ಇತ್ತೀಚಿನ ದಿನಗಳಲ್ಲಿ ಅನಂತ್‌ನಾಗ್ ಅತ್ಯಂತ ಎಕ್ಸೈಟ್ ಆದ ಸಿನಿಮಾ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಇವತ್ತು ಬಿಡುಗಡೆಯಾಗುತ್ತಿರುವ ಈ ಚಿತ್ರದ ಕತೆ, ಚಿತ್ರಕತೆ, ಟೈಟಲ್ಲು ಎಲ್ಲದರ ಬಗ್ಗೆಯೂ ಅನಂತ್‌ನಾಗ್ ಧ್ಯಾನಿಸಿದ್ದಾರೆ. ಈ ಸಿನಿಮಾದ ಜೊತೆಜೊತೆಗೇ ಸಾಗಿದ್ದಾರೆ. ಒಬ್ಬ ನಟ ಒಂದು ಸಿನಿಮಾವನ್ನು ಹೇಗೆ ತನ್ನ ಜೀವದ ಜೀವವನ್ನಾಗಿ ಮಾಡಿಕೊಂಡು ಜೀವಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಆ ಕುರಿತು ಅನಂತ್ ಆಡಿರುವ ಮಾತುಗಳು ಇಲ್ಲಿವೆ.
ಇತ್ತೀಚಿನ ದಿನಗಳಲ್ಲಿ ಅನಂತ್‌ನಾಗ್ ಅತ್ಯಂತ ಎಕ್ಸೈಟ್ ಆದ ಸಿನಿಮಾ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ. ಇವತ್ತು ಬಿಡುಗಡೆಯಾಗುತ್ತಿರುವ ಈ ಚಿತ್ರದ ಕತೆ, ಚಿತ್ರಕತೆ, ಟೈಟಲ್ಲು ಎಲ್ಲದರ ಬಗ್ಗೆಯೂ ಅನಂತ್‌ನಾಗ್ ಧ್ಯಾನಿಸಿದ್ದಾರೆ. ಈ ಸಿನಿಮಾದ ಜೊತೆಜೊತೆಗೇ ಸಾಗಿದ್ದಾರೆ. ಒಬ್ಬ ನಟ ಒಂದು ಸಿನಿಮಾವನ್ನು ಹೇಗೆ ತನ್ನ ಜೀವದ ಜೀವವನ್ನಾಗಿ ಮಾಡಿಕೊಂಡು ಜೀವಿಸಬಹುದೆಂದು ತೋರಿಸಿಕೊಟ್ಟಿದ್ದಾರೆ. ಆ ಕುರಿತು ಅನಂತ್ ಆಡಿರುವ ಮಾತುಗಳು ಇಲ್ಲಿವೆ.
ನಿಮಗೆ ಈ ಚಿತ್ರದ ಕತೆ ತುಂಬಾ ಇಷ್ಟವಾಗುವುದಕ್ಕೆ ಕಾರಣ ಏನು?
ಮೊದಲನೆಯದಾಗಿ ಕತೆಯೇ ಮುಖ್ಯ ಕಾರಣ. ಪ್ರೇಕ್ಷಕರಿಗಾಗಿಯೋ, ನಿರ್ದೇಶಕನ ಕಲ್ಪನೆಗೆ ಜೀವ ತುಂಬುವುದಕ್ಕಾಗಿಯೋ ಅಥವಾ ನನ್ನಂಥವನು ಈ ಚಿತ್ರದಲ್ಲಿದ್ದರೆ ಚೆಂದ ಎನ್ನುವ ಕಾರಣಕ್ಕೆ ಕೆಲವು ಸಿನಿಮಾಗಳನ್ನು ಮಾಡುತ್ತೇವೆ. ಆದರೆ, ಪ್ರತಿಯೊಬ್ಬ ಕಲಾವಿದನಿಗೂ ತನಗೆ ಎಂಥ ಕತೆ ಬೇಕು, ಯಾವ ರೀತಿಯ ಪಾತ್ರ ಬೇಕು, ಇಂಥದ್ದೇ ಕತೆ ಇದ್ದರೆ ಹೇಗೆ ಎನ್ನುವ ಹಸಿವು ಹುಟ್ಟಿಕೊಂಡಾಗ ಸಿಗುವ ಕತೆ ಈ ಚಿತ್ರದಲ್ಲಿದೆ. ಕಲಾವಿದನನ್ನು ತೃಪ್ತಿಪಡಿಸುವ ಸಿನಿಮಾ ಇದು.
ಹಾಗಾದರೆ ನೀವೇ ಹೇಳಿದಂತೆ ಇದುಮತ್ತೊಂದು ಗೋಧಿ ಬಣ್ಣವೇ?
ಗೊತ್ತಿಲ್ಲ. ಆದರೆ, ಕತೆ ಮಾತ್ರ ಅಪರೂಪದ್ದಾಗಿದೆ. ಗೋಧಿ ಬಣ್ಣ ಸಾಧಾರಣ ಮೈಕಟ್ಟು ಸಿನಿಮಾ ಕತೆಯೇ ಬೇರೆ. ಅದರ ಟ್ರೀಟ್‌ಮೆಂಟ್ ಬೇರೆ. ಹೀಗಾಗಿ ಅದಕ್ಕೂ, ಇದಕ್ಕೂ ಸಂಬಂಧವಿಲ್ಲ. ಆದರೂ ಪ್ರೇಕ್ಷಕರು ಆ ಚಿತ್ರವನ್ನು ಎಷ್ಟು ಆಪ್ತವಾಗಿ ಒಪ್ಪಿಕೊಂಡರೋ ಅಷ್ಟೇ ಪ್ರೀತಿಯಿಂದ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಚಿತ್ರವನ್ನೂ ನೋಡುತ್ತಾರೆಂಬ ನಂಬಿಕೆಯಂತೂ ಇದೆ.
ಪ್ರೇಕ್ಷಕರಿಗೆ ಇಂಥ ಸಿನಿಮಾಗಳುಯಾಕೆ ಮುಖ್ಯವಾಗಬೇಕು?
ಸಿನಿಮಾ ಕೇವಲ ಮನರಂಜನೆ ಮಾತ್ರವಲ್ಲ. ಅದರ ಆಚೆಗೂ ಒಂದು ಸಿನಿಮಾ ಸಮಾಜದಲ್ಲಿ ತನ್ನದೇ ಆದ ಪ್ರಭಾವ ಉಂಟು ಮಾಡುತ್ತದೆ. ಜನರಲ್ಲಿ ಅರಿವು ಮೂಡಿಸುತ್ತದೆ. ನಮಗೆ ಗೊತ್ತಿರುವ ಮತ್ತು ಗೊತ್ತಿಲ್ಲದ ವಿಚಾರಗಳಿಗೆ ಮತ್ತೊಂದು ಮುಖ ಇದೆ ಎಂದು ತುಂಬಾ ಸರಳವಾಗಿ ಹೇಳುತ್ತವೆ. ಎಂಟರ್‌ಟೈನ್‌ಮೆಂಟ್ ನೆರಳಿನಲ್ಲಿ ಎಜುಕೇಷನ್ ಕೊಡುವಂತಹ ಇಂತಹ ಸಿನಿಮಾಗಳು ಪ್ರೇಕ್ಷಕರಿಗೆ ಮುಖ್ಯವಾಗುತ್ತವೆ. ಆ ನಿಟ್ಟಿನಲ್ಲಿ ನರೇಂದ್ರ ಬಾಬು ನಿರ್ದೇಶಿಸಿರುವ ‘ಹೊಟ್ಟೆಗಾಗಿ ಗೇಣು ಬಟ್ಟೆಗಾಗಿ’ ಸಿನಿಮಾ ಪ್ರೇಕ್ಷಕರಿಗೆ ಹತ್ತಿರವಾಗುವ ಮತ್ತು ಮುಖ್ಯ ಎನಿಸುವ ಸಿನಿಮಾ.
ಈ ಚಿತ್ರಕ್ಕಾಗಿ ನೀವು ನಟನೆಯ ಆಚೆಗೂ ಕೆಲಸ ಮಾಡಿದ್ದೀರಲ್ಲ?
ತುಂಬಾ ದೊಡ್ಡ ಕೆಲಸ ಅಂತೂ ಏನೂ ಮಾಡಿಲ್ಲ. ಆದರೆ, ಈ ಚಿತ್ರದ ಮೇಲೆ ಸಾಕಷ್ಟು ಕಾಳಜಿ ವಹಿಸಿದ್ದು ನಿಜ. ಅದಕ್ಕೆ ಕಾರಣ ಮೊದಲೇ ಹೇಳಿದಂತೆ ಚಿತ್ರದ ಕತೆ. ನಿರ್ದೇಶಕ ನರೇಂದ್ರ ಬಾಬು ನನ್ನ ಬಳಿ ಬಂದು ಈ ಕತೆ ಹೇಳಿ ಸ್ಕ್ರಿಪ್ಟ್ ಕೈಗೆ ಕೊಟ್ಟಾಗ ಇಂಥ ಕತೆಗಳು ಸಿನಿಮಾ ಆಗಬೇಕೆಂದು ನನ್ನೊಳಗೆ ಒಂದು ಚಡಪಡಿಕೆ ಶುರುವಾಯಿತು. ಒಂದು ಹಂತದಲ್ಲಿ ಸಿನಿಮಾ ಆರ್ಥಿಕ ಸಮಸ್ಯೆಗೆ ಸಿಲುಕಿಕೊಂಡಾಗ ನಾನೇ ನಿರ್ಮಾಪಕ ಹರೀಶ್ ಶೇರಿಗಾರ್ ಅವರಲ್ಲಿ ಮಾತನಾಡಿ ಈ ಚಿತ್ರವನ್ನು ಟೇಕಾಫ್ ಮಾಡಿಸಿದೆ. ವಿತರಕ ಜಯಣ್ಣ ಅವರ ಜತೆ ಮಾತನಾಡಿ ವಿತರಣೆ ಮಾಡಿ ಕೊಡುವಂತೆ ಕೇಳಿದೆ. ಚಿತ್ರಕ್ಕೊಂದು ಹೆಸರು ಸೂಚಿಸಿದೆ. ನಾನು ಮೆಚ್ಚಿ ನಟಿಸಿದ ಸಿನಿಮಾ ಆಗಿದ್ದರಿಂದ ಎಲ್ಲೂ ಈ ಚಿತ್ರ ನಿಂತು ಹೋಗಬಾರದು ಎನ್ನುವ ಕಾರಣಕ್ಕೆ ಈ ಚಿತ್ರದಲ್ಲಿ ಪಾತ್ರ ಮಾಡುವುದಕ್ಕಷ್ಟೆ ನಾನು ಸೀಮಿತವಾಗಲಿಲ್ಲ.
ಇತ್ತೀಚೆಗೆ ನೀವು ಕತೆಗಳನ್ನು ಕೇಳುವ ಶೈಲಿ ಬದಲಾಗಿದೆಯಂತಲ್ಲ?
ಹೌದು, ನಾನೇ ಬದಲಾಯಿಸಿಕೊಂಡಿದ್ದೇನೆ. ಯಾಕೆಂದರೆ ಒಂದು ಲೈನ್ ಕತೆ ಹೇಳುತ್ತೇವೆ ಎಂದು ಬರುವವರ ಸಂಖ್ಯೆ ತುಂಬಾ ಇದೆ. ಒಂದು ಲೈನ್ ಕತೆಗಳು ತುಂಬಾ ಚೆನ್ನಾಗಿರುತ್ತವೆ. ಆದರೆ, ಆ ಒಂದು ಸಾಲು ಕೇಳಿ ಯಾವ ನಿರ್ಧಾರಕ್ಕೂ ಬರಲು ಆಗಲ್ಲ. ನಿರ್ದೇಶಕರು ಏನೋ ನಿರೀಕ್ಷೆ ಇಟ್ಟುಕೊಂಡು ಬಂದಿರುತ್ತಾರೆ. ಕತೆ ಕೇಳಿ ನಿಮ್ಮ ನಿರ್ಧಾರ ಹೇಳದೆ ಹೋದರೆ ನಿರಾಸೆ ಮಾಡಿಸಿದಂತೆ ಆಗುತ್ತದೆ. ಹೀಗಾಗಿ ಯಾರಿಗೂ ಬೇಸರ ಆಗಬಾರದು ಅಂತಲೇ ನಾನು ಒಂದು ಸಾಲಿನ ಕತೆಗಿಂತ, ಚಿತ್ರಕಥೆಯನ್ನು ಸಂಪೂರ್ಣವಾಗಿ ಓದುತ್ತೇನೆ. ಆ ನಂತರ ಚರ್ಚೆ ಮಾಡಿ ರೀಡಿಂಗ್ ತೆಗೆದುಕೊಂಡ ನಂತರ ನನ್ನ ನಿರ್ಧಾರ ಹೇಳುತ್ತೇನೆ.
ಒಂದು ವೇಳೆ ಆ ಚಿತ್ರ ಒಪ್ಪಿ ಮಾಡಿದರೆ ಅಗತ್ಯ ಸಲಹೆಗಳನ್ನು ಕೊಡುತ್ತೇನೆ. ಹಾಗೆ ಗೋಧಿ ಬಣ್ಣ ಸಾಧಾರಣ ಮೈಕಟ್ಟು ಚಿತ್ರ ಒಪ್ಪಿಕೊಂಡೆ. ಈಗ ಹೊಟ್ಟೆಗಾಗಿ ಗೇಣು ಬಟ್ಟೆಗಾಗಿಯೂ ಅದೇ ರೀತಿ ಆಯಿತು. ಮುಂದೆ ಕೂಡ ಹೀಗೆ ಮಾಡುತ್ತೇನೆ.
ಈ ಚಿತ್ರದಲ್ಲಿ ನಿಮ್ಮಪಾತ್ರ ಹೇಗಿದೆ?
ಚಿತ್ರಕ್ಕೆ ಕಾರ್ಪೊರೇಟ್ ಜಗತ್ತಿನ ಕತೆಯಾದರೂ ಇಲ್ಲಿ ಪ್ರತಿ ಪಾತ್ರಕ್ಕೂ ಒಳಗಿನ ತೊಳಲಾಟಗಳಿರುತ್ತವೆ. ಅಂಥ ಸಂಕಟಗಳಲ್ಲೇ ನನ್ನ ಪಾತ್ರ ಕೂಡ ತೆರೆದುಕೊಳ್ಳುತ್ತದೆ. ಒಂದು ಕಾರ್ಪೋರೆಟ್ ಕಂಪನಿಯ ಬಾಸ್ ಆಗಿ ನಾನು ಕಾಣಿಸಿಕೊಳ್ಳುತ್ತಿದ್ದೇನೆ. ಪಾತ್ರವಾಗಿ ಹೇಳಿದರೆ ಕತೆ ಅಷ್ಟು ಮಜಾ ಇರಲ್ಲ. ಸಿನಿಮಾ ನೋಡಿದರೆ ಅರ್ಥವಾಗುತ್ತದೆ. ರಾಧಿಕಾ ಚೇತನ್, ಸ್ಮಿತಾ ಕುಲಕರ್ಣಿ ಹೀಗೆ ಹಲವರು ಚಿತ್ರದಲ್ಲಿ ನಟಿಸಿದ್ದಾರೆ. ಎಲ್ಲ ಪಾತ್ರಗಳು ಚೆನ್ನಾಗಿ. ಹರೀಶ್ ಶೇರಿಗಾರ್ ಅವರು ಇಡೀ ಚಿತ್ರವನ್ನು ಅದ್ದೂರಿಯಾಗಿ ನಿರ್ಮಾಣ ಮಾಡಿದ್ದಾರೆ.
