ಧರ್ಮದಂಗಲ್ ವೇದಿಕೆಯಾಗುವುದೇ ಆಂಜನೇಯನ ಜನ್ಮಸ್ಥಳ ಅಂಜನಾದ್ರಿ?
ಕೆಲವು ದಿನಗಳಿಂದ ತಣ್ಣಗಾಗಿದ್ದ ಧರ್ಮ ದಂಗಲ್ ಇದೀಗ ಪುನಃ ಧಾರ್ಮಿಕ ಸ್ಥಳದಲ್ಲಿ ವ್ಯಾಪಾರ ಮಾಡುವ ಕುರಿತು ಆರಂಭವಾಗಿದೆ. ಅಷ್ಟಕ್ಕೂ ಈ ಬಾರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪುರಾಣ ಪ್ರಸಿದ್ಧಿ ಕಿಷ್ಕಿಂದೆ ಪ್ರದೇಶದಲ್ಲಿರುವ ಆಂಜನೇಯ ಹುಟ್ಟಿದ ಸ್ಥಳವಾದ ಅಂಜನಾದ್ರಿ ಪರ್ವತ ಧರ್ಮ ದಂಗಲ್ ಗೆ ಸಾಕ್ಷಿಯಾಗುತ್ತಿದೆ.
ವರದಿ- ದೊಡ್ಡೇಶ್ ಯಲಿಗಾರ್ ಏಷ್ಯಾನೆಟ್ ಸುವರ್ಣ ನ್ಯೂಸ್
ಕೊಪ್ಪಳ (ನ.28) : ಕಳೆದ ಹಲವು ದಿನಗಳ ಹಿಂದೆ ಧಾರ್ಮಿಕ ಸ್ಥಳಗಳಲ್ಲಿ ಧರ್ಮ ದಂಗಲ್ ಜೋರಾಗಿತ್ತು. ಕೆಲವು ದಿನಗಳಿಂದ ತಣ್ಣಗಾಗಿದ್ದ ಧರ್ಮ ದಂಗಲ್ ಇದೀಗ ಪುನಃ ಧಾರ್ಮಿಕ ಸ್ಥಳದಲ್ಲಿ ವ್ಯಾಪಾರ ಮಾಡುವ ಕುರಿತು ಆರಂಭವಾಗಿದೆ. ಅಷ್ಟಕ್ಕೂ ಈ ಬಾರಿ ಕೊಪ್ಪಳ ಜಿಲ್ಲೆಯ ಗಂಗಾವತಿ ತಾಲೂಕಿನಲ್ಲಿರುವ ಪುರಾಣ ಪ್ರಸಿದ್ಧಿ ಕಿಷ್ಕಿಂದೆ ಪ್ರದೇಶದಲ್ಲಿರುವ ಆಂಜನೇಯ ಹುಟ್ಟಿದ ಸ್ಥಳವಾದ ಅಂಜನಾದ್ರಿ ಪರ್ವತ ಧರ್ಮ ದಂಗಲ್ ಗೆ ಸಾಕ್ಷಿಯಾಗುತ್ತಿದೆ.
ಅನ್ಯ ಧರ್ಮಿಯರಿಗೆ ವ್ಯಾಪಾರ ನಿಷೇಧಕ್ಕೆ ಒತ್ತಾಯ: ಐದಾರು ವರ್ಷಗಳಲ್ಲಿ ಅಂಜನಾದ್ರಿ ಪರ್ವತ ರಾಷ್ಟ್ರ ಪ್ರಸಿದ್ಧಿ ಪಡೆಯುತ್ತಿದೆ. ಪ್ರತಿದಿನ ಅಂಜನಾದ್ರಿ ಪರ್ವತಕ್ಕೆ ಸಾವಿರಾರು ಭಕ್ತರು ಆಗಮಿಸುತ್ತಾರೆ. ಜೊತೆಗೆ ಅಂಜನಾದ್ರಿ ಪರ್ವತದ ಮುಂಬಾಗದ ಸ್ಥಳದಲ್ಲಿ ಹತ್ತಾರು ಅಂಗಡಿಗಳಲ್ಲಿ ವಿವಿಧ ವ್ಯಾಪಾರ ವಹಿವಾಟು ಮಾಡುತ್ತಾರೆ. ಹೀಗಾಗಿ ಇನ್ನು ಮುಂದೆ ಈ ಸ್ಥಳದಲ್ಲಿ ಅನ್ಯ ಮತೀಯರು ವ್ಯಾಪಾರ ವಹಿವಾಟುಗಳನ್ನು ಮಾಡುವುದನ್ನು ನಿಷೇಧಿಸಬೇಕೆಂದು ಒತ್ತಾಯ ಕೇಳಿಬಂದಿದೆ.
ಅನ್ಯ ಧರ್ಮೀಯರಿಗೆ ವ್ಯಾಪಾರ: ಬಿಜೆಪಿ ಶಾಸಕನ ವಿರುದ್ಧ ಭಜರಂಗದಳ ಕಿಡಿ
ಹಿಂದೂ ಜಾಗರಣ ವೇದಿಕೆಯ ಪತ್ರ : ರಾಜ್ಯದಲ್ಲಿ ಹಿಂದೂ ಜಾಗರಣ ವೇದಿಕೆ ಈ ಸಂಘಟನೆ ಹಿಂದೂ ಧರ್ಮದ ಪರವಾಗಿ ಹೋರಾಡುವ ಒಂದು ವೇದಿಕೆಯಾಗಿದ್ದು, ಎಲ್ಲಿಯೇ ಹಿಂದೂಗಳ ಮೇಲೆ ದೌರ್ಜನ್ಯ, ದಬ್ಬಾಳಿಕೆ ನಡೆದರೂ ಸಹ ಅಲ್ಲಿ ಹಿಂದೂ ಜಾಗರಣ ವೇದಿಕೆ ಮುಂದಾಳತ್ವ ವಹಿಸಿ ಪ್ರತಿಭಟಿಸುವ ಮೂಲಕ ಹಿಂದೂ ಧರ್ಮೀಯರ ರಕ್ಷಣೆಗೆ ನಿಲ್ಲುವ ಸಂಘಟನೆಯಾಗಿದೆ. ಈಗ ಹಿಂದೂ ಜಾಗರಣ ವೇದಿಕೆ ಜಿಲ್ಲಾಧಿಕಾರಿಗಳಿಗೆ ನೀಡಿರುವ ಮನವಿಯೊಂದು ಧರ್ಮ ದಂಗಲ್ ಗೆ ಕಾರಣವಾಗುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಅಂಜನಾದ್ರಿ ಪರ್ವತದಲ್ಲಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಮಾಡಿಕೊಡಬೇಕು. ಮುಸ್ಲಿಂ, ಕ್ರಿಶ್ಚಿಯನ್ ಸಮುದಾಯವರ ವ್ಯಾಪಾರಕ್ಕೆ ಅವಕಾಶ ನೀಡಬಾರದು. ವ್ಯಾಪಾರ ವಹಿವಾಟು ಹೆಸರಿನಲ್ಲಿ ಮುಸ್ಲಿಂ ಉಗ್ರರು ಹಿಂದೂ ಧಾರ್ಮಿಕ ಸ್ಥಳಗಳ ಮಾಹಿತಿ ಕಲೆ ಹಾಕಲಾಗುತತಿದ್ದಾರೆ ಎಂದು ಮನವಿ ಪತ್ರದಲ್ಲಿ ಉಲ್ಲೇಖಿಸಿದೆ.
ಡಿ.5 ರಂದು ಹನುಮ ಜಯಂತಿ: ಡಿಸೆಂಬರ್ 5 ರಂದು ಹನುಮ ಜಯಂತಿ ಹಿನ್ನಲೆಯಲ್ಲಿ ಹಿಂದೂ ಜಾಗರಣ ವೇದಿಕೆ ನೀಡಿರುವ ಮನವಿ ಪತ್ರದಿಂದ ಸಾಕಷ್ಟು ಧರ್ಮದಂಗಲ್ ಕಾವು ಪಡೆದುಕೊಂಡಿದೆ. ಇನ್ನು ಅಂಜನಾದ್ರಿ ಪರ್ವತ ಸರ್ಕಾರದ ಸುಪರ್ದಿಗೆ ಒಳಪಡುತ್ತಿದ್ದು, ಮುಂದಿನ ದಿನಗಳಲ್ಲಿ ಜಿಲ್ಲಾಡಳಿತ ಹಿಂದೂ ಜಾಗರಣ ವೇದಿಕೆಯ ಮನವಿ ಪತ್ರಕ್ಕೆ ಯಾವ ರೀತಿ ಸ್ಪಂದನೆ ಮಾಡುತ್ತದೆ ಎನ್ನುವುದನ್ನು ಕಾದುನೋಡಬೇಕಿದೆ.