ಬೆಂಗಳೂರು (ಡಿ. 13): ಖ್ಯಾತ ನಿರ್ಮಾಪಕ ಶೈಲೇಂದ್ರ ಬಾಬು ಪುತ್ರ, ನಟ ಸುಮಂತ್ ಶೈಲೇಂದ್ರ ಬೆಂಗಳೂ ರಿನ ಉದ್ಯಮಿ ಶ್ರೀನಿವಾಸ್ ನಾರಪ್ಪ ಹಾಗೂ ಚಂದ್ರಕಲಾ ದಂಪತಿ ಪುತ್ರಿ ಅನಿತಾ ಅವರನ್ನು ವಿವಾಹ ಆಗುವ ಮೂಲಕ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ. 

ಬುಧವಾರ ಬೆಳಗ್ಗೆ 9.30 ರಿಂದ 10.30 ರವರೆಗೂ ನಡೆದ ಶುಭ ಲಗ್ನದಲ್ಲಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಸುಮಂತ್ ಶೈಲೇಂದ್ರ ಹಾಗೂ ಅನಿತಾ ಅವರು ಸತಿಪತಿಗಳಾದರು. ಆಟ, ದಿಲ್‌ವಾಲ, ಬೆತ್ತನಗೆರೆ, ತಿರುಪತಿ ಎಕ್ಸ್‌ಪ್ರೆಸ್, ಭಲೆ ಜೋಡಿ, ಲೀ ಮುಂತಾದ ಕನ್ನಡ ಚಿತ್ರಗಳಲ್ಲಿ ನಾಯಕನಾಗಿ ನಟಿಸಿರುವ ಸುಮಂತ್, ಇತ್ತೀಚೆಗೆ ತೆಲುಗು ಚಿತ್ರರಂಗಕ್ಕೆ ಪದಾರ್ಪಣೆ ಮಾಡಿದ್ದರು. ಅಲ್ಲಿ ಅವರು ನಾಯಕನಾಗಿ ನಟಿಸಿದ ‘ಬ್ರಾಂಡ್ ಬಾಬು’ ಕೂಡ ತೆರೆಗೆ ಬಂದಿತ್ತು.

ಶೈಲೇಂದ್ರ ಬಾಬು ಅವರು ಸಿನಿಮಾ ನಿರ್ಮಾಪಕರಾಗಿ ಚಿತ್ರರಂಗಕ್ಕೆ ಚಿರಪರಿಚಿತರು. ಸಾಕಷ್ಟು ಸಿನಿಮಾಗಳನ್ನು ನಿರ್ಮಿಸಿದ್ದಾರೆ. ಸುಮಂತ್ ಅವರ ಕೈ ಹಿಡಿದಿರುವ ಅನಿತಾ, ಎಂಬಿಎ ಪದವಿ ಮುಗಿಸಿ ತಮ್ಮ ತಂದೆ ಶ್ರೀನಿವಾಸ್ ನಾರಪ್ಪ ಅವರು ನಡೆಸುತ್ತಿದ್ದ ಸಿಲ್ಕ್ ಎಕ್ಸ್‌ಪೋರ್ಟ್ ಬ್ಯುಸಿನೆಸ್‌ಗೆ ಸಹಾಯಕರಾಗಿ ಕೆಲಸ ಮಾಡುತ್ತಿದ್ದವರು. 

ಯುವ ಉದ್ಯಮಿಯಾಗಿ ಗುರುತಿಸಿಕೊಂಡಿರುವ ಅನಿತಾ, ಈಗ ಚಿತ್ರನಟ ಸುಮಂತ್ ಶೈಲೇಂದ್ರ ಅವರ ಬಾಳಸಂಗಾತಿ. ವಿವಾಹ ಮಹೋತ್ಸವಕ್ಕೂ ಮುನ್ನ ಅಂದರೆ ಮಂಗಳವಾರ (ಡಿ.11) ಅರಮನೆ ಮೈದಾನದಲ್ಲಿ ಅದ್ದೂರಿಯಾಗಿ ಆರತಕ್ಷತೆ ಸಮಾರಂಭ ನಡೆಯಿತು. ಚಿತ್ರರಂಗದಿಂದ ವಿ. ಮನೋಹರ್, ರಾಕ್‌ಲೈನ್ ವೆಂಕಟೇಶ್ ಹಾಗೂ ಗಣ್ಯರು ಮದುವೆಗೆ ಆಗಮಿಸಿ ನವ ವಧುವರರನ್ನು ಆಶೀರ್ವದಿಸಿದರು.