲೆಯ ಮಾಡಿಹಾಳ್ ಮತ್ತು ಆಳಂದದ ಅಲ್ಲಮಪ್ರಭು ಮಹಾರಾಜರೆಂದೇ ಗುರುತಿಸಿಕೊಳ್ಳುವ ಗುರುಗಳು. ಪ್ರತಿ ವರ್ಷ ಹೋಳಿ ಹಬ್ಬದ ನಂತರ ನಡೆಯುವ ಜಾತ್ರೆಯ ಸಂದರ್ಭ ಆಳಂದದಿಂದ ನೂರಾರು ಕಿ.ಮೀ ವರೆಗೆ ನೂರಾರು ಭಕ್ತರೊಂದಿಗೆ ಕಾಲ್ನಡಿಗೆಯಲ್ಲಿಯೇ ಆಗಮಿಸುವ ಗುರುಗಳು ದರ್ಗಾ ಮುಂದೆ ಪೂಜೆ ನೆರವೇರಿಸುವ ಮೂಲಕ ಚಾಲನೆ ನೀಡುತ್ತಾರೆ. ಮೂರ್ನಾಲ್ಕು ದಿನಗಳವರೆಗೆ ನಡೆಯುವ ಈ ಜಾತ್ರೆಯ ಸಂದರ್ಭ ಪಟಾಕಿ ಸಿಡಿಸುವುದು ಮತ್ತು ಅಂತಾರಾಜ್ಯ ಕುಸ್ತಿ ಸ್ಪರ್ಧೆ ಏರ್ಪಡಿಸುವುದು ತಲೆತಲಾಂತರಗಳಿಂದ ನಡೆದು ಬಂದ ಸಂಸ್ಕೃತಿ. ದರ್ಗಾ ಮುಂದೆ ಭಕ್ತರು ಎಣ್ಣೆ ದೀಪ ಹಚ್ಚಿ ಭಕ್ತಿ ಸಮರ್ಪಿಸುತ್ತಾರೆ. ಪ್ರತಿ ವರ್ಷ ಹೋಳಿ ಹುಣ್ಣಿಮೆಯ ನಂತರ ನಡೆಯುವ ಈ ಜಾತ್ರೆ ಹಲವಾರು ವಿಶೇಷತೆಯನ್ನೊಳಗೊಂಡಿದೆ. ಇಲ್ಲಿನ ಹಿಂದೂ ಮುಸ್ಲಿಂ ಭಾವೈಕತೆಯ ಜಾತ್ರೆಗೆ ನೂರಾರು ಹಿಂದೂ-ಮುಸ್ಲಿಂ ಭಕ್ತರು ಎರಡ್ಮೂರು ದಿನ ಇದ್ದು ಜಾತ್ರೆ ಮಾಡಿ ಹೋಗುತ್ತಾರೆ.

ಚೈತ್ರ ಅಮಾವಾಸ್ಯೆಯಂದು ಕೂಡಿ ಬರಲಿದೆ ವಿಶೇಷ ಯೋಗ!

ಸದ್ಯ ಮುಸ್ಲಿಂ ಬಾಂಧವರ ವ್ಯಾಪಾರಕ್ಕೆ ಬ್ರೇಕ್ ಹಾಕಿ ರಾಜ್ಯದ ಬಹುತೇಕ ಕಡೆ ನಿರ್ಬಂಧ ಹೇರಲಾಗುತ್ತಿದೆ. ಆದ್ರೆ ಗಡಿ ಜಿಲ್ಲೆ ಬೀದರ್‌ನಲ್ಲಿ ಎರಡು ಧರ್ಮದ ಜನರು ಜಾತ್ರೆಯಲ್ಲಿ ಒಟ್ಟಾಗಿ ವ್ಯಾಪಾರ ಮಾಡುವ ಮೂಲಕ ಸಮಾಜಕ್ಕೆ ಭಾವೈಕ್ಯತೆಗೆ ಸಂದೇಶ ಸಾರಿದ್ದಾರೆ. ದೇವನೊಬ್ಬ ನಾಮ ಹಲವು ಅಂತ ಬಸವಣ್ಣನವರು ಹೇಳಿದಂತೆ ಕಲ್ಯಾಣ ನಾಡಿನಲ್ಲಿ ಕೋಮು ಭಾವನೆಗಳನ್ನು ಮೆಟ್ಟಿ ನಿಂತು ಅಲ್ಲಮಪ್ರಭು-ಅಹ್ಮದ್ ಶಾ ವಲಿ ಜಾತ್ರೆ ಅದ್ದೂರಿಯಾಗಿ ಜರುಗಿದೆ.

Follow Us:
Download App:
  • android
  • ios