ದುಬಾರಿ ಬೆಲೆಯ ಫೇಸ್ ಸೆರಮ್ ಖರೀದಿಸುವ ಬದಲು ಅಲೋವೆರಾ ಜೆಲ್, ರೋಸ್ ವಾಟರ್ ಮತ್ತು ಗ್ಲಿಸರಿನ್ ಬಳಸಿ ಮನೆಯಲ್ಲೇ ಸುಲಭವಾಗಿ ಸೆರಮ್ ತಯಾರಿಸಬಹುದು. ಇದನ್ನು ಮುಖಕ್ಕೆ ಹಚ್ಚುವ ಮೊದಲು ಪ್ಯಾಚ್ ಪರೀಕ್ಷೆ ಮಾಡುವುದು ಮತ್ತು ವಿಟಮಿನ್ ಇ ಬಳಸುವ ಮುನ್ನ ವೈದ್ಯರ ಸಲಹೆ ಪಡೆಯುವುದು ಅತ್ಯಗತ್ಯ.

ಸಿನಿಮಾ ನಟಿ, ಸೆಲೆಬ್ರಿಟಿಗಳ ಮುಖ ನೋಡಿದಾಗ ಕನ್ನಡಿಯಂತೆ ಪಳಪಳ ಹೊಳೆಯುತ್ತಿರುತ್ತದೆ. ನಟಿಯರಂತೆ ಮೃದುವಾದ, ಮಿಂಚುವ ಮುಖವನ್ನ ಹೊಂದಲು ಪ್ರತಿಯೊಬ್ಬ ಮಹಿಳೆಯೂ ಆಸೆ ಪಡ್ತಾಳೆ. ಅಷ್ಟೇ ಅಲ್ಲ ಅದಕ್ಕಾಗಿ ಬ್ಯೂಟಿ ಪಾರ್ಲರ್‌ಗೆ ಹೋಗುತ್ತಾರೆ, ಶಾಪಿಂಗ್‌ನಲ್ಲಿ ದುಬಾರಿ ಬೆಲೆಯ ಫೇಸ್ ಸೆರಮ್ ಖರೀಸುತ್ತಲೇ ಇರುತ್ತಾರೆ. ಮುಖದ ಮೇಲೆ ಸೆರಮ್ ಹಚ್ಚಿದಾಗ ಹೊಳೆಯುವಂತೆ ಕಾಣುತ್ತದೆ ನಿಜ. ಆದರೆ ಸೆರಮ್ ಒಂದು ವಾರ ತಿಂಗಳಲ್ಲಿ ಖಾಲಿ ಆದರೆ ಮತ್ತೆ ದುಬಾರಿ ಬೆಲೆ ತೆತ್ತು ಖರೀದಿಸಬೇಕು. ಅದರ ಬದಲು ಮನೆಯಲ್ಲೇ ಸೆರಮ್ ತಯಾರಿಸುವಂತಾದ್ರೆ ಎಷ್ಟು ಹಣ ಉಳಿತಾಯವಾಗುತ್ತೆ ಅಲ್ಲವೇ?

ಹೌದು ಅದು ಸಾಧ್ಯವಿದೆ. ಮನೆಯಲ್ಲೇ ಸೆರಮ್ ತಯಾರಿಸಬಹುದು. ಮನೆಯಲ್ಲೇ ತಯಾರಿಸಲು ಏನೇನು ಪದಾರ್ಥಗಳು ಬೇಕಾಗಬಹುದು ಅನ್ನೊದನ್ನ ಇಲ್ಲಿ ತಿಳಿಸಲಾಗಿದೆ.

ನೀವು ಮನೆಯಲ್ಲೇ ಫೇಸ್ ಸೆರಮ್ ತಯಾರಿಸಲು ಅಲೋವೆರಾ ಜೆಲ್, ರೋಸ್ ವಾಟರ್, ಗ್ಲೀಸರಿನ್ ಇದ್ದರೆ ಸುಲಭವಾಗಿ ತಯಾರಿಸಬಹುದು. ಈ ಮೂರು ಪದಾರ್ಥಗಳು ಚರ್ಮವನ್ನು ಯಾವಾಗಲೂ ಡ್ರೈ ಆಗದಂತೆ ಹೊಳೆಯುವಂತೆ ಮಾಡುತ್ತದೆ. ಫೇಸ್‌ ಸೆರಮ್ ತಯಾರಿಸುವ ಮೊದಲು ನಿಮ್ಮದು ಯಾವ ರೀತಿಯ ಸ್ಕಿನ್ ಎಂದು ತಿಳಿದುಕೊಳ್ಳೋದು ಬಹಳ ಮುಖ್ಯ.

ಮನೆಯಲ್ಲೇ ಫೇಸ್ ಸೆರಮ್ ತಯಾರಿಸುವುದು ಹೇಗೆ?

ಮನೆಯಲ್ಲಿ ಫೇಸ್ ಸೆರಮ್ ತಯಾರಿಸಲು ಹೆಚ್ಚು ಪದಾರ್ಥಗಳು ಬೇಕಾಗಿಲ್ಲ. ಎರಡು ಚಮಚ ಅಲೋವೆರಾ ಜೆಲ್, ಎರಡು ಚಮಚ ರೋಸ್ ವಾಟರ್ ಮತ್ತು ಒಂದು ಚಮಚ ಗ್ಲಿಸರಿನ್ ತೆಗೆದುಕೊಳ್ಳಿ. ಅಲೋವೆರಾ ಜೆಲ್ ಇದು ಸ್ಕಿನ್ ಡ್ರೈ ಆಗದಂತೆ ತಡೆಯುತ್ತದೆ. ರೋಸ್ ವಾಟರ್ ಫೇಸ್‌ ಕ್ರೀಂ ಆಗಿ ಅತ್ಯುತ್ತಮ. ಇನ್ನು ಗ್ಲಿಸರಿನ್ ಮುಖದಲ್ಲಿನ ತೇವಾಂಶ ಲಾಕ್ ಮಾಡುತ್ತದೆ. ಈ ಮೂರು ಪದಾರ್ಥಗಳಲ್ಲದೆ ಕೆಲವು ವಿಟಮಿನ್ ಇ ಕ್ಯಾಪ್ಸುಲ್ ಕೂಡ ಇದೆ. ಆದರೆ ಇದು ಎಲ್ಲ ಪ್ರಕಾರದ ಸ್ಕಿನ್‌ಗೆ ಹೊಂದಿಕೆಯಾಗಲ್ಲ. ಹೀಗಾಗಿ ಸರಿಯಾದ ಮಾಹಿತಿ ಇಲ್ಲದೆ, ನಿಮ್ಮ ಸ್ಕಿನ್ ಪ್ರಕಾರ ತಿಳಿಯದೆ ಬಳಸುವುದು ಬೇಡ.

ಮೊದಲು ಸ್ವಚ್ಛವಾದ ಒಣಗಿದ ಬಟ್ಟಲನ್ನು ತೆಗೆದುಕೊಳ್ಳಿ. ಎರಡು ಚಮಚ ಅಲೋವೆರಾ ಜೆಲ್, ಎರಡು ಚಮಚ ರೋಸ್ ವಾಟರ್ ಸೇರಿಸಿ. ನಂತರ ಒಂದು ಚಮಚ ಗ್ಲಿಸರಿನ್ ಸೇರಿಸಿ ಚೆನ್ನಾಗಿ ಕಲಸಿ. ಈಗ ಮನೆಯಲ್ಲೇ ತಯಾರಿಸಿದ ಫೇಸ್‌ ಸಿರಮ್ ಸಿದ್ಧವಾಗಿದೆ ಎಂದರ್ಥ. ಈಗ ನೀವು ವಿಟಮಿನ್ ಇ ಕ್ಯಾಪ್ಸುಲ್ ಸೇರಿಸಲು ಮುಂದಾದರೆ ಅದಕ್ಕೂ ಮುನ್ನ ಸ್ಕಿನ್ ತಜ್ಞರನ್ನು ಸಂಪರ್ಕಿಸಿ. ನಿಮ್ಮ ಚರ್ಮದ ಪ್ರಕಾರ ತಿಳಿದು ವೈದ್ಯರು ಸಲಹೆ ಕೇಳಿದ ಬಳಿಕ ಬಳಸಬಹುದು. ಆದರೆ ವಿಟಮಿನ್ ಇ ಆಯಿಲ್ ಸ್ಕಿನ್, ಮೊಡವೆ ಇರೋರಿಗೆ ಸಮಸ್ಯೆ ಆಗಬಹುದು. ಅಲ್ಲದೆ ಮನೆಯಲ್ಲಿ ತಯಾರಿಸಿದ ಈ ಸೀರಮ್ ಅನ್ನು ಹೆಚ್ಚು ಕಾಲ ಸಂಗ್ರಹಿಸಬೇಡಿ, ಏಕೆಂದರೆ ಮನೆಯಲ್ಲಿ ತಯಾರಿಸಿದ ಸೀರಮ್‌ಗಳು ಬೇಗ ಕೆಡುತ್ತವೆ. ಸ್ವಲ್ಪ ಪ್ರಮಾಣದಲ್ಲಿ ತಯಾರಿಸಿ ಮತ್ತು ತಾಜಾವಾಗಿ ಬಳಸುವುದು ಒಳ್ಳೆಯದು. ಅಂದರೆ ಇಂದೇ ತಯಾರಿಸಿ ಇಂದೇ ಬಳಸುವುದು ಬೆಸ್ಟ್.

ಫೇಸ್ ಸಿರಮ್ ಹಚ್ಚುವ ಮೊದಲು ಏನು ಮಾಡಬೇಕು?

ಮುಖಕ್ಕೆ ಮನೆಯಲ್ಲೇ ತಯಾರಿಸಿದ ಫೇಸ್ ಸಿರಮ್ ಹಚ್ಚುವ ಮೊದಲು ಫೇಸ್ ವಾಶ್ ನಿಂದ ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ. ನಂತರ ನಿಮ್ಮ ಕೈ ಮೊಣಕೈ ಗಂಟಿನ ಮೇಲೆ ಫೇಸ್ ಸಿರಮ್ ಹಚ್ಚಿ ಟೆಸ್ಟ್ ಮಾಡಿ. ಸೆರಮ್ ಹಚ್ಚಿದ ಬಳಿಕ ಅಲ್ಲಿ ಯಾವುದೇ ತುರಿಕೆ, ಅಲರ್ಜಿ ಕಂಡುಬರದಿದ್ದರೆ ಫೇಸ್‌ಗೆ ಹಚ್ಚಿ. ಒಂದು ವೇಳೆ ಕೈಗೆ ಹಚ್ಚಿದ ಬಳಿಕ ತುರಿಕೆ ಉಂಟಾದರೆ ಅಂಥ ಫೇಸ್‌ ಸೆರಮ್ ಮುಖಕ್ಕೆ ಹೊಂದಿಕೆಯಾಗುವುದು ಹಚ್ಚುವುದು ಬೇಡ. ಇನ್ನು ಯಾವುದೇ ಹೊಸ ಸೆರಮ್ ತಂದಾಗಲೂ ನೇರವಾಗಿ ಮುಖಕ್ಕೆ ಹಚ್ಚುವುದು ಒಳ್ಳೆಯದಲ್ಲ. ಹಚ್ಚುವ ಮೊದಲು ಪ್ಯಾಚ್ ಪರೀಕ್ಷೆ ಮಾಡಬೇಕು. ಎಲ್ಲವೂ ಸರಿಯಾಗಿದ್ದರೆ ನಿಮ್ಮ ಮುಖಕ್ಕೆ ಸ್ವಲ್ಪ ಪ್ರಮಾಣದಲ್ಲಿ ಹಚ್ಚಿ. ನಿಮ್ಮ ಕಣ್ಣಿನ ಬಳಿ ಹಚ್ಚುವಾಗ ಜಾಗರೂಕವಾಗಿರಲಿ ಹಾಗೆಯೇ ಬಿರುಕು ಬಿಟ್ಟ ಸ್ಥಳ, ಗಾಯ, ಮೊಡವೆಗಳ ಮೇಲೆ ಹಚ್ಚುವಾಗ ಎಚ್ಚರಿಕೆವಹಿಸಿ. ಯಾವುದೇ ತುರಿಕೆ, ಕಿರಿಕಿರಿ ಅನಿಸಿದರೆ ಹಚ್ಚುವುದು ಬೇಡ.

ಫೇಸ್ ಸೆರಮ್ ಹಚ್ಚುವ ಮುನ್ನ ಈ ವಿಷಯ ನೆನಪಿಡಿ

ಅಲೋವೆರಾ, ರೋಜ್ ವಾಟರ್, ಗ್ಲೀಸರಿನ್ ಈ ಮೂರು ಸ್ಕಿನ್ ತೇವವಾಗಿರುವಂತೆ ನೋಡಿಕೊಳ್ಳುತ್ತದೆ, ಮೃದುವಾಗಿಸುತ್ತದೆ ನಿಜ. ಆದರೆ ಅದು ಮುಖದ ಬಣ್ಣ ಬದಲಿಸುತ್ತದೆ, ಮೊಡವೆಗಳನ್ನ ಇಲ್ಲವಾಗಿಸುತ್ತದೆ ಖಾತರಿಯಿಲ್ಲ. ಪ್ರತಿದಿನ ಸನ್‌ಸ್ಕ್ರೀನ್ ಹಚ್ಚುವುದು, ಸಾಕಷ್ಟು ನಿದ್ರೆ ಮಾಡುವುದರಿಂದ ತಡೆಯಬಹುದು.