ಕಿಚ್ಚ ಸುದೀಪ -ಶಿವಣ್ಣ ಅಭಿಮಾನಿಗಳಿಗೆ ಸಿಹಿ ಸುದ್ದಿ | ಅಂತೂ ತೆರೆಗೆ ಬರಲಿದೆ ದಿ ವಿಲನ್ | ರಾಗಿಣಿ ದ್ವಿವೇದಿ ತೆರೆ ಮೇಲೆ ಅಬ್ಬರಿಸಲಿದ್ದಾರೆ
ಬೆಂಗಳೂರು (ಅ. 04): ರಾಗಿಣಿ ನಟನೆಯ ಟೆರರಿಸ್ಟ್ ಹಾಗೂ ದಿ ವಿಲನ್ ಒಂದೇ ವಾರ ತೆರೆಗೆ ಬರುತ್ತಿದೆ. ಪಿ ಶೇಖರ್ ನಿರ್ದೇಶನದ ಈ ಚಿತ್ರಕ್ಕೆ ಈಗಾಗಲೇ ಸೆನ್ಸಾರ್ ಆಗಿದ್ದು, ಯುಎ
ಸರ್ಟಿಫಿಕೇಟ್ ಕೊಡಲಾಗಿದೆ.
ನಿಜವಾದ ’ವಿಲನ್’ ಯಾರು? ಸುದೀಪ್? ಶಿವಣ್ಣ? ಉತ್ತರ ಸಿಗಲಿದೆಯಣ್ಣಾ!
ಅ.18 ರಂದು ದಿ ವಿಲನ್ ದೊಡ್ಡ ಮಟ್ಟದಲ್ಲಿ ಬಿಡುಗಡೆಯಾಗುತ್ತಿದೆ. ಅದೇ ದಿನ ಟೆರರಿಸ್ಟ್ ಚಿತ್ರವನ್ನೂ ಸಹ ಜಯಣ್ಣ ಕಂಬೈನ್ಸ್‌ನಲ್ಲಿ ತೆರೆಗೆ ಬರುತ್ತಿದ್ದಾರೆ ನಿರ್ದೇಶಕರು. ದಿ ವಿಲನ್ ಚಿತ್ರವನ್ನು ಪ್ರೇಮ್ ನಿರ್ದೇಶನ ಮಾಡಿದ್ದು ಸಿ ಆರ್ ಮನೋಹರ್ ನಿರ್ಮಾಣ ಮಾಡಿದ್ದಾರೆ.
ಈಗಾಗಲೇ ದಿ ವಿಲನ್ ವಿತರಣೆಯ ಹಕ್ಕು ರಾಜ್ಯದಲ್ಲಿ 50 ಕೋಟಿಗೆ ಮಾರಾಟವಾಗಿದೆ. ಒಟ್ಟು ನಾಲ್ವರು ಸಿನಿಮಾದ ಹಕ್ಕುಗಳನ್ನು ಪಡೆದುಕೊಂಡಿದ್ದು ನಿರ್ಮಾಪಕ ಜಾಕ್ ಮಂಜು ಬೆಂಗಳೂರು,ತುಮಕೂರು, ಕೋಲಾರದ ಚಿತ್ರ ವಿತರಣೆಯ ಹಕ್ಕು ಪಡೆದಿದ್ದಾರೆ.
ಎನ್. ಕುಮಾರ್ ಅವರು ಮಂಡ್ಯ,ಮೈಸೂರು,ಕೂರ್ಗ್ ಮತ್ತು ಹಾಸನದ ಹಕ್ಕು ಖರೀದಿಸಿದ್ದಾರೆ. ಹುಬ್ಬಳ್ಳಿ-ಧಾರವಾಡದ ವಿತರಣೆಯ ಹಕ್ಕೂ ಇವರ ಬಳಿಯೇ ಇದೆ. ಇನ್ನು ಹೈದ್ರಾಬಾದ್ ಕರ್ನಾಟಕದ ವಿತರಣೆಯ ಹಕ್ಕನ್ನು ರಾಜಶೇಖರಪ್ಪ ಹಾಗೂ ಶಿವಮೊಗ್ಗದ ಕಡೆಯ ಹಕ್ಕುಗಳನ್ನು ಪೈ ಅವರು ಕೊಂಡುಕೊಂಡಿದ್ದಾರೆ. ಇವೆಲ್ಲ ಹಕ್ಕುಗಳ ಒಟ್ಟು ಮೊತ್ತ 50 ಕೋಟಿ ಆಗಲಿದೆ ಎಂದು ಮೂಲಗಳಿಂದ ತಿಳಿದು ಬಂದಿದೆ.
ಟೆರರಿಸ್ಟ್ ಆದ ರಾಗಿಣಿ!
ಟೆರರಿಸ್ಟ್ ಚಿತ್ರದಲ್ಲಿ ರಾಗಿಣಿ ಪಾತ್ರದ ಹೆಸರು ರೇಷ್ಮಾ. ಬಾಂಬ್ ಬ್ಲಾಸ್ಟ್ ಆದಾಗ ನಡೆಯುವ ಘಟನಾವಳಿಗಳ ಸುತ್ತ ಕಥೆ ಹೆಣೆಯಲಾಗಿದೆ. ಬೆಳಗ್ಗೆಯಿಂದ ಸಂಜೆಯವರೆಗೆ ನಡೆಯುವ ಸನ್ನಿವೇಶಗಳೇ ಚಿತ್ರದ ಕತೆ. ರಾಗಿಣಿ ಇಲ್ಲಿ ಜಾಸ್ತಿ ಮಾತನಾಡಲ್ಲ’ ಎಂಬುದು ನಿರ್ದೇಶಕರ ಮಾತು.
ಅಲಂಕಾರ ಸಂತಾನ ಅವರು ಇನ್‌ವೆಂಚರ್ ಫಿಲಂಸ್ ಬ್ಯಾನರ್‌ನಲ್ಲಿ ಈ ಚಿತ್ರವನ್ನು ನಿರ್ಮಿಸಿದ್ದಾರೆ. ಮುರಳಿ ಕ್ರಿಶ್ ಕ್ಯಾಮೆರಾ, ಪ್ರದೀಪ್ ವರ್ಮಾ ಸಂಗೀತ ಸಂಯೋಜನೆ ಹಾಗೂ ಸಚಿನ್ ಸಂಭಾಷಣೆ ಈ ಚಿತ್ರಕ್ಕಿದೆ.
ಅ.18 ಬಿಟ್ಟರೆ ಬೇರೆ ವಾರಗಳಲ್ಲಿ ಬರುವುದಕ್ಕೆ ಕಷ್ಟವಿದೆ. ಕನ್ನಡದ್ದೇ ಒಂದಿಷ್ಟು ಚಿತ್ರಗಳ ಜತೆಗೆ ಬೇರೆ ಭಾಷೆಯ ಸಿನಿಮಾಗಳೂ ಬರುತ್ತಿವೆ. ಹೀಗಾಗಿ ಅನಿವಾರ್ಯವಾಗಿ ದಿ ವಿಲನ್ ಎದುರು ಬರುತ್ತಿರುವುದಾಗಿ ನಿರ್ದೇಶಕರು ಹೇಳಿಕೊಳ್ಳುತ್ತಾರೆ.
