- ರಾಜಕಾರಣಿ, ಕಾಂಗ್ರೆಸ್‌ ಶಾಸಕ ಜಮೀರ್‌ ಅಹಮದ್‌ ಪುತ್ರ ಜಾಯೇದ್‌ ಖಾನ್‌ ಚಿತ್ರರಂಗಕ್ಕೆ ಪ್ರವೇಶ ಮಾಡುವುದು ಖಾತ್ರಿಯಾಗಿದೆ.

- ಜಯತೀರ್ಥ ನಿರ್ದೇಶನದ ಈ ಚಿತ್ರಕ್ಕೆ ಬನಾರಸ್‌ ಎಂದು ಟೈಟಲ್‌ ಫಿಕ್ಸ್‌.

- ಪಂಚತಂತ್ರ ಖ್ಯಾತಿಯ ಸೋನಲ್‌ ಮೊಂತೆರೋ ಚಿತ್ರದ ನಾಯಕಿ.

- ಕರ್ನಾಟಕ ಮತ್ತು ವಾರಾಣಸಿಯಲ್ಲಿ ನಡೆಯುವ ಶುದ್ಧ ಪ್ರೇಮಕತೆ ಈ ಚಿತ್ರದ ಜೀವಾಳ.

- ಬಾಂಬೆ ಮೂಲದ ಕಂಪನಿ ನಿರ್ಮಾಣ. ವೈಬಿ ರೆಡ್ಡಿ ಕಾರ್ಯಕಾರಿ ನಿರ್ಮಾಪಕ.

ಇವಿಷ್ಟು ಜಾಯೇದ್‌ ಖಾನ್‌ ನಟನೆಯ ಚಿತ್ರದ ಪ್ರಮುಖ ಮಾಹಿತಿ. ಬಹಳ ದಿನಗಳಿಂದ ಚಾಲ್ತಿಯಲ್ಲಿದ್ದ ಸುದ್ದಿಗೆ ಈಗ ಅಧಿಕೃತ ಚಾಲನೆ ಸಿಕ್ಕಿದೆ. ಶಾಸಕ ಜಮೀರ್‌ ಅಹಮದ್‌ ಪುತ್ರ ಜಾಯೇದ್‌ ಖಾನ್‌ ನಟನೆಯ ಚಿತ್ರ ಇನ್ನೇನು ಕೆಲವೇ ತಿಂಗಳುಗಳಲ್ಲಿ ಕನ್ನಡ ನಾಡಿಗೆ ಅರ್ಪಣೆಯಾಗಲಿದೆ.

‘ಬೆಲ್‌ ಬಾಟಂ’ ಚಿತ್ರದ ಯಶಸ್ಸಿನಲ್ಲಿರುವ ನಿರ್ದೇಶಕ ಜಯತೀರ್ಥ ಈ ಬಾರಿ ಪ್ರೇಮ ಕತೆಯನ್ನು ಆರಿಸಿಕೊಂಡಿದ್ದಾರೆ. ‘ಬನಾರಸ್‌’ ಎಂಬ ಹೆಸರಿನ ಈ ಚಿತ್ರದ ಶೂಟಿಂಗು ವಾರಾಣಸಿಯಲ್ಲಿ ನಡೆಯಲಿದೆ. ಸುಮಾರು 35 ದಿನ ಚಿತ್ರತಂಡ ಅಲ್ಲಿರುತ್ತದೆ. ಈಗಾಗಲೇ ಟೆಸ್ಟ್‌ ಶೂಟ್‌ ನಡೆದಿದ್ದು, ಆಗಸ್ಟ್‌ ತಿಂಗಳಿನಿ ಕೊನೆಯಿಂದ ಚಿತ್ರೀಕರಣ ಶುರು. ಒಂದು ಶೆಡ್ಯೂಲ್‌ ಮುಗಿದ ನಂತರ ಫಸ್ಟ್‌ಲುಕ್‌ ರಿಲೀಸ್‌ ಮಾಡುವ ಆಲೋಚನೆಯಲ್ಲಿದೆ ಚಿತ್ರತಂಡ.

ಚಾಕ್ಲೇಟ್‌ ಬಾಯ್‌ ಲುಕ್ಕಿನ ಜಾಯೇದ್‌ ಖಾನ್‌

ಜಾಯೇದ್‌ ಖಾನ್‌ ಚಾಕ್ಲೇಟ್‌ ಬಾಯ್‌ ಲುಕ್‌ ಹೊಂದಿರುವ ಹೀರೋ. ಮುಂಬೈಯಲ್ಲಿ ನಟನೆ ಕಲಿತುಬಂದಿರುವ ಅವರು ಇದೀಗ ಪ್ರೇಮಕತೆಯ ನಾಯಕ. ಸುಮಾರು 60ಕ್ಕೂ ಹೆಚ್ಚು ದಿನಗಳ ಕಾಲ ಚಿತ್ರೀಕರಣಕ್ಕೆ ಚಿತ್ರ ತಂಡ ಯೋಜನೆ ಹಾಕಿಕೊಂಡಿದೆ. ಜಯತೀರ್ಥ ಒಂದು ಚೆಂದದ ಪ್ರೇಮಕತೆಯನ್ನು ಹೆಣೆದಿದ್ದಾರೆ ಎನ್ನಲಾಗಿದೆ. ಜಾಯೇದ್‌ ಖಾನ್‌ರನ್ನು ಪ್ರೇಮ ಕತೆಯ ಮೂಲಕವೇ ಚಿತ್ರಜಗತ್ತಿಗೆ ಕರೆತರುವುದು ಅವರ ಆಶಯ.

ಬೇಡಿಕೆಯ ನಟಿ ಸೋನಲ್‌ ಮೊಂತೆರೊ

ಸೋನಲ್‌ ಮೊಂತೆರೋ ತಮ್ಮ ಪ್ರತಿಭೆ ಮತ್ತು ಚೆಂದದಿಂದ ಬೇಡಿಕೆಯಲ್ಲಿರುವ ನಟಿ. ಯೋಗರಾಜ್‌ ಭಟ್‌ ನಿರ್ದೇಶನದ ‘ಪಂಚ ತಂತ್ರ’ ಚಿತ್ರದ ನಂತರ ಬಾಲಿವುಡ್‌ನಲ್ಲೂ ಅವಕಾಶ ಗಿಟ್ಟಿಸಿಕೊಂಡರು. ಅದಾದ ನಂತರ ತನುಷ್‌ ಅಭಿನಯದ ‘ಮಿಸ್ಟರ್‌ ನಟ್ವರ್‌ಲಾಲ್‌’ ಚಿತ್ರಕ್ಕೂ ಆಯ್ಕೆಯಾದರು. ಇದೀಗ ಜಾಯೇದ್‌ ಖಾನ್‌ ಜೋಡಿಯಾಗಿದ್ದಾರೆ.