ಸಂಭಾವನೆ ವಿಚಾರದಲ್ಲಿ ಎಂದೂ ಷರತ್ತು ಹಾಕಿಕೊಂಡವರಲ್ಲ ಸುದೀಪ್. ಆದರೆ, ಅವರ ಮಾರುಕಟ್ಟೆಯ ವ್ಯಾಪ್ತಿ ಏನೆಂಬುದು ನನಗೆ ಗೊತ್ತು. ಈ ಕಾರಣಕ್ಕೆ ನಾನು ಸುದೀಪ್ ಅವರಿಗೆ 8 ಕೋಟಿ ಸಂಭಾವನೆ ಕೊಡಲು ಒಪ್ಪಿರುವುದು. ಹೀಗಾಗಿ ಕೆಲವು ನಿರ್ಮಾಪಕರ ಇಂಥ ಅಫರ್‌ಗಳಿಂದಲೇ ನಾಯಕ ನಟರ ಸಂಭಾವನೆ ಗಗನಕ್ಕೇರಿದೆ ಎನ್ನುವ ವಿವಾದದ ಮಾತುಗಳು ಬೇಡ.- ಸೂರಪ್ಪ ಬಾಬು, ನಿರ್ಮಾಪಕ
ಕಿಚ್ಚ ಸುದೀಪ್ ನಟನೆಯಲ್ಲಿ ‘ಕೋಟಿಗೊಬ್ಬ 3’ ಸಿನಿಮಾ ಸೆಟ್ಟೇರುತ್ತಿರುವುದು ಎಲ್ಲರಿಗೂ ಗೊತ್ತಿದೆ. ಸಾಹಸ ಸಿಂಹ ಜತೆ ‘ಕೋಟಿಗೊಬ್ಬ’ ಚಿತ್ರ ನಿರ್ಮಿಸಿದ ಸೂರಪ್ಪ ಬಾಬು ಸುದೀಪ್ ಅಭಿನಯದಲ್ಲಿ ‘ಕೋಟಿಗೊಬ್ಬ 2’ ಚಿತ್ರ ಮಾಡಿ ಗೆದ್ದ ಮೇಲೆ ‘ಕೋಟಿ’ಗೆ ಸಿಕ್ಕಾಪಟ್ಟೆ ಬೆಲೆ ಇದೆ ಎನ್ನುವ ಗುಟ್ಟು ಅರ್ಥ ಮಾಡಿಕೊಂಡವರಂತೆ ಕಿಚ್ಚನ ಕಾಂಬಿನೇಷನ್ ನಲ್ಲೇ ‘ಕೋಟಿಗೊಬ್ಬ 3’ ಚಿತ್ರ ನಿರ್ಮಿಸುತ್ತಿದ್ದಾರೆ.
ಈ ಇಬ್ಬರ ಕಾಂಬಿನೇಷನ್ನ ಚಿತ್ರದ ಲೇಟೆಸ್ಟ್ ವಿಷಯ ಏನೆಂದರೆ ಈ ಚಿತ್ರಕ್ಕೆ ನಟ ಸುದೀಪ್ ಪಡೆದಿರುವ ಸಂಭಾವನೆ ಎಷ್ಟು? ಎಂಬುದು. ಹೌದು, ‘ಕೋಟಿಗೊಬ್ಬ 3’ ಚಿತ್ರಕ್ಕೆ ಸುದೀಪ್ ಬಹು ಕೋಟಿ ಮೊತ್ತದ ಸಂಭಾವನೆ ಪಡೆದಿದ್ದಾರಂತೆ. ವಿಶೇಷ ಅಂದರೆ ಈ ಹಿಂದಿನ ಯಾವ ಚಿತ್ರಗಳಿಗೂ ತೆಗೆದುಕೊಳ್ಳದಷ್ಟು ಸಂಭಾವನೆ ಸುದೀಪ್ ಖಾತೆಗೆ ಸೇರಿಸಿರುವುದಾಗಿ ಸ್ವತಃ ಚಿತ್ರದ ನಿರ್ಮಾಪಕ ಸೂರಪ್ಪ ಬಾಬು ಅವರೇ ಹೇಳುತ್ತಾರೆ. ಅವರು ಹೇಳುವಂತೆ ಕನ್ನಡದಲ್ಲಿ ಇಷ್ಟು ಮೊತ್ತದ ಸಂಭಾವನೆ ತೆಗೆದುಕೊಳ್ಳುವುದಕ್ಕೆ ಅರ್ಹತೆ ಇರುವ ಹೀರೋ ಅಂದ್ರೆ ಸುದೀಪ್ ಅವರಂತೆ. ಇಷ್ಟಕ್ಕೂ ಸುದೀಪ್ಗೆ ಸೂರಪ್ಪ ಬಾಬು ಅವರು ಕೊಟ್ಟಿರುವ ಸಂಭಾವನೆಯಾದರೂ ಎಷ್ಟು? ಬರೋಬ್ಬರಿ 8 ಕೋಟಿ. ಅಚ್ಚರಿ ಆದರೂ ಇದು ನಿಜ. ನಟ ಸುದೀಪ್ ಸಂಭಾವನೆ ವಿಚಾರದಲ್ಲಿ ಎಂದೂ ಸುದ್ದಿಯಾಗದವರು. ಸಿನಿಮಾ, ಪಾತ್ರ, ಬೇರೆ ಭಾಷೆಯ ಚಿತ್ರರಂಗದ ವರು ಗುರುತಿಸುತ್ತಿರುವ ವಿಚಾರದಲ್ಲಿ ಸುದ್ದಿಯಾಗುತ್ತಿದ್ದ ಸುದೀಪ್ ಮೊದಲ ಬಾರಿಗೆ ಸಂಭಾವನೆ ವಿಚಾರಕ್ಕೆ ಗಾಂಧಿನಗರದಲ್ಲಿ ಸದ್ದು
ಮಾಡುತ್ತಿರುವುದು ಈ 8 ಕೋಟಿಯ ಕಾರಣವಂತೆ. ‘ಕನ್ನಡದಲ್ಲಿ ಕೋಟಿ ಕೋಟಿ ಸುರಿದು ಸಿನಿಮಾ ನಿರ್ಮಾಣ ಮಾಡುವ ನಿರ್ಮಾಪಕರ ಜೇಬುಗಳನ್ನು ಭದ್ರವಾಗಿಸುವ ಕೆಲವೇ ನಟರಲ್ಲಿ ಸುದೀಪ್ ಮೊದಲಿಗರು. ಅವರ ಮಾರುಕಟ್ಟೆ ಏನೆಂಬುದು ಒಬ್ಬ ನಿರ್ಮಾಪಕನಾಗಿ ನನಗೆ ಗೊತ್ತಿದೆ. ಇಲ್ಲಿವರೆಗೂ ನನಗೆ ಇಷ್ಟೇ ಸಂಭಾವನೆ ಬೇಕು ಅಂತ ಕೇಳಿ ಪಡೆದವರಲ್ಲ. ಸುದೀಪ್ ಕೇಳುವ ಮುನ್ನವೇ ನಾನೇ 8 ಕೋಟಿ ಅಫರ್ ಮುಂದಿಟ್ಟಿದ್ದು. ಅವರು ಒಪ್ಪಿಕೊಂಡು ಕೋಟಿಗೊಬ್ಬ 3 ಸಿನಿಮಾ ಮಾಡುತ್ತಿದ್ದಾರೆ.
ನಿರ್ಮಾಪಕ ಕಾಳಜಿ, ನಿರ್ಮಾಪಕರು ಉಳಿದರೆ ಚಿತ್ರರಂಗಕ್ಕೆ ಉಳಿಯುತ್ತದೆ ಎಂದು ಯೋಚಿಸುವ ಸುದೀಪ್ ಅವರಿಗೆ 8 ಕೋಟಿ ಕೊಟ್ಟಿರುವುದಕ್ಕೆ ನನಗೇ ಯಾವುದೇ ರೀತಿಯ ಕಷ್ಟವಿಲ್ಲ. ನಿರ್ಮಾಪಕರೇ ಹೀರೋಗಳ ಸಂಭಾವನೆ ಜಾಸ್ತಿ ಮಾಡುತ್ತಿದ್ದಾರೆಂಬ ಮಾತಿಗೆ ನನ್ನ ಉತ್ತರ ಇದೆ. ಅಲ್ಲದೆ, ಇಷ್ಟು ದೊಡ್ಡ ಮಟ್ಟದ ಸಂಭಾವನೆ ನೀಡುವ ನಿರ್ಮಾಪಕರ ಜೊತೆ ಸುದೀಪ್ ಅವರು ಸಿನಿಮಾ ಬಿಡುಗಡೆಯಾದ ನಂತರವೂ ಜೊತೆಗಿರುತ್ತಾರೆ’ಎನ್ನುತ್ತಾರೆ ನಿರ್ಮಾಪಕ ಸೂರಪ್ಪ. ಆ ಮೂಲಕ ಕನ್ನಡದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಟ ಯಾರೆಂಬ ಮಾತಿಗೆ ಪರೋಕ್ಷವಾಗಿ ಸುದೀಪ್ ಅಂತಲೇ ಹೇಳುತ್ತಾರೆ ಸೂರಪ್ಪ ಬಾಬು. ಸದ್ಯ ಪ್ರೇಮ್ ನಿರ್ದೇಶನದ ‘ದಿ ವಿಲನ್ ಚಿತ್ರೀಕರಣ ದಲ್ಲಿ ತೊಡಗಿರುವ ಸುದೀಪ್, ಈ ಸಿನಿಮಾ ಮುಗಿಸಿ ‘ಕೋಟಿಗೊಬ್ಬ 3’ ಚಿತ್ರೀಕರಣ ಶುರು ಮಾಡಿಸಲಿದ್ದಾರೆ.
ಎರಡು ಬೆಂಗಳೂರಿನಲ್ಲಿ ಅರ್ಧ ಹಾಗೂ ಸ್ಪೈನ್ ದೇಶದಲ್ಲಿ ಅರ್ಧ ಚಿತ್ರೀಕರಣ ಮಾಡುವ ಮೂಲಕ ಎರಡು ಹಂತದಲ್ಲಿ ಚಿತ್ರೀಕರಣ ಮುಗಿಸುವ ಪ್ಲಾನ್ ನಿರ್ಮಾಪಕರದ್ದು. ಇನ್ನೂ ಚಿತ್ರದ ನಾಯಕಿಯಾಗಿ ಕನ್ನಡದ ನಟಿಯನ್ನೇ ಆಯ್ಕೆ ಮಾಡಿಕೊಳ್ಳುವ ಯೋಚನೆ ಯಲ್ಲಿದ್ದಾರೆ. ಸದ್ಯ ಈಗ ‘ಕೋಟಿಗೊಬ್ಬ 3’ ಚಿತ್ರೀಕರಣ ಆರಂಭಕ್ಕೂ ಮುನ್ನವೇ ಸುದೀಪ್ ಅವರು ಪಡೆದಿದ್ದಾರೆ ಎನ್ನಲಾಗುತ್ತಿರುವ 8 ಕೋಟಿ ಸಂಭಾವನೆ ವಿಚಾರಕ್ಕೆ ಕಿಚ್ಚ ಸೌಂಡು ಮಾಡುತ್ತಿದ್ದಾರೆ.
