ಕಿರುತೆರೆಯ ಸೂಪರ್‌ಸ್ಟಾರ್ ಟಿಎನ್ ಸೀತಾರಾಂ ಮತ್ತೆ ಕಿರುತೆರೆಗೆ ಮರಳಿದ್ದಾರೆ. ಬಹು ತಿಂಗಳುಗಳ ನಂತರ ಅವರ ಧಾರಾವಾಹಿ ಆರಂಭವಾಗುತ್ತಿದೆ. ಅದರ ಹೆಸರು ‘ಮಗಳು ಜಾನಕಿ’. ಈ ಸಲವೂ ‘ಮ’ಕಾರ ಟೈಟಲ್‌ಗೆ ಮಾರು ಹೋಗಿರುವ ಅವರ ಈ ಧಾರಾವಾಹಿ ಕಲರ್ಸ್ ಸೂಪರ್ ವಾಹಿನಿಯಲ್ಲಿ ಜೂನ್ ತಿಂಗಳಿನಿಂದ ಪ್ರಸಾರವಾಗಲಿದೆ. ಈ ಧಾರಾವಾಹಿಯ ಪ್ರಮುಖ ಪಾತ್ರದಲ್ಲಿ ಟಿಎನ್ ಸೀತಾರಾಂ ಕಾಣಿಸಿಕೊಳ್ಳಲಿದ್ದಾರೆ.

ಇನ್ನೊಂದು ಕುತೂಹಲಕರ ಸಂಗತಿ ಎಂದರೆ ಒಂದು ಕಾಲದಲ್ಲಿ ಮನೆ ಮಾತಾಗಿದ್ದ ‘ಪಾಪ ಪಾಂಡು’ ಧಾರಾವಾಹಿ ಮತ್ತೆ ಪ್ರಸಾರವಾಗಲಿದೆ. ಸಿಹಿ ಕಹಿ ಚಂದ್ರು ನಿರ್ದೇಶನದ ‘ಪಾಪ ಪಾಂಡು’  ಧಾರಾವಾಹಿ ಕೂಡ ಜೂನ್‌ನಿಂದ ಪ್ರಸಾರ. ಇದಲ್ಲದೇ ಇನ್ನು ಮೂರು ಧಾರಾವಾಹಿಗಳು ಮತ್ತು ಎರಡು ರಿಯಾಲಿಟಿ ಶೋಗಳು ಒಂದೇ ತಿಂಗಳಲ್ಲಿ  ಏಕಕಾಲದಲ್ಲಿ ಆರಂಭವಾಗಲಿದೆ.

‘ಮಗಳು ಜಾನಕಿ’, ‘ಪಾಪ ಪಾಂಡು’, ‘ಮಾಂಗಲ್ಯ ತಂತುನಾನೇನ’ ಎಂಬ ಮೂರು ಧಾರಾವಾಹಿಗಳ ಹೆಸರು ಪಕ್ಕಾ ಆಗಿದ್ದು, ಇನ್ನೆರಡು ಧಾರಾವಾಹಿಗಳ ಹೆಸರು ಬಹಿರಂಗವಾಗಿಲ್ಲ. ಎರಡರಲ್ಲಿ ಒಂದು ಧಾರಾವಾಹಿಯನ್ನು ಕಿರುತೆರೆಯ ಖ್ಯಾತ ನಿರ್ದೇಶಕ ರಾಂಜಿ ನಿರ್ದೇಶಿಸಲಿದ್ದಾರೆ ಎಂಬ ಸುದ್ದಿ ಇದೆ. ಉಳಿದಂತೆ ಎರಡು ರಿಯಾಲಿಟಿ ಶೋಗಳಲ್ಲಿ ಒಂದು ಕಾಮಿಡಿ ಶೋ ‘ಮಜಾಭಾರತ’.  ಇನ್ನೊಂದು ‘ಕನ್ನಡದ ಕೋಗಿಲೆ’. ಇದೊಂದು ಸಂಗೀತ ಕಾರ್ಯಕ್ರಮವಾಗಿದ್ದು, ಬಿಗ್‌ಬಾಸ್ ಖ್ಯಾತಿಯ ಚಂದನ್ ಶೆಟ್ಟಿ ಈ ರಿಯಾಲಿಟಿ ಶೋ ನಿರ್ವಹಿಸಿ ಕೊಡಲಿದ್ದಾರೆ. ಈಗಾಗಲೇ ಈ  ಕಾರ್ಯಕ್ರಮಗಳ ರೂಪುರೇಷೆ ಸಿದ್ಧವಾಗಿದ್ದು, ಇನ್ನೇನು ಚಿತ್ರೀಕರಣ ಆರಂಭವಾಗಲಿದೆ.