ಮುಂಬೈ(ಸೆ.16): ಮಾದಕ ವಸ್ತು  ಮರಿಜುವಾನಾ(ಗಾಂಜಾದ ವೈಜ್ಞಾನಿಕ ಹೆಸರು) ಕಾನೂನುಬದ್ಧಗೊಳಿಸುವಂತೆ ಬಾಲಿವುಡ್ ನಟ ಉದಯ್ ಚೋಪ್ರಾ ಆಗ್ರಹಿಸಿದ್ದು, ಹುಷಾರಾಗಿ ಇರುವಂತೆ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.

ಭಾರತೀಯ ಸಂಸ್ಕೃತಿಯ ಪ್ರತೀಕವಾಗಿರುವ ಮರಿಜುವಾನಾ ವೈದ್ಯಕೀಯವಾಗಿಯೂ ಸಾಕಷ್ಟು ಅನುಕೂಲವಾಗುವುದರಿಂದ ಅದನ್ನು ಕಾನೂನುಬದ್ಧಗೊಳಿಸುವಂತೆ ಉದಯ್ ಚೋಪ್ರಾ ನಿನ್ನೆ ಟ್ವೀಟ್ ಮಾಡಿದ್ದರು.

ಮರಿಜುವಾನಾವನ್ನು ಕಾನೂನುಬದ್ಧಗೊಳಿಸಬೇಕು , ಅಲ್ಲದೇ ಅದರ ಮೇಲೆ ತೆರಿಗೆ ವಿಧಿಸುವುದರಿಂದ ಹೆಚ್ಚಿನ ಪ್ರಮಾಣದ ಆದಾಯ ಬರುತ್ತದೆ. ಜೊತೆಗೆ  ಹೆಚ್ಚಿನ ಪ್ರಮಾಣದ ವೈದ್ಯಕೀಯ ಅನುಕೂಲವೂ ಆಗಲಿದೆ ಎಂದು ಚೋಪ್ರಾ ಟ್ವೀಟ್ ಮಾಡಿದ್ದರು.


 ಉದಯ್ ಚೋಪ್ರಾ ಅವರ ಹೇಳಿಕೆ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿರುವಂತೆ, ಮುಂಬೈ ಪೊಲೀಸರಿಂದಲೂ ಪ್ರತಿಕ್ರಿಯೆ ವ್ಯಕ್ತವಾಗಿದೆ. ದೇಶದ ನಾಗರಿಕರಾಗಿ ಸಾಮಾಜಿಕ ಜಾಲತಾಣದಲ್ಲಿ ಹೇಳಿಕೆ ನೀಡುವಾಗ ಹುಷಾರಾಗಿರಿ. 1985ರ ಕಾಯ್ದೆ ಪ್ರಕಾರ  ಮರಿಜುವಾನಾ ಸೇವನೆ, ಸಂಗ್ರಹ, ಹಾಗೂ ಮಾರಾಟಕ್ಕೆ  ಕಠಿಣ ಶಿಕ್ಷೆಗೊಳಪಡಿಸಲಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.