ಬೆಂಗಳೂರು (ಜು. 31): ನಾನು ಮೋಸ ಹೋಗಿಬಿಟ್ಟೆ! ಹಾಗಂತ ಬೇಸರಮಾಡಿಕೊಂಡರು ಅನಂತ್‌ನಾಗ್! ಅನಂತ್‌ನಾಗ್ ಅವರಂಥವರಿಗೂ ಮೋಸ ಮಾಡುವವರು ಯಾರು ಎಂದು ಎಲ್ಲರೂ ಯೋಚಿಸುತ್ತಿದ್ದರೆ, ಅನಂತ್‌ನಾಗ್ ಮತ್ತೊಮ್ಮೆ, ನನಗೆ ಮೋಸ ಮಾಡಿದರು ಅಂತ ತಮ್ಮಷ್ಟಕ್ಕೆ ತಾವೇ ಹೇಳಿಕೊಂಡರು.

ಆ ಕತೆ ಇದು. ಅನಂತ್‌ನಾಗ್ ಈ ಹಿಂದೆ ನರೇಂದ್ರಬಾಬು ನಿರ್ದೇಶನದ ಸಂತ ಕಬೀರ ಚಿತ್ರದಲ್ಲಿ ನಟಿಸಿದ್ದರು. ನರೇಂದ್ರಬಾಬು ಸೂಕ್ಷ್ಮ ಮನಸ್ಸಿನ ಚುರುಕು ಹುಡುಗ ಎಂದು ಮೆಚ್ಚಿಕೊಂಡಿದ್ದರು. ಸ್ವಂತವಾಗಿ ಚಿಂತಿಸಬಲ್ಲ ಎಂಬ ಕಾರಣಕ್ಕೆ ಆತನೊಂದಿಗೆ ಒಡನಾಟ ಇಟ್ಟುಕೊಂಡಿದ್ದರು. ಆ ಗೆಳೆತನವನ್ನು ಬಳಸಿಕೊಂಡು ನರೇಂದ್ರಬಾಬು ಕತೆಯೊಂದನ್ನು ಅನಂತ್ ಅವರಿಗೆ ಒಪ್ಪಿಸಿದ್ದರು. ಆ ಕತೆ ಚೆನ್ನಾಗಿದೆ, ಹೊಸ
ವಿಚಾರಗಳನ್ನು ಹೇಳುತ್ತಿದೆ ಎಂಬ ಕಾರಣಕ್ಕೆ ಅನಂತ್ ಅದನ್ನು ಒಪ್ಪಿಕೊಂಡದ್ದೂ ಅಲ್ಲದೇ, ಮಹತ್ವಾಕಾಂಕ್ಷೆಯ ಸಿನಿಮಾ ಎಂದು ಎಲ್ಲರಲ್ಲೂ ಹೇಳಿಕೊಂಡಿದ್ದರು.

ಆಮೇಲೆ ನೋಡಿದರೆ ಅದು ಇಂಟರ್ನೀ ಎಂಬ ಇಂಗ್ಲಿಷ್ ಚಿತ್ರದ ಯಥಾವತ್ ರೀಮೇಕು ಅನ್ನುವುದು ಅನಂತ್‌ನಾಗ್ ಅವರಿಗೆ ಗೊತ್ತಾಗಿದೆ. ಚಿತ್ರ ಬಿಡುಗಡೆಯ ನಂತರ ವಿಮರ್ಶೆಗಳನ್ನು ನೋಡಿದಾಗಷ್ಟೇ ಈ ವಿಚಾರ ಅವರ ಗಮನಕ್ಕೆ ಬಂದದ್ದು. ಅದೇ ಈಗ ಅನಂತ ನಾಗ್ ಅವರ ಬೇಸರ, ಅಸಮಾಧಾನ, ಮೋಸ ಹೋದೆ ಎನ್ನುವ ಭಾವದ ಸಂಕಟಕ್ಕೆ ಕಾರಣ.

‘ಅವರ ಮೇಲೆ ನಂಬಿಕೆ ಇಟ್ಟು ಈ ಸಿನಿಮಾ ಮಾಡಿದೆ. ನಿರ್ಮಾಪಕನ ಹರೀಶ್ ಶೇರಿಗಾರ್ ಅವರು ಧಾರಾಳವಾಗಿ ಹಣ ಹಾಕಿದರು. ನಾನೇ ಈ ಚಿತ್ರದ ಬಗ್ಗೆ ನನ್ನ ಎಲ್ಲ ಮಾಧ್ಯಮ ಮಿತ್ರರಿಗೂ ಒಳ್ಳೆಯ ಮಾತುಗಳನ್ನು ಹೇಳಿದ್ದೆ. ಒಂದಷ್ಟು ಪ್ರಮೋಷನ್‌ಗೂ ಓಡಾಡಿದೆ. ಕೊನೆಗೆ ಚಿತ್ರ ಬಿಡುಗಡೆಯಾಗಿ ಮಾಧ್ಯಮದಲ್ಲಿ ವಿಮರ್ಶೆ ಬಂದಾಗ ಗೊತ್ತಾಗಿದ್ದು ಇದು ಇಂಗ್ಲಿಷ್ ಸಿನಿಮಾದ ರಿಮೇಕ್ ಕತೆ ಅಂತ. ಇದರ ಪ್ರತಿಯೊಂದು ದೃಶ್ಯವನ್ನು ಇಂಗ್ಲಿಷ್ ಚಿತ್ರದಿಂದ ಯಥಾವತ್ತಾಗಿ ಬಳಸಿಕೊಂಡಿದ್ದರು. ಆಗಲೇ ನಾನು ಮೋಸ ಹೋದೆ ಎಂದೆನಿಸಿತು.

ನನಗ್ಯಾಕೋ ಆ ಸಿನಿಮಾದಲ್ಲಿ ಆದ ಮೋಸ ತುಂಬಾನೆ ಕಾಡುತ್ತಿದೆ. ಅವರೆಲ್ಲ ಹಾಗೆ ಅದನ್ನು ಯಥಾವತ್ ತೆರೆಗೆ ತರುತ್ತಿದ್ದೇವೆ ಅಂತ ಹೇಳಿದ್ರೆ, ನಾನು ಆ ಸಿನಿಮಾದಲ್ಲಿ ಅಭಿನಯಿಸುತ್ತಿರಲಿಲ್ಲ. ಕೊನೆ ಪಕ್ಷ ಯಾಕೆ ಹೀಗೆ ಮಾಡಿದ್ರೆ ಅಂತ ಕೇಳುವುದಕ್ಕೂ ಅವರು ಸಿಗುತ್ತಿಲ್ಲ. ಫೋನ್ ಮಾಡಿದರೆ ಸಂಬಂಧಪಟ್ಟವರ್ಯಾರೂ ನನ್ನ ಕರೆಯನ್ನು ಸ್ವೀಕರಿಸುತ್ತಿಲ್ಲ. ಅದೇ ಸಂಕಟದ ಕಾರಣಕ್ಕೆ ನಾನೀಗ ಯಾವುದೇ ಹೊಸ ಪ್ರಾಜೆಕ್ಟ್ ಒಪ್ಪಿಕೊಳ್ಳುತ್ತಿಲ್ಲ. ಒಂದಷ್ಟು ದಿನ ರೆಸ್ಟ್ ಬೇಕಿದೆ ಅಂತ ಅಭಿನಯಿಸುವಂತೆ ಕೇಳಿದವರಿಗೆ ಹೇಳುತ್ತಿದ್ದೇನೆ.

ಸದ್ಯಕ್ಕೆ ‘ ಕವಲು ದಾರಿ’ ಸಿನಿಮಾದ ಒಂದಷ್ಟು ದಿನಗಳ ಶೂಟಿಂಗ್ ಬಾಕಿಯಿದೆ. ಅದನ್ನು ಮುಗಿಸಬೇಕಿದೆ. ಅದರ ಕೆಲಸ ಬಿಟ್ಟರೆ, ಉಳಿದಂತೆ ಒಂದಷ್ಟು ರೆಸ್ಟ್’ ಅಂತಾರೆ ಅನಂತನಾಗ್.