ಶಿವಮೊಗ್ಗ (ನ. 10): ಹೆಗ್ಗೋಡಿನ ನೀನಾಸಂನಲ್ಲಿದ್ದುಕೊಂಡು ರಂಗಭೂಮಿಯಲ್ಲಿ ಅಗಣಿತ ಸೇವೆ ಸಲ್ಲಿಸುತ್ತಾ ಬಂದಿರುವ ವಿದ್ಯಾ ಹೆಗಡೆ ಅವರಿಗೆ ದಿ ಪಬ್ಲಿಕ್ ರಿಲೇಷನ್ ಕೌನ್ಸಿಲ್  ಆಫ್ ಇಂಡಿಯಾ 2018 ನೇ ಸಾಲಿನ ಸಂವಹನ ಪ್ರಶಸ್ತಿ ಕೊಟ್ಟು ಗೌರವಿಸಿದೆ. ಇದೇ ಹೊತ್ತಿನಲ್ಲಿ ಮೂರು ದಶಕಗಳಿಗೂ ಹೆಚ್ಚು ಕಾಲ ರಂಗಭೂಮಿಯಲ್ಲಿ ತೊಡಗಿಸಿಕೊಂಡಿರುವ ವಿದ್ಯಾ ಹೆಗಡೆ ಅವರೊಂದಿಗೆ ಒಂದಷ್ಟು ಮಾತುಕತೆ. 

ವಿದ್ಯಾ ಮೇಡಂ ನಿಮಗೆ ರಂಗಭೂಮಿ ಸೆಳೆತ ಶುರುವಾಗಿದ್ದು ಹೇಗೆ?

ನನಗೆ ಕಲೆಯ ರುಚಿ ಉಣಿಸಿದ್ದೇ ನನ್ನ ಮನೆ. ನನ್ನೂರು ಉತ್ತರ ಕನ್ನಡ ಜಿಲ್ಲೆಯ ಮಂಚಿಕೇರಿ. ಯಕ್ಷಗಾನ ಹಿನ್ನೆಲೆಯ ಕುಟುಂಬ ನಮ್ಮದು. ಹಾಗಾಗಿ ಹುಟ್ಟಿನಿಂದಲೇ ಯಕ್ಷಗಾನ ನೋಡುತ್ತಾ ಬೆಳೆದವಳು ನಾನು. ಆದರೆ ನಾಟಕದ ಬಗ್ಗೆ ಅಷ್ಟೇನು ಒಲವಿರಲಿಲ್ಲ. ಒಲವು ಎನ್ನುವುದಕ್ಕಿಂತ ನಾಟಕದ ಬಗ್ಗೆ ನನ್ನಲ್ಲಿ ಸಣ್ಣ ಸೆಳೆತವೂ ಇರಲಿಲ್ಲ.

ಹೀಗೆ ಒಂದು ಬಾರಿ ನಾನು ಎಂಟನೇ ತರಗತಿಯಲ್ಲಿ ಇರಬೇಕಾದರೆ, ಡ್ರಾಮಾ ಸ್ಕೂಲ್ ಸ್ಟೂಡೆಂಟ್‌ಗಳು ನಮ್ಮ ಶಾಲೆಗೆ ಬಂದು ನಾಟಕ ಮಾಡಿಸಿದ್ದರು. ನಾನು ಮಾಡಿದ್ದೆ. ಆಮೇಲೆ ೧೦ನೇ ತರಗತಿಯಲ್ಲಿದ್ದಾಗ ಸಿದ್ಧಿ ಜನಾಂಗಕ್ಕಾಗಿ ಒಂದು ನಾಟಕ ಮಾಡಿದ್ದರು. ಅಲ್ಲಿ ನನಗೆ ಮೇನ್ ರೋಲ್ ಮಾಡಲು ಕರೆದರು. ಹೋದೆ. ಅವಾಗ ನಾಟಕದ ಬಗ್ಗೆ ಸ್ವಲ್ಪ ಆಸಕ್ತಿ ಉಂಟಾಯಿತು.

ಆ ಆಸಕ್ತಿ ನಿಮ್ಮನ್ನು ಇಲ್ಲಿಯವರೆಗೂ ಕರೆತಂದಿತೇ?

ಹೌದು, ಆ ಆಸಕ್ತಿಯೇ ನನ್ನನ್ನು ಇಲ್ಲಿಗೆ ಕರೆದು ತಂದಿತು. ಆದರೆ ಅದಕ್ಕಿಂತಲೂ ಹೆಚ್ಚಾಗಿ ನಮ್ಮ ಮನೆಯವರು ನನಗೆ ತುಂಬಾ ಸಪೋರ್ಟ್ ಮಾಡಿದರು. ನನಗೆ ನಾಟಕದ ಬಗ್ಗೆ ಆಸಕ್ತಿ ಹುಟ್ಟಿತು ಎಂದು ಭಯದಲ್ಲಿಯೇ ನನ್ನ ತಂದೆ ಬಳಿ ಹೇಳಿದೆ. ಆಗೆಲ್ಲಾ ಹೆಣ್ಣು ಮಕ್ಕಳು ನಾಟಕ ಮಾಡುತ್ತಾರೆ ಎಂದರೆ ಜನ ಬೇರೆ ರೀತಿ ಮಾತನಾಡುತ್ತಿದ್ದರು. ಆದರೆ ನನ್ನ ತಂದೆ ಸೀದಾ ನನ್ನನ್ನು ನೀನಾಸಂಗೆ ತಂದು ಬಿಟ್ಟರು. 1985 ರಲ್ಲಿ ಹೆಗ್ಗೋಡಿಗೆ ಬಂದ ನಾನು ಇಲ್ಲಿಯೇ ಸಾಗುತ್ತಿದ್ದೇನೆ.

ಹೇಗಿದ್ದವು ಮೊದಲ ನೀನಾಂಸ ದಿನಗಳು?

ನಾನು ಸೇರಿದ ವರ್ಷವೇ ನೀನಾಸಂ ತಿರುಗಾಟ ಶುರುವಾಯಿತು. ಅದರಲ್ಲಿ ಭಾಗವಹಿಸಿದೆ. ಹೆಗ್ಗೋಡು, ನೀನಾಸಂ ಹೇಗೆ ಎಂದರೆ ಇದೊಂದು ತಣ್ಣಗಿನ ಪ್ರದೇಶ, ಯಾವ ಆಕರ್ಷಣೆಯೂ ಇಲ್ಲಿಲ್ಲ. ಇದೊಂದು ಹಳ್ಳಿಯ ಸಂಸ್ಕೃತಿ. ಹಸಿವಿದ್ದವರು ಮಾತ್ರ ಇಲ್ಲಿ ಕಲಿಯಲು ಸಾಧ್ಯವಾಗುವುದು. ಬೆಳಗ್ಗಿನಿಂದ ರಾತ್ರಿವರೆಗೂ ನಾಟಕ, ನಾಟಕಗಳಿಗೆ ಸಂಬಂಧಪಟ್ಟದ್ದೇ ಚರ್ಚೆ, ಚಿಂತನೆ. ಈ ವಾತಾವರಣ ನಮ್ಮನ್ನು ಇದೊಂದು ಧ್ಯಾನಸ್ಥ ಸ್ಥಿತಿಗೆ ಕರೆದುಕೊಂಡು ಹೋಗುತ್ತದೆ. ಹಾಗಾಗಿ ನನಗೆ ನೀನಾಸಂ ದಿನಗಳು ಯಾವತ್ತಿಗೂ ಮಧುರವೇ.

ನಿಮಗೆ ಮಾರ್ಗದರ್ಶಕರಾಗಿ ಯಾರಾದರೂ ಇದ್ದಾರೆಯೇ?

ಕೆ.ವಿ. ಸುಬ್ಬಣ್ಣ, ಕೆ.ವಿ. ಅಕ್ಷರ ಅವರು ನನಗೆ ಯಾವಾಗಲೂ ಸಲಹೆ ನೀಡುತ್ತಲೇ ಇರುತ್ತಾರೆ. ಒಮ್ಮೆ ಗಿರೀಶ್ ಕಾರ್ನಾಡ್ ಅವರು ಕಾನೂರು ಹೆಗ್ಗಡತಿ ಸಿನಿಮಾ ಮಾಡುವಾಗ ನನ್ನನ್ನು ಕರೆದಿದ್ದಾರೆ ಎನ್ನುವ ಸುದ್ದಿ ಗೊತ್ತಾಯಿತು. ಆಗ ಸುಬ್ಬಣ್ಣ ಅವರ ಬಳಿ ಹೋಗಿ ನಾನು ಸಿನಿಮಾಕ್ಕೆ ಹೋಗಲೇ ಎಂದು ಕೇಳಿದೆ. ಆಗ ಸುಬ್ಬಣ್ಣ, ಅವರಾಗಿಯೇ ನಿನ್ನ ಪ್ರತಿಭೆಯನ್ನು ನೋಡಿ ಹುಡುಕಿಕೊಂಡು ಬರಲಿ. ನಿನ್ನ ಪ್ರತಿಭೆಯಿಂದಲೇ
ಅವಕಾಶಗಳು ಸಿಗಬೇಕು. ನೀನು ಹುಡುಕಿಕೊಂಡು ಹೋಗುವುದು ಬೇಡ ಎಂದರು.

ನೀವು ನಿರ್ದೇಶನ ಮಾಡುವ ಪ್ರಯತ್ನ ಮಾಡಲಿಲ್ಲವೇ?

ಮಾಡಿದೆ. ಕಾಲೇಜಿನ ಹೆಣ್ಣು ಮಕ್ಕಳಿಗಾಗಿಯೇ ಒಂದು ನಾಟಕ ನಿರ್ದೇಶನ ಮಾಡಿದೆ. ಟಿ.ಪಿ. ಅಶೋಕ್ ಅವರು ಬೆಂಬಲ ನೀಡಿದ್ದರು. ಆದರೆ ಅದು ಬೇರೆ ಕಡೆ ಪ್ರದರ್ಶನ ಕಾಣಲಿಲ್ಲ.

-ಕೆಂಡಪ್ರದಿ