ಮಾಜಿ ವಿಶ್ವಸುಂದರಿ, ಮೆಹೂನಾ ಬೆಡಗಿ ಸುಶ್ಮಿತಾ ಸೇನ್ ತಮ್ಮ ಆರೋಗ್ಯದ ಬಗ್ಗೆ ಆಘಾತಕಾರಿ ವಿಚಾರವೊಂದನ್ನು ಬಹು ವರ್ಷಗಳ ನಂತರ ಹೊರ ಹಾಕಿದ್ದಾರೆ. 

‘ಅದು 2014 ರ ಸಮಯ. ನಾನು ಬಂಗಾಳಿಯಲ್ಲಿ ‘ನಿರ್ಭಾಕ್’ ಎನ್ನುವ ಸಿನಿಮಾ ಶೂಟಿಂಗ್ ನಲ್ಲಿ ಬ್ಯುಸಿಯಾಗಿದ್ದೆ. ಇದ್ದಕ್ಕಿದ್ದಂತೆ ಆರೋಗ್ಯ ತಪ್ಪಿತು. ಸಮಸ್ಯೆ ಏನು ಅಂತ ಅರ್ಥವಾಗಲೇ ಇಲ್ಲ. ಸಾಕಷ್ಟು ಚೆಕಪ್ ಗಳಾಯ್ತು. ಆಸ್ಪತ್ರೆಗಳನ್ನು ಸುತ್ತಿದ್ದಾಯ್ತು. ಕೊನೆಗೆ ನನ್ನ ಆ್ಯಂಡ್ರೇನಲ್ ಗ್ರಂಥಿಗಳು ಕಾರ್ಟಿಸೋಲ್ ಎನ್ನುವ ಹಾರ್ಮೋನನ್ನು ಉತ್ಪತ್ತಿ ಮಾಡೋದನ್ನೇ ನಿಲ್ಲಿಸಿದ್ದವು. ನನ್ನ ಒಂದೊಂದೇ ಅಂಗ ಕೆಲಸ ಮಾಡೋದನ್ನೇ ನಿಲ್ಲಿಸಿದ್ದವು. ನಾನು ಬದುಕಬೇಕು ಎಂದರೆ ಪ್ರತಿ 8 ಗಂಟೆಗೊಮ್ಮೆ ಸ್ಟೆರಾಯ್ಡ್ ಗಳನ್ನು ತೆಗೆದುಕೊಳ್ಳಬೇಕಾಗಿತ್ತು’ ಎಂದು ಸುಶ್ಮಿತಾ ಸೇನ್ ತಮ್ಮ ಕಷ್ಟದ ದಿನಗಳನ್ನು ಬಿಚ್ಚಿಟ್ಟಿದ್ದಾರೆ. 

‘ಸತತವಾಗಿ ಸ್ಟೆರಾಯ್ಡ್ ಗಳನ್ನು ತೆಗೆದುಕೊಂಡಿದ್ದರಿಂದ ನನ್ನ ದೇಹ ತುಂಬಾ ನಿತ್ರಾಣವಾಗಿತ್ತು. ದಿನೇ ದಿನೇ ಸೌಂದರ್ಯ ಕಳೆಗುಂದುತ್ತಿತ್ತು. ಕೂದಲು ಉದುರುತ್ತಿತ್ತು. ಮೂಳೆಗಳ ಸಾಂದ್ರತೆ ಕಡಿಮೆಯಾಗುತ್ತಿತ್ತು. ಬಿಪಿ ಜಾಸ್ತಿಯಾಗುತ್ತಿತ್ತು. ನಾನು ಸಿಂಗಲ್ ಮದರ್. ಇಬ್ಬರು ಮಕ್ಕಳನ್ನು ನೋಡಿಕೊಳ್ಳಬೇಕಾಗಿತ್ತು. ನನ್ನ ಪರಿಸ್ಥಿತಿಯನ್ನು ನೆನೆಸಿಕೊಂಡು ಹುಚ್ಚೇ ಹಿಡಿಯುತ್ತಿತ್ತು. ಕೊನೆಗೆ ನನಗೆ ನಾನೇ ಧೈರ್ಯ ತಂದುಕೊಂಡೆ. 2014-16 ನಡುವಿನ ಸುಶ್ಮಿತಾ ಗುರುತೇ ಹಿಡಿಯಲಾರದಷ್ಟು ಬದಲಾಗಿದ್ದಳು‘ ಎಂದು ಭಾವುಕರಾಗಿ ಹೇಳಿದ್ದಾರೆ. 

‘ಕೊನೆಗೆ ಟ್ರೀಟ್ ಮೆಂಟ್ ಗಾಗಿ ಲಂಡನ್, ಜರ್ಮನಿಗೆ ಗೆ ಹೋದೆ. ಅಲ್ಲಿ ಟ್ರೀಟ್ ಮೆಂಟ್ ಆಯ್ತು. ಆದರೂ ಯಾವುದೇ ಪರಿಣಾಮವಾಗಲಿಲ್ಲ. ಕೊನೆಗೆ ಅಬುಧಾಬಿಗೆ ಹೋದೆವು. ಅಲ್ಲಿ ನನ್ನನ್ನು ಪರೀಕ್ಷಿಸಿದ ಡಾಕ್ಟರ್ ನೀವು ದಿನಾ ಸ್ಟೆರಾಯ್ಡ್ ಮಾತ್ರೆ ತೆಗೆದುಕೊಳ್ಳುತ್ತೀರಾ? ಅಂದ್ರು. ಹೌದು ಎಂದೆ. ಇನ್ನು ಮುಂದೆ ನೀವು ತೆಗೆದುಕೊಳ್ಳುವುದು ಬೇಡ. ನಿಲ್ಲಿಸಿ ಬಿಡಿ ಎಂದ್ರು. ನನಗೆ ಶಾಕ್! ನಿಮ್ಮ ದೇಹ ಕಾರ್ಟಿಸಿಲ್ ನ ಉತ್ಪತ್ತಿ ಮಾಡಲು ಶುರು ಮಾಡಿದೆ. ನನ್ನ 35 ವರ್ಷದ ಅನುಭವದಲ್ಲಿ ಈ ರೀತಿ ಆದದ್ದೇ ಇಲ್ಲ. ನಿಮ್ಮನ್ನು ಮೂರು ಬಾರಿ ಪರೀಕ್ಷಿಸಿ ನಾನು ಖಚಿತಪಡಿಸುತ್ತಿದ್ದೇನೆ ಎಂದರು. ನನಗಂತೂ ನಂಬಲಾಗಲೇ ಇಲ್ಲ. ಅಲ್ಲಿಂದ ಸ್ಟೆರಾಯ್ಡ್  ತೆಗೆದುಕೊಳ್ಳುವುದನ್ನೇ ನಿಲ್ಲಿಸಿದೆ. ದೇವರ ದಯೆ, ವೈದ್ಯರ ಸಹಕಾರದಿಂದ ನಾನು ಬದುಕುಳಿದೆ’ ಎಂದು ಸುಶ್ಮಿತಾ ತಮ್ಮ ಕಷ್ಟದ ದಿನಗಳನ್ನು ನೆನೆಸಿಕೊಂಡಿದ್ದಾರೆ.