ಸ್ಯಾಂಡಲ್‌ವುಡ್ ನಟ ಯಶ್ ಈಗಾಗಲೇ ಹಲವಾರು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಯಶೋಮಾರ್ಗ ಆರಂಭಿಸಿ, ಉತ್ತರ ಕರ್ನಾಟಕದ ಹಲವು ಕೆರೆಗಳಲ್ಲಿ ನೀರುಕ್ಕಿಸುವಂತೆ ಮಾಡಿ, ಜನರ ಸಂಕಟಕ್ಕೆ ಸ್ಪಂದಿಸಿದ್ದಾರೆ. ಕೈ ಹಿಡಿದ ಕಾರ್ಯಗಳಲ್ಲಿ ಯಶಸ್ವಿಯಾಗಿಯೂ ಆಗಿದ್ದಾರೆ.

ಮಕ್ಕಳ ಕಳ್ಳರ ಬಗ್ಗೆ ಹರಡುತ್ತಿರುವ ಸುದ್ದಿ ಬಗ್ಗೆ ಆತಂಕಗೊಂಡಿರುವ ಯಶ್, ಇದೀಗ ಪೊಲೀಸರ ಜತೆಯೂ ಕೈ ಜೋಡಿಸಿದ್ದಾರೆ. ದಿನದಿಂದ ದಿನಕ್ಕೆ ಮಕ್ಕಳ ಕಳ್ಳರ ಸುದ್ದಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದು, ಪೊಲೀಸರಿಗೂ ನುಂಗಲಾರದ ತುತ್ತಾಗಿದೆ. ಇಂಥ ಸುದ್ದಿಗಳಿಂದ ಅಮಾಯಕರು ಏಟು ತಿನ್ನುತ್ತಿದ್ದು, ಪರಿಸ್ಥಿತಿ ಉಲ್ಬಣಗೊಳ್ಳುತ್ತಲೇ ಇದೆ.

ಈ ಬಗ್ಗೆ ಜಾಗೃತಿ ಮೂಡಿಸುವ ಸಲುವಾಗಿ ಪಶ್ಚಿಮ ಡಿಸಿಪಿ ರವಿ ಡಿ ಚೆನ್ನಣ್ಣನವರ್ ಮುಂದಾಗಿದ್ದಾರೆ. ಇವರ ಆದೇಶದಂತೆ ಪೊಲೀಸರೇ ಸಾರ್ವಜನಿಕ ಸ್ಥಳಗಳಲ್ಲಿ ಕರಪತ್ರಗಳನ್ನು ಹಂಚುತ್ತಿದ್ದರು. ಅದೇ ಮಾರ್ಗದಲ್ಲಿ ಯಶ್ ಸಹ ಜಿಮ್ ಮುಗಿಸಿ ಮರಳುತ್ತಿದ್ದರು. ಆಗ ಖುದ್ದು ಯಶ್ ಪೊಲೀಸರ ಜತೆ ನಿಂತು, ಕರಪತ್ರ ಪ್ರದರ್ಶಿಸಿದರು. ಆ ಮೂಲಕ ಜನರಲ್ಲಿ ಅರಿವು ಮೂಡಿಸಲು ಯಶ್ ಮುಂದಾದರು. ಪೊಲೀಸರು ಜಾಗೃತಿಗಾಗಿ ಕೈ ಗೊಳ್ಳುವ ಕಾರ್ಯಗಳಲ್ಲಿ ಯಶ್‌ನಂಥ ನಟರು ಕೈ ಜೋಡಿಸಿದರೆ ಉತ್ತಮ ಫಲಿತಾಂಶ ಹೊರ ಬರಲು ಸಾಧ್ಯ. ಪೊಲೀಸರ ಕೆಲಸವೂ ಸುಲಭವಾಗುತ್ತದೆ. 

Scroll to load tweet…

ಯಶ್ ಕರ ಪತ್ರ ಹಿಡಿದು ನಿಂತಿರುವ ಫೋಟೋ ಸಾಮಾಜಿಕ ಜಾಲತಾಣದಲ್ಲಿ ಫುಲ್ ವೈರಲ್ ಆಗಿದೆ.