Asianet Suvarna News Asianet Suvarna News

ತ್ಯಾಗ, ಸಮಾನತೆಯ ಸಂದೇಶ ಸಾರುವ ಬಕ್ರೀದ್‌

ಮುಸ್ಲಿಮರ ಅತ್ಯಂತ ಶ್ರೇಷ್ಠ, ಮಹತ್ವದ ದಿನಗಳಲ್ಲೊಂದು ಈದುಲ್‌ ಅಳ್‌ಹಾ ಅಥವಾ ಬಕ್ರೀದ್‌. ಸಮಸ್ತ ಮುಸ್ಲಿಂ ಬಾಂಧವರಿಗೆ ಏಷ್ಯಾನೆಟ್ ಸುವರ್ಣ ನ್ಯೂಸ್ ಮತ್ತು ಕನ್ನಡ ಪ್ರಭ ಕಡೆಯಿಂದ ಬಕ್ರೀದ್‌ ಹಬ್ಬದ ಶುಭಾಶಯಗಳು

Bakrid or Eid-al-Adha here are some wishes gow
Author
Bengaluru, First Published Jul 10, 2022, 7:29 AM IST | Last Updated Jul 10, 2022, 7:29 AM IST

ನಾಸಿರ್‌ ಸಜಿಪ

ಬೆಂಗಳೂರು (ಜು.10): ಹಜ್‌ನಲ್ಲಿ ಬಡವನಿಗೊಂದು, ಶ್ರೀಮಂತನಿಗೊಂದು ಡ್ರೆಸ್‌ ಕೋಡ್‌ ಇಲ್ಲ. ವರ್ಣ, ಕುಲ, ಗೋತ್ರ, ದೇಶ, ಭಾಷೆ, ಸ್ಥಾನಮಾನ ಇತ್ಯಾದಿಗಳ ಯಾವುದೇ ವ್ಯತ್ಯಾಸಗಳಿಲ್ಲದೆ ಎಲ್ಲರೂ ಒಂದೇ ಸಾಲಲ್ಲಿ, ಒಂದೇ ಕಡೆಯಲ್ಲಿ, ಒಂದೇ ದಿಕ್ಕಿಗೆ ಮುಖಮಾಡಿ, ಏಕ ದೇವ ವಿಶ್ವಾಸದ ಮಂತ್ರ ಜಪಿಸುತ್ತಾರೆ. ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಬಾಳಬೇಕೆಂಬ ಸಂದೇಶವನ್ನು ಸಾರುತ್ತಾರೆ.

sಪವಿತ್ರ ಮಕ್ಕಾ ಭೂಮಿಯಲ್ಲಿ ಲಕ್ಷಾಂತರ ಮಂದಿ ಹಜ್‌ ಕರ್ಮದಲ್ಲಿ ತೊಡಗಿಕೊಳ್ಳುವಾಗ ಜಾಗತಿಕ ಮಟ್ಟದಲ್ಲಿ ಮುಸ್ಲಿಮರು ಈದ್‌ ಆಚರಿಸುತ್ತಾರೆ. ಪ್ರವಾದಿಗಳಲ್ಲೊಬ್ಬರಾದ ಇಬ್ರಾಹಿಂ ಹಾಗೂ ಅವರ ಪುತ್ರ ಇಸ್ಮಾಯಿಲ್‌ರ ದೇವನಿಷ್ಠೆ ಹಾಗೂ ತ್ಯಾಗೋಜ್ವಲ ಜೀವನದ ಸ್ಮರಣೆಯಾಗಿದೆ ಈದುಲ್‌ ಅಳ್‌ಹಾ. ದೇವ ನಿಷ್ಠೆಗಾಗಿ ತನಗೆ ಅತ್ಯಂತ ಪ್ರೀತಿಯ ಯಾವುದೇ ವಸ್ತುವನ್ನಾದರೂ ತ್ಯಾಗ ಮಾಡಲು ಮನುಷ್ಯ ಸಿದ್ಧನಿರಬೇಕೆಂಬುದೇ ಈ ಹಬ್ಬದ ಸಂದೇಶ.

ಗೋಹತ್ಯೆ ಕಾನೂನು ಉಲ್ಲಂಘಿಸದೆ ಬಕ್ರೀದ್‌ ಬಲಿಗೆ ಸರ್ಕಾರ ಸೂಚನೆ

ಮುಸ್ಲಿಮನು ಜೀವನದಲ್ಲಿ ಪಾಲಿಸಬೇಕಾದ ಕಡ್ಡಾಯ 5 ಕಾರ್ಯಗಳಲ್ಲಿ ಹಜ್‌ ಕೂಡಾ ಒಂದು. ಇಸ್ಲಾಮಿಕ್‌ ಕ್ಯಾಲೆಂಡರ್‌ನ ಕೊನೆ ತಿಂಗಳಾದ ದುಲ್ಹಜ್‌ನ 9ನೇ ದಿನ ಮಕ್ಕಾದ ‘ಅರಫಾ’ ಎಂಬ ಬೃಹತ್‌ ಮೈದಾನದಲ್ಲಿ ಲಕ್ಷಾಂತರ ಮಂದಿ ಹಜ್‌ಗಾಗಿ ಒಂದುಗೂಡುತ್ತಾರೆ. ಅದೇ ದಿನ ಜಗತ್ತಿನೆಲ್ಲೆಡೆ ಮುಸ್ಲಿಮರು ಉಪವಾಸ ಕೈಗೊಂಡು, ತಿಂಗಳ 10ರಂದು ಅಂದರೆ ಮರುದಿನ ಈದ್‌ ಅಥವಾ ಹಬ್ಬ ಆಚರಿಸುತ್ತಾರೆ. ಅನೇಕರು ಒಂದನೇ ತಾರೀಕಿನಿಂದಲೇ ಆರಂಭಿಸಿ 9ನೇ ತಾರೀಕಿನ ತನಕ ಪ್ರತಿದಿನ ಉಪವಾಸ ಕೈಗೊಳ್ಳುವುದೂ ಇದೆ. ಮಕ್ಕಾದಲ್ಲಿರುವ ಹಜ್‌ ಯಾತ್ರಿಕರು ಅರಫಾ ಮೈದಾನದಲ್ಲಿ ಒಗ್ಗೂಡಿ ಒಕ್ಕೊರಲಿನಿಂದ ಅಲ್ಲಾಹನ ಮಹಿಮೆಯನ್ನು ಕೊಂಡಾಡುತ್ತಾರೆ. ಬಡವ ಶ್ರೀಮಂತನೆಂಬ ಭೇದಭಾವವಿಲ್ಲದೇ ಏಕತೆ, ಸಮಾನತೆಯನ್ನು ಜಗತ್ತಿಗೆ ಸಾರುತ್ತಾರೆ. ಜಗತ್ತಿನ ಶಾಂತಿ, ಎಲ್ಲರ ಸುಖ, ಸುಭಿಕ್ಷೆಗಾಗಿ ಪ್ರಾರ್ಥಿಸುತ್ತಾರೆ. ಹಜ್‌ನಲ್ಲಿ ಭಾಗವಹಿಸಲು ಸಾಧ್ಯವಾಗದ, ಜಗತ್ತಿನ ಎಲ್ಲಾ ಭಾಗಗಳ ಮುಸ್ಲಿಮರು ಅರಫಾದಲ್ಲಿ ಒಟ್ಟು ಸೇರುವ ಜಾಗತಿಕ ಹಾಜಿಗಳ ಜೊತೆ ಭಾವೈಕ್ಯ ಪ್ರದರ್ಶಿಸುತ್ತಾ ಆ ದಿನ ಉಪವಾಸ ಆಚರಿಸುತ್ತಾರೆ. ಹಬ್ಬದ ದಿನ ಸೂರ್ಯೋದಯದ ಬಳಿಕ ವಿಶೇಷ ಸಾಮೂಹಿಕ ನಮಾಜ್‌ ಕೂಡಾ ನಡೆಯುತ್ತದೆ. ಪರಸ್ಪರ ಶುಭ ಹಾರೈಕೆ, ಹಸ್ತಲಾಘವ, ಆಲಿಂಗನ, ನೆರೆಹೊರೆ-ಕುಟುಂಬ ಸಂದರ್ಶನದ ಮೂಲಕ ಹಬ್ಬದ ದಿನವನ್ನು ಅವಿಸ್ಮರಣೀಯಗೊಳಿಸುತ್ತಾರೆ.

ಸಹೋದರ್ಯದ ಉಜ್ವಲ ಸಂದೇಶ: ಹಜ್‌ಗಾಗಿ ವಿಶ್ವದ ನಾನಾ ದಿಕ್ಕುಗಳಿಂದ ಬಂದು ಅರಫಾದಲ್ಲಿ ಒಂದುಗೂಡುವ ಜನರ ವಿಶೇಷತೆ ಏನೆಂದರೆ ಎಲ್ಲರೂ ಶುಭ್ರ ಶ್ವೇತ ವಸ್ತ್ರವನ್ನಷ್ಟೇ ಧರಿಸುವುದು. ಅಲ್ಲಿ ಬಡವನಿಗೊಂದು, ಶ್ರೀಮಂತನಿಗೊಂದು ಡ್ರೆಸ್‌ಕೋಡ್‌ ಇಲ್ಲ. ಕಾರಿದ್ದವನಿಗೂ ಬರಿಗಾಲಲ್ಲೇ ನಡೆಯುವವನ ಮಧ್ಯೆಯೂ ವ್ಯತ್ಯಾಸ ಗುರುತಿಸಲು ಸಾಧ್ಯವಿಲ್ಲ. ವರ್ಗ, ವರ್ಣ, ಕುಲ, ಗೋತ್ರ, ದೇಶ, ಭಾಷೆ, ಸ್ಥಾನಮಾನ, ಪದವಿ ಇತ್ಯಾದಿಗಳ ಯಾವುದೇ ವ್ಯತ್ಯಾಸಗಳಿಲ್ಲದೆ ಬಡವ, ಶ್ರೀಮಂತನೋ, ನಿರ್ಗತಿಕನೋ ಒಂದೇ ಸಾಲಲ್ಲಿ, ಒಂದೇ ಕಡೆಯಲ್ಲಿ, ಒಂದೇ ದಿಕ್ಕಿಗೆ ಮುಖಮಾಡಿ, ಏಕದೈವ ವಿಶ್ವಾಸದ ಮಂತ್ರ ಜಪಿಸುತ್ತಾರೆ. ಹಗೆ, ದ್ವೇಷ, ಅಹಂ, ವೈರಾಗ್ಯ, ಶತ್ರುತ್ವವಿಲ್ಲದೇ ಮನುಷ್ಯರೆಲ್ಲರೂ ಸಹೋದರರು ಮತ್ತು ಸಮಾನರು ಎಂಬ ಸಂದೇಶವನ್ನು ಜಗತ್ತಿಗೆ ಹಜ್‌ ಮೂಲಕ ಸಾರಲಾಗುತ್ತದೆ.

Bengaluru: ಬಕ್ರೀದ್‌ಗೆ ರಸ್ತೆಯಲ್ಲಿ ಪ್ರಾರ್ಥನೆಗೆ ಅವಕಾಶ ಇಲ್ಲ: ಬಿಬಿಎಂಪಿ ಸ್ಪಷ್ಟನೆ

ಬಕ್ರೀದ್‌ಗೆ ಕುರಿ ಬಲಿ ಏಕೆ ಗೊತ್ತೆ?: ಪ್ರವಾದಿ ಇಬ್ರಾಹಿಂ ಅವರು ತಮ್ಮ ಮಗ ಇಸ್ಮಾಯಿಲ್‌ರನ್ನೇ ದೇವನಿಗೆ ಬಲಿಯರ್ಪಿಸಲು ಮುಂದಾಗುವ ರೋಚಕ ಘಟನೆಯೇ ಬಲಿದಾನ ಅಥವಾ ಕುರ್ಬಾನಿಯ ಹಿಂದಿರುವ ಇತಿಹಾಸ. ಸುದೀರ್ಘ ಕಾಲದ ಬಳಿಕ ಜನಿಸಿದ ಮಗ ಇಸ್ಮಾಯಿಲ್‌ ಜೊತೆ ಸಂತೋಷಭರಿತ ಜೀವನವನ್ನು ನಡೆಸುತ್ತಿರುವ ಇಬ್ರಾಹಿಮರಿಗೆ ಒಂದಿನ ವಿಶೇಷ ಕನಸು. ಮಗನನ್ನೇ ಬಲಿಯರ್ಪಿಸುವ ಕನಸೊಂದನ್ನು ಕಾಣುವ ಇಬ್ರಾಹಿಮರು ಅದನ್ನು ಪುತ್ರ ಇಸ್ಮಾಯಿಲರಿಗೂ ತಿಳಿಸಿತ್ತಾರೆ. ಪರಸ್ಪರ ಒಪ್ಪಿಗೆಯೊಂದಿಗೆ ಸ್ವಂತ ಪುತ್ರನನ್ನೇ ಬಲಿಯರ್ಪಿಸಲು ಪ್ರವಾದಿ ಇಬ್ರಾಹಿಂ ತಯಾರಾಗುತ್ತಾರೆ. ದೇವನ ಆದೇಶ ಅಲ್ಲದಿದ್ದರೂ ಕನಸಲ್ಲಿ ಕಂಡಿದ್ದು ದೇವನ ಆದೇಶ ಎಂದುಕೊಂಡು ಅದರ ಅನುಷ್ಠಾನಕ್ಕೆ ಮುಂದಾಗುತ್ತಾರೆ. ಆದರೆ ಅಲ್ಲಾಹನಿಗೆ ಬೇಕಿದ್ದದ್ದು ಪ್ರವಾದಿ ಇಬ್ರಾಹಿಮರ ದೇವನಿಷ್ಠೆ ಮಾತ್ರವಾಗಿತ್ತು. ಅದಕ್ಕಾಗಿಯೇ ಆಡೊಂದನ್ನು ಇಬ್ರಾಹಿಮರಿಗೆ ನೀಡುವ ಅಲ್ಲಾಹನು, ಅದನ್ನೇ ಬಲಿಯರ್ಪಿಸಲು ಆದೇಶಿಸುತ್ತಾನೆ.

ಈ ಕುರಿತು ಕುರ್‌ಆನ್‌ ಹೇಳುವುದು ನೋಡಿ, ‘ನಿಶ್ಚಯವಾಗಿಯೂ ಅದೊಂದು ಪ್ರತ್ಯಕ್ಷ ಪರೀಕ್ಷೆಯಾಗಿತ್ತು. ಆ ಬಾಲಕನಿಗೆ ಬದಲಾಗಿ ನಾವು ಒಂದು ಮಹತ್ತರ ಬಲಿದಾನವನ್ನು ಪರಿಹಾರವಾಗಿ ಅವರಿಗೆ ಕೊಟ್ಟೆವು. ಆ ಘಟನೆಯ ನೆನಪನ್ನು ಮುಂದಿನ ಜನಾಂಗದಲ್ಲೂ ಉಳಿಸಿದೆವು. (ಕುರ್‌ಆನ್‌- 37:106 -108). ಇಂದು ಬಕ್ರೀದ್‌ ಸಂದರ್ಭ ಜಗತ್ತಿನ ಎಲ್ಲೆಡೆ ನೀಡಲಾಗುವ ಪ್ರಾಣಿ ಬಲಿಯು ಇಬ್ರಾಹಿಂ ಮತ್ತವರ ಪುತ್ರನ ತ್ಯಾಗದ ಸಂದೇಶವನ್ನಷ್ಟೇ ಸಾರುತ್ತದೆ. ‘ಅವುಗಳ ಮಾಂಸವಾಗಲಿ ರಕ್ತವಾಗಲಿ ಅಲ್ಲಾಹನಿಗೆ ತಲುಪುವುದಿಲ್ಲ. ನಿಮ್ಮಿಂದ ಅವನಿಗೆ ತಲುಪುವುದು ಧರ್ಮನಿಷ್ಠೆ ಮಾತ್ರ’ ಎಂದು ಕುರ್‌ಆನ್‌ ಸ್ಪಷ್ಟವಾಗಿ ಮಾನವನ ದೇವನಿಷ್ಠೆಯನ್ನೇ ಹೇಳುತ್ತದೆ. ಇದನ್ನೇ ಅನುಸರಿಸಿ ತ್ಯಾಗದ ಸಂಕೇತವಾಗಿ ಮುಸ್ಲಿಮರು ಬಕ್ರೀದ್‌ ದಿನ ಪ್ರಾಣಿ ಬಲಿ ನೀಡುತ್ತಾರೆ.

ಬಲಿ ನೀಡಲಾದ ಪ್ರಾಣಿಯ ಮಾಂಸವನ್ನು ಮೂರು ಪಾಲುಗಳಾಗಿಸಿ, ಒಂದನ್ನು, ಬಲಿ ಕೊಟ್ಟವರ ಕುಟುಂಬದವರಿಗೆ, ಇನ್ನೊಂದನ್ನು ಬಂಧು ಮಿತ್ರರಿಗೆ ಮತ್ತು ಮೂರನೆಯದನ್ನು ಬಡವರಿಗೆ ಹಂಚಲಾಗುತ್ತದೆ. ಹಬ್ಬ ಉಳ್ಳವರ ಮನೆಯ ಸಂಭ್ರಮ ಮಾತ್ರವಾಗದೆ ಬಡವನ ಮನೆಯ ಒಲೆಯೂ ಉರಿಯಬೇಕೆಂಬುದೇ ಇದರ ಉದ್ದೇಶ. ಹಂಚಿ ತಿನ್ನಬೇಕೆಂಬ ಪಾಠ ಇಲ್ಲಿ ಮತ್ತೆ ಅನಾವರಣಗೊಳ್ಳುತ್ತದೆ.

ಅರಫಾದಲ್ಲೇ ಪ್ರವಾದಿಯ ವಿದಾಯ ಭಾಷಣ: ಆದಂರ ಮೂಲಕ ಆರಂಭಗೊಳ್ಳುವ ಪ್ರವಾದಿ ಪರಂಪರೆ ಮುಹಮ್ಮದ್‌ ಅವರ ಮೂಲಕ ಕೊನೆಗೊಳ್ಳುತ್ತದೆ. ಜಗತ್ತಿನ ಎಲ್ಲ ಮುಸಲ್ಮಾನರು ಪ್ರವಾದಿ ಮುಹಮ್ಮದರ ಅನುಯಾಯಿಗಳು. ಪವಿತ್ರ ಮಕ್ಕಾದಲ್ಲಿ ಜನಿಸಿದ್ದರೂ ಶತ್ರುಗಳ ಉಪಟಳ ತಾಳಲಾರದೆ ಮದೀನಾ ಪಟ್ಟಣಕ್ಕೆ ತೆರಳುವ ಪೈಗಂಬರ್‌ ಮುಹಮ್ಮದ್‌, ಬಳಿಕ ತಮ್ಮ ಜೀವನದ ಏಕೈಕ ಮತ್ತು ಕೊನೆಯ ಹಜ್‌ ಕರ್ಮ ನಿರ್ವಹಿಸಲು ಮಕ್ಕಾಗೆ ಮರಳುತ್ತಾರೆ. ಇದೇ ಸಂದರ್ಭ ಅರಫಾ ಮೈದಾನದಲ್ಲಿ ನಿಂತು ತಮ್ಮ ಅನುಯಾಯಿಗಳನ್ನುದ್ದೇಶಿಸಿ ಅವರು ಮಾಡಿದ ಭಾಷಣ ಇಂದಿಗೂ ಚರಿತ್ರೆಯಲ್ಲಿ ದಾಖಲಾದ ಅದ್ವಿತೀಯ ಭಾಷಣ.

ಪ್ರವಾದಿತ್ವದ ಬಹುದೊಡ್ಡ ಜವಾಬ್ದಾರಿಯನ್ನು ನಿಭಾಯಿಸಿದ ತೃಪ್ತಿಯೊಂದಿಗೆ ಅಲ್ಲಿ ನೆರೆದಿರುವ ಜನಸ್ತೋಮವನ್ನು ಕುರಿತು ಅವರು ಹೀಗೆ ಹೇಳುತ್ತಾರೆ: ‘ಜನರೇ, ಅಲ್ಲಾಹನು ಈ ರೀತಿ ಹೇಳಿರುವನು: ಮಾನವರೇ, ನಿಮ್ಮನ್ನು ನಾನು ಒಂದು ಗಂಡು ಮತ್ತು ಒಂದು ಹೆಣ್ಣಿನಿಂದ ಸೃಷ್ಟಿಸಿರುವೆನು. ನಾನು ನಿಮ್ಮನ್ನು ವಿವಿಧ ಕುಲ-ಗೋತ್ರಗಳಾಗಿ ಮಾಡಿರುವುದು ನೀವು ಪರಸ್ಪರ ಪರಿಚಯ ಇಟ್ಟುಕೊಳ್ಳಲು. ಖಂಡಿತವಾಗಿಯೂ ಅಲ್ಲಾಹನ ಬಳಿ ನಿಮ್ಮ ಪೈಕಿ ಅತ್ಯ​ಕ ಭಯ ಭಕ್ತಿಯುಳ್ಳವನೇ ಗೌರವಾರ್ಹ. ಅರಬನಿಗೆ ಅರಬೇತರನಿಗಿಂತ ಯಾವುದೇ ಶ್ರೇಷ್ಠತೆ ಇಲ್ಲ. ಅರಬೇತರನಿಗೆ ಅರಬನ ಮೇಲೆ ಯಾವುದೇ ಶ್ರೇಷ್ಠತೆ ಇಲ್ಲ. ಕರಿಯನಿಗಿಂತ ಬಿಳಿಯನೂ, ಬಿಳಿಯನಿಗಿಂತ ಕರಿಯನೂ ಇಲ್ಲಿ ಶ್ರೇಷ್ಠನಲ್ಲ, ಧರ್ಮನಿಷ್ಠೆ ಮತ್ತು ದೇವಭಕ್ತಿಯ ಹೊರತು. ಮನುಷ್ಯರೆಲ್ಲರೂ ಆದಮರ ಮಕ್ಕಳು. ಆದಮರಾದರೋ ಮಣ್ಣಿನಿಂದ ಸೃಷ್ಟಿಸಲ್ಪಟ್ಟವರು. ರಕ್ತ ಅಥವಾ ಸಂಪತ್ತಿನ ಆಕಾರದಲ್ಲಿರುವ ಎಲ್ಲ ಶ್ರೇಷ್ಠತೆಗಳನ್ನು ನಾನು ಕಾಲಿನಿಂದ ತುಳಿದಿದ್ದೇನೆ. ನಿರ್ಣಾಯಕ ದಿನದಂದು ನಿಮ್ಮ ಪ್ರಭುವಿನ ಮುಂದೆ ನಿಮ್ಮ ಕೊರಳ ಮೇಲೆ ಈ ಲೋಕದ ಭಾರವನ್ನು ಹೊತ್ತು ಹಾಜರಾಗದಿರಿ. ಇತರ ಜನರಾದರೋ ಅಂದು ಪರಲೋಕದ ಪುಣ್ಯಗಳನ್ನು ಹೊತ್ತು ಹಾಜರಾಗುವರು. ಅಂತಹ ಪರಿಸ್ಥಿತಿಯಲ್ಲಿ ಖಂಡಿತ ನಾನು ಅಲ್ಲಾಹನ ಮುಂದೆ ನಿಮಗೆ ನೆರವಾಗಲಾರೆ’.

ಸಮಾನತೆಯ ಸಂದೇಶ ಸಾರುವ ದಿನ: ಆಧುನಿಕ ಮಾನವ ಮಂಗಳನ ಅಂಗಳಕ್ಕೆ ಮುಟ್ಟಿದ್ದರೂ ಇಂದಿಗೂ ಶ್ರೇಷ್ಠ-ಕನಿಷ್ಠ, ಕರಿಯ-ಬಿಳಿಯ, ಸವರ್ಣೀಯ-ಅವರ್ಣೀಯ ಮನೋಭಾವದಿಂದ ಮುಕ್ತವಾಗಿಲ್ಲ. ಆದರೆ ಪ್ರವಾದಿ ಮುಹಮ್ಮದರು 6ನೇ ಶತಮಾನದಲ್ಲಿಯೇ ಈ ಪದ್ಧತಿಯ ವಿರುದ್ಧ ಸಮರ ಸಾರಿದ್ದರು. ತಮ್ಮ ಅಂತಿಮ ವಿದಾಯ ಭಾಷಣದಲ್ಲೂ ಇದನ್ನು ಸ್ಪಷ್ಟವಾಗಿ ಘೋಷಿಸಿದ್ದರು. ಮಾನವ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಘೋಷಣೆ. ಆ ಘೋಷಣೆಗೆ ಸಾಕ್ಷಿಯಾದ ಅದೇ ಅರಫಾ ಮೈದಾನದಲ್ಲಿ ಇಂದು ಮುಸ್ಲಿಮರು ಪವಿತ್ರ ಹಜ್‌ ಕರ್ಮಕ್ಕಾಗಿ ಒಂದುಗೂಡುತ್ತಾರೆ. ಮತ್ತೆ ಮತ್ತೆ ಸಮಾನತೆ, ಸಹೋದರತೆಯ ಸಂದೇಶವನ್ನು ಜಗತ್ತಿನೆಲ್ಲೆಡೆ ಸಾರುತ್ತಾರೆ.

Latest Videos
Follow Us:
Download App:
  • android
  • ios