ಈಗ ವಿಜಯ್ ದೇವರಕೊಂಡ ಅವರ ಹೆಸರಿಗಿಂತ ಅರ್ಜುನ್ ರೆಡ್ಡಿ ಅಂತಲೇ ಫೇಮಸ್. ಇವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಅದು ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ, ಸುನಿ ನಿರ್ದೇಶನದ ‘ಚಮಕ್’ ಚಿತ್ರದ ಆಡಿಯೋ ಬಿಡುಗಡೆಗೆ
ಈ ಹೆಸರು ಈಗೇನು ಅಪರಿಚಿತವಲ್ಲ. ‘ಅರ್ಜುನ್ ರೆಡ್ಡಿ’ ಚಿತ್ರದಿಂದ ಸೂಪರ್ ಹೀರೋ ಆದ ನಟನೀತ. ಅದಕ್ಕೂ ಮೊದಲು ‘ಪೆಳ್ಳಿಚೂಪುಲು’ ಚಿತ್ರದಲ್ಲಿ ನಟನೆಯ ಸಾಮರ್ಥ್ಯ ತೋರಿದವರು. ‘ಎವಡೆ ಸುಬ್ರಮಣ್ಯಂ’ ಚಿತ್ರದಲ್ಲಿ ಫಿಲಾಸಫರ್ ಆಗಿ ಕಂಡವರು. ಈಗ ವಿಜಯ್ ದೇವರಕೊಂಡ ಅವರ ಹೆಸರಿಗಿಂತ ಅರ್ಜುನ್ ರೆಡ್ಡಿ ಅಂತಲೇ ಫೇಮಸ್. ಇವರು ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದರು. ಅದು ಗಣೇಶ್ ಹಾಗೂ ರಶ್ಮಿಕಾ ಮಂದಣ್ಣ ನಟಿಸಿರುವ, ಸುನಿ ನಿರ್ದೇಶನದ ‘ಚಮಕ್’ ಚಿತ್ರದ ಆಡಿಯೋ ಬಿಡುಗಡೆಗೆ. ಬೆಂಗಳೂರು ಅಂದ್ರೆ ವಿಜಯ್ ದೇವರಕೊಂಡ ಅವರಿಗೆ ನೆನಪಾಗುವುದೇನು? ಅವರ ಮಾತುಗಳಲ್ಲೇ ಕೇಳಿ.
1)ನನಗೆ ಬೆಂಗಳೂರು ಅಂದಾಗ ತಕ್ಷಣಕ್ಕೆ ನೆನಪಾಗುವುದು ಕ್ರಿಕೆಟರ್ ವೆಂಕಟೇಶ್ ಪ್ರಸಾದ್. ಕ್ರಿಕೆಟ್ ಮೈದಾನದಲ್ಲಿ ಇವರನ್ನು ನೋಡಿದ್ದೆ. ಅಚ್ಚರಿಯಿಂದ ಈತ ಯಾರು ಅಂತ ಹುಡುಕಿದಾಗ ಕನ್ನಡದವರು, ಬೆಂಗಳೂರಿನ ನಿವಾಸಿ ಅಂತ ಗೊತ್ತಾಯಿತು. ಅಂದಿನಿಂದಲೂ ನನಗೆ ಬೆಂಗಳೂರು ಹೆಸರು ಕೇಳಿದರೆ ನೆನಪಾಗುವುದು ಇದೇ ವೆಂಕಟೇಶ್ ಪ್ರಸಾದ್.
2)ಸಿನಿಮಾ ವಿಚಾರಕ್ಕೆ ಬಂದರೆ ತುಂಬಾ ಜಲಸ್ ಆಗುತ್ತದೆ. ಯಾಕೆಂದರೆ ಕನ್ನಡ ಸಿನಿಮಾಗಳು ಅಷ್ಟು ಚೆನ್ನಾಗಿವೆ. ನಿಮಗೊಂದು ವಿಷಯ ಹೇಳಬೇಕು. ‘ಚಮಕ್’ ಚಿತ್ರಕ್ಕೂ ಮೊದಲೇ ನಾನು ನಿರ್ದೇಶಕ ಸುನಿ ಅವರ ಹೆಸರು ಕೇಳಿದ್ದೆ. ತುಂಬಾ ಕಡಿಮೆ ಬಜೆಟ್‌ನಲ್ಲಿ ‘ಸಿಂಪಲ್ಲಾಗ್ ಒಂದ್ ಲವ್ ಸ್ಟೋರಿ’ ಹೆಸರಿನಲ್ಲೊಂದು ಸಿನಿಮಾ ಮಾಡಿ ಸೂಪರ್ ಹಿಟ್ ಕೊಟ್ಟಿರುವ ನಿರ್ದೇಶಕ ಅಂತ ಆಗಲೇ ನಾನು ಕೇಳಿದ್ದೆ. ಈಗ ‘ಚಮಕ್’ನಲ್ಲಿ ಅದೇ ಸುನಿ ಅವರನ್ನು ನೋಡುತ್ತಿದ್ದೇನೆ.
3) ಇತ್ತೀಚೆಗೆ ನೋಡಿದ ಕನ್ನಡ ಸಿನಿಮಾ ‘ಕಿರಿಕ್ ಪಾರ್ಟಿ’. ಬೆಂಗಳೂರಿಗೆ ಬರುವ ಮುನ್ನ ನೋಡಿಕೊಂಡು ಬಂದ ಸಿನಿಮಾ ‘ಮಫ್ತಿ’. ಆ ಸಿನಿಮಾ ನೋಡಿ ನನಗೆ ಮತ್ತಷ್ಟು ಹೊಟ್ಟೆ ಕಿಚ್ಚು ಶುರುವಾಯಿತು. ಇಂಥ ಸಿನಿಮಾ ನಾವು ಯಾವಾಗ ಮಾಡೋದು ಅಂತ. ತುಂಬಾ ಇಂಟರೆಸ್ಟಿಂಗ್ ಗ್ಯಾಂಗ್‌ಸ್ಟರ್ ಸಿನಿಮಾ. ಬ್ಯೂಟಿಫುಲ್ ಮೇಕಿಂಗ್.
4) ಕೇವಲ ಸಿನಿಮಾಗಳು ಮಾತ್ರವಲ್ಲ, ಭಾರತೀಯ ಚಿತ್ರ ರಂಗಕ್ಕೆ ಕನ್ನಡಿಗರ ಕೊಡುಗೆ ದೊಡ್ಡದು. ಯಾಕೆಂದರೆ ಭಾರತೀಯ ಚಿತ್ರರಂಗದಲ್ಲಿ ಗುರುತಿಸಿಕೊಂಡವರ ಹೆಸ ರುಗಳನ್ನು ಪಟ್ಟಿ ಮಾಡುತ್ತಾ ಹೋಗಿ... ರಜನಿಕಾಂತ್, ಐಶ್ವರ್ಯ ರೈ, ಎಸ್‌ಎಸ್ ರಾಜ್‌ಮೌಳಿ, ಅನುಷ್ಕಾ ಶೆಟ್ಟಿ. (ಡಾ ರಾಜ್‌ಕುಮಾರ್ ಹೆಸರು ಹೇಳಿ ಅಂತ ಸಭಿಕರು ಕೂಗಿದರು)
5) ಎಲ್ಲಕ್ಕಿಂತ ಮುಖ್ಯವಾಗಿ ಕನ್ನಡಿಗರು ಒಳ್ಳೆಯ ಸಿನಿಮಾಗಳನ್ನು ನೋಡುತ್ತಾರೆ. ನನ್ನ ಅರ್ಜುನ್ ರೆಡ್ಡಿ ಚಿತ್ರವನ್ನು ತುಂಬಾ ಜನ ನೋಡಿದ್ದಾರೆ. ಹಾಗೆ ಪೆಳ್ಳಿಚೂಪುಲು ಚಿತ್ರವನ್ನೂ ನೋಡಿದ್ದೀರಿ. ಆ ಕೃತಜ್ಞತೆ ನನಗಿದೆ.
6) ಕನ್ನಡಿಗರ ಮೇಲಿನ ಇಷ್ಟೆಲ್ಲ ಪ್ರೀತಿಯಿಂದಲೇ ನಾನು ಇವತ್ತು ‘ಚಮಕ್’ ಆಡಿಯೋ ಬಿಡುಗಡೆಗೆ ಬರುವಂತಾಯಿತು. ಇವಿಷ್ಟು ಹೇಳಿದ ನಂತರ ವಿಜಯ್ ದೇವರಕೊಂಡ ‘ಕಿರಿಕ್ ಪಾರ್ಟಿ’ ಚಿತ್ರದ ‘ಬೆಳಗೆದ್ದು ಯಾರ ಮುಖವ ನಾನು ನೋಡಲಿ’ ಹಾಡಿನ ಪೂರ್ತಿ ಪಲ್ಲವಿ ಹಾಡಿದರು.
