ಪುನೀತ್‌ ರಾಜ್‌ಕುಮಾರ್‌ ಬಹಳವಾಗಿ ಟ್ರೈಲರ್‌ ಮೆಚ್ಚಿಕೊಂಡಿರುವ ‘ಕಾಣದಂತೆ ಮಾಯವಾದನು’ ಚಿತ್ರತಂಡ ವಿಶಿಷ್ಟವಾದ ಸ್ಪರ್ಧೆ ಆಯೋಜಿಸಿದೆ. ‘ಟ್ಯಾಗ್‌ಲೈನ್‌ ಹೇಳಿ, ಬಹುಮಾನ ಗೆಲ್ಲಿ’ ಎನ್ನುವ ಈ ಸ್ಪರ್ಧೆಯಲ್ಲಿ ಗೆದ್ದವರಿಗೆ ರೂ. ಐವತ್ತು ಸಾವಿರ ಬಹುಮಾನ ದೊರೆಯಲಿದೆ.

ಯುಟ್ಯೂಬ್‌ನಲ್ಲಿ ಲಭ್ಯವಿರುವ ಚಿತ್ರದ ಟ್ರೇಲರ್‌ ಕೆಳಗಿರುವ ಕಮೆಂಟ್‌ ಬಾಕ್ಸ್‌ನಲ್ಲಿ ಚಿತ್ರಕ್ಕೆ ಟ್ಯಾಗ್‌ಲೈನ್‌ ನೀಡಬಹುದು. ಈ ಸ್ಪರ್ಧೆಯಲ್ಲಿ ಯಾರಾದರೂ ಪಾಲ್ಗೊಳ್ಳಬಹುದು. ಹಾಗೆಯೇ ಒಬ್ಬರು ಎಷ್ಟು ಬೇಕಾದರೂ ಟ್ಯಾಗ್‌ಲೈನ್‌ ನೀಡಿಬಹುದು.

ಆಕರ್ಷಕ ಟ್ಯಾಗ್‌ಲೈನ್‌ ಕೊಟ್ಟು ಬಹುಮಾನ ಗೆದ್ದವರಿಗೆ ಆಗಸ್ಟ್‌ ಮೊದಲ ವಾರ ನಡೆಯುವ ಚಿತ್ರದ ಆಡಿಯೋ ಲಾಂಚ್‌ ಕಾರ್ಯಕ್ರಮದಲ್ಲಿ ರೂ. 50 ಸಾವಿರ ನಗದು ನೀಡುವುದಾಗಿ ಚಿತ್ರ ತಂಡ ಹೇಳಿದೆ.

ಟೈಟಲ್‌ ಜತೆಗೆ ಟ್ರೇಲರ್‌ ಮೂಲಕವೂ ಸದ್ದು ಮಾಡುತ್ತಿರುವ ‘ಕಾಣದಂತೆ ಮಾಯವಾದನು’ ಚಿತ್ರಕ್ಕೆ ರಾಜ್‌ ಪತ್ತಿಪಾಟಿ ಕತೆ, ಚಿತ್ರಕತೆ ಬರೆದು ಆ್ಯಕ್ಷನ್‌ ಕಟ್‌ ಹೇಳಿದ್ದಾರೆ. ಚಂದ್ರಶೇಖರ್‌ನಾಯ್ಡು, ಸೋಮ್‌ಸಿಂಗ್‌ ಹಾಗೂ ಪುಷ್ಟಾಸೋಮ್‌ಸಿಂಗ್‌ ನಿರ್ಮಾಣದ ಈ ಚಿತ್ರಕ್ಕೆ ವಿಕಾಸ್‌ ನಾಯಕ ನಟ. ಸಿಂಧು ಲೋಕನಾಥ್‌ ನಾಯಕಿ.