ಗರ್ಲ್ಸ್ ಡೇ ಔಟ್ ನೆಪದಲ್ಲಿ ಈ ಮೂವರು ಹೋಗಿದ್ದು ಪಾಂಡಿಚೇರಿಗೆ. ಅಲ್ಲಿ ಸಮುದ್ರ ತೀರದಲ್ಲಿ ಆಟವಾಡಿ, ಸೆಲ್ಫೀ ತೆಗೆದು ಸಂಭ್ರಮಿಸಿದ್ದಾರೆ. ಬರೀ ಸಂಭ್ರಕ್ಕಾಗಿಯಷ್ಟೇ ಪಾಂಡಿಚೇರಿಗೆ ಭೇಟಿ ಕೊಟ್ಟಿದ್ದಾ ಎಂದರೆ ಹಾಗೇನೂ ಇಲ್ಲ. ಹೊಸತೊಂದು ಸಿನಿಮಾ ಇನ್ನೇನು ಶುರುವಾಗಲಿದೆ. ಈ ಸಿನಿಮಾದಲ್ಲಿ ಯಾರು ನಿರ್ದೇಶನ, ಯಾರು ನಿರ್ಮಾಣ ಎಂಬ ವಿಚಾರವಿನ್ನೂ ತಿಳಿದುಬಂದಿಲ್ಲ. ಶುಭಾ ಮತ್ತುಮೇಘನಾ ಜೊತೆಯಾಗಿ ನಟಿಸುವ ಸಾಧ್ಯತೆ ಇದೆ.

‘ಕಿರಗೂರಿನ ಗಯ್ಯಾಳಿಗಳು’ ಚಿತ್ರದ ನಂತರ ಸುಮನಾ ಕಿತ್ತೂರು ಸೈಲೆಂಟಾದಂತೆ ಇದ್ದರು. ಇದೀಗ ಅವರು ಹೊಸ ಚಿತ್ರಕತೆಯೊಂದಿಗೆ ಸಿದ್ಧವಾಗಿದ್ದರೆ ಅಚ್ಚರಿಯೇನಿಲ್ಲ. ಈ ಬಾರಿಯೂ ಮಹಿಳಾ ಪ್ರಧಾನ ಸಿನಿಮಾ ಮಾಡುತ್ತಾರೋ ಎಂದು ಕಾದುನೋಡಬೇಕಾಗಿದೆ. ಈ ಕುರಿತು ಮೇಘನಾ ಮತ್ತು ಶುಭಾ ಅವರನ್ನು ಸಂಪರ್ಕಿಸಿದಾಗ, ‘ಹೊಸ ಸಿನಿಮಾ ಮಾಡುತ್ತಿರುವುದು ನಿಜ. ಈ ಪ್ರೊಜೆಕ್ಟ್ ಕುರಿತಂತೆ ಪೂರ್ತಿ ಮಾಹಿತಿ ಕೆಲವೇ ದಿನಗಳಲ್ಲಿ ನೀಡುತ್ತೇವೆ’ ಎನ್ನುತ್ತಾರೆ. ಅಂತೂ ಇಂತೂ ಪಾಂಡಿಚೇರಿ ಸಮುದ್ರ ತೀರದಿಂದ ಒಳ್ಳೆಯ ಸುದ್ದಿಯ ಬಂದು ಬೀಳಲಿ.

ತೆಲುಗು ಚಿತ್ರಕ್ಕೆ ಸುಮನಾ ನಿರ್ದೇಶನ?

ಆಂಧ್ರದ ದೊಡ್ಡ ರಾಜಕಾರಣಿ, ಸಾಮಾಜಿಕ ಹೋರಾಟಗಾರ ಹಾಗೂ ವೈಎಸ್ ರಾಜಶೇಖರ್ ರೆಡ್ಡಿ ಅವರ ಪರಮ ಆಪ್ತರಾಗಿದ್ದ ಕೊಂಡ ಮುರಳಿ ಅವರ ಜೀವನ ಚರಿತ್ರೆಯನ್ನು ಧರಿಸಿ ತೆಲುಗು ಸಿನಿಮಾ ಆಗುತ್ತಿದೆ ಎಂಬ ಸುದ್ದಿ ಕೆಲ ತಿಂಗಳುಗಳಿಂದ ಕೇಳಿಬರುತ್ತಿದೆ. ವಿಶೇಷ ಅಂದರೆ ಎಲ್ಲವೂ ಅಂದುಕೊಂಡಂತೆ ಆದರೆ, ಈ ಬಯೋಪಿಕ್ ಚಿತ್ರಕ್ಕೆ ಕನ್ನಡತಿ ಸುಮನ್ ಕಿತ್ತೂರು ನಿರ್ದೇಶಕರಾಗಲಿದ್ದಾರೆ. ಆ ಮೂಲಕ ನಿರ್ದೇಶಕಿ ಸುಮನ್ ಕಿತ್ತೂರು ಏನು ಮಾಡುತ್ತಿದ್ದಾರೆಂಬುದಕ್ಕೆ ಈಗ ಉತ್ತರ ಸಿಕ್ಕಿದೆ. ‘ಕೊಂಡ ಮುರಳಿ ಕುರಿತು ಸಿನಿಮಾ ಮಾಡುವ ಬಗ್ಗೆ ನನ್ನ ಜತೆ ಮಾತುಕತೆ ಮಾಡಿದ್ದಾರೆ. ಅದು ಚಿತ್ರಕಥೆಯ ಹಂತದಲ್ಲಿದೆ. ಒಂದು ವೇಳೆ ಚಿತ್ರಕಥೆ ನನಗೆ ಓಕೆ ಅನಿಸಿದರೆ ನಾನು ಈ ಚಿತ್ರಕ್ಕೆ ನಿರ್ದೇಶಕಿ ಆಗುತ್ತೇನೆ’ ಎನ್ನುತ್ತಾರೆ ಸುಮನ್. ಕೊಂಡ ಮುರಳಿ ಯಾರು? ರಾಜಕೀಯ ಅಂಗಳದಲ್ಲಿ ಅವರ ಖ್ಯಾತಿ ಎಂಥದ್ದು? ಸಿನಿಮಾ ಮಾಡುವಷ್ಟು ವ್ಯಕ್ತಿಯೇ? ಇವರು ಮತ್ತೊಬ್ಬ ಪೆರಿಟಾಲ ರವಿಯೇ ಎನ್ನುವ ಕುತೂಹಲ ಎಲ್ಲರಿಗೂ ಇದೆ