ಮುಂಬೈ[ಆ.03]: ನಟ ರಜಿನಿಕಾಂತ್ ಬೆಂಗಳೂರಿನಲ್ಲಿ ಕಂಡಕ್ಟರ್ ಆಗಿ ವೃತ್ತಿ ಆರಂಭಿಸಿ ಆನಂತರ ಚೆನ್ನೈನಲ್ಲಿ ಸೂಪರ್ ಸ್ಟಾರ್ ಆಗಿದ್ದು ಎಂದು ಎಲ್ಲರಿಗೂ ಗೊತ್ತಿರುವ ವಿಷಯ. ನಮ್ಮ ಯಶ್, ಗಣೇಶ್, ದರ್ಶನ್ ಬಡ ಕುಟುಂಬದಿಂದ ಬಂದು ಸ್ಯಾಂಡಲ್ ವುಡ್ ಸ್ಟಾರ್ ಗಳಾಗಿರುವುದನ್ನು ನೀವು ಕೇಳಿರುತ್ತೀರಿ.

ಇದೇ ರೀತಿ ತಮ್ಮ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದು ಮಾಜಿ ವಿಶ್ವಸುಂದರಿ, ಬಾಲಿವುಡ್ ಖ್ಯಾತ ನಟಿ, ಅಮಿತಾಭ್ ಬಚ್ಚನ್ ಸೊಸೆ  ಐಶ್ವರ್ಯ ರೈ ಬಚ್ಚನ್.  ಮಂಗಳೂರು ಮೂಲದವರಾದ ಐಶ್ವರ್ಯ ಸಿನಿಮಾ ರಂಗಕ್ಕೆ ಕಾಲಿಡುವ ಮುನ್ನ ಮಾಡೆಲ್ ಲೋಕದಿಂದ ವಿಶ್ವಸುಂದರಿಯಾಗಿ, ಮೊದಮೊದಲು ಮಣಿರತ್ನಂ ಅವರ ಚಿತ್ರಗಳಲ್ಲಿ ಪೋಷಕ ಪಾತ್ರದಲ್ಲಿ ಕಾಣಿಸಿಕೊಂಡು ನಂತರ ಬಾಲಿವುಡ್ ನಲ್ಲಿ ಸ್ಟಾರ್ ಆಗಿ ಮೆರೆದವರು.

ತುಳುವಿನ ಹುಡುಗಿ ಐಶ್ವರ್ಯ ತಮ್ಮ ಬಾಲ್ಯದ, ವಿದ್ಯಾರ್ಥಿ ಜೀವನದ ನೆನಪುಗಳನ್ನು ಬಿಚ್ಚಿಟ್ಟಿದ್ದಾರೆ. ಅವರು ಯಾವುದೇ ಶ್ರೀಮಂತ ಕುಟುಂಬದ ಹಿನ್ನಲೆಯವರಲ್ಲ. ಮಧ್ಯಮ ವರ್ಗದಿಂದ ಬಂದವರು. ತಂದೆ ಕೃಷ್ಣರಾಜ್ ರೈ ಸೇನೆಯಲ್ಲಿ ಜೀವಶಾಸ್ತ್ರಜ್ಞರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ತಾಯಿ ಗೃಹಿಣಿ. ಕಾಲೇಜು ದಿನಗಳಲ್ಲಿ ಆಗಿನ ಕಾಲದ ಎಲ್ಲರಂತೆಯೇ ಬಸ್ಸು, ರೈಲಿನಲ್ಲಿ ಓಡಾಡಿದವರೆ. ಈ ವಿಷಯವನ್ನು ಸ್ವತಃ ಸಂದರ್ಶನದಲ್ಲಿ ಬಿಚ್ಚಿಟ್ಟಿದ್ದಾರೆ.

ಬಸ್'ಗಿಂತ ಲೋಕಲ್ ಟ್ರೖನ್ ಗಳೇ ಅಚ್ಚುಮೆಚ್ಚು

ಅನಿಲ್ ಕಪೂರ್ ನಿರ್ಮಾಣ, ನಾಯಕನಾಗಿ ನಟಿಸಿರುವ ಫ್ಯಾನಿ ಖಾನ್ ಚಿತ್ರದ ಪ್ರಮೋಷನ್'ಗಾಗಿ ಪತ್ರಕರ್ತ ರಾಜೀವ್ ಮಸಂದ್ ಅವರೊಂದಿಗೆ ಮಾಧ್ಯಮವೊಂದರ ಸಂದರ್ಶನದಲ್ಲಿ ಮಾತನಾಡಿದ ಮಾಜಿ ವಿಶ್ವ ಸುಂದರಿ , ಕಾಲೇಜು ದಿನಗಳಲ್ಲಿ ಎಲ್ಲರಂತೆಯೇ ನಾನೂ ಕೂಡ ಸಾರ್ವಜನಿಕ ಸಾರಿಗೆಯನ್ನೇ ಅವಲಂಬಿಸಿದ್ದೆ. ಬಸ್, ರೈಲುಗಳಲ್ಲೇ ಪ್ರಯಾಣಿಸುತ್ತಿದ್ದೆ. ಬಸ್ಸು, ಟ್ಯಾಕ್ಸಿಯಲ್ಲಿ ದಾದರ್ ರೈಲ್ವೆ ನಿಲ್ದಾಣಕ್ಕೆ ಹೋಗಿ ನಂತರ ಸ್ಥಳೀಯ ರೈಲುಗಳಲ್ಲಿಯೇ ಓಡಾಡುತ್ತಿದ್ದೆ'. ಮಳೆಗಾಲದ ಅನುಭವವನ್ನು ತುಂಬ ಅನುಭವಿಸಿದ್ದೇನೆ' ಎಂದು ತಮ್ಮ ಹಳೆಯ ದಿನಗಳನ್ನು ನೆನಪಿಸಿಕೊಂಡರು.

ಎಲ್ಲರೂ ಶ್ರೀಮಂತಿಕೆಯನ್ನು ಮಾತ್ರವಲ್ಲ ಬಡತನವನ್ನು ಅರಿತುಕೊಳ್ಳಬೇಕು. ಮುಂದಿನ ದಿನಗಳಲ್ಲಿ ನನ್ನ ಮಗಳು ಆರಾಧ್ಯ ನನ್ನಂತೆಯೇ ಕಷ್ಟಪಡುವುದಿಲ್ಲ ಎಂದು ಗೊತ್ತಿದೆ. ಕಷ್ಟಸುಖಗಳ ಬಗ್ಗೆ ಆಕೆಗೆ ಹೇಳದಿದ್ದರೆ ತಾಯಿಯಾಗಿ ಅದು ನನ್ನ ಬೇಜವಾಬ್ದಾರಿತನವಾಗುತ್ತದೆ. ಜೀವನದ ಎಲ್ಲವುಗಳನ್ನು ತಿಳಿದುಕೊಂಡರೆ ಮಾತ್ರ ಯಶಸ್ಸಿನ ಮೆಟ್ಟಿಲೇರಲು ಸಾಧ್ಯವಾಗುತ್ತದೆ' ಎಂದು ಈ ಸಂದರ್ಭದಲ್ಲಿ ತಿಳಿಸಿದರು.

ಅತುಲ್ ಮಂಜ್ರೇಕರ್ ನಿರ್ದೇಶನದ ಫ್ಯಾನಿ ಖಾನ್ ಚಿತ್ರ ಇಂದು[ಆ.03] ಬಿಡುಗಡೆಯಾಗಿದ್ದು, ಅನಿಲ್ ಕಪೂರ್, ಐಶ್ವರ್ಯ ರೈ ಬಚ್ಚನ್, ರಾಜ್ ಕುಮಾರ್ ರಾವ್ ಮುಂತಾದವರು ನಟಿಸಿದ್ದಾರೆ.  

ಇಂಗ್ಲಿಷ್ ನಲ್ಲಿ ಈ ಸುದ್ದಿ ಓದಲಿ ಇಲ್ಲಿ ಕ್ಲಿಕ್ಕಿಸಿ : When Fanney Khan actress Aishwarya Rai took bus, taxi to Dadar railway station