ನಿಖಿಲ್ ಕುಮಾರ್ ಹೊಸ ಸಿನಿಮಾಕ್ಕೆ ಮುಹೂರ್ತ ಮುಗಿದಿದೆ. ಎಚ್.ಡಿ. ಕುಮಾರ ಸ್ವಾಮಿ, ಅನಿತಾ ಕುಮಾರ ಸ್ವಾಮಿ ಹಾಗೂ ಶಾಸಕ ಮುನಿರತ್ನ ಸೇರಿದಂತೆ ಹಲವರು ಮುಹೂರ್ತದಲ್ಲಿ ಪಾಲ್ಗೊಂಡು ನಿಖಿಲ್ ಹೊಸ ಸಿನಿಮಾಗೆ ಶುಭ ಕೋರಿದ್ದಾರೆ. ಎ. ಹರ್ಷ ಆ್ಯಕ್ಷನ್ ಕಟ್ ಹೇಳುತ್ತಿರುವ ಈ ಚಿತ್ರದ ಹೆಸರು ‘ಸೀತಾರಾಮ ಕಲ್ಯಾಣ’. ಇದೊಂದು ರಿಮೇಕ್ ಚಿತ್ರ ಎನ್ನುವ ಮಾತುಗಳು ಕೇಳಿಬಂದಿವೆ. ಆದರೆ, ಶುದ್ಧ ಗ್ರಾಮೀಣ ಸೊಗಡಿನ ಕತೆಯೇ ಚಿತ್ರದ್ದು ಎನ್ನುವ ನೆಪದಲ್ಲಿ ಪಕ್ಕಾ ಸ್ವಮೇಕ್ ಕತೆ ಎನ್ನುವ ಮಾತು ಚಿತ್ರತಂಡದ್ದು. ಚಿತ್ರದ ಬಗೆಗೆ ಎರಡು ಇಂಟರೆಸ್ಟಿಂಗ್ ಸಂಗತಿಗಳಿವೆ.
1) ಈ ಮೊದಲು ಚೆನ್ನಾಂಬಿಕಾ ಫಿಲಂಸ್ ಬ್ಯಾನರ್‌ನಲ್ಲಿ ನಿಖಿಲ್ ಅಭಿನಯಿಸುತ್ತಾರೆ ಎನ್ನಲಾದ ಮತ್ತೊಂದು ಸಿನಿಮಾಕ್ಕೆ ಮುಹೂರ್ತ ಮುಗಿದಿದ್ದು ನಿಮಗೂ ಗೊತ್ತಿದೆ. ಬಹುದ್ದೂರ್ ಖ್ಯಾತಿಯ ನಿರ್ದೇಶಕ ಚೇತನ್ ಕುಮಾರ್ ಈ ಚಿತ್ರಕ್ಕೆ ನಿರ್ದೇಶಕರಾಗಿದ್ದರು. ಅದು ಸಾಕಷ್ಟು ಸುದ್ದಿಯೂ ಆಯಿತು.ಆ ಚಿತ್ರ ಏನಾಯಿತು ಅನ್ನೋ ಹೊತ್ತಿಗೆ ನಿರ್ದೇಶಕ ಚೇತನ್ ಆ ಪ್ರಾಜೆಕ್ಟ್‌ನಿಂದ ಹೊರಬಂದರು. ಆ ಜಾಗಕ್ಕೆ ಹರ್ಷ ಎದ್ದು ಕುಳಿತರು. ಈಗ ಅವರ ನಿರ್ದೇಶನದಲ್ಲಿ ಮುಹೂರ್ತ ಮುಗಿಸಿರುವ ‘ಸೀತಾರಾಮ ಕಲ್ಯಾಣ ’ಚಿತ್ರ ಹಿಂದೆಯೇ ಮುಹೂರ್ತ ಮುಗಿಸಿದ್ದ ಚಿತ್ರವೇ ಎನ್ನುವ ಗೊಂದಲವಿದೆ. ಆದರೆ ನಿರ್ದೇಶಕ ಹರ್ಷ ಪ್ರಕಾರ ಇದು ಹೊಸ ಚಿತ್ರ. ಚಿತ್ರಕ್ಕೆ ಅವರೇ ಕತೆ, ಚಿತ್ರಕತೆ ಬರೆದಿದ್ದಾರಂತೆ. ಅವರಿಗೆ ಹರೀಶ್ ಸಾಥ್ ನೀಡಿದ್ದಾರಂತೆ.
2) ಇನ್ನು ನಾಯಕಿ ವಿಚಾರ. ಈ ಹಿಂದೆ ನಿಖಿಲ್ ಹೊಸ ಸಿನಿಮಾಕ್ಕೆ ಮಾಡೆಲ್ ರಿಯಾ ನಲ್ವಾಡೆ ನಾಯಕಿ ಎನ್ನುವ ಸುದ್ದಿ ವ್ಯಾಪಕವಾಗಿ ಕೇಳಿಬಂದಿತ್ತು. ಮೂಲಗಳ ಪ್ರಕಾರ ನಿಖಿಲ್ ಮತ್ತು ರಿಯಾ ನಲ್ವಾಡೆ ಫೋಟೋಶೂಟ್ ಕೂಡ ನಡೆದಿತ್ತು. ನಿರ್ದೇಶಕರ ಬದಲಾವಣೆಯಲ್ಲಿ ಚಿತ್ರವೇ ನಿಂತು ಹೋಯಿತು. ಮಾಡೆಲ್ ರಿಯಾ ನಲ್ವಾಡೆ ಹೆಸರು ಕೂಡ ತೆರೆಗೆ ಸರಿಯಿತು. ಹೀಗಾಗಿ ಈ ಚಿತ್ರದಲ್ಲಿ ರಿಯಾ ನಲ್ವಾಡೆ ಅವರಿಗೆ ಜಾಗ ಇದೆಯಾ? ಹೀಗೊಂದು ಪ್ರಶ್ನೆಯೂ ಈಗ ಎದ್ದು ಕುಳಿತಿದೆ. ಆದರೆ ನಿರ್ದೇಶಕ ಹರ್ಷ ಅವರ ಮಾಹಿತಿ ಪ್ರಕಾರ ಚಿತ್ರಕ್ಕೆ ನಾಯಕಿ ಯಾರು ಅನ್ನೋದು ಇನ್ನು ಫೈನಲ್ ಆಗಿಲ್ಲ. ಹಾಗಾದ್ರೆ ಮಾಡೆಲ್ ರಿಯಾ ನಲ್ವಾಡೆ ಕತೆ ಏನಾಯಿತು ಅನ್ನುವುದು ಗೊತ್ತಾಗಿಲ್ಲ.
