ಬೆಂಗಳೂರು (ಜೂ. 18): ಟಾಲಿವುಡ್ ಬೆಡಗಿ ಶೀಲಾ ಮತ್ತೆ ಕನ್ನಡ ಪರದೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ಆರ್ ಚಂದ್ರು ನಿರ್ದೇಶಿಸಿ, ಅಜಯ್ ರಾವ್ ನಟನೆಯ ‘ಪ್ರೇಮ್ ಕಹಾನಿ’ ಚಿತ್ರದ ನಾಯಕಿಯಾಗಿ ನಟಿಸಿ ಹೋಗಿದ್ದ ಶೀಲಾ, ಆ ಮೇಲೆ ಕನ್ನಡ ಪರದೆ ಮೇಲೆ ಕಾಣಿಸಿಕೊಂಡಿಲ್ಲ. ಈಗ ‘ಹೈಪರ್’ ಎನ್ನುವ ಚಿತ್ರದ ಮೂಲಕ ಬರುತ್ತಿದ್ದಾರೆ. ಗಣೇಶ್ ಎಂಬುವವರು ನಿರ್ದೇಶನ ಮಾಡಿರುವ ಈ ಚಿತ್ರಕ್ಕೆ ಅರ್ಜುನ್ ಆರ್ಯ ನಾಯಕ. ಶೀಲಾ ನಾಯಕಿ. ಅರ್ಜುನ್ ಆರ್ಯ ಈ ಹಿಂದೆ ‘ಜಗ್ಗಿ’ ಎನ್ನುವ ಚಿತ್ರದಲ್ಲಿ ನಾಯಕನಾಗಿ ನಟಿಸಿದ್ದರು.

‘ಹೈಪರ್’ ಅವರಿಗೆ ಎರಡನೇ ಸಿನಿಮಾ. ಅಲ್ಲೂ ಅರ್ಜುನ್, ಜ್ಯೂ ಎನ್‌ಟಿಆರ್, ರಾಮ್, ಪೃದ್ವಿರಾಜ್, ಮಂಚು ಮನೋಜ್, ಅಜಿತ್, ಮಾದವನ್, ಸೂರ್ಯ... ಹೀಗೆ ಹಲವು ಸ್ಟಾರ್ ನಟರ ಜತೆಗೆ ತೆಲುಗು, ತಮಿಳು, ಮಲಯಾಳಂ ಚಿತ್ರಗಳಲ್ಲಿ ನಟಿಸುವ  ಮೂಲಕ ಬೇಡಿಕೆಯ ನಾಯಕಿ ಎನಿಸಿಕೊಂಡವರು ಶೀಲಾ. ‘ಪ್ರೇಮ್ ಕಹಾನಿ’ ನಂತರ ಟಾಲಿವುಡ್‌ನಲ್ಲಿ ಸಾಕಷ್ಟು ಬ್ಯುಸಿಯಾಗಿದ್ದವರನ್ನು ಮತ್ತೆ ಕನ್ನಡಕ್ಕೆ ‘ಹೈಪರ್’ ಸಿನಿಮಾ ಸದ್ದಿಲ್ಲದೆ ಕರೆದುಕೊಂಡು ಬಂದಿದೆ.

ಎಂ ಬಿಗ್ ಪಿಕ್ಚೇರ್ ಬ್ಯಾನರ್‌ನಲ್ಲಿ ಎಂ ಕಾರ್ತಿಕ್ ನಿರ್ಮಾಣದ ಈ ಚಿತ್ರದಲ್ಲಿ ಸಾಕಷ್ಟು ವಿಶೇಷತೆಗಳಿವೆ. ಚಿತ್ರದಲ್ಲಿ ನಾಲ್ಕು ಹಾಡುಗಳಿದ್ದು, ಒಂದೊಂದು ಹಾಡನ್ನು ಒಬ್ಬೊಬ್ಬ ನಿರ್ದೇಶಕರು ಬರೆದಿದ್ದಾರೆ. ಎಂ ಪಿ ಅರ್ಜುನ್, ಚೇತನ್, ಗೌಸ್‌ಪೀರ್, ಅನಿಲ್ ಸಾಹಿತ್ಯ ನೀಡಿದ್ದರೆ, ಅದೇ ರೀತಿ ಚಿತ್ರದಲ್ಲಿರುವ ನಾಲ್ಕು ಫೈಟ್‌ಗಳನ್ನು ಥ್ರಿಲ್ಲರ್ ಮಂಜು, ಮಾಸ್ ಮಾದ, ವಿಕ್ರಂ ಮೋರಾ, ನೂರ್ ಹೀಗೆ ನಾಲ್ವರು ಒಂದೊಂದು ಫೈಟ್ ,ಸಂಯೋಜನೆ ಮಾಡಿದ್ದಾರೆ. ಇದೇ ತಿಂಗಳು 29 ಕ್ಕೆ ತೆರೆಗೆ ಬರಲಿರುವ ಈ ಚಿತ್ರಕ್ಕೆ ‘ಕೋಟಿಗೊಬ್ಬ 2’ ಚಿತ್ರಕ್ಕೆ ಸಂಗೀತ ನೀಡಿರುವ ಹಿಮಾನ್ ಅವರೇ ಈ ಚಿತ್ರಕ್ಕೆ ಸಂಗೀತ ಸಂಯೋಜನೆ ಮಾಡಿದ್ದಾರೆ.

ಚಿತ್ರದ ಪ್ರಮುಖ ಪಾತ್ರಗಳಲ್ಲಿ ರಂಗಾಯಣ ರಘು, ಬುಲ್ ಪ್ರಕಾಶ್, ಶೋಭರಾಜ್, ಶ್ರೀನಿವಾಸ್ ಪ್ರಭು, ಬ್ಯಾಂಕ್ ಜನಾರ್ಧನ್, ವೀಣಾ ಸುಂದರ್, ಅಚ್ಯುತ್ ಕುಮಾರ್ ಮುಂತಾದವರು ನಟಿಸಿದ್ದಾರೆ. ಚಿತ್ರದ ಟ್ರೇಲರ್‌ಗೆ ಯೂಟ್ಯೂಬ್‌ನಲ್ಲಿ ಸಾಕಷ್ಟು ಹಿಟ್ಸ್ ಸಿಕ್ಕಿವೆ. ನಿರ್ದೇಶಕರೇ ಬರೆದಿರುವ ಹಾಡುಗಳು ಕೂಡ ಕೇಳುತ್ತಿವೆ. ‘ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ. ಹೈಪರ್ ಎನ್ನುವ ಹೆಸರಿಗೆ ತಕ್ಕಂತೆ ಮಾಸ್ ಸಿನಿಮಾ.

ಚಿತ್ರದ ನಾಯಕ ಪರಿಸರ ಪ್ರೇಮಿಯಾಗಿರುತ್ತಾರೆ. ಪರಿಸರದ ಸುತ್ತ ಕತೆ ಸಾಗುತ್ತದೆ. ವಿಶೇಷವಾಗಿ ಕತೆ ಮಾಡಿಕೊಂಡಿದ್ದೇನೆ’ ಎನ್ನುತ್ತಾರೆ ನಿರ್ದೇಶಕ ಗಣೇಶ್. ಜೂನ್.29 ಕ್ಕೆ  ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರುವ ಯೋಜನೆ ಹಾಕಿಕೊಂಡಿದ್ದಾರೆ ನಿರ್ಮಾಪಕ ಎಂ ಕಾರ್ತಿಕ್.