ಆಗ ನಾನಿನ್ನೂ ಚಿಕ್ಕವನು. ನಾವು ಬಡವರಾಗಿದ್ದರೂ ಅದು ಹೇಗೆ ಇಷ್ಟುಖುಷಿಯಾಗಿದ್ದೇವೆ ಎಂದು ನನ್ನಜ್ಜನನ್ನು ಕೇಳಿದ್ದೆ. ‘ಸಂತೋಷ ನಮ್ಮ ಅಗ್ಗದ ಸಂಪತ್ತು’ ಎಂದಿದ್ದರು. ನನ್ನ ಅಪ್ಪನೂ ತುಂಬಾ ಆಶಾವಾದಿ.

ನಾನು ಶಾಲೆಯಲ್ಲಿರುವ 60 ಜನರ ಪೈಕಿ 59 ನೇ ರ್ಯಾಂಕ್ ಪಡೆದೆ ಎಂದರೆ, ಅವರು ‘ಮುಂದಿನ ಸಲ 48 ಅಥವಾ 36ನೇ ರ್ಯಾಂಕ್ ಬರ್ತೀಯ ಬಿಡು’ ಎನ್ನುತ್ತಿದ್ದರು. ಇದು ಸೋಲಿನ ಸಂಭ್ರಮ. ಬಹುಶಃ ಇದೇ ನನ್ನನ್ನು ಇಲ್ಲಿಯವರೆಗೂ ತಂದು ನಿಲ್ಲಿಸಿದೆ.

ಏಕೆಂದರೆ ಸೋತಾಗಲೂ ಸಂಭ್ರಮಿಸುವುದನ್ನು ಕಲಿತರೆ ಸೋಲಿನ ಬಗೆಗಿರುವ ಭಯ ದೂರ ತೊಲಗುತ್ತದೆ. ಅದು ಮತ್ತೊಮ್ಮೆ ಪ್ರಯತ್ನಿಸುವಂತೆ ಪ್ರೇರೇಪಿಸುತ್ತದೆ. ಕೈಚೆಲ್ಲಿ ಕೂರದಂತೆ, ಮತ್ತೊಮ್ಮೆ ಪ್ರಾರಂಭಿಸುವಂತೆ ಹುರಿದುಂಬಿಸುತ್ತದೆ.

ಅಮ್ಮನ ಕಿಸೆಯಿಂದ ಕದ್ದ 100 ರು.

9ನೇ ತರಗತಿಯಲ್ಲಿದ್ದಾಗ ಒಂದು ನಾಟಕದಲ್ಲಿ ಅಭಿನಯಿಸಿದ್ದೆ. ಒಂದೇ ಒಂದು ಡೈಲಾಗನ್ನೂ ಸರಿಯಾಗಿ ಹೇಳಲು ಸಾಧ್ಯವಾಗಿರಲಿಲ್ಲ. ಹಾಗಾಗಿ ಅವರು ಆ ಡೈಲಾಗನ್ನು ಬೇರೆಯವರಿಗೆ ಕೊಟ್ಟರು. ಆದರೆ ನಾಟಕ ಮಾಡುವ ವೇಳೆ ಆ ಹುಡುಗನೂ ಡೈಲಾಗನ್ನು ಮರೆತುಬಿಡುತ್ತಿದ್ದ.

ನನ್ನ ಅರ್ಧಂಬರ್ಧ ಇಂಗ್ಲಿಷ್‌ನಲ್ಲೇ ಹೇಗೋ ಮ್ಯಾನೇಜ್‌ ಮಾಡಿದೆ. ಅಂದಿನಿಂದ ನನಗೆ ರಂಗಭೂಮಿ ಬಗ್ಗೆ ಆಸಕ್ತಿ ಬೆಳೆಯುತ್ತಾ ಬಂತು. ಕಾಲೇಜು ವಿದ್ಯಾಭ್ಯಾಸದ ನಂತರ ನಟನೆಯನ್ನು ಪೂರ್ಣಕಾಲಿಕ ಹವ್ಯಾಸವಾಗಿ ಬೆಳೆಸಿಕೊಳ್ಳಬೇಕು ಎಂದುಕೊಂಡೆ.

ಆಗ ಚಂಡೀಗಢದಲ್ಲಿ ನಟನಾ ತರಬೇತಿ ಕೋರ್ಸ್‌ ಇದೆ ಎಂಬ ಜಾಹೀರಾತು ನೋಡಿದೆ. ಆದರೆ ಆಡಿಷನ್‌ನಲ್ಲಿ ಭಾಗವಹಿಸಲು 100 ರು. ಪಾವತಿಸಬೇಕಿತ್ತು! ಅಮ್ಮನ ಕಿಸೆಯಲ್ಲಿದ್ದ ಹಣ ಕದ್ದು, ಪಿಕ್‌ನಿಕ್‌ ಹೋಗುತ್ತದ್ದೇನೆ ಅಂತ ಸುಳ್ಳು ಹೇಳಿ ಬಂದೆ. ಕೆಲ ದಿನ ಕಳೆದ ನಂತರ ಹಣ ಕದ್ದೆನೆಂದು ಒಪ್ಪಿಕೊಂಡೆ!

ರೈಲು ನಿಲ್ದಾಣದ ಬೆಂಚಿನಲ್ಲಿ...

ಚಂಡೀಗಢಕ್ಕೆ ಹೋದ ನಂತರ ಅಲ್ಲಿಂದ ದೆಹಲಿಗೆ ಹೋಗಿ ನಟನಾ ತರಬೇತಿ ಪಡೆದೆ. ಮುಂಬೈನ ಡ್ರಾಮಾ ಸ್ಕೂಲ್‌ನಲ್ಲಿ ಅವಕಾಶವಿದೆ ಎಂಬ ಜಾಹೀರಾತು ನೋಡುವವರೆಗೆ ಲಖನೌದಲ್ಲಿ 2 ವರ್ಷ ಶಿಕ್ಷಕನಾಗಿ ಕಾರ‍್ಯನಿರ್ವಹಿಸಿದೆ. ಆದರೆ ಅಲ್ಲಿಗೆ ಹೋದ ನಂತರ ಸಂಘಟಕರಲ್ಲಿ ಹಣದ ಕೊರತೆ ಇರುವುದು ತಿಳಿಯಿತು.

ಅವರು ತರಬೇತಿ ನೀಡಲು ಸಣ್ಣದೊಂದು ಮೆಟ್ಟಿಲು, ಇರಲು ಚಿಕ್ಕದೊಂದು ರೂಮ್‌ ಕೊಟ್ಟರು. ಸಣ್ಣ ಸೋಲಿಗೆ ಸೋತು ಹಿಂದಿರುಗಲು ನನಗೆ ಮನಸ್ಸಾಗಲಿಲ್ಲ. ಕೆಲವು ವರ್ಷ ಅಲ್ಲಿಯೇ ಇದ್ದು ತರಬೇತಿ ನೀಡುತ್ತಾ ನಾಟಕದಲ್ಲಿ ಅಭಿನಯಿಸಿದೆ. ಆದರೆ ಅದನ್ನು ಬಿಟ್ಟು ಬಂದಾಗ ನನಗೆ ಕೆಲಸವಿರಲಿಲ್ಲ, ಕೈಯಲ್ಲಿ ಕಾಸು ಇರಲಿಲ್ಲ, ಯಾರ ಸಹಾಯಹಸ್ತವೂ ಕಾಣಿಸುತ್ತಿರಲಿಲ್ಲ.

ಆಗ ರೈಲು ನಿಲ್ದಾಣದ ಬೆಂಚುಗಳ ಮೇಲೆ ಅದೆಷ್ಟೋ ರಾತ್ರಿಗಳನ್ನು ಕಳೆದೆ. ಆದರೆ ಇದನ್ನೆಲ್ಲಾ ಹೇಳಿ ನನ್ನ ತಂದೆ ತಾಯಿಗೆ ನೋವು ಕೊಡುವುದು ನನಗೆ ಸುತರಾಂ ಇಷ್ಟವಿರಲಿಲ್ಲ. ಹಾಗಾಗಿ ಅಜ್ಜನಿಗೊಂದು ಪತ್ರ ಬರೆದು ನಾನು ‘ವಾಪಸ್‌ ಬರ್ತೇನೆ’ ಎಂದೆ. ಅವರು ‘ಈಗಾಗಲೇ ನೀರಿನಿಂದ ಒದ್ದೆಯಾಗಿರುವ ವ್ಯಕ್ತಿ ಮಳೆಗೆ ಹೆದರಬಾರದು- ಡೋಂಟ್‌ ಗಿವ್‌ ಅಪ್‌’ ಎಂದು ಪತ್ರಕ್ಕೆ ಉತ್ತರ ಬರೆದರು.

ಮೊದಲ ಸಿನಿಮಾ ಕತೆ

ನಾನು ವಾಪಸ್‌ ಹೋಗದೇ ಉಳಿದದ್ದು ಒಳ್ಳೆಯದೇ ಆಯಿತು. ಏಕೆಂದರೆ ಅದಾದ ಕೆಲವೇ ದಿನಗಳಲ್ಲಿ ಮಹೇಶ್‌ ಭಟ್‌ ಅವರ ಸಿನಿಮಾ ಆಡಿಷನ್‌ ನಡೆದು ನಾನು ಅದರಲ್ಲಿ ಆಯ್ಕೆಯಾದೆ. ಅದರಿಂದ ಸ್ವಲ್ಪ ಹಣವೂ ಸಿಕ್ಕಿತು. ಇರಲೊಂದು ಚಿಕ್ಕ ಮನೆಯೂ ಸಿಕ್ಕಿತು.

ಆದರೆ ಒಂದು ದಿನ ‘ನಿನ್ನ ಪಾತ್ರಕ್ಕೆ ಬೇರೊಬ್ಬರು ಬರುತ್ತಿದ್ದಾರೆ’ ಎಂದು ಅಲ್ಲಿದ್ದ ಸಿಬ್ಬಂದಿ ಹೇಳಿದರು. ತಕ್ಷಣ ಮಹೇಶ್‌ ಭಟ್‌ ಅವರಿಗೆ ಕರೆ ಮಾಡಿದೆ. ಅವರು ಈ ಸುದ್ದಿ ನಿಜ ಎಂದರು. ಈಗ ಮಾಡಲು ಬೇರೇನೂ ಉಳಿದಿಲ್ಲ. ಮನೆಗೆ ಹೋಗುವುದೆಂದು ನಿರ್ಧರಿಸಿದೆ.

ಆದರೆ ಅದಕ್ಕೂ ಮೊದಲು ಮಹೇಶ್‌ ಭಟ್‌ ಮನೆಗೆ ಹೋಗಿ, ‘ನನಗಿಂತ ಚೆನ್ನಾಗಿ ಬೇರೆ ಯಾರೂ ಈ ಪಾತ್ರವನ್ನು ನಿಭಾಯಿಸಲಾರರು, ನೀವು ತಪ್ಪು ಮಾಡುತ್ತಿದ್ದೀರಿ’ ಎಂದು ಹೇಳಿ ವಾಪಸ್‌ ಬಂದೆ. ಮತ್ತೆ ಮಹೇಶ್‌ ನನಗೆ ಕರೆ ಮಾಡಿದರು. ಭಟ್‌ ನಿರ್ಮಾಪಕರಿಗೆ ಕರೆ ಮಾಡಿ, ಅವನು ನನ್ನನ್ನು ಬಿಟ್ಟು ಒಂದು ಸಿನಿಮಾ ಮಾಡುತ್ತಾನೆ ಎಂದು ಹೇಳಿದ್ದರು. ನನ್ನ ಮೊದಲ ಸಿನಿಮಾ ಇಲ್ಲಿಂದ ಪ್ರಾರಂಭವಾಯಿತು.

ಇವತ್ತು ನಾನು 500 ಸಿನಿಮಾ ಮಾಡಿದ್ದೇನೆ. ಇದೊಂದು ರೀತಿಯ ಜಿಗಿತ. ಆದರೆ ಪ್ರತಿ ಬಾರಿಯೂ ನನ್ನ ಸೋಲುಗಳಿಗೆ ನಾನು ಧನ್ಯವಾದ ಅರ್ಪಿಸುತ್ತೇನೆ. ನಿನ್ನಿಂದ ಸಾಧ್ಯವಿಲ್ಲ ಎಂದವರನ್ನು, ಕಷ್ಟಕಾಲದಲ್ಲಿ ನೆರವು ನೀಡದವರನ್ನು ನೆನೆಸಿಕೊಳ್ಳುತ್ತೇನೆ.

ಏಕೆಂದರೆ ನಾನೂ ಆಗ ಸೋಲದಿದ್ದರೆ ಇವತ್ತಿನ ಗೆಲುವು ಸಾಧ್ಯವೇ ಇರಲಿಲ್ಲ. ಆದರೆ 500 ಸಿನಿಮಾಗಳೇ ಅಂತಿಮವಲ್ಲ. ಅದೊಂದು ದೊಡ್ಡ ಸಾಧನೆಯೂ ಅಲ್ಲ. ನಾನೀಗ ಭವಿಷ್ಯದ ಬಗ್ಗೆ ಯೋಚಿಸುತ್ತೇನೆ. ನಾನು ಇನ್ನೇನು ಮಾಡಿ ಜನರನ್ನು ರಂಜಿಸಬಹುದು ಅಥವಾ ಸಮಾಜಕ್ಕೆ ನನ್ನ ಸೇವೆ ಮಾಡುವುದು ಹೇಗೆ ಎಂಬ ಬಗ್ಗೆ ಯೋಚಿಸುತ್ತೇನೆ.

ನನ್ನ ಪ್ರಕಾರ ಜೀವನ ಎಂದರೆ...

ನನ್ನೆಲ್ಲಾ ಯಶಸ್ಸಿಗೆ ನನ್ನ ತಂದೆ ತಾಯಿಯೂ ಕಾರಣ. ಪ್ರತಿಯೊಬ್ಬರೂ ತಮ್ಮ ತಂದೆ ತಾಯಿಯನ್ನು ಗೌರವಿಸುವುದನ್ನು ಕಲಿಯಬೇಕು. ಅವರನ್ನು ಮರದ ತುಂಡು ಎಂಬಂತೆ ಭಾವಿಸದೆ, ನಿಮ್ಮ ಜೀವನದ ಭಾಗವಾಗಿ ಪರಿಗಣಿಸಬೇಕು. ಜೀವನ ಎಂದರೆ ಸಂತೋಷ, ಹಾಸ್ಯ ಮಾತ್ರವಲ್ಲ.

ಅದು ಸುಖ ದುಃಖಗಳ ಸಮ್ಮಿಲನ. ಎರಡನ್ನೂ ಎಂಜಾಯ್‌ ಮಾಡಬೇಕು. ಏಕೆಂದರೆ ಜೀವನದ ಪ್ರತಿ ಗಳಿಗೆಯೂ ಶ್ರೇಷ್ಠವಾದುವು. ಜೀವನ ಎಂದರೆ ಬಿರುಗಾಳಿಯೊಂದಿಗೆ ಗುದ್ದಾಡುವುದಲ್ಲ, ಜೀವನ ಎಂದರೆ ಮಳೆಯೊಂದಿಗಿನ ಕುಣಿತ. ಇಲ್ಲಿ ಯಾರೂ ಮೇಲಲ್ಲ, ಯಾರೂ ಕೀಳಲ್ಲ. ಪ್ರತಿಯೊಬ್ಬರಲ್ಲೂ ಒಂದೊಂದು ವಿಶಿಷ್ಟಸಾಮರ್ಥ್ಯ ಅಡಗಿರುತ್ತದೆ. ನಿಮ್ಮ ಕ್ಷೇತ್ರದಲ್ಲಿ ನೀವೇ ಬೆಸ್ಟ್‌. ನಿಮ್ಮ ಸಾಮರ್ಥ್ಯದ ಮೇಲೆ ಹಾಗೂ ನಿಮ್ಮ ಟ್ಯಾಲೆಂಟ್‌ ಬಗ್ಗೆ ನಿಮಗೆ ಆತ್ಮವಿಶ್ವಾಸವಿರಬೇಕಷ್ಟೆ.

- ಅನುಪಮ್ ಖೇರ್, ಬಾಲಿವುಡ್ ನಟ