Solar Eclipse: ಸೂರ್ಯ ಗ್ರಹಣದ ಸಮಯದಲ್ಲಿ ಜನಿಸುವ ಮಗುವಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆಯೇ? ಈ ಬಗ್ಗೆ ವಿಜ್ಞಾನ ಏನು ಹೇಳುತ್ತದೆ? ಹಾಗೂ ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ? ಇದರಿಂದ ಶುಭವಾಗುತ್ತದೆಯೋ? ಮಗುವಿನ ವೃತ್ತಿ ಜೀವನ ಅಥವಾ ಆರೋಗ್ಯದ ಮೇಲೆ ಯಾವುದೇ ಪರಿಣಾಮ ಬೀರುತ್ತಾ ಇಲ್ಲಿದೆ ಸಂಪೂರ್ಣ ಮಾಹಿತಿ.

ಸಂಪೂರ್ಣ ಸೂರ್ಯಗ್ರಹಣದ ವೇಳೆ ಜನಿಸಿದರೆ ಏನಾಗುತ್ತೆ?

ಕುಟುಂಬದಲ್ಲಿ ಮಗುವೊಂದು ಸೂರ್ಯಗ್ರಹಣದ ಸಮಯದಲ್ಲಿ ಜನಿಸಿದಾಗ, ಸಂತೋಷದ ಜೊತೆಗೆ ತಿಳಿಯದ ಆತಂಕವೂ ಮನಸ್ಸಿನಲ್ಲಿ ಮೂಡುತ್ತದೆ. ಮಗುವಿನ ಜೀವನ ಕಷ್ಟಗಳಿಂದ ಕೂಡಿರುತ್ತದೆಯೇ? ಗ್ರಹಣದ ನೆರಳು ಅದರ ವೃತ್ತಿಜೀವನ ಅಥವಾ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆಯೇ? ಎಂಬ ಪ್ರಶ್ನೆಗಳು ಮೂಡುತ್ತವೆ. ಈ ವಿಷಯವನ್ನು ವೈದಿಕ ಜ್ಯೋತಿಷ್ಯದ ಪ್ರಾಮಾಣಿಕ ಗ್ರಂಥಗಳು ಮತ್ತು ಆಧುನಿಕ ವಿಜ್ಞಾನ ಈ ಎರಡೂ ದೃಷ್ಟಿಕೋನಗಳಿಂದ ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ.

ಜ್ಯೋತಿಷ್ಯ ಶಾಸ್ತ್ರ ಏನು ಹೇಳುತ್ತದೆ?

ವೈದಿಕ ಜ್ಯೋತಿಷ್ಯದ ಪ್ರಮುಖ ಗ್ರಂಥಗಳಲ್ಲಿ ಒಂದಾದ ‘ಬೃಹತ್ ಪರಾಶರ ಹೋರಾ ಶಾಸ್ತ್ರ’ದ 91ನೇ ಅಧ್ಯಾಯದಲ್ಲಿ ಗ್ರಹಣದ ಸಮಯದಲ್ಲಿ ಜನಿಸುವುದರಿಂದ ಉಂಟಾಗುತ್ತದೆ ಎಂದು ಹೇಳಲಾಗುವ ಪರಿಣಾಮಗಳ ಕುರಿತು ಒಂದು ಶ್ಲೋಕದ ಮೂಲಕ ಉಲ್ಲೇಖಿಸಲಾಗಿದೆ.

‘ಸೂರ್ಯೇಂದುಗ್ರಹಣೇ ಕಾಲೇ ಯೇಷಾಂ ಜನ್ಮ ಭವೇದ್ ದ್ವಿಜ।

ವ್ಯಾಧಿಃ ಕಷ್ಟಂ ಚ ದಾರಿದ್ರ್ಯಂ ತೇಷಾಂ ಮೃತ್ಯುಭಯಂ ಭವೇತ್।।

ಇದರ ಅರ್ಥವೆಂದರೆ ಗ್ರಹಣದ ಸಮಯದಲ್ಲಿ ಜನಿಸಿದ ಶಿಶು ಜೀವನದಲ್ಲಿ ಆರೋಗ್ಯ ಸಂಬಂಧಿತ ತೊಂದರೆಗಳು, ಕಠಿಣ ಮಾನಸಿಕ ಮತ್ತು ದೈಹಿಕ ಹೋರಾಟಗಳು ಹಾಗೂ ಆರ್ಥಿಕ ಏರಿಳಿತಗಳನ್ನು ಎದುರಿಸಬಹುದು ಎಂದು ಜ್ಯೋತಿಷ್ಯ ಶಾಸ್ತ್ರದಲ್ಲಿ ಹೇಳಲಾಗಿದೆ.

ಇದರ ಹಿಂದಿನ ಪ್ರಮುಖ ಕಾರಣವೆಂದರೆ ಸನಾತನ ಪರಂಪರೆಯಲ್ಲಿ ಸೂರ್ಯನನ್ನು ಕೇವಲ ಒಂದು ಗ್ರಹ ಅಥವಾ ನಕ್ಷತ್ರವೆಂದು ಪರಿಗಣಿಸಲಾಗುವುದಿಲ್ಲ. ಸೂರ್ಯನು ವ್ಯಕ್ತಿಯ ಆತ್ಮ, ಮುಖದ ತೇಜಸ್ಸು, ಆತ್ಮವಿಶ್ವಾಸ, ಸಮಾಜದಲ್ಲಿ ದೊರೆಯುವ ಗೌರವ, ತಂದೆಯ ಸುಖ ಮತ್ತು ಜೀವನಶಕ್ತಿಯ ಸಂಕೇತ ಎಂದು ಪರಿಗಣಿಸಲಾಗುತ್ತದೆ. ಗ್ರಹಣದ ಸಮಯದಲ್ಲಿ ಸೂರ್ಯನ ಮೇಲೆ ರಾಹುವಿನ ಪ್ರಭಾವ ಗಾಢವಾಗಿರುತ್ತದೆ. ಇದರಿಂದ ಸೂರ್ಯನ ಸಹಜ ತೇಜಸ್ಸು ಕ್ಷೀಣಿಸುತ್ತದೆ ಎಂದು ಜ್ಯೋತಿಷ್ಯದಲ್ಲಿ ನಂಬಲಾಗಿದೆ. ಇದೇ ಕಾರಣದಿಂದ ಜನ್ಮ ಕುಂಡಲಿಯನ್ನು ವಿಶ್ಲೇಷಿಸುವಾಗ ಜ್ಯೋತಿಷಿಗಳು ಸೂರ್ಯ ಮತ್ತು ರಾಹುವಿನ ನಡುವಿನ ‘ಡಿಗ್ರಿ ಅಂತರ’ವನ್ನು ಗಮನಿಸುತ್ತಾರೆ. ಸೂರ್ಯ ಮತ್ತು ರಾಹು ಬಹಳ ಹತ್ತಿರದಲ್ಲಿದ್ದರೆ ಪರಿಣಾಮ ಹೆಚ್ಚು ಎಂದು ಪರಿಗಣಿಸಲಾಗುತ್ತದೆ. ಆದರೆ ಈ ಎರಡೂ ಗ್ರಹಗಳ ನಡುವಿನ ಅಂತರ ಹೆಚ್ಚಿದ್ದರೆ ಅಥವಾ ಕುಂಡಲಿಯಲ್ಲಿ ಇತರ ಶುಭ ಗ್ರಹಗಳ ಸ್ಥಾನ ಬಲವಾಗಿದ್ದರೆ, ನಕಾರಾತ್ಮಕ ಪರಿಣಾಮಗಳು ಬಹಳಷ್ಟು ಕಡಿಮೆಯಾಗುತ್ತವೆ ಎಂದು ಜ್ಯೋತಿಷ್ಯ ಹೇಳುತ್ತದೆ.

ದೋಷ ನಿವಾರಣೆ ಮತ್ತು ಶಾಂತಿ ಪರಿಹಾರಗಳು

ಯಾವುದೇ ಮಗು ಗ್ರಹಣದ ಸಮಯದಲ್ಲಿ ಜನಿಸಿದರೂ ಭಯಪಡುವ ಅಗತ್ಯವಿಲ್ಲ. ಶಾಸ್ತ್ರಗಳಲ್ಲಿ ಇದಕ್ಕಾಗಿ ಕೆಲವು ಸರಳ ಪರಿಹಾರಗಳನ್ನು ಉಲ್ಲೇಖಿಸಲಾಗಿದೆ.

ಸೂರ್ಯ-ರಾಹು ಶಾಂತಿ ಪೂಜೆ: ಮಗುವಿನ ಜನನದ ನಂತರ ಸೂರ್ಯದೇವ ಮತ್ತು ರಾಹುವಿನ ಪ್ರತಿಮೆಗಳನ್ನು ಸ್ಥಾಪಿಸಿ ವಿಧಿವತ್ತಾಗಿ ಪೂಜೆ ಹಾಗೂ ಮಂತ್ರ ಜಪ ಮಾಡಲಾಗುತ್ತದೆ.

ದಾನ-ಧರ್ಮ: ಸೂರ್ಯನಿಗೆ ಸಂಬಂಧಿಸಿದ ವಸ್ತುಗಳಾದ ಗೋಧಿ, ತಾಮ್ರ, ಕೆಂಪು ಬಟ್ಟೆ ಅಥವಾ ಬೆಲ್ಲವನ್ನು ದಾನ ಮಾಡುವುದರಿಂದ ಗ್ರಹಣ ದೋಷದ ಪರಿಣಾಮ ನಿವಾರಣೆಯಾಗುತ್ತದೆ.

ವಿಜ್ಞಾನ ಏನು ಹೇಳುತ್ತದೆ?

ವಿಜ್ಞಾನದ ಪ್ರಕಾರ, ಬಾಹ್ಯಾಕಾಶದಲ್ಲಿ ನಡೆಯುವ ಈ ಖಗೋಳೀಯ ವಿದ್ಯಮಾನಕ್ಕೂ ಭೂಮಿಯಲ್ಲಿ ಜನಿಸುವ ಯಾವುದೇ ಮಗುವಿನ ಅದೃಷ್ಟ, ಬುದ್ಧಿವಂತಿಕೆ, ಯಶಸ್ಸು ಅಥವಾ ಆರೋಗ್ಯಕ್ಕೂ ಯಾವುದೇ ಸಂಬಂಧವಿಲ್ಲ.